ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಸಕಲ ಪೂಜೆ-ಪುನಸ್ಕಾರಗಳೊಂದಿಗೆ ಉದ್ಘಾಟಿಸಿದ್ದ ಹೊಸ ಸಂಸತ್ ಭವನವು ಮಳೆಯಿಂದ ಸೋರುತ್ತಿದೆ. ಸಂಸತ್ ಭವನದ ಲಾಬಿಯಲ್ಲಿ ಮಳೆ ನೀರು ಸೋರುತ್ತಿದೆ. ಛಾವಣಿಯಿಂದ ನೀರು ಸೋರುತ್ತಿರುವ ಜಾಗದಲ್ಲಿ ಬಕೆಟ್ ಇಟ್ಟಿರುವ ವಿಡಿಯೋ ವೈರಲ್ ಆಗಿದೆ. ಮೋದಿ ಸರ್ಕಾರವನ್ನು ತರಟೆಗೆ ತೆಗೆದುಕೊಂಡಿರುವ ವಿಪಕ್ಷಗಳು, ‘ಹೊರಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ, ಸಂಸತ್ ಭವನದೊಳಗೆ ನೀರು ಸೋರುತ್ತಿದೆ’ ಎಂದು ಅಪಹಾಸ್ಯ ಮಾಡಿವೆ.
1,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ ಸಂಸತ್ ಭವನವು ಉದ್ಘಾಟನೆಗೊಂಡು ಒಂದು ವರ್ಷ ಪೂರೈಸಿದೆಯಷ್ಟೇ. ಆಗಲೇ ಸೋರುತ್ತಿದ್ದು, ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಕಾಂಗ್ರೆಸ್ ನಾಯಕ, ವಿರುದುನಗರ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ‘ಎಕ್ಸ್’ನಲ್ಲಿ ವೀಡಿಯೊ ಹಂಚಿಕೊಂಡಿದ್ದು, “ಹೊರಗೆ ಪೇಪರ್ ಸೋರಿಕೆ, ಒಳಗೆ ನೀರು ಸೋರಿಕೆ” ಎಂದು ವ್ಯಂಗ್ಯವಾಡಿದ್ದಾರೆ. ಸೋರಿಕೆಗೆ ಕಾರಣಗಳನ್ನು ತನಿಖೆ ಮಾಡಲು ವಿಶೇಷ ಸಮಿತಿಯನ್ನು ರಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
“ಹೊಸ ಸಂಸತ್ ಭವನ ಯಾಕೆ ಸೋರುತ್ತಿದೆ ಎಂಬುದನ್ನು ತನಿಖೆ ಮಾಡಲು ಸಮಿತಿಯನ್ನು ರಚಿಸಬೇಕು. ಸಮಿತಿಯು ಸಂಸತ್ ಭವನದ ವಿನ್ಯಾಸ ಮತ್ತು ನಿರ್ಮಾಣಕ್ಕೆ ಬಳಸಲಾದ ಸಾಮಗ್ರಿಗಳ ಮೌಲ್ಯಮಾಪನ ಮಾಡಬೇಕು. ಅಗತ್ಯ ದುರಸ್ತಿಗಳನ್ನು ಶಿಫಾರಸು ಮಾಡಬೇಕು. ತನಿಖೆಯಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡು, ಪಾರದರ್ಶಕತೆಯನ್ನು ಖಚಿತಪಡಿಸಬೇಕು” ಎಂದು ಟ್ಯಾಗೋರ್ ಆಗ್ರಹಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸಿದ್ದಾರೆ. ಹೊಸ ಸಂಸತ್ ಭವನಕ್ಕಿಂತ ಹಳೆಯ ಸಂಸತ್ ಭವನವೇ ಉತ್ತಮ ಎಂದು ಹೇಳಿದ್ದಾರೆ.
“ಈ ಹೊಸ ಸಂಸತ್ತಿಗಿಂತ ಹಳೆಯ ಸಂಸತ್ತು ಉತ್ತಮವಾಗಿತ್ತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಹೊಸ ಸಂಸತ್ತು ಸೋರುತ್ತಿದೆ. ಈ ಸಮಸ್ಯೆಗಳು ಇತ್ಯರ್ಥವಾಗುವವರೆಗೆ ಹಳೆಯ ಸಂಸತ್ತಿಗೆ ಏಕೆ ಹಿಂತಿರುಗಬಾರದು?” ಎಂದು ಅಖಿಲೇಶ್ ಪ್ರಸ್ತಾಪಿಸಿದ್ದಾರೆ.
“1,200 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸಂಸತ್ತು ಈಗ 120 ರೂಪಾಯಿಯ ಬಕೆಟ್ ಮೇಲೆ ಅವಲಂಬಿತವಾಗಿದೆ” ಎಂದು ಆಮ್ ಆದ್ಮಿ ಪಕ್ಷ ಕೂಡ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದೆ.
2020ರ ಡಿಸೆಂಬರ್ 10ರಂದು ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದರು. 2023ರ ಮೇ 28ರಂದು ಹೊಸ ಸಂಸತ್ ಭವನವನ್ನು ಮೋದಿ ಅವರೇ ಉದ್ಘಾಟಿಸಿದ್ದರು. ಹೊಸ ಸಂಸತ್ ಭವನದಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ಮೊದಲ ಅಧಿವೇಶನ ನಡೆದಿತ್ತು.