ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗೆ ಎಸ್‌ಸಿಪಿ, ಟಿಎಸ್‌ಪಿ ಹಣ ಬಳಸದಂತೆ ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆಯ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಘಟಕದಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಮಹಿಳಾ ಮುಖಂಡರು, “1980ರಲ್ಲಿ ವಿಶೇಷ ಘಟಕ ಯೋಜನೆ(ಎಸ್‌ಸಿಪಿ), ಬುಡಕಟ್ಟ ಉಪ ಯೋಜನೆ(ಟಿಎಸ್‌ಪಿ) ಜಾರಿಗೋಳಿಸಿದ್ದು, ಪರಿಶಿಷ್ಟ ಜಾತಿ/ಪಂಗಡದವರು ಸಾಮಾನ್ಯ ಜಾತಿಯವರಂತೆ ನಿಗಧಿತ ಸಮಯದೊಳಗೆ ಅಭಿವೃದ್ಧಿ ಆಗಬೇಕೆಂದು ರೂಪಿಸಿದ ಯೋಜನೆಯಾಗಿದೆ. ಈ ಯೋಜನೆ ಜಾರಿಯಾಗಿ ಸುಮಾರು 44 ವರ್ಷ ಕಳೆದರೂ ಪರಿಶಿಷ್ಟ ಜಾತಿ/ಪಂಗಡಗಳು ಸಾಮಾನ್ಯ ಜಾತಿಯವರಂತೆ ಯಾವುದೇ ವಿಷಯದಲ್ಲಿ ಅಭಿವೃದ್ಧಿಯಾಗಿಲ್ಲ. ಆದರೆ ಪ್ರತಿ ವರ್ಷ ಹಣ ಮಾತ್ರ ದುರ್ಬಳಕೆಯಾಗುತ್ತಿದೆ. ಇದನ್ನು ಸಂಪೂರ್ಣವಾಗಿ ಇದೇ ಯೋಜನೆಗಳಿಗೆ ಬಳಸಬೇಕು” ಎಂದು ಆಗ್ರಹಿಸಿದರು.
ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಸಂಘಟನೆಯ ನಾಯಕಿ ರೇಣುಕಾ ಮಾತನಾಡಿ, “ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಬಳಸುತ್ತಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ಬಳಸಬೇಡಿ” ಎಂದು ಮನವಿ ಮಾಡಿದರು.

“ಪರಿಶಿಷ್ಟ ಜಾತಿ/ಪಂಗಡದವರ ಅಭಿವೃದ್ಧಿಗೆ ಮಾರಕವಾಗುತ್ತಿರುವ 2013ರ ಕಾಯಿದೆಯ 7ಬಿ ಮತ್ತು 7ಸಿ ರದ್ದುಪಡಿಸಿ, ಕಾಯಿದೆಯಲ್ಲಿ ಆಡಳಿತಾತ್ಮಕ ವೆಚ್ಚಗಳನ್ನು ಹೊರತುಪಡಿಸಿ ಎಂದು ತಿಳಿಸಿದರೂ, ಮೀಸಲಿರುವ ಹಣದಲ್ಲಿ ಆಡಳಿತಾತ್ಮಕ ವೆಚ್ಚಗಳನ್ನು ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬೊಮ್ಮನಕಟ್ಟೆ ವಾರ್ಡ್‌ಗೆ ಆಧುನಿಕ ಚಿತಾಗಾರ ವ್ಯವಸ್ಥೆ ಕಲ್ಪಿಸಿಕೊಡಲು ಮನವಿ
ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆಯ ಕಾರ್ಯದರ್ಶಿ ಡಿ ಸುಧಾ, ಪದಾಧಿಕಾರಿಗಳಾದ ಪಿ. ಉಮಾ, ಭಾಗ್ಯಮ್ಮ, ಅನ್ನಪೂರ್ಣ, ರುದ್ರಮ್ಮ, ಕವನ, ಮಂಜುಳಾ, ಶಂಶಿದಾಬಾನು, ಜ್ಯೋತಿ, ರಜಿಯಾ ಸೇರಿದಂತೆ ಇತರರು ಇದ್ದರು.