ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದರೆ ಆರೋಗ್ಯಕರ ಹಾಗೂ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜ್ ಅವರು ಅಭಿಪ್ರಾಯಪಟ್ಟರು.
ಡಾ.ಮಹಾಂತ ಶಿವಯೋಗಿ ಸ್ವಾಮೀಜಿಯವರ ಜನ್ಮದಿನದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ಮಿಮ್ಸ್, ಆಯುಷ್ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಅನನ್ಯ ಹಾರ್ಟ್ ಸಂಸ್ಥೆ ಮಂಡ್ಯ ಇವರ ಸಹಯೋಗದಲ್ಲಿ ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಆಯೋಜಿಸಿದ್ದ ಆಯೋಜಿಸಿದ್ದ “ವ್ಯಸನ ಮುಕ್ತ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಪ್ರಸ್ತುತ ದಿನಗಳಲ್ಲಿ ಶೇ.40ರಿಂದ 50 ರಷ್ಟು ಹದಿಹರೆಯದ ಯುವಕರೇ ಮಾದಕ ವಸ್ತುಗಳಿಗೆ ದಾಸರಾಗಿ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿವೆ. ಯುವಕರು ದುಶ್ಚಟದಿಂದ ದೂರ ಉಳಿದು ತಮ್ಮ ಜೀವನ ಗುರಿ ತಲುಪುವ ಕಡೆ ಶ್ರಮಿಸಬೇಕು” ಎಂದು ಸಲಹೆ ನೀಡಿದರು.
“ಯುವಕರು ಮಾದಕ ವ್ಯಸನಿಗಳಾದರೆ, ಇಡೀ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಅವಮಾನ. ತಂದೆ, ತಾಯಿಗೆ ಅವಮಾನ ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಯುವ ಸಮುದಾಯ ವ್ಯಸನಮುಕ್ತರಾಗಬೇಕು, ಉತ್ತಮ ಸಮಾಜ, ದೇಶ ಕಟ್ಟುವ ಸತ್ಪ್ರಜೆಗಳಾಗಬೇಕು” ಎಂದು ಕಿವಿಮಾತು ಹೇಳಿದರು.
“ಮಾದಕ ವ್ಯಸನಿಗಳ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ಹೆಂಡತಿ ಮೇಲೆ ಹಲ್ಲೆ ಮಾಡುವುದು, ಕಳ್ಳತನ, ಮೋಸ ಮುಂತಾದ ತಪ್ಪು ದಾರಿಗಳನ್ನು ಆಯ್ಕೆ ಮಾಡಿಕೊಂಡು ಕುಟುಂಬದಲ್ಲಿ ಅಶಾಂತಿಗೆ ನೆಲೆ ಮಾಡಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ” ಎಂದು ಡಾ.ಎಚ್.ಎಲ್.ನಾಗರಾಜ್ ತಿಳಿಸಿದರು.
ಇದನ್ನು ಓದಿದ್ದೀರಾ? ಪ್ರತಿಧ್ವನಿಸುತ್ತಿದೆ ಇಂದು, ಉಡುಪಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕೆಂದು
ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುವ ಸಂಸ್ಕೃತಿ ಬದಲಾಗಬೇಕು. ಹೆಣ್ಣು ಮಕ್ಕಳನ್ನು ಭ್ರೂಣಹತ್ಯೆ ಮಾಡುತ್ತಾರೆ ಎಂಬ ಕಳಂಕ ಮಂಡ್ಯಕ್ಕೆ ಅಂಟಿದೆ. ಇದನ್ನು ಮುಂದಿನ ದಿನಗಳಲ್ಲಿ ಹೋಗಲಾಡಿಸಬೇಕು. ಹೆಣ್ಣು ಮಕ್ಕಳನ್ನು ಚಿವುಟಿ ಹಾಕಿದರೆ ಸಮಾಜಕ್ಕೆ, ನಾಡಿಗೆ ಶಾಪ ತಟ್ಟುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ನಾನಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
