ಮೃತದೇಹದ ಮೇಲೆ ಮುಚ್ಚಿದ್ದ ಬಿಳಿಬಟ್ಟೆಯನ್ನು ಸರಿಸಿ ನೋಡಿದರೆ ಆ ಡೆಡ್ ಬಾಡಿಗೆ ಮುಖವೇ ಇರಲಿಲ್ಲ. ಅದರ ಪಕ್ಕದಲ್ಲಿದ್ದ ಫ್ರೀಜರ್‌ನಲ್ಲಿ ಮೂಟೆಯಲ್ಲಿ ಸರಕು ಕಟ್ಟಿಟ್ಟಂತೆ ಇನ್ನೊಂದು ಕಳೇಬರ. ಹಾಗೇ ಮುಂದಕ್ಕೆ ಹೋದಂತೆ ಶರೀರ ಭಾಗ ಇದ್ದರೆ ತಲೆ ಇಲ್ಲ, ತಲೆ ಇದ್ದರೆ ಶರೀರ ಇಲ್ಲ …
ನಮ್ಮದೊಂದು ಆರು ಜನರ ತಂಡ ದುರಂತ ನಡೆದ ದಿನ ಮಧ್ಯಾಹ್ನ ಹೊರಟಿದ್ದು ವಯನಾಡಿನ ಕಡೆಗೆ. ಸಂಜೆ ಹೊತ್ತು ಮೀರಿ ಕತ್ತಲಾಗುತ್ತಿದ್ದಂತೆ ತಲುಪಿದೆವು ಮೇಪಾಡಿಗೆ. ಮೇಪಾಡಿ ದುರಂತ ನಡೆದ ಮುಂಡಕೈ ಚೂರಲ್ ಮಲೆ ಪ್ರದೇಶಕ್ಕಿಂತ ಹದಿನೈದು ಕಿಲೋಮೀಟರ್ ದೂರ ಇದೆ.
ದುರಂತ ನಡೆದ ಸ್ಥಳದಿಂದ ಬಂದ ಮೃತದೇಹಗಳನ್ನು ಇದೇ ಮೇಪಾಡಿ ಸರಕಾರಿ ಆಸ್ಪತ್ರೆ, ಪಕ್ಕದ ಅಬ್ದುಲ್ ಕಲಾಂ ಸಮುದಾಯ ಭವನ ಮತ್ತು ಸುತ್ತಮುತ್ತ ಇರುವ ಕಾಲೇಜುಗಳಲ್ಲಿ ತಾತ್ಕಾಲಿಕ ಶವಾಗಾರಗಳನ್ನು ಸ್ಥಾಪಿಸಿ ಇಡಲಾಗುತ್ತಿತ್ತು. ಅಲ್ಲಿ ಬದುಕಿ ಉಳಿದವರಿಗೆ ಉಳಿಯಲು ಕೂಡಾ ಅಲ್ಲಿ ವ್ಯವಸ್ಥೆ ಮಾಡಲಾಗಿತ್ತು. ದುರಂತ ಸ್ಥಳದ ಕಾರ್ಯಾಚರಣೆ ರಾತ್ರಿ ಹೊತ್ತು ಆದ ಕಾರಣ ನಿಲ್ಲಿಸಿದ್ದರಿಂದ ಇದೇ ಮೇಪಾಡಿ ಪರಿಸರದಲ್ಲಿ ಆ ದಿನ ನಿಲ್ಲಬೇಕಾಗಿ ಬಂತು. ಹೇಗಿದ್ದರೂ ರೆಸ್ಕ್ಯು ತಂಡದ ಜತೆ ಬಂದ ಕಾರಣ ಶವಾಗಾರಕ್ಕೆ ಮೃತದೇಹಗಳನ್ನು ಹೊತ್ತು ತರುತ್ತಿದ್ದ ಆಂಬುಲೆನ್ಸ್ ಗಳಿಂದ ಮೃತದೇಹಗಳನ್ನು ಇಳಿಸಿ ಡೆಡ್ ಬಾಡಿಗಳನ್ನು ಇಡುವ ವಿಶೇಷ ಫ್ರೀಜರ್ ಗಳಲ್ಲಿ ಇರಿಸುವ ಕಾಯಕಕ್ಕೆ ಜತೆಯಾದೆವು.
ನಾವು ಅಲ್ಲಿಗೆ ತೆರಳುವ ಹೊತ್ತಿಗೆ 91 ಮೃತದೇಹಗಳು ದೊರೆತಿದ್ದವು. ಮತ್ತೆ ಕೂಡಾ ಆಂಬುಲೆನ್ಸ್ ಗಳು ಮೃತದೇಹಗಳನ್ನು ಹೊತ್ತು ಬರುತ್ತಲೇ ಇತ್ತು. ಹಲವರು ಮೊಬೈಲಿನಲ್ಲಿ ತಮ್ಮ ಬಂಧು ಬಾಂಧವರ ಫೋಟೋಗಳನ್ನು ತೋರಿಸಿಕೊಂಡು ಇವರು ಇಲ್ಲಿ ಇದ್ದಾರಾ ಹುಡುಕಿಕೊಡಿ ಎಂದು ಸುತ್ತಾಡುತ್ತಿದ್ದರು. ಮಧ್ಯ ವಯಸ್ಕರೊಬ್ಬರು ಹೆಣ್ಣು ಮಗಳೊಬ್ಬಳ ಫೋಟೋ ತೋರಿಸಿದಾಗ ಪಕ್ಕದ ಶವಾಗಾರದಲ್ಲಿ ಮೃತದೇಹದ ಮೇಲೆ ಬರೆದಿದ್ದ 14-17 years Female ಬರಹ ನೆನಪಾಗಿ ಆ ಕಡೆ ಕರೆದುಕೊಂಡು ಹೋದೆ.
ಅಲ್ಲಿ ಹೋಗಿ ಮೃತದೇಹದ ಮೇಲೆ ಮುಚ್ಚಿದ್ದ ಬಿಳಿಬಟ್ಟೆಯನ್ನು ಮುಖದ ಭಾಗದಲ್ಲಿ ತೆಗೆದು ನೋಡಿದರೆ ಆ ಡೆಡ್ ಬಾಡಿಗೆ ಮುಖದ ಭಾಗವೇ ಇರಲಿಲ್ಲ. ಅದರ ಪಕ್ಕದಲ್ಲಿದ್ದ ಫ್ರೀಜರ್ ನಲ್ಲಿ ಮೂಟೆಯಲ್ಲಿ ಸರಕು ಕಟ್ಟಿಟ್ಟಂತೆ ಇನ್ನೊಂದು ಕಳೇಬರ. ಹೀಗೇ ಮುಂದಕ್ಕೆ ಹೋದಂತೆ ಶರೀರ ಭಾಗ ಇದ್ದರೆ ತಲೆಯ ಭಾಗ ಇಲ್ಲ, ತಲೆ ಇದ್ದರೆ ಶರೀರ ಇಲ್ಲ ಹೀಗೇ ಮೃತದೇಹಗಳು. ಅಲ್ಲಿ ನಿಲ್ಲಲಾಗದೇ ಚಡಪಡಿಸಿಕೊಂಡು ನಿರಾಶ್ರಿತರ ಕ್ಯಾಂಪ್ ಗಳೆಡೆ ತೆರಳಿದರೆ ಅಲ್ಲಿನದು ಬೇರೆಯದೇ ಲೋಕ. ತಲೆಗೆ ಕೈ ಇಟ್ಟುಕೊಂಡು ಕುಳಿತವರು… ಆಕಾಶ ನೋಡಿಕೊಂಡು ಗೋಡೆಗೆ ಒರಗಿ ನಿಂತವರು… ತಿನ್ನಲು ಕುಳಿತು ತಟ್ಟೆಯತ್ತ ದೃಷ್ಠಿ ನೆಟ್ಟು ಹಾಗೇ ಉಳಿದುಬಿಟ್ಟವರು… ಹೀಗೇ ಅಲ್ಲಿನ ಬಹುತೇಕರು ನಡೆದ ದುರಂತವನ್ನು ಅರಗಿಸಿಕೊಂಡವರಂತೆ ಕಾಣಲಿಲ್ಲ. ಸಣ್ಣ ಮಕ್ಕಳ ಆಕ್ರಂದನದ ಜತೆ ದೊಡ್ಡವರ ಅರಚಾಟಗಳು ಕೂಡಾ ಇನ್ನೊಂದು ಕಡೆಯಿಂದ ಕಿವಿಗಪ್ಪಳಿಸುತ್ತಿತ್ತು.
ಗೋಡೆಗೆ ಮುಖ ಕೊಟ್ಟು ಅಳುತ್ತಿದ್ದ ಸಣ್ಣ ಹುಡುಗನ ಮಾತಾಡಿಸಿದೆ. ತಂದೆಯ ಮೃತದೇಹ ನೋಡಿ ಬಂದು ಅಳುತ್ತಿದ್ದ. ಅಲ್ಲಿಗೇ ಓಡಿ ಬಂದ ಮಧ್ಯವಯಸ್ಕ ಹೆಂಗಸೊಬ್ಬರು “ಎಲ್ಲಾಮ್ ಪೋಯಿ ಮೋನೇ” ಎಂದು ಕೈಯನ್ನು ಬಿಗಿಯಾಗಿ ಹಿಡಿದಿದ್ದರ ಬಿಸಿ ಇನ್ನೂ ಆರಿಲ್ಲ. ಮತ್ತೊಂದು ಕಡೆ ಹದಿ ಹರೆಯದ ಹುಡುಗನೊಬ್ಬ ಸಣ್ಣ ಮಗುವನ್ನು ಎತ್ತಿಕೊಂಡು ನಿಂತಿದ್ದಾನೆ. “ಇದ್ಯಾರದು ಮಗು” ಎಂದು ಪ್ರಶ್ನಿಸಿದರೆ “ನೀರಿನಲ್ಲಿ ಹಲವು ಜನ ರಕ್ಷಿಸಿ ಎಂದು ಕೈ ಮೇಲೆತ್ತಿ ಗೋಗರೆಯುತ್ತಿದ್ದರು. ಆದರೆ ನನ್ನ ಕೈಗೆ ಸಿಕ್ಕಿದ್ದು ಈ ಮಗು ಮಾತ್ರ ಆದರೆ ಉಳಿದವರನ್ನು ರಕ್ಷಿಸಲು ಆಗಲೇ ಇಲ್ಲ” ಎಂದು ಅತ್ತುಬಿಟ್ಟ.
ಮಧ್ಯರಾತ್ರಿ ಆಗಿರಬೇಕು. ಮರುದಿನ ಬೆಳಗ್ಗೆದ್ದು ದುರಂತ ಸ್ಥಳಕ್ಕೆ ತೆರಳಬೇಕು.ಸ್ವಲ್ಪ ಹೊತ್ತಾದರೂ ಮಲಗದೇ ಇದ್ದರೆ ನಾಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದು ಕಷ್ಟ ಎಂದು ಜತೆಗಿದ್ದ ಗೆಳೆಯರು ಎಚ್ಚರಿಸಿದ ಕಾರಣ ನಂತರ ಮಲಗಲು ಸ್ಥಳದ ಹುಡುಕಾಟ. ಪಕ್ಕದಲ್ಲೇ ಇದ್ದ ಮಸೀದಿ ಇಮಾಮರು ನಮಗೆ ಮಸೀದಿಯ ಕೀ ಕೊಟ್ಟು ಮನೆಗೆ ತೆರಳಿದರು.
ನಿದ್ದೆ ಕಳೆದು ಮರುದಿನ ಐದೂವರೆಗೆ ಎದ್ದವರು ಮಸೀದಿಯಲ್ಲಿ ನಮಾಜು ಮುಗಿಸಿ ದುರಂತ ಸ್ಥಳಕ್ಕೆ ಹೊರಡಲನುವಾದೆವು. Rescue ತಂಡದ ಅಧಿಕೃತ ಐಡಿ ಇರುವ ಕಾರಣ ಪ್ರವೇಶ ಸಿಗಬಹುದು. ಆದರೆ ನಿಮ್ಮ ಪ್ರೈವೇಟ್ ಗಾಡಿಗೆ ಪ್ರವೇಶ ಇಲ್ಲ ಎಂದು ಪೋಲೀಸರೊಬ್ಬರು ತಿಳಿಸಿದಾಗ ಒಮ್ಮೆ ಆಕಾಶ ತಲೆ ಮೇಲೆ ಬಿದ್ದಂತಾಯ್ತು. ದುರಂತ ಸ್ಥಳಕ್ಕೆ ಹದಿನೈದು ಕಿಲೋಮೀಟರ್ ದೂರ ಇದೆ. ನಾವಿದ್ದ ಮೇಪಾಡಿಯಿಂದಲೇ ಪ್ರೈವೇಟು ಗಾಡಿಗಳಿಗೆ ತಡೆ. ಮತ್ತೆ ಏನೆಂದು ಯೋಚಿಸುತ್ತಿರುವಾಗ ಸಹಾಯಕ್ಕೆ ಧಾವಿಸಿದ್ದು ವಯನಾಡ್ ಎಸ್ ವೈಎಸ್ ಸಾಂತ್ವನ ತಂಡದ ಆಂಬುಲೆನ್ಸ್. ನಮ್ಮನ್ನು ಆರು ಜನರನ್ನು ತುಂಬಿಕೊಂಡ ಗಾಡಿ ಚೂರಲ್ ಮಲೆ ತಲುಪಿತು. ಪಟ್ಟಣದ ಅವಶೇಷಗಳು ಮಾತ್ರ ಉಳಿದುಕೊಂಡಿದೆ. ಲಕ್ಷದಿಂದ ಕೋಟಿಯವರೆಗೆ ಬೆಲೆಬಾಳುವ ವಾಹನಗಳು ಗುರುತೇ ಸಿಗದಷ್ಟು ಅಪ್ಪಚ್ಚಿಯಾಗಿವೆ. ಎರಡರಿಂದ ಮೂರು ದಶಕಗಳಷ್ಟು ಕಾಲ ಗಲ್ಫ್ ರಾಷ್ಟ್ರಗಳಲ್ಲಿ ದುಡಿದು ಕನಸು ಕಂಡು ಕಟ್ಟಿದ ಮನೆಗಳೆಲ್ಲ ನೆಲಕಚ್ಚಿದೆ. ವ್ಯಾಪಾರ ವ್ಯವಹಾರದ ಕಟ್ಟಡಗಳು ಅರ್ಧಕ್ಕಿಂತ ಮೇಲೆ ಕೆಸರು ತುಂಬಿಕೊಂಡಿದೆ. ಮುಂದಕ್ಕೆ ನಡೆಯುವಾಗ ಕಾಲು ಕೆಸರಿನಲ್ಲಿ ಹೂತು ಹೋಗುತ್ತಿದೆ. ಅಲ್ಲೆಲ್ಲಾ ಪೇಚಾಡಿ ಪರದಾಡಿ ಸೇತುವೆ ಕೊಚ್ಚಿಕೊಂಡು ಹೋದ ಸ್ಥಳಕ್ಕೆ ತಲುಪಿದ್ದಾಯ್ತು.
ಆಚೆ ಕಡೆಯಲ್ಲಿ ಟೀ ಎಸ್ಟೇಟಿನಲ್ಲಿ ಉಳಿದು ಹೋಗಿದ್ದ ಒಂದು ಪಿಕಪ್ ವಾಹನದಲ್ಲಿ ಮೃತದೇಹಗಳನ್ನು ತಂದು ಒಂದು ಬದಿಗೆ ಜೆಸಿಬಿಗೆ ಹಗ್ಗ ಕಟ್ಟಿ ಇನ್ನೊಂದು ಬದಿಯಲ್ಲಿ ಮಿಲಿಟರಿ ಇನ್ನಿತರ ಕಾರ್ಯಾಚರಣೆ ಪಡೆಯ ಜನರು ಹಿಡಿದುಕೊಂಡು ರೋಪ್‌ವೇ ಮೂಲಕ ಜಡಗಳನ್ನು ಈ ಕಡೆಗೆ ತಂದು ಆಂಬುಲೆನ್ಸ್ ಮೂಲಕ ಸಾಗಿಸುವ ಕೆಲಸಕ್ಕೆ ಜತೆಗೂಡಿದೆವು. ಅಲ್ಲಿ ಗಮನಕ್ಕೆ ಬಂದಿದ್ದು ನಾಯಿಯೊಂದರ ಚಲನವಲನ. ಅಲ್ಲಿರುವ ಜನರ ಬಳಿಗೆಲ್ಲ ಬಂದು ಏನೋ ಸೂಚಿಸುತ್ತಿದೆ. ಅದು ಇರುವ ಜಾಗದಿಂದ ಕದಲುತ್ತಿಲ್ಲ. ಎರಡೂ ಕಣ್ಣುಗಳಲ್ಲಿ ನೀರು. NDRF ಪಡೆಯಲ್ಲಿದ್ದ ಸ್ಥಳೀಯರೊಬ್ಬರ ಪ್ರಕಾರ ಅದು ನಿಂತಿರುವ ಜಾಗದಲ್ಲಿದ್ದ ಮನೆಯ ಸಾಕುನಾಯಿಯಂತೆ. ಬಹುಷಃ ಆ ಮನೆ ಅಲ್ಲೇ ಹೂತು ಹೋಗಿದೆ. ಮನೆಯವರು ಅದರಡಿಯಲ್ಲಿ ಇರಲೂಬಹುದು.
ಸ್ವಲ್ಪ ಹೊತ್ತು ಕಳೆದ ಮೇಲೆ ಮೃತ ಶರೀರಗಳು ಮಣ್ಣು ಮರ ಮನೆಗಳಡಿಯಲ್ಲಿ ಸಿಲುಕಿಕೊಂಡ ಕಾರಣ ಹೊರತೆಗೆಯಲು ಒಂದಷ್ಟು ಜನರ ಅವಶ್ಯಕತೆ ಇದೆ ಎಂದು ಮುಂಡಕೈ ಕಡೆಯಿಂದ NDRF ಪಡೆ ಕೋರಿಕೊಂಡ ಕಾರಣ ಆ ಕಡೆಗೆ ಹೊರಡಲು ಅನುವಾದೆವು. ಆದರೆ ಹೊಳೆ ದಾಟಬೇಕಿತ್ತು. ಹರಿವಿನ ತೀವ್ರತೆ ಮತ್ತು ನೀರಿನ ಮಟ್ಟ ಎರಡೂ ಅಧಿಕ ಇತ್ತು. ಅಲ್ಲೂ ರೋಪ್ ಮೂಲಕವೇ ಮಿಲಿಟರಿ ಪಡೆ ದಾಟಿಸಿಕೊಟ್ಟಿದ್ದಾಯ್ತು. ದಾಟಿದ ಕೂಡಲೇ ಕಂಡದ್ದು ದೇವಸ್ಥಾನವೊಂದು ಕೊಚ್ಚಿಹೋಗಿ ಉಳಿದ ಫೌಂಡೇಶನ್. ಅದರಾಚೆ ನಡೆದು ಹೋದರೆ ಮುಂದಕ್ಕೆ Harrisons Malayalam Tea Estate. ಬಹುಷಃ ಅದೊಂದು ಟೂರಿಸ್ಟ್ ಪ್ಲೇಸ್ ಅನಿಸುತ್ತದೆ. ಹಳೆಯ ಕಾಲದ ಒಂದು ಕಟ್ಟಡ ಇದೆ ಅದರ ಹಿಂದೆ. ಎಡಭಾಗದಲ್ಲಿ ಹಚ್ಚಹಸುರಾದ ಚಹಾ ತೋಟ. ಅದೊಂದು ತಿರುವು ಕಳೆದು ನಡೆದು ಸಾಗಿದರೆ ಇಲ್ಲಿ ರಸ್ತೆ ಇದ್ದೇ ಇಲ್ಲ ಎನ್ನುವಷ್ಟು ನರಕ . NDRF ಪಡೆಯಲ್ಲಿದ್ದ ಅಲ್ಲಿನ ಲೋಕಲ್ ಜನರೊಬ್ಬರು ಇಲ್ಲಿ ಸುಮಾರು ನಾಲ್ಕುನೂರರಷ್ಟು ಮನೆಗಳಿದ್ದವು ಎಂದಾಗ ನಮಗೆ ಅನುಮಾನ. ಒಂದೇ ಒಂದು ಮನೆ ಕೂಡಾ ಕಾಣಿಸುತ್ತಿಲ್ಲ. ಶಾಲೆಯೊಂದರ ಅವಶೇಷ ಮಾತ್ರ ಉಳಿದುಕೊಂಡಿದೆ.
ನಾಯಿ ಹಸುಗಳು ಅತ್ತಿಂದಿತ್ತ ಅಲೆದಾಡುತ್ತಿದೆ. ಕೆಲವೊಬ್ಬರು ಈ ನಾಯಿ, ಹಸುಗಳನ್ನು ಸೇತುವೆ ದಾಟಿಸುವ ಪ್ರಯತ್ನದಲ್ಲಿದ್ದಾರೆ. ಮಣ್ಣಿನಲ್ಲಿ ಹೂತು ಹೋಗಿದ್ದ ನಾಯಿಯೊಂದನ್ನು ಮೇಲೆತ್ತಬೇಕಿತ್ತು. NDRF ಸಹಾಯ ಕೋರಿಕೊಂಡ ಕಾರಣ ಅದು ಸಾಧ್ಯ ಆಯಿತು. ಮತ್ತೆ ಅಲ್ಲೆ ಪಕ್ಕದಲ್ಲಿ ಒಂದು ಮೃತದೇಹವನ್ನು ಹೊರತೆಗೆಯಲು ಕಷ್ಟಪಡುತ್ತಿದ್ದ ಒಂದಷ್ಟು ಜನರ ಜತೆ ಸೇರಿಕೊಂಡಿದ್ದಾಯ್ತು. ಅಲ್ಲಿ ಸಿಕ್ಕಿದ್ದು ಎರಡು ಮೃತದೇಹಗಳು. ಹೀಗೇ ಮೃತದೇಹಗಳನ್ನು ತೆಗೆದ ಮೇಲೆ ಮುಂದಕ್ಕೆ ನಡೆದು ಸಾಗಿದೆವು. ಅಲ್ಲಿ ಹರಿಯುತ್ತಿದ್ದ ಸಣ್ಣ ಹೊಳೆಯಿಂದ ಸುಮಾರು ಹತ್ತರಿಂದ ಹದಿನೈದು ಮೀಟರ್ ಎತ್ತರದಲ್ಲಿರುವ ಮುಂಡಕೈ ಮಸೀದಿ ಹಾನಿಗೊಂಡಿದೆ. ಎರಡು ಮಿನಾರಗಳು ಮತ್ತು ಒಳಗಿನ ಭಾಗ ಹೊರತಾಗಿ ಮತ್ತೆಲ್ಲ ಅವಶೇಷಗಳೂ ಉಳಿಯದಷ್ಟು ಮಣ್ಣು ತುಂಬಿಹೋಗಿದೆ. ಆಗ ಅಲ್ಲೊಬ್ಬರು ಲೋಕಲ್ ಜನ ಹೇಳ್ತಾರೆ, “ನೀವು ಈಗ ನಿಂತಿರುವುದು ಕಟ್ಟಡವೊಂದರ ಎರಡನೇ ಮಹಡಿಯ ತಾರಸಿ ಮೇಲೆ”. ಆದರೆ ನಾವು ನಡೆದುಕೊಂಡು ಬಂದ ಹಾದಿ ಅದೇ ಲೆವೆಲಿನಲ್ಲಿದೆ. ಹಾಗಾದರೆ ಅಲ್ಲಿ ಎಷ್ಟು ಮನೆಗಳು ಹೂತು ಹೋಗಿರಬಹುದು? ಎಷ್ಟು ಜೀವಗಳು ಅದರಡಿಯಲ್ಲಿರಬಹುದು? ಹೀಗೇ ಯೋಚಿಸುತ್ತಾ ಮುಂದೆ ಸಾಗಿದೆವು.
ಬೃಹತ್ ಕಲ್ಲುಬಂಡೆಗಳು ರಸ್ತೆ ತುಂಬಾ ಬಿದ್ದುಕೊಂಡಿವೆ.ಕಟ್ಟಡಗಳ ಅಡಿಯಲ್ಲಿ ಮೃತದೇಹಗಳಿವೆ.ಆದರೆ ಮನುಷ್ಯರ ಪ್ರಯತ್ನದಿಂದ ಮುಂದಕ್ಕೆ ರಕ್ಷಣಾ ಕಾರ್ಯ ಕಷ್ಟ ಸಾಧ್ಯ. ತಾತ್ಕಾಲಿಕ ಸೇತುವೆ ರೆಡಿ ಆಗಿ ಜೆಸಿಬಿ, ಹಿಟಾಚಿಗಳು ಈ ಪ್ರದೇಶಕ್ಕೆ ತಲುಪದೇ ರಕ್ಷಣಾ ಕಾರ್ಯ ಮುಂದುವರೆಸುವ ಹಾಗಿಲ್ಲ ಎಂದು ಮಿಲಿಟರಿ ಪಡೆಯವರು ಆದೇಶಿಸಿದ ಕಾರಣ ಮತ್ತೆ ಮರಳಬೇಕಾಗಿ ಬಂತು. ಹೋಗುವಾಗ ರಕ್ಷಣಾ ಕಾರ್ಯವನ್ನು ಮತ್ತು ಏನಾಗಿದೆ ಎನ್ನುವ ಕುತೂಹಲದಿಂದ ನೋಡುತ್ತಾ ಸಾಗಿದ ಕಾರಣ ಗೊತ್ತಾಗಲಿಲ್ಲ. ಬೆಳಿಗ್ಗೆ ಆರು ಗಂಟೆಗೆ ಹೊರಟವರು ಸಂಜೆ ಹೊತ್ತು ಮೀರಿದೆ. ಅಲ್ಲಿ ಹೆಲಿಕಾಪ್ಟರ್ ನಲ್ಲಿ ಎಸೆದು ಹೋಗುತ್ತಿದ್ದ ಮತ್ತು ರೋಪ್ ಮೂಲಕ ಬಂದ ಬ್ರೆಡ್, ಬಿಸ್ಕೆಟ್, ನೀರಿನ ಬಾಟಲಿಗಳ ಹೊರತಾಗಿ ಬೇರೇನೂ ಇಲ್ಲ. ಹೊಟ್ಟೆ ಹಸಿಯುತ್ತಿದೆ. ಮರಳಿ ನಡೆದಷ್ಟೂ ಚೂರಲ್ ಮಲೆ ತಲುಪುತ್ತಿಲ್ಲ. ಸಾಧಾರಣ ಐದಾರು ಕಿಲೋಮೀಟರ್ ನಡೆದು ಹೇಗೂ ಚೂರಲ್ ಮಲೆ ತಲುಪಿದ್ದಾಯ್ತು. ಮುಂದಕ್ಕೆ ಹೊಳೆ ದಾಟಬೇಕು. ಹೋಗುವಾಗ ಇದ್ದ ಮಟ್ಟಕ್ಕಿಂತ ಹೆಚ್ಚಾಗಿದೆ ನೀರು.
ಮಿಲಿಟರಿಯವರು ಹೊಳೆ ದಾಟಲು ಬಿಡುತ್ತಿಲ್ಲ. ಹೊಟ್ಟೆ ಬೇರೆ ಕೇಳುತ್ತಿಲ್ಲ. ಹೇಗೂ ಆಚೆ ದಾಟಿಯೇ ಬಿಡಬೇಕೆಂದು ದಮ್ಮಯ್ಯ ಹಾಕಿ ರೋಪ್ ಮೂಲಕ ಹೊಳೆ ದಾಟಲನುವಾದರೆ ಮೇಲಿನಿಂದ ರಭಸವಾಗಿ ನೀರು ಹರಿದುಬರುತ್ತಿದೆ. ಎಲ್ಲರೂ ಸೈಡಿಗೆ ಹೋಗಿ ಎಂದು ಮಿಲಿಟರಿಯವರು ಕೂಗಿ ಹೇಳುತ್ತಿದ್ದಾರೆ. ನಾವು ಹೊಳೆ ಮಧ್ಯ ತಲುಪಿದ್ದೇವೆ. ಹಿಂದಕ್ಕೆ ಹೋಗೋಣ ಎಂದರೆ ನೂಕುನುಗ್ಗಲು. ಮುಂದಕ್ಕೆ ಕೂಡಾ ಹೋಗುವ ಸ್ಥಿತಿಯಲ್ಲಿಲ್ಲ. ನಮ್ಮ ಮನದ ಪ್ರಾರ್ಥನೆ ಕೇಳಿಯೋ ಏನೋ ನೀರಿನ ರಭಸ ನಮ್ಮ ಹತ್ತಿರ ತಲುಪುವಾಗ ಸ್ವಲ್ಪ ಕಡಿಮೆಯಾಯಿತು. ಎರಡನ್ನೂ ಕಲ್ಪಿಸಿ ಹೊಳೆ ದಾಟಿದ್ದಾಯ್ತು. ದಾಟಿದ ಮೇಲೆ ನಮಗೆ ವಿಶ್ರಾಂತಿ ಮತ್ತು ಊಟೋಪಹಾರ ಸೇವಿಸಲು ವ್ಯವಸ್ಥೆ ಮಾಡಲಾಗಿದ್ದ Crescent English Medium School ಗೆ ಹೋಗಬೇಕಿತ್ತು. ಆ ಕಟ್ಟಡದ ಕಾಂಪೌಂಡ್ ಮತ್ತು ಗೇಟ್‌ಗಳಿಗೆ ಹಾನಿಯಾಗಿತ್ತು ಮತ್ತು ಅಲ್ಲಿಗೆ ಹೋಗುವ ದಾರಿಯಲ್ಲಿ ಕಾಲು ಕೆಸರಿನಲ್ಲಿ ಹೂತು ಹೋಗುತ್ತಿತ್ತು. ದಾರಿ ತುಂಬಾ ಆಹಾರಗಳನ್ನು ಪೊಟ್ಟಣಗಳಲ್ಲಿ ತುಂಬಿಕೊಂಡು ಬಂದು ಒದಗಿಸುತ್ತಿದ್ದ ಜನರು. ನೀವು ಏನಾದರೂ ತಿಂದ್ರಾ… ಎಂದು ಆತ್ಮೀಯವಾಗಿ ಉಪಚರಿಸುತ್ತಿದ್ದ ಮಂತ್ರಿ, ಎಎಲ್‌ಎ, ಎಂಪಿಗಳು. ಕೊನೆಗೂ ಎರಡೆರಡು ಆಹಾರದ ಪ್ಯಾಕೆಟ್‌ಗಳನ್ನು ಕೊಂಡು ತಿಂದಿದ್ದಾಯ್ತು. ನಮಗೆ ವಿಶ್ರಾಂತಿಗೆ ಸೂಚಿಸಿದ್ದ ಸ್ಥಳದಲ್ಲಿ ಸ್ವಲ್ಪ ಹೊತ್ತು ತಂಗಿದ್ದೂ ಆಯಿತು.
ಮಿಲಿಟರಿ ಪಡೆ NDRF ಮತ್ತು ಇತರ ರೆಸ್ಕ್ಯು ತಂಡಗಳು ಆ ದಿನದ ಮಟ್ಟಿಗೆ ರಕ್ಷಣಾ ಕಾರ್ಯ ನಿಲ್ಲಿಸಿತು. ಮತ್ತೆ ಅಲ್ಲಿ ಯಾರೂ ಬದುಕಿ ಉಳಿದವರನ್ನು ರಕ್ಷಿಸಲು ಬಾಕಿ ಇಲ್ಲ ಎನ್ನುವುದನ್ನು ಹೆಲಿಕಾಪ್ಟರ್ ಸರ್ವೇ ನಡೆಸಿದ ಮಿಲಿಟರಿ ಪಡೆ ತಿಳಿಸಿದ್ದೂ ಆಯ್ತು. ಅಲ್ಲಿ ಸೈನ್ಯ ನಿರ್ಮಾಣ ಮಾಡುತ್ತಿದ್ದ ತಾತ್ಕಾಲಿಕ ಬೇಲ್ ಸೇತುವೆ ರೆಡಿ ಆಗಿ ಜೆಸಿಬಿ ಹಿಟಾಚಿಗಳು ಹೋದ ಮೇಲೆ ರಕ್ಷಣಾ ಕಾರ್ಯ ನಡೆಸುವುದೆಂಬ ತೀರ್ಮಾನಕ್ಕೆ ಬಂದ ಮತ್ತು ಸಾವಿರಗಟ್ಟಲೆ ಸೇನಾ ಸಿಬ್ಬಂದಿ ಬಂದು ಚೂರಲ್ ಮಲೆಯಲ್ಲಿ ಇಳಿಯಲು ತೊಡಗಿದ ಕಾರಣ ನಮ್ಮ ಅನಿವಾರ್ಯತೆ ಇನ್ನಿಲ್ಲ ಎಂದು ಮನಗಂಡ ಕಾರಣ ನಾವು ಮೇಪಾಡಿ ಹಾದಿ ಹಿಡಿದೆವು. ಯಾವುದೇ ಪ್ರೈವೇಟ್ ವಾಹನಗಳಿಲ್ಲ. ಹದಿನೈದು ಕಿಲೋಮೀಟರ್ ನಡೆಯಬೇಕು. ನಡೆದಿದ್ದೇ ನಡೆದಿದ್ದು. ನಡೆಯುವಾಗ ಎಣಿಸುತ್ತಾ ಸಿಕ್ಕಿದ್ದು ನಲುವತ್ತೈದು ಆಂಬುಲೆನ್ಸ್‌ಗಳು! ಕೊನೆಗೆ ಮೇಪಾಡಿಗೆ ಹತ್ತಿರ ಹತ್ತಿರ ತಲುಪುವಾಗ ಆಂಬುಲೆನ್ಸ್ ಒಂದು ನಮ್ಮನ್ನು ಹತ್ತಿಸಿಕೊಂಡಿತು. ಮೇಪಾಡಿಯಲ್ಲಿ ಇಳಿದು ನಾವು ತೆರಳಿದ ಕಾರು ಹತ್ತಿ ಮರಳಿದೆವು.
ಮುಂಡಕೈ ಮಸೀದಿಯ ಧರ್ಮಗುರುಗಳಾದ ಶಿಹಾಬ್ ಪೈಝಿ, ಅಲ್ಲಿನ ಜಮಾಅತ್ ಅಧ್ಯಕ್ಷರು ಸೇರಿದಂತೆ ಹತ್ತರಷ್ಟು ಮೃತದೇಹಗಳನ್ನು ನಮ್ಮ ತಂಡ ಸೈನ್ಯದ ಜತೆ ಸೇರಿ ಹುಡುಕಿ ಅಲ್ಲಿ ಮಣ್ಣಲ್ಲಿ ಹೂತು ಹೋಗಿದ್ದ ಕಂಬಳಿ ಇನ್ನಿತರ ಬಟ್ಟೆಗಳನ್ನು ತೆಗೆದು ತೊಳೆದು ಸುತ್ತಿ ರೋಪ್ ಮೂಲಕ ಎಳೆದು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ಕಾಯಕದಲ್ಲಿ ತೊಡಗಿಸಿಕೊಂಡದ್ದು ಇಬ್ಬರು ಜೀವಂತ ಮಹಿಳೆಯರನ್ನು ರೋಪ್ ಮೂಲಕ ದಾಟಿಸುವಲ್ಲಿ ಸಹಕರಿಸಿದ್ದು ಹೋದದ್ದಕ್ಕೆ ಸಾರ್ಥಕ ಎನಿಸಿತು. ಬತ್ತೇರಿ MLA ನಮ್ಮ ತಂಡದ ಕುಶಲೋಪರಿ ವಿಚಾರಿಸುತ್ತಾ ನಮ್ಮ ಜತೆಗೇ ಇದ್ದಿದ್ದು ಬಲ ತುಂಬಿತ್ತು. ನಾವು ತೆರಳುವಾಗ ಸಿಕ್ಕಿದ್ದು ತೊಂಬತ್ತೊಂದು ಮೃತದೇಹಗಳಾದರೆ ಮರಳುವಾಗ ಇನ್ನೂರೈವತ್ತು ದಾಟಿತ್ತು.
ಘಟನೆ ನಡೆದ ಮುಂಡಕೈ ಎಂಬ ಊರಿನಿಂದ ಸುಮಾರು ಹದಿನೈದು ಇಪ್ಪತ್ತು ಕಿಲೋಮೀಟರುಗಳಾಚೆ ಚಾಲಯಾರ್ ನದಿಗೆ ಈ ಹೊಳೆ ಸೇರುವ ನಿಲಂಬೂರ್ ಎಂಬಲ್ಲಿಂದ ನಲ್ವತ್ತೈದಕ್ಕೂ ಹೆಚ್ಚು ಮೃತದೇಹಗಳು ಸಿಕ್ಕಿದ್ದವು ಎಂದರೆ ದುರಂತದ ಭೀಕರತೆ ಗಮನಿಸಿ. ಕೇರಳದ ಸಚಿವ ಮೊಹಮ್ಮದ್ ರಿಯಾಸ್ ಮತ್ತಿತರರು ಘಟನೆಯ ಸ್ಥಳದಲ್ಲೇ ಕೂತು ಕೊಡುತ್ತಿದ್ದ ಮಾಹಿತಿಯಂತೆ ಅಧಿಕೃತವಾಗಿ ಇನ್ನೂ ಮುನ್ನೂರರಷ್ಟು ಜನರ ಪತ್ತೆ ಇಲ್ಲ. ಟೀ ಎಸ್ಟೇಟಿನಲ್ಲಿ ಕೆಲಸಕ್ಕೆ ಬಂದ ತಮಿಳಿಯನ್ಸ್, ಅಸ್ಸಾಮಿಗಳ ಲೆಕ್ಕ ಸಿಗುತ್ತಿಲ್ಲ. ಒಂದೇ ಸ್ಥಳದಲ್ಲಿ ಹದಿನಾರು ಅಸ್ಸಾಮಿಗಳ ಮೃತದೇಹಗಳು ದೊರೆತಿದ್ದು ಹೀಗೇ ಇನ್ನೆಷ್ಟು ಜನ ದೂರದಿಂದ ಕೆಲಸಕ್ಕೆ ಬಂದವರು ಒಂದೇ ಕೋಣೆಯೊಳಗೆ ಬಾಕಿಯಾಗಿ ಮಡಿದವರೆಷ್ಟೋ!
ವೈಯಕ್ತಿಕ ವ್ಯವಹಾರಗಳ ಚಿಂತೆ, ಊರಿನಲ್ಲಿ ಸುರಿಯುತ್ತಿರುವ ನಿರಂತರ ಮಳೆ. ನೆಟ್ವರ್ಕ್ ಇಲ್ಲದ ಕಾರಣ ಮನೆಯವರ, ಊರವರ ಸಂಪರ್ಕ ಇಲ್ಲದ ಸ್ಥಿತಿ ಇದ್ಯಾವುದೂ ಅಲ್ಲಿನವರ ಪರಿಸ್ಥಿತಿ ಮುಂದೆ ನೆನಪಾಗಲೇ ಇಲ್ಲ. ನಮಗೆ ಸಿಕ್ಕ ಮೃತದೇಹಗಳಲ್ಲಿ ಮೂರನೇಯದು ಸಣ್ಣ ಮಗು. ಆ ಮಗುವಿನ ಮುಖ ನೋಡಿದ ಮೇಲೆ ನನ್ನ ಸಣ್ಣ ಮಗುವಿನ ನೆನಪು ಮನೆಗೆ ತಲುಪುವ ತನಕ ಮನಸಿನಿಂದ ಮಾಸಲೇ ಇಲ್ಲ. ಮನೆಗೆ ತಲುಪಿದ ಮೇಲೆ ಮಗುವನ್ನು ಗಟ್ಟಿಯಾಗಿ ತಬ್ಬಿ ಮಲಗಿಕೊಂಡೆ.