ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್ ವಿತರಣೆ ಯಲ್ಲಿನ ನಿರ್ಲಕ್ಷದ ವಿರುದ್ಧ ಎಸ್.ಎಫ್.ಐ ಸುರಪುರ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಳಿಕ ಸುರಪುರ ತಹಶೀಲ್ದಾರ್ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯಾದ್ಯಂತ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಅಪಾರ ತೊಂದರೆಯನ್ನು ಉಂಟು ಮಾಡಿರುವ ಸರ್ಕಾರ, ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಇದು ಖಂಡನೀಯ. ಸರ್ಕಾರ ಕಡಿತ ಮಾಡಿರುವ ವಿದ್ಯಾರ್ಥಿವೇತನ ಹಾಗೂ ಫೆಲೋಶಿಪ್ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತು ಗಮನಹರಿಸುತ್ತಿಲ್ಲ ಎಂದು ಎಸ್‌ಎಫ್‌ಐ ಮುಖಂಡರು ಆರೋಪಿಸಿದರು.
60 ರಿಂದ 74.99 ಫಲಿತಾಂಶ ಪಡೆದ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ರದ್ದು ಮಾಡಿದ ಪ್ರೋತ್ಸಾಹ ಧನವನ್ನು ಮುಂದುವರಿಸಬೇಕು, ಪ್ರತಿ ತಿಂಗಳು ಅಲ್ಪಸಂಖ್ಯಾತ ಸಮುದಾಯದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ರೂಪಾಯಿ 25,000 ಗಳು ಪ್ರೋತ್ಸಾಹ ಧನವನ್ನು ಮುಂದುವರಿಸಬೇಕು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲು ಇರುವ ತಾರತಮ್ಯ ನೀತಿಯ ಆದೇಶವನ್ನು ವಾಪಸ್ ಪಡೆಯಬೇಕು, ರಾಜ್ಯದಲ್ಲಿ ಅಹಿಂದ ವರ್ಗಗಳ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು, ಸುರಪುರ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರ ನೇಮಕ ಮಾಡಬೇಕು, ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಕೊಡಬೇಕು, ಪ್ರತಿ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ ಮಕ್ಕಳಿಗೆ ಅನುಕೂಲಕ್ಕೆ ತಕ್ಕಂತೆ ಬಸ್ ಓಡಿಸಬೇಕು ಎಂದು ಎಸ್ ಎಫ್ ಐ ಯಾದಗಿರಿ ಜಿಲ್ಲಾ ಸಂಚಾಲಕ ಇಮಾಮಸಾಬ ನದಾಫ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುರಪುರ ತಾಲೂಕಿನ ಸಂಚಾಲಕ ಶರಣಬಸವ ದೊಡ್ಮಮನಿ, ವಿದ್ಯಾರ್ಥಿಗಳಾದ,
ಮಲ್ಲಿಕಾರ್ಜುನ ದೊಡ್ಮನಿ, ಮಹೇಶ್, ಸೋಪಣ್ಣ, ಭೀಮಾಶಂಕರ್, ಭೀಮರಾಯ ಉಪಸ್ಥಿತರಿದ್ದರು.
