ನನ್ನನ್ನು ಬಂಧಿಸಲು ಬರುವ ಇ.ಡಿ ಅಧಿಕಾರಿಗಳಿಗೆ ನಾನು ಚಹಾ ಮತ್ತು ಬಿಸ್ಕತ್ ಇಟ್ಟುಕೊಂಡು ತೆರೆದ ತೋಳುಗಳೊಂದಿಗೆ ಸ್ವಾಗತಿಸಲು ಕಾಯುತ್ತಿದ್ದೇನೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ‘ಚಕ್ರವ್ಯೂಹ’ದ ಹೇಳಿಕೆ ನೀಡಿದ ನಂತರ ತಮ್ಮ ವಿರುದ್ಧ ಇ.ಡಿ(ಜಾರಿ ನಿರ್ದೇಶನಾಲಯ) ದಾಳಿ ನಡೆಸಲು ಯೋಜನೆ ರೂಪಿಸಿದೆ. ಸ್ಪಷ್ಟವಾಗಿ ಹೇಳುತ್ತೇನೆ, ಇಬ್ಬರಲ್ಲಿ ಒಬ್ಬರಿಗೆ ನನ್ನ ಚಕ್ರವ್ಯೂಹದ ಭಾಷಣ ಇಷ್ಟವಾಗಿಲ್ಲ. ನನ್ನ ವಿರುದ್ಧ ಇ.ಡಿ ದಾಳಿ ನಡೆಸಲು ಯೋಜಿಸಲಾಗುತ್ತಿದೆ ಎಂದು ಇಡಿ ಒಳಗಿನವರೇ ನನಗೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು ಮಣಿಸಲು ಕೌರವರು ‘ಚಕ್ರವ್ಯೂಹ’ ನಿರ್ಮಿಸಿದ ಹಾಗೆ ಬಿಜೆಪಿಯು ದೇಶದಲ್ಲಿ ರೈತರು ಮತ್ತು ಯುವಕರ ಸುತ್ತ ‘ಚಕ್ರವ್ಯೂಹ’ ಹೆಣೆದು, ಭಯದ ವಾತಾವರಣ ನಿರ್ಮಿಸಿದೆ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಯನಾಡಿಗಾದದ್ದು ನಮ್ಮಲ್ಲೂ ಆಗಬಹುದಲ್ಲವೇ?
ಲೋಕಸಭೆಯಲ್ಲಿ ಸೋಮವಾರ(ಜುಲೈ 29) ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು, ‘ರೈತರು, ಕಾರ್ಮಿಕರು ಮಾತ್ರವಲ್ಲದೆ ಬಿಜೆಪಿಯ ಸಂಸದರು ಕೂಡಾ ಈ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ’ ಎಂದಿದ್ದರು.
ಮಹಾಭಾರತದ ಸಂದರ್ಭವನ್ನು ಉಲ್ಲೇಖಿಸುತ್ತಾ ರಾಹುಲ್ ಅವರು, ‘ಸಾವಿರಾರು ವರ್ಷಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ ಕೌರವರು ‘ಚಕ್ರವ್ಯೂಹ‘ ನಿರ್ಮಿಸಿ ಅಭಿಮನ್ಯುವನ್ನು ಕೊಂದರು. ‘ಚಕ್ರವ್ಯೂಹ’ವನ್ನು ‘ಪದ್ಮವ್ಯೂಹ’ ಎಂದೂ ಕರೆಯುತ್ತಾರೆ. ಅದು ಕಮಲದಂತೆ (ಬಿಜೆಪಿಯ ಚಿಹ್ನೆ) ಬಹು-ಹಂತದ ರಚನೆಯಾಗಿದೆ’ ಎಂದು ಹೇಳಿದ್ದರು.
