ಮಳೆಗಾಲ ಶುರುವಾದರೆ ಸಾಕು, ಈ ರೈಲ್ವೆ ಮೇಲ್ಸೇತುವೆ ಥಟ್ ಥಟ್ ಎಂದು ನೀರು ಸೋರತೊಡಗುತ್ತದೆ. ಈ ಸೇತುವೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಯಾಕಪ್ಪಾ ಮಳೆ ಬರುತ್ತದೆ ಎಂದು ತಲೆ ಬಿಸಿಯಾಗುತ್ತದೆ. ಇತ್ತ ರೈಲ್ವೆ ಅಧಿಕಾರಿಗಳಿಗೂ ಗಮನವಿಲ್ಲ, ಅತ್ತ ಗ್ರಾಮ ಪಂಚಾಯತಿಗೂ ಎಚ್ಚರವಿಲ್ಲ.
ಅಷ್ಟಕ್ಕೂ ಈ ಸೇತುವೆ ಯಾವುದು ಗೊತ್ತಾ? ಧಾರವಾಡ ಮತ್ತು ಅಳ್ನಾವರ ಮಾರ್ಗ ಮಧ್ಯದಲ್ಲಿ ಇರುವ ಧಾರವಾಡ ತಾಲೂಕಿನ ಮಂಡಿಹಾಳ, ನಾಗಲಾವಿ, ರಾಮಾಪುರ ಗ್ರಾಮಗಳಿಗೆ ಹೋಗುವ ರೈಲ್ವೆ ಮೇಲ್ಸೇತುವೆ.

ಈ ಸೇತುವೆ ಬಿರುಕು ಬಿಟ್ಟಿದ್ದು, ಮಳೆ ಬಂದಾಗ ನೀರು ಸೇತುವೆಯಿಂದ ಸೋರಲು ಶುರುವಾಗುತ್ತದೆ. ಒಂದುವೇಳೆ ಜೋರಾಗಿ ಮಳೆ ಬಂದಾಗ ವಾಹನ ಸವಾರರು ಸ್ವಲ್ಪ ಹೊತ್ತು ನಿಂತುಕೊಂಡು ಹೋಗಲೂ ಈ ಸೇತುವೆ ಕೆಳಗೆ ಅವಕಾಶವಿಲ್ಲ. ಅತ್ತ ಮೇಲಿನಿಂದಲೂ ಸೋರುವುದಲ್ಲದೇ, ಅಡಿಭಾಗದಲ್ಲಿರುವ ರಸ್ತೆಯಲ್ಲಿಯೂ ನೀರು ನಿಲ್ಲುತ್ತದೆ. ಹೀಗಾಗಿ ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.
ಇನ್ನು ರಸ್ತೆಯುದ್ದಕ್ಕೂ ತೆಗ್ಗು ದಿನ್ನೆಗಳು, ನೀರಿನ ಗುಂಡಿಗಳಲ್ಲಿ ವಾಹನ ಸಂಚಾರ ಮಾಡುವ ವಾತಾವರಣ ನಿರ್ಮಾಣವಾಗಿದೆ. ಮತ್ತು ಈ ಸೇತುವೆ ಮುಗದ ರೈಲು ನಿಲ್ದಾಣಕ್ಕೆ ಸಂಬಂಧಪಟ್ಟಿರುವುದರಿಂದ ಮಂಡಿಹಾಳ ಗ್ರಾಮ ಪಂಚಾಯತಿ ವತಿಯಿಂದ ಸಮಸ್ಯೆ ಬಗೆಹರಿಸಲು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಈ ದಿನ. ಕಾಮ್ ಜೊತೆಗೆ ಮಂಡಿಹಾಳ ಗ್ರಾಮ ಪಂಚಾಯತ್ ಪಿಡಿಓ ನೀರಜ್ ಜಾಧವ್ ಮಾತನಾಡಿ, “ಈ ಸಮಸ್ಯೆ ಬಗ್ಗೆ ಮುಗದ ರೈಲ್ವೆ ನಿಲ್ದಾಣಾಧಿಕಾರಿಗಳಿಗೆ ಸಂಬಂಧಿಸಿರುವುದರಿಂ, ಕೂಡಲೇ ಸರಿಪಡಿಸುವಂತೆ ಮನವಿ ಸಲ್ಲಿಸಿ ವಿನಂತಿಸಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯುವಂತೆ ನೋಡಿಕೊಳ್ಳುತ್ತೇವೆ. ಮತ್ತು ರಸ್ತೆ ದುರಸ್ತಿ ಕಾರ್ಯವನ್ನು ಸರಿಪಡಿಸುತ್ತೇವೆ” ಎಂದು ತಿಳಿಸಿದರು.

ಇನ್ನು ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ಲೋಕೋಪಯೋಗಿ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ರಸ್ತೆ ದುರಸ್ತಿ ಮಾಡದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ವಾಹನ ಸವಾರರು ಬಿದ್ದು ಪರದಾಡುವಂತಾಗಿದ್ದು. ರಾತ್ರಿ ವೇಳೆ ಹಲವಾರು ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೋರ್ವರು ಮಾಹಿತಿ ನೀಡಿದರು.
ಕ್ಷೇತ್ರದ ಶಾಸಕ, ಮಂತ್ರಿಗಳು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವರೇ ಎಂದು ಗ್ರಾಮಸ್ಥರು ಕಾದು ನೋಡುತ್ತಿದ್ದಾರೆ.

