ಈ ದಿನ ಸಂಪಾದಕೀಯ | ಪತ್ರಿಕಾ ಸ್ವಾತಂತ್ರ್ಯವನ್ನು ನೇಣಿಗೇರಿಸಲು ಮೋದಿ ಸರ್ಕಾರ ಹೊಸೆಯುತ್ತಿರುವ ಹೊಸ ಕುಣಿಕೆ ‘ಬ್ರಾಡ್‌ಕಾಸ್ಟ್ ಬಿಲ್’

Date:

Advertisements

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿರುವುದರಲ್ಲಿ ಸ್ವತಂತ್ರ ಪತ್ರಕರ್ತರ ಹನಿ ಪಾಲೂ ಇದೆ. ಅದೀಗ ಮೋದಿ ಬಳಗಕ್ಕೆ ದುಃಸ್ವಪ್ನವಾಗಿ ಕಾಡುತ್ತಿರುವ ಸಂಗತಿ. ಹೀಗಾಗಿ ‘ಪ್ರಸಾರ ಸೇವೆಗಳ (ನಿಯಂತ್ರಣ) ಕಾಯ್ದೆ’ ತಂದು ಸ್ವತಂತ್ರ ಪತ್ರಿಕೋದ್ಯಮಕ್ಕೆ ಮರಣ ಶಾಸನ ಬರೆಯಲು ಹೊರಟಂತಿದೆ.

ವಿವಾದಿತ ʼಪ್ರಸಾರ ಸೇವೆಗಳ (ನಿಯಂತ್ರಣ) ಕಾಯ್ದೆ, 2023′ ಜಾರಿಗೆ ತರಲು ಮೋದಿ ಸರ್ಕಾರ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಯಿದೆ. ಮುಚ್ಚಿದ ಕದಗಳ ಹಿಂದೆ ಆಯ್ದ ಕೆಲವರೊಂದಿಗೆ ಮಾತ್ರ ರಹಸ್ಯಮಯ ಸಮಾಲೋಚನೆ ನಡೆಸುತ್ತಿರುವ ನಡೆ ಹಲವು ಗುಮಾನಿಗಳಿಗೆ ಎಡೆ ಮಾಡಿದೆ. ಕಾಯ್ದೆಯ ಕರಡು ಮಸೂದೆಯ ಆಯ್ದ ಕೆಲ ಭಾಗಗಳನ್ನು ಕೆಲವೇ ಕೆಲವು ಮಾಧ್ಯಮ ಸಂಸ್ಥೆಗಳ ಸಂಪಾದಕರು, ಮುಖ್ಯಸ್ಥರಿಗೆ ನೀಡಿ ಅಭಿಪ್ರಾಯ ಕೇಳಲಾಗಿತ್ತು ಎಂಬ ಆರೋಪ ಕಳೆದ ವರ್ಷ ಕೇಳಿ ಬಂದಿತ್ತು. ಈಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗುಪ್ತ ಸಭೆ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದು ತಮ್ಮ ತಾಳಕ್ಕೆ ಸರಿಯಾಗಿ ಕುಣಿಯದ, ಅಧಿಕಾರಶಾಹಿಯ ವಿರುದ್ಧವಿರುವ ಮೀಡಿಯಾಗಳ ಕತ್ತು ಹಿಸುಕುವ ವ್ಯವಸ್ಥಿತ ಹುನ್ನಾರ.

ದೇಶದ ನಾಗರಿಕರ ಮೇಲೆ ಪ್ರಭಾವ ಬೀರುವ ಯಾವುದೇ ಕಾನೂನು ರೂಪಿಸುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಕೇಳುವುದು ಬಹಳ ಮುಖ್ಯ ಎಂದು 2014ರ ಶಾಸನ ಪೂರ್ವ ಸಮಾಲೋಚನಾ ನೀತಿ (Pre-Legislative Consultation Policy) ಹೇಳುತ್ತದೆ. ಇದು ಸರ್ಕಾರವೇ ಒಪ್ಪಿಕೊಂಡಿರುವ ನೀತಿ. ಆದರೆ, ಪ್ರಸಾರ ಸೇವೆಗಳ ನಿಯಂತ್ರಣ ಕಾಯ್ದೆಯ ಕರಡನ್ನು ಮೋದಿ ಸರ್ಕಾರ ಸಾರ್ವಜನಿಕಗೊಳಿಸದೇ ಆಯ್ದ ಕೆಲವು ಮಾಧ್ಯಮ ಸ್ನೇಹಿತರಿಗೆ ಮಾತ್ರ ನೀಡಿ ಕಾಯ್ದೆ ಜಾರಿಗೆ ತಯಾರಿ ನಡೆಸಿರುವುದು ಮಾಧ್ಯಮ ಸ್ವಾತಂತ್ರ್ಯದ ಕತ್ತು ಹಿಸುಕುವ ಎಂದಿನ ಚಾಳಿ ಮುಂದುವರಿಕೆಯಾಗಿದೆ.

Advertisements

ಪ್ರಧಾನಿ ನರೇಂದ್ರ ಮೋದಿ ತಮ್ಮ ಹತ್ತು ವರ್ಷಗಳ ಏಕಚಕ್ರಾಧಿಪತ್ಯದಲ್ಲಿ ಮಾಧ್ಯಮಗಳ ಮೇಲೆ ಉಕ್ಕಿನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರ ಸಿಕ್ಕ ತಕ್ಷಣ ಮಾಡಿದ್ದೇ ಮಾಧ್ಯಮಗಳನ್ನು ಒಲಿಸಿಕೊಳ್ಳುವ ಕೆಲಸ. ಪ್ರಮುಖ ಮಾಧ್ಯಮ ಸಂಸ್ಥೆಗಳನ್ನು ಸ್ನೇಹಿತ ಉದ್ಯಮಿಗಳಾದ ಅಂಬಾನಿ, ಅದಾನಿ ಖರೀದಿಸುವಂತೆ ಮಾಡಿದ್ದಾರೆ. ದೇಶದ ಪ್ರಮುಖ ಸುದ್ದಿ ಮಾಧ್ಯಮಗಳು ಈಗ ಈ ಇಬ್ಬರ ಬಿಗಿ ಮುಷ್ಟಿಯಲ್ಲಿವೆ. ಮೋದಿ ಭಜನೆಯಷ್ಟೇ ಅಲ್ಲಿನ ಪತ್ರಕರ್ತರ ಕೆಲಸ. ಸುಳ್ಳು ಸುದ್ದಿ ಹಬ್ಬಿಸುವುದು, ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವುದು ನಿತ್ಯದ ಕಾಯಕ.

ಆದರೆ, ಸರ್ಕಾರದ ಈ ನಡವಳಿಕೆಯೇ ಸಾವಿರಾರು ಸ್ವತಂತ್ರ ಮಾಧ್ಯಮಗಳ ಹುಟ್ಟಿಗೆ ಕಾರಣವಾಗಿದೆ. ಈ ಎರಡು -ಮೂರು ವರ್ಷಗಳಲ್ಲಿ ಭಕ್ತರ ‘ವಿಶ್ವಗುರು’ ಮೋದಿಯವರ ಸುಳ್ಳು, ಭಂಡತನ, ದಮನಕಾರಿ ನೀತಿ, ದಿವಾಳಿಯತ್ತ ಸಾಗುತ್ತಿರುವ ಆರ್ಥಿಕತೆ, ಭ್ರಷ್ಟಾಚಾರ, ಮೋದಿ ಅಲೆಯ ನಿಜಬಣ್ಣ ಬಯಲು ಮಾಡಿದ್ದು ನೂರಾರು ಯೂಟ್ಯೂಬರ್‌ಗಳು, ಫ್ಯಾಕ್ಟ್‌ ಚೆಕರ್‌ಗಳು, ತನಿಖಾ ವರದಿಗಳನ್ನು ಮಾಡುತ್ತಿರುವ ರವೀಶ್‌ ಕುಮಾರ್‌ ತರಹದ ಪ್ರಾಮಾಣಿಕ ಪತ್ರಕರ್ತರು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದರಲ್ಲಿ ಸ್ವತಂತ್ರ ಪತ್ರಕರ್ತರ ಹನಿ ಪಾಲೂ ಇದೆ. ಅದೀಗ ಮೋದಿ ಬಳಗಕ್ಕೆ ದುಃಸ್ವಪ್ನವಾಗಿ ಕಾಡುತ್ತಿರುವ ಸಂಗತಿ. ಹೀಗಾಗಿ ಪ್ರಸಾರ ಸೇವೆಗಳ ನಿಯಂತ್ರಣ ಕಾಯ್ದೆ ತಂದು ಸ್ವತಂತ್ರ ಪತ್ರಿಕೋದ್ಯಮಕ್ಕೆ ಮರಣ ಶಾಸನ ಬರೆಯಲು ಹೊರಟಂತಿದೆ.

ಮಾಧ್ಯಮಗಳಿಗೆ ಹೆದರುವಷ್ಟು ಮತ್ಯಾರಿಗೂ ಮೋದಿ ಎಂಬ ಪೊಳ್ಳು ಮನುಷ್ಯ ಹೆದರುತ್ತಿಲ್ಲ. ಅದಕ್ಕಾಗಿಯೇ ಹತ್ತು ವರ್ಷಗಳಲ್ಲಿ ಒಂದೇ ಒಂದು ಪ್ರೆಸ್‌ಮೀಟ್‌ ಮಾಡಿಲ್ಲ. ವಿದೇಶಕ್ಕೆ ಹೋದಾಗಲೂ, ವಿದೇಶಿ ನಾಯಕರು ಭಾರತಕ್ಕೆ ಬಂದಾಗಲೂ ಜಂಟಿ ಪತ್ರಿಕಾಗೋಷ್ಠಿಗೆ ಮೋದಿ ಸಿದ್ದರಿಲ್ಲ. ದೇಶದಲ್ಲಿ ನಡೆಯಬಾರದ ದುರಂತ ನಡೆದಾಗ, ಹೊಸ ಯೋಜನೆ ಘೋಷಿಸುವಾಗ, ದೇಶಕ್ಕೇ ಬೀಗ ಹಾಕುವ ಲಾಕ್‌ಡೌನ್‌ ನಿರ್ಧಾರ ಪ್ರಕಟಿಸುವಾಗ, ನೋಟ್‌ ಬ್ಯಾನ್‌ ಮಾಡುವಾಗ ಮೋದಿ ಪತ್ರಿಕಾಗೋಷ್ಠಿ ಕರೆಯುವ ತಾಕತ್ತು ಪ್ರದರ್ಶಿಸಿಲ್ಲ. ಪುಲ್ವಾಮಾ ದಾಳಿಯಾದಾಗಲೂ ಮಾಧ್ಯಮಗಳ ಮುಂದೆ ಬರುವ ಧೈರ್ಯ ತೋರಿಲ್ಲ. ಚುನಾವಣೆ ಘೋಷಣೆಯಾದಾಗ, ಗೆದ್ದು ಬೀಗಿದಾಗ, ಹೊಸ ಸಂಪುಟ ರಚನೆಯಾದಾಗ ಪತ್ರಿಕಾಗೋಷ್ಠಿ ನಡೆಸುವ ಸೌಜನ್ಯ ತೋರಿಲ್ಲ.

ಚುನಾವಣಾ ಸಭೆಗಳಲ್ಲಿ ಟೆಲಿಪ್ರಾಂಪ್ಟರ್‌ ನೋಡಿ ಗಂಟೆಗಟ್ಟಲೆ ಭಾಷಣ ಮಾಡಿ, ವಿಷ ಕಾರುವ ಪ್ರಧಾನಿಗೆ ಮಾಧ್ಯಮಗಳ ಮೇಲೆ ಯಾಕಿಷ್ಟು ಸಿಟ್ಟು, ಭಯ? ಚುನಾವಣೆಯ ಸಮಯದಲ್ಲಿ ಆಯ್ದ ಗೋದಿ ಮಾಧ್ಯಮಗಳ ಪತ್ರಕರ್ತರಿಗೆ ಸ್ಕ್ರಿಪ್ಟೆಡ್‌ ಸಂದರ್ಶನ ನೀಡುವ ಮೋದಿಯವರು ಈಗ ಯಾರನ್ನು ಮಟ್ಟ ಹಾಕಲು ಹೊಂಚು ಹಾಕುತ್ತಿದ್ದಾರೆ? ಬಹುಸಂಸ್ಕೃತಿಯ ಮೇಲಿನ ದಾಳಿ, ದೇಶದ ಮೂಲ ಸತ್ವವಾದ ಕೋಮು ಸೌಹಾರ್ದತೆಯ ಮೇಲಿನ ದಾಳಿಯನ್ನು ವಿರೋಧಿಸುತ್ತಾ, ದೀನ ದಲಿತರ ಧ್ವನಿಯಾಗಿರುವ ಮಾಧ್ಯಮಗಳ ಸದ್ದಡಗಿಸುವ ಈ ನಡೆ ಮೋದಿ ಸರ್ಕಾರಕ್ಕೆ ದುಬಾರಿಯಾದೀತು.

ಈ ಕರಡು ಮಸೂದೆಯ ಬಗ್ಗೆ ಈಗಾಗಲೇ ಅಪಸ್ವರ ಎದ್ದಿದೆ. ಸರ್ಕಾರ ತನ್ನ ವ್ಯಾಪ್ತಿಯನ್ನು ಮೀರಿ ಮಾಧ್ಯಮಗಳನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ಇದರಿಂದ ಸುದ್ದಿಮಾಧ್ಯಮ ಮಾತ್ರವಲ್ಲ ಮನರಂಜನಾ ವಾಹಿನಿಗಳ ಮುಕ್ತ ಅಭಿವ್ಯಕ್ತಿಗೂ ತಡೆಯೊಡ್ಡುತ್ತದೆ. ಅರ್ಥಪೂರ್ಣ ಸಾರ್ವಜನಿಕ ಸಮಾಲೋಚನೆ ನಡೆಸದೇ ಸರ್ಕಾರದ ಪ್ರತಿನಿಧಿಗಳು ಕಾನೂನು ರೂಪಿಸುವುದು ತಮ್ಮ ಹಿತಾಸಕ್ತಿ, ಧೋರಣೆಯನ್ನು ಹೇರುವ ತಂತ್ರವಾಗಿದೆ. ಮಾಧ್ಯಮಗಳ ಮೇಲೆ ಕಾನೂನಿನ ಕಡಿವಾಣ ಹಾಕುವುದರಿಂದ ದೊಡ್ಡ ಕಾರ್ಪೊರೇಟ್‌ ಕುಳಗಳಿಗೆ ಸಮಸ್ಯೆಯಾಗದು. ಆದರೆ, ಅದು ಸಣ್ಣಪುಟ್ಟ ಮಾಧ್ಯಮಗಳು, ಸಾಮಾಜಿಕ ಮಾಧ್ಯಮ ಬಳಕೆದಾರರು, ಸ್ವತಂತ್ರ ಪತ್ರಕರ್ತರಿಗೆ ಮರಣ ಶಾಸನವಾಗಲಿದೆ ಎಂಬ ಆತಂಕ ಉಂಟಾಗಿದೆ.

ಬೃಹತ್ ಕಾರ್ಪೊರೇಟ್ ಮಾಧ್ಯಮಗಳ ಹಿತಾಸಕ್ತಿಗಳು ಬೇರೆ, ಸಣ್ಣ ಜನಪರ ಮಾಧ್ಯಮಗಳ‌ ಕಾಳಜಿಗಳೇ ಬೇರೆ. ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಅವಿವೇಕ ಮತ್ತು ಅನ್ಯಾಯದ, ಜನವಿರೋಧಿ ನಡೆ. ಜನಪರ ಮಾಧ್ಯಮಗಳ ಬಾಯಿ ಬಡಿಯುವ ಸರ್ವಾಧಿಕಾರಿ ನಡೆ. ಸಣ್ಣ ಮತ್ತು ಜನಪರ ಮಾಧ್ಯಮಗಳ ಅಭಿಮತವನ್ನೂ ಸರ್ಕಾರ ಆಹ್ವಾನಿಸಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X