ಮಂಡ್ಯ | ಕೆ ಆರ್ ಪೇಟೆ: ಕೆಸರು ಗದ್ದೆಯಂತಾದ ರಸ್ತೆ; ರಾಗಿ ಪೈರು ನೆಟ್ಟ ಮಹಿಳೆಯರು!

Date:

Advertisements

ಅಭಿವೃದ್ಧಿ ಮಂತ್ರ ಪಠಿಸುವ ನಮ್ಮ ದೇಶದಲ್ಲಿ ಇಂದಿಗೂ ರಸ್ತೆಗಳು ಗದ್ದೆಯಂತಿರುವ ವಿಲಕ್ಷಣ ಪರಿಸ್ಥಿತಿ ಈಗಲೂ ಇದೆ ಎನ್ನುವುದು ಮಾತ್ರ ವಾಸ್ತವ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ, ಜನರಿಗೆ ಇನ್ನೂ ಕೂಡ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ ಎನ್ನುವುದು ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ದೇಶದಲ್ಲಿ ಲಕ್ಷಾಂತರ ಕೋಟಿ ಹಣ ಬಳಸಿ ಕೇಂದ್ರ, ರಾಜ್ಯ ಸರ್ಕಾರಗಳು ಗ್ರಾಮಾಭಿವೃದ್ಧಿ ಹೆಸರಿನಲ್ಲಿ ಮೂಲ ಸೌಕರ್ಯಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಬಜೆಟ್ ಮಂಡನೆಯಾಗುತ್ತವೆ. ಆದರೆ, ನಿಜಕ್ಕೂ ಹಳ್ಳಿಗಾಡಿಗೆ ಆ ಸವಲತ್ತು ತಲುಪಿದೆಯಾ ಅಂದರೆ ಖಂಡಿತ ಇಲ್ಲ. ಈಗಲೂ ಇಂತಹ ಆಧುನಿಕ ಕಾಲಘಟ್ಟದಲ್ಲಿಯೂ ಕೂಡ ಗ್ರಾಮಗಳಿಗೆ ರಸ್ತೆ ಇಲ್ಲ ಅಂದರೆ ಚುನಾಯಿತ ಜನ ಪ್ರತಿನಿಧಿಗಳು ಏನು ಮಾಡುತ್ತಾ ಇದ್ದಾರೆ? ಇವರು ಏನು ಮಾಡಲು ಸಾಧ್ಯ! ಇವರಿಗೆ ಮತ ಹಾಕಿದ್ದು ಯಾಕೆ ? ಅನ್ನುವ ಪ್ರಶ್ನೆಗಳು ಮೂಡಲಾರಂಭಿಸುತ್ತದೆ.

ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕು ಕಸಬಾ ಹೋಬಳಿ ಮಾಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕರೋಟಿ ಗ್ರಾಮ ಕೂಡ ಇದರಿಂದೇನೂ ಹೊರತಾಗಿಲ್ಲ. ಗ್ರಾಮದ ರಸ್ತೆ ಕೆಸರು ಗದ್ದೆಯಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು, ಜಾನುವಾರುಗಳು, ವಾಹನಗಳು ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಹರ ಸಾಹಸ ಪಡಬೇಕು.

Advertisements
1001144917

ಏಳುವುದು ಬೀಳುವುದು ನಿತ್ಯದ ಬದುಕಿನ ಒಂದು ಭಾಗವಾಗಿದೆ.‌ ಮತ ಕೇಳುವಾಗ ಬರುವ ಜನ ಪ್ರತಿನಿಧಿಗಳಿಗೆ ಇಂತಹ ದಾರಿದ್ರಾವಸ್ತೆಯಲ್ಲಿ ಜನ ಕಷ್ಟ ಪಡುತ್ತಿರುವಾಗ ಕಣ್ಣಿಗೆ ಕಾಣಿಸುವುದೇ ಇಲ್ಲ. ಇನ್ನ ಗ್ರಾಮ ಪಂಚಾಯ್ತಿ ಇದೆಯೋ! ಇಲ್ಲವೋ? ಇದ್ದರೂ ಯಾಕೆ ಇದೆ. ಇದರ ಕೆಲಸ ಏನು ಅನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಊರಿಗೆ ಸರಿಯಾದ ರಸ್ತೆ ಇಲ್ಲದಿದ್ದಕ್ಕೆ ಆಕ್ರೋಶಗೊಂಡ ಊರಿನ ಮಹಿಳೆಯರು ಸೇರಿದಂತೆ ಗ್ರಾಮಸ್ಥರು, ರಸ್ತೆಯಲ್ಲೇ ರಾಗಿ ಪೈರು ನೆಟ್ಟು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದಿನ ಕಾಮ್ ಜೊತೆ ಮಾತನಾಡಿದ ರೈತ ಮಹಿಳೆ ಯಶೋಧಮ್ಮ ಕೃಷ್ಣೇಗೌಡ, “ನಮ್ಮೂರ್ದು ಒಂದು ರಸ್ತೆ .ಅದಕ್ಕೆ ಗ್ರಾಮ ಪಂಚಾಯ್ತಿ ಬೇರೆ ಕೇಡು. ಇದು ರಸ್ತೇನಾ, ಇಲ್ಲ ಗದ್ದೆಯಾ? ಇಲ್ಲಿ ಓಡಾಡಬೇಕಾ? ಇಲ್ಲ ರಾಗಿ ಪೈರು ನೆಟ್ಟು ಬೆಳೆ ಬೆಳೆಯಬೇಕಾ? ಗ್ರಾಮ ಪಂಚಾಯ್ತಿ ಪಿಡಿಒ ಕಣ್ಣು ಮುಚ್ಚಿ ಓಡಾಡ್ತಾರಾ! ಕಣ್ಣಿಲ್ವ. ಪಂಚಾಯ್ತಿ ಕೆಲಸ ಏನು? ಅಲ್ಲಿರೋರು ಏನ್ ಮಾಡ್ತಾವ್ರೇ. ದಿನ ಹಾಲು ಹಾಕೋಕೆ ಹೋಗಿ ಬಿದ್ದು ಬಿದ್ದು ಬರ್ತಾ ಇದ್ದೀನಿ. ನಮ್ ಕಷ್ಟ ಯಾರಿಗೆ ಹೇಳೋದು” ಅಂತ ಹಿಡಿಶಾಪ ಹಾಕಿದರು.

ಸ್ಥಳೀಯರಾದ ರಂಗಸ್ವಾಮಿ ಮಾತನಾಡಿ, “ಇವರಿಗೆ ವೋಟ್ ಹಾಕಕ್ಕೆ ಜನ ಬೇಕು, ಪಂಚಾಯ್ತಿಗೆ ಕಂದಾಯ ಕಟ್ಟಕ್ಕೆ ಜನ ಬೇಕು. ಇನ್ನ ನಮಗೆ ರಸ್ತೆ ಬೇಕಾ? ಕೇಳ್ತಾರ. ಮಂಡ್ಯ ಜಿಲ್ಲೆ ದೇಶಕ್ಕೆ ಗೊತ್ತು, ಆದ್ರೆ ಮಂಡ್ಯ ಹಳ್ಳಿ ಕಥೆ ಯಾರಿಗೆ ಗೊತ್ತು. ದಿನ ಧನ ಕರುನಾ ಈ ಅಟ್ಲಲಿ ಅಟ್ಕೊಂಡು ಓಡಾಡ್ ಬೇಕಲ್ಲ ಅಧಿಕಾರಿಗಳಿಗೆ ಮಾನ ಮರ್ಯಾದೆ ಇಲ್ವಾ” ಎಂದು ಆಕ್ರೋಶ ವ್ಯಕ್ತಪಡಿಸಿದರು.

1001144916

ಶಂಕರೇಗೌಡ ಮಾತನಾಡಿ, “ಅಲ್ಲ ಪಂಚಾಯ್ತಿಯವ್ರಿಗೆ ಹೆಂಡ್ರು ,ಮಕ್ಳು ಇಲ್ವಾ? ನಮನೆ ಮಕ್ಳು ಕೆಸರಲ್ಲಿ ಓಡಾಡಿ ಕಾಲು ಕೊಳೀತದೆ, ಕೆಸರು ಬಕ್ಕೆಯಾಗಿ ಕಾಲೆಲ್ಲಾ ನೋವು. ಡೆಂಘೀ ಡೆಂಘೀ ಅಂತ ಬಡ್ಕೋತಾವ್ರೆ. ಗ್ರಾಮ ಸ್ವಚ್ಛ ಇಟ್ಕಳಿ ಅಂತಾರೆ. ಇವರ ಯೋಗ್ಯತೆಗೆ ಒಂದು ಹಳ್ಳಿ ರಸ್ತೆ ಚೆನ್ನಾಗಿ ಇಟ್ಟಿಲ್ಲ. ಇಡೀ ರಸ್ತೆ ಕೆಸರು ಆಗೈತೆ. ಇನ್ನ ಯಾವುದು ಸ್ವಚ್ಛ ಇಡೋದು” ಎಂದು ಕಿಡಿಕಾರಿದರು.

ಗ್ರಾಮದ ಯುವಕ ಅಜಯ್ ಮಾತನಾಡಿ, “ಅಭಿವೃದ್ದಿ , ಅಭಿವೃದ್ಧಿ ಅಂತಾರಲ್ಲ ಇದೇನಾ ಅಭಿವೃದ್ಧಿ? ಪಿಡಿಓ ಬೇಜವಾಬ್ದಾರಿತನದಿಂದ ನಮ್ಮ ಗ್ರಾಮದ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದೀವಿ. ಇಂತ ಹದಗೆಟ್ಟ, ಕೊಳಕು ರಸ್ತೆ ಮೇಲೆ ದಿನನಿತ್ಯ ನಮ್ಮೂರ ಶಾಲಾ ಮಕ್ಕಳು, ವಯಸ್ಸಾದವರು ಓಡಾಡ್ತಾರೆ. ಸೂಕ್ತ ವ್ಯವಸ್ಥೆ ಕಲ್ಪಿಸದೆ ಕಾಲಹರಣ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಕರೋಟಿ ಹರೀಶ್ ಮಾತನಾಡಿ, “ರಾಜ್ಯದಲ್ಲಿ ಡೆಂಘೀ,
ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಪ್ರತಿ ಗ್ರಾಮಗಳಲ್ಲೂ ಜಾಗೃತಿ ಮೂಡಿಸಬೇಕು ಎಂದು ಸುತ್ತೋಲೆ ಹೊರಡಿಸಿದರು. ಮಾಕವಳ್ಳಿ ಗ್ರಾ.ಪಂ ವತಿಯಿಂದ ನಮ್ಮ ಗ್ರಾಮದಲ್ಲಿ ಇದುವರೆಗೂ ಒಂದು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳದೆ ನಮ್ಮ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಜೊತೆಗೆ ಸ್ಥಳೀಯ ಪಿಡಿಓ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಹದಗೆಟ್ಟ ರಸ್ತೆಯಿಂದ ನರಕ ಅನುಭವಿಸುತ್ತಿರುವ ನಮಗೆ ಶೀಘ್ರವೇ ಮುಕ್ತಿಕೊಡಿಸಬೇಕು” ಎಂದು ಮನವಿ ಮಾಡಿದರು.

1001144918

“ನಮ್ಮ ಗ್ರಾಮದಲ್ಲಿ ಬರಿ ಮಳೆಗಾಲದಲ್ಲಿ ಅಷ್ಟೇ ಅಲ್ಲ, ಬೇಸಿಗೆಗಾಲದಲ್ಲೂ ಇಂತಹ ಹದಗೆಟ್ಟ ರಸ್ತೆಯ ಮೇಲೆ ಓಡಾಡಬೇಕು. ಕೆ ಆರ್ ಪೇಟೆ ಪಟ್ಟಣದಿಂದ ಮಾಕವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಯಾರೂ ಕೂಡ ಇದರ ಕಡೆ ಗಮನ ಕೊಡೋದಿಲ್ಲ. ಶಾಸಕರಿಗೆ ನಮ್ಮೂರು ಕಾಣಲ್ಲ. ತಾಲೂಕು ಪಂಚಾಯ್ತಿ ಯಾಕೆ ಇರೋದು ನೀವೇ ಹೇಳಿ” ಎಂದು ದಿನೇಶ್ ದುಗುಡ ಹೊರಹಾಕಿದರು.

ಪ್ರಸನ್ನ ಮಾತನಾಡಿ, “ನಮ್ಮೂರು ಮೂಲ ಸೌಕರ್ಯದಿಂದ ವಂಚಿತ ಆಗಿದೆ. ಅವ್ಯವಸ್ಥೆಯಿಂದ ನಮ್ಮ ಆರೋಗ್ಯದ ಮೇಲೆ, ಮುಂದಿನ ಪೀಳಿಗೆಯ ಮಕ್ಕಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ನಮ್ಮ ಗೋಳು ಅಧಿಕಾರಿಗಳಿಗೂ ತಟ್ಟಲಿ. ನಮ್ಮ ನೋವು ಸ್ವಲ್ಪವಾದರೂ ತಿಳಿಯಲಿ. ಮನುಷ್ಯತ್ವ ಮರೆತ ಅಧಿಕಾರಿಗಳು ತಮ್ಮ ಮನೆಯಿಂದ ತಂದು ಮಾಡುವ ಹಾಗೆ ಸರ್ಕಾರದ ಹಣ ಕೂಡ ವಿನಿಯೋಗ ಮಾಡದೆ ಜನರಿಗೆ ಅನ್ಯಾಯ ಮಾಡೋದು ಎಷ್ಟು ಸರಿ.‌ ಜನರು ನಿತ್ಯ ಗೋಳು ಪಡುತ್ತಿರುವಾಗ ಸೂಕ್ತ ಕ್ರಮವಹಿಸಿ ರಸ್ತೆ ಸರಿ ಪಡಿಸಿ ಜನರ ಕ್ಷೇಮ ನೋಡದೆ ಇರೋದಾದ್ರೆ ಇಂತಹ ಪಂಚಾಯ್ತಿಗಳು, ಪಿಡಿಒ, ಮೇಲಾಧಿಕಾರಿಗಳು, ಜನ ಪ್ರತಿನಿಧಿಗಳು ಯಾಕೆ ಬೇಕು. ಇವರಿಗೆಲ್ಲ ನಾಚಿಕೆ ಆಗಬೇಕು” ಎಂದರು.

ಗ್ರಾಮಕ್ಕೆ ಸೂಕ್ತ ರೀತಿಯಲ್ಲಿ ರಸ್ತೆ ನಿರ್ಮಾಣ ಆಗುವವರೆಗೂ ಹೋರಾಟ ಮುಂದುವರಿಸುವುದಾಗಿ ಗ್ರಾಮಸ್ಥರು ತಿಳಿಸಿದರು.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಬಿಜೆಪಿಗರು ನೀಡಿದ್ದ ಸೀರೆಯನ್ನು ವಾಪಸ್ ಎಸೆದ ಮಹಿಳೆಯರು

ರಾಜ್ಯಾದ್ಯಂತ ಮತದಾನ ಭರ್ಜರಿಯಾಗಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್‌...

ಮಂಡ್ಯ | ಮೇಲುಕೋಟೆ ಕ್ಷೇತ್ರದಲ್ಲಿ ರೈತ ಸಂಘ – ಜೆಡಿಎಸ್‌ ನಡುವೆ ಗಲಾಟೆ

ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರವು ಹೈವೋಲ್ಟೇಜ್‌ ಕ್ಷೇತ್ರವಾಗಿ ಹೊಮ್ಮಿದೆ....

ಪ್ರಚಾರಕ್ಕಾಗಿ ದಲಿತ ವ್ಯಕ್ತಿಯ ಮಾತು ತಿರುಚಿದ ಪಕ್ಷೇತರ ಅಭ್ಯರ್ಥಿ?; ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟನೆ

ದಲಿತರನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಕೇಳಿದ್ದ ವ್ಯಕ್ತಿಯೂ ದಲಿತರೇ ಆಗಿದ್ದಾರೆ. ದಲಿತರು...

ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತಾಡಿ: ಮೋದಿಗೆ ರಾಹುಲ್-ಪ್ರಿಯಾಂಕಾ ಸವಾಲು

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ವರಿಷ್ಠ ನಾಯಕರು ನಿಮ್ಮ ಬಗ್ಗೆ...

Download Eedina App Android / iOS

X