ಜಾರ್ಖಂಡ್ ವಿಧಾನಸಭೆಯಲ್ಲಿ ಎರಡು ದಿನಗಳ ಕಲಾಪಕ್ಕೆ ಅಡ್ಡಿಪಿಸಿದ ಅಲ್ಲಿನ 18 ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ. ಬುಧವಾರದಿಂದ ಬಿಜೆಪಿ ಶಾಸಕರು ಸದನದ ಆವರಣದಲ್ಲಿ ಮಲಗಿದ್ದರು. ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವುದು ಸೇರಿದಂತೆ ತಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಉತ್ತರಿಸಬೇಕೆಂದು ಅವರು ಪಟ್ಟುಹಿಡಿದಿದ್ದರು.
ವಿಧಾನಸಭೆಯ ಇತಿಹಾಸದಲ್ಲಿ ಈ ಎರಡು ದಿನಗಳು ‘ಕಪ್ಪು ಅಧ್ಯಾಯ’ವಾಗಿವೆ ಎಂದು ವಿಧಾನಸಭೆ ಸ್ಪೀಕರ್ ರವೀಂದ್ರ ನಾಥ್ ಮಹತೋ ಹೇಳಿದ್ದಾರೆ. ‘ಹುದ್ದಂಗಿ’ (ಗದ್ದಲ) ಸೃಷ್ಟಿಸಿದ ಕಾರಣಕ್ಕಾಗಿ 18 ಬಿಜೆಪಿ ಶಾಸಕರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಈ ಅಮಾನತು ಆದೇಶವನ್ನು ಬಿಜೆಪಿ ‘ಪ್ರಜಾಪ್ರಭುತ್ವದ ಕೊಲೆ’ ಎಂದು ಕರೆದಿದೆ.
ಬುಧವಾರ, ತಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸೋರೆನ್ ಉತ್ತರಿಸಬೇಕೆಂದು ಬಿಜೆಪಿ ಶಾಸಕರು ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗಿದ್ದರಿಂದಾಗಿ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಯಾಯಿತು. ಹೇಮಂತ್ ಸೊರೇನ್ ಅವರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದಾಗಿ ಹೇಳಿದರೂ, ಶಾಸಕರು ಸುಮ್ಮನಾಗಲಿಲ್ಲ. ಅವರು ರಾತ್ರಿಯಿಡೀ ವಿಧಾನಸಭೆಯಲ್ಲಿ ಇದ್ದರು. ಮರುದಿನ ಅವರು ಮತ್ತೆ ಪ್ರತಿಭಟನೆ ಆರಂಭಿಸಿದರು. ಗದ್ದಲದಿಂದಾಗಿ ಕಲಾಪವನ್ನು ಅಲ್ಪಾವಧಿಗೆ ಮುಂದೂಡಲಾಯಿತು. ವಿರಾಮದ ನಂತರ, ಅವರು ಸದನಕ್ಕೆ ಬ್ಯಾನರ್ ತೆಗೆದುಕೊಂಡು ಬಂದರು. ಅವರನ್ನು ಸದನದಿಂದ ಹೊರಗೆ ಕಳಿಸಲು ಮಾರ್ಷಲ್‌ಗಳನ್ನು ಕರೆಸಬೇಕಾಯಿತು” ಎಂದು ಸ್ಪೀಕರ್ ಮಹತೋ ಹೇಳಿದ್ದಾರೆ.
“ಶಾಸಕರು ವಿಧಾನಸಭೆಯನ್ನು ಅಪಹಾಸ್ಯ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸಿದ್ದಾರೆ. ಇದು ಜಾರ್ಖಂಡ್ ವಿಧಾನಸಭೆಯ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯವಾಗಿದೆ. ನಾವು ಈ ವಿಷಯಗಳ ಬಗ್ಗೆ ಮೌನವಾಗಿರಲು ಸಾಧ್ಯವಿಲ್ಲ. ಯಾಕೆಂದರೆ, ಮೌನವಾಗಿದ್ದರೆ, ಈ ಮನಸ್ಥಿತಿ ಶಾಶ್ವತವಾಗಿ ಬೇರೂರುತ್ತದೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ವಯನಾಡ್ ಭೂಕುಸಿತ | ತಂದೆ ಹತ್ಯೆಯಾದಾಗ ಅನುಭವಿಸಿದ್ದ ನೋವಿಗಿಂತ ಈಗ ಹೆಚ್ಚು ನೋವಾಗಿದೆ: ರಾಹುಲ್
“ಜಾರ್ಖಂಡ್‌ನ ಜನರ ಧ್ವನಿಯಾಗಿರುವ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಲು ಸ್ಪೀಕರ್ ತಮ್ಮ ಅಧಿಕಾರವನ್ನು ಬಳಸುತ್ತಿದ್ದಾರೆ. ಸಭಾಧ್ಯಕ್ಷರು ಸರ್ಕಾರಿ ನೌಕರರಂತೆ ವರ್ತಿಸುತ್ತಿದ್ದಾರೆ. ಯಾವ ನಿಯಮಗಳ ಅಡಿಯಲ್ಲಿ ಶಾಸಕರನ್ನು ಅಮಾನತುಗೊಳಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ. ನಾವು ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದೆವು. ಹೇಮಂತ್ ಸೊರೇನ್ ಅವರ ಬಳಿ ಯಾವುದೇ ಉತ್ತರವಿಲ್ಲದ ಕಾರಣ, ಅವರು ನಮ್ಮನ್ನು ಹತ್ತಿಕ್ಕಲು ತಮ್ಮ ತಂತ್ರಗಳನ್ನು ಬಳಸುತ್ತಿದ್ದಾರೆ” ಎಂದು ವಿರೋಧ ಪಕ್ಷದ ನಾಯಕ ಅಮರ್ ಕುಮಾರ್ ಬೌರಿ ಹೇಳಿದರು.
“ಬುಧವಾರ ರಾತ್ರಿ ವಿಧಾನಸಭೆ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರನ್ನು ಶೌಚಾಲಯಕ್ಕೆ ಹೋಗದಂತೆ ತಡೆಯಲಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು” ಎಂದೂ ಅವರು ಆರೋಪಿಸಿದ್ದಾರೆ.