- ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರಿಂದ ವಾದ
- ಪ್ರಕರಣದಿಂದ ತಮ್ಮ ಹೆಸರು ಕೈಬಿಡುವಂತೆ ರವಿವರ್ಮ ಅರ್ಜಿ
ನಟ ದುನಿಯಾ ವಿಜಯ್ ಅಭಿನಯದ ‘ಮಾಸ್ತಿಗುಡಿ’ ಸಿನಿಮಾದ ಚಿತ್ರೀಕರಣದ ವೇಳೆ ಸೇಫ್ಟಿ ಜಾಕೆಟ್ ಧರಿಸಧಿರುವುದೇ ನಟ ಉದಯ್ ಹಾಗೂ ಅನಿಲ್ ಸಾವಿಗೆ ಕಾರಣವೆಂದು ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರು ವಾದ ಮಂಡಿಸಿದ್ದಾರೆ. ಪ್ರಕರಣದಿಂದ ರವಿವರ್ಮ ಹೆಸರನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
ಮಾಸ್ತಿಗುಡಿ ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣವು ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ನಡೆದಿತ್ತು. ಈ ವೇಳೆ, ಚಿತ್ರೀಕರಣಕ್ಕಾಗಿ ಖಳ ನಟ ಉದಯ್ ಮತ್ತು ಅನಿಲ್ ಹೆಲೆಕ್ಯಾಪ್ಟರ್ನಿಂದ ಕೆರೆಗೆ ಹಾರಿದ್ದರು. ಆದರೆ, ಅವರಿಬ್ಬರಿಗೂ ದಡ ಸೇರಲಾಗದೆ ಮೃತಪಟ್ಟಿದ್ದರು. ಘಟನೆ ಸಂಬಂಧ ಸಾಹಸ ನಿರ್ದೇಶಕ ರವಿವರ್ಮ ಮೇಲೆ ಉದ್ದೇಶಪೂರ್ವಕವಲ್ಲದ ಹತ್ಯೆ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ರವಿವರ್ಮ ಅವರು ಬೆಂಗಳೂರು ನಗರದ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶ ಎಸ್. ಶ್ರೀಧರ್ ನಡಸುತ್ತಿದ್ದಾರೆ.
ರವಿವರ್ಮ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್ ಹನುಮಂತರಾಯ, “ಮಾಸ್ತಿಗುಡಿ ಸಿನಿಮಾದಲ್ಲಿ ಖಳನಟರಾಗಿ ನಟಿಸುತ್ತಿದ್ದ ಇಬ್ಬರು ಯುವನಟರ ಸಾವು ಆಕಸ್ಮಿಕವಾಗಿದೆ. ಚಿತ್ರಿಕರಣ ನಡೆಯುವ ವೇಳೆ ಹೆಲಿಕಾಪ್ಟರ್ನಿಂದ ಜಲಾಶಯದ ಹಿನ್ನೀರಿಗೆ ಧುಮುಕುವಾಗ ತಮ್ಮ ದೇಹದ ಸಿಕ್ಸ್ ಪ್ಯಾಕ್ಅನ್ನು ಪ್ರೇಕ್ಷಕರು ನೋಡಬೇಕು ಹಾಗಾಗಿ ನಾವು ಸೇಫ್ಟಿ ಜಾಕೆಟ್ (ರಕ್ಷಾ ಕವಚ) ಧರಿಸುವುದಿಲ್ಲ ಎಂದು ನಿರ್ದೇಶಕರನ್ನು ಕೇಳಿಕೊಂಡಿದ್ದರು” ಎಂದು ವಾದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕರಂದ್ಲಾಜೆ ವಿವಾದಾತ್ಮಕ ಪತ್ರ | ಚುನಾವಣೆ ನಡೆಸುತ್ತಿರುವುದು ಆಯೋಗವೋ, ಬಿಜೆಪಿಯೋ: ಸಿದ್ದರಾಮಯ್ಯ ಪ್ರಶ್ನೆ
“ಸಾಹಸ ನಿರ್ದೇಶಕರು ಯುವನಟರ ಈ ಬೇಡಿಕೆಗೆ ಒಪ್ಪಿರಲಿಲ್ಲ. ಆದರೂ ಕೂಡ ನಮಗೆ ಈಜು ಬರುವುದರಿಂದ ನಾವು ನಿರಾಯಾಸವಾಗಿ ಈಜಿ ಬರುತ್ತೇವೆ ಎಂದು ಮನವಿ ಮಾಡಿಕೊಂಡಾಗ ಸಾಹಸ ನಿರ್ದೇಶಕರು ಒಪ್ಪಿದ್ದರು. ನಂತರ, ಚಿತ್ರೀಕರಣ ನಡೆಸಲಾಯಿತು. ಈ ಅಂಶವನ್ನು ಪೋಲಿಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ” ಎಂದು ವಿವರಿಸಿದರು.
“ಯುನಟರ ಮಾತಿಗೆ ಕೇವಲ ಒಪ್ಪಿಗೆಯನ್ನಷ್ಟೇ ನೀಡದೇ ಅವರ ಹಿತದೃಷ್ಠಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರಿಕರಣ ನಡೆಯುವ ವೇಳೆ ನುರಿತ ಈಜುಗಾರರು ಮತ್ತು ಮೋಟಾರ್ ಬೋಟ್ ಅನ್ನು ಸ್ಥಳದಲ್ಲಿ ಇರಿಸಲಾಗಿತ್ತು. ಆದರೆ, ಯುವನಟರು ನೀರಿಗೆ ಬಿದ್ದಾಗ ತಾಂತ್ರಿಕ ದೋಷದಿಂದ ಅವರು ಬಿದ್ದ ಜಾಗಕ್ಕೆ ಸರಿಯಾದ ಸಮಯಕ್ಕೆ ಬೋಟ್ಗಳು ತಲುಪಲು ಸಾಧ್ಯವಾಗಿಲ್ಲ. ಆದ್ದರಿಂದ ಈ ದುರಂತ ಸಂಭವಿಸಿದೆ” ಎಂದು ಅವರು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
“ಯುವನಟರ ಸಾವು ಆಕಸ್ಮಿಕವಾಗಿದ್ದು, ಇವರ ಸಾವಿಗೆ ಯಾರೂ ಹೊಣೆಯಲ್ಲ. ಹಾಗಾಗಿ ಅರ್ಜಿದಾರರು ಉದ್ದೇಶಪೂರ್ವಕವಾಗಿ ಯಾವುದೇ ಶಿಕ್ಷಾರ್ಹ ಅಪರಾಧ ಎಸಗಿಲ್ಲ. ಆದ್ದರಿಂದ ಸಾಹಸ ನಿರ್ದೇಶಕ ರವಿವರ್ಮ ಅವರ ಮೇಲಿರುವ ಆರೋಪವನ್ನು ಕೈಬಿಡಬೇಕು” ಎಂದು ಮನವಿ ಮಾಡಿದರು.
ಹಿರಿಯ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ಹೆಚ್ಚಿನ ವಾದ ಮಂಡನೆಗೆ ಅವಕಾಶ ನೀಡಿ, ಮೇ 30ಕ್ಕೆ ವಿಚಾರಣೆ ಮುಂದೂಡಿದೆ.