ಐಪಿಎಲ್ 16ನೇ ಆವೃತ್ತಿಯಲ್ಲಿ ಚೆನ್ನೈ ತಂಡ ರಾಜಸ್ಥಾನ ರಾಯಲ್ಸ್ ಎದುರು ಎರಡನೇ ಸೋಲು ಅನುಭವಿಸಿದೆ,
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆತಿಥೇಯ ರಾಯಲ್ಸ್, 32 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಧೋನಿ ಪಡೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್, ಆರಂಭಿಕ ಯಶಸ್ವಿ ಜೈಸ್ವಾಲ್ ಗಳಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 202 ರನ್‌ಗಳಿಸಿತ್ತು.
ಚೇಸಿಂಗ್ ವೇಳೆ 6 ವಿಕೆಟ್ ನಷ್ಟದಲ್ಲಿ 170 ರನ್‌ಗಳಿಸಲಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಾಧ್ಯವಾಯಿತು. ಅಂತಿಮ ಓವರ್‌ವರೆಗೂ ಶಿವಂ ದುಬೆ (52 ರನ್, 33 ಎಸೆತ) ಹೋರಾಟ ನಡೆಸಿದರಾದರೂ ಗೆಲುವು ದೂರವೇ ಉಳಿಯಿತು.
ಈ ಸುದ್ದಿ ಓದಿದ್ದೀರಾ?: ಆರ್‌ಸಿಬಿ ಐಪಿಎಲ್ ಗೆಲ್ಲುವವರೆಗೂ ಶಾಲೆಗೆ ಸೇರುವುದಿಲ್ಲ; ಪುಟಾಣಿ ಪೋಸ್ಟರ್…
203 ರನ್‌ಗಳ ಕಠಿಣ ಗುರಿ ಮುಂದಿದ್ದರೂ ನಿಧಾನ ಗತಿಯ ಆರಂಭ ಪಡೆದದ್ದೇ ಚೆನ್ನೈ ಪಾಲಿಗೆ ಮುಳುವಾಯಿತು. ಮೊದಲ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 35 ರನ್‌ಗಳಿಸಿದ್ದ ಸಿಎಸ್‌ಕೆ, 10 ಓವರ್ ದಾಟುವಷ್ಟರಲ್ಲಿ 2 ವಿಕೆಟ್ ನಷ್ಟದಲ್ಲಿ 72 ರನ್‌ಗಳನ್ನಷ್ಟೇ ಒಟ್ಟುಗೂಡಿಸಿತ್ತು.