ಕರಾವಳಿಯಲ್ಲಿ ಭಾರೀ ಮಳೆ ಸುರಿದಿದ್ದು, ಇದೀಗ ಮಳೆಯ ಪ್ರಮಾಣ ಕಡಿಮೆಯಾಗಿದೆ. ಪ್ರವಾಹ ಆರಂಭವಾಗಿದೆ. ಇದರಿಂದ ಬೆಳೆಗಳು ಜಲಾವೃತಗೊಂಡಿವೆ. ಸಂತ್ರಸ್ತ ರೈತರು ಆತಂಕಕ್ಕೀಡಾಗಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಕರಾವಳಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿತ್ತು. ಇದರಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಆದರೆ ನೆರೆಯಿಂದ ಮನೆಗಳು ಕುಸಿದಿದ್ದವು, ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕಡಲಿಗೆ ಇಳಿಯದಂತೆ ಮೀನುಗಾರರಿಗೂ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿತ್ತು.
ಪ್ರವಾಹ ಪೀಡಿತವಾಗಿರುವ ಪ್ರದೇಶಗಳಿಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರತಿವರ್ಷ ಅದ್ಯಪಾಡಿಯಲ್ಲಿ ಫಲ್ಗುಣಿ ನದಿಯ ನೆರೆ ಪ್ರವಾಹದಿಂದ ಸಂತ್ರಸ್ತರಾಗುತ್ತಿರುವ ಬಗ್ಗೆ ಸ್ಥಳೀಯರು ಸಚಿವರ ಗಮನ ಸೆಳೆದಿದ್ದರು. ಅಕ್ಕಪಕ್ಕದ ಗ್ರಾಮಗಳು ಜಲಾವೃತವಾಗಿರುವ ಬಗ್ಗೆಯೂ ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದ್ದ ಸಚಿವರು ಅಲ್ಲಿನ ಸ್ಥಿತಿ ನೋಡಿ ದಂಗಾಗಿ, “ಇಲ್ಲಿನ ಸ್ಥಿತಿ ನೋಡಿದರೆ ಭಯದ ವಾತಾವರಣ ನಿರ್ಮಾಣವಾಗಿದೆ. ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣು ಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ ಲೋಪದೋಷವಾಗಿರುವುದು ಕಂಡುಬಂದಿದೆ” ಎಂದು ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿದ್ದರು.
“ಇಲ್ಲಿ ಗುಡ್ಡ ಅಪಾಯಕಾರಿಯಾಗಿರುವ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮುನ್ಸೂಚನೆ ನೀಡಿತ್ತು. ಈ ಕುರಿತು ಪಾಲಿಕೆ ಕ್ರಮ ಕೈಗೊಂಡಿರುವುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಗಣಿ ಭೂವಿಜ್ಞಾನ ಇಲಾಖೆ ಮಣ್ಣು ಅಗೆಯಲು ಅವಕಾಶ ನೀಡಿರುವುದರ ಬಗ್ಗೆ ವರದಿ ಕೇಳುತ್ತೇನೆ” ಎಂದಿದ್ದರು.

ಉಡುಪಿ ಜಿಲ್ಲೆಯಲ್ಲಿ ಮಳೆ ಭಾರೀ ಮಳೆ ಸುರಿದಿದ್ದು, ಜಿಲ್ಲೆಯ ಕಾಪು, ಉಡುಪಿ, ಹೆಬ್ರಿ ಬೈಂದೂರು ಕುಂದಾಪುರ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಇದೀಗ ಪ್ರವಾಹದ ಭೀತಿ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಸ್ವರ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು ನಿಗದಿತ ನೀರು ಮೀರಿ ಬೋರ್ಗರೆಯುತ್ತಿದೆ. ಜಿಲ್ಲೆಯ ಎಲ್ಲ ನದಿಗಳ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗಿದ್ದು, ಮತ್ತೊಂದು ಸುತ್ತಿನ ನೆರೆಯ ಭೀತಿ ಉಂಟಾಗಿದೆ. ಪಲಿಮಾರು ನದಿ ತುಂಬಿದ್ದು, ಗ್ರಾಮದೆಲ್ಲೆಡೆ ನೆರೆ ವ್ಯಾಪಿಸಿದೆ. ಭತ್ತ ಕೃಷಿಗೂ ನೆರೆ ಅವರಿಸಿದೆ. ಅಡಿಕೆ ತೋಟಕ್ಕೂ ಮಳೆಯಿಂದ ಕೊಳೆರೋಗದ ಭೀತಿ ಆರಂಭವಾಗಿದೆ.

ಉಡುಪಿಯ ಉಳ್ಳೂರಿನಲ್ಲಿ ಸರ್ಕಾರಿ ಶಾಲೆ ಸಂಪೂರ್ಣ ಜಲಾವೃತಗೊಂಡಿದೆ. ಈ ಭಾಗಕ್ಕೆ ಉಡುಪಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಬಿದ್ದರೆ ಸಮಸ್ಯೆಗೆ ಒಳಗಾದವರನ್ನು ಸ್ಥಳಾಂತರ ಮಾಡುತ್ತೇವೆಂದು ಹೇಳಿದ್ದರು. ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್ ಕಾಪು ತಾಲೂಕಿನಾಧ್ಯಂತ ಸಂಚರಿಸಿ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಸಂತಸ್ತರನ್ನು ಸುರಕ್ಷಿತ ಜಾಗಕ್ಕೆ ತಲಪಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರ ಮೊಳಹಳ್ಳಿ ಗ್ರಾಮದಲ್ಲಿ ಹಲವು ಮನೆಗಳು ಜಲಾವೃತವಾಗಿದ್ದು, ಇಂತಹ ಪ್ರದೇಶಗಳಿಗೆ ತಹಶೀಲ್ದಾರರು, ಜಿಲ್ಲಾಧಿಕಾರಿ, ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಗದ್ದೆಮನೆ ಉಪ ಗ್ರಾಮದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ ಸಣ್ಣ ಹೊಳೆಯೂ ನದಿಯಂತೆ ಹರಿದ ಕಾರಣ ಮನೆಗಳು ಜಲಾವೃತಗೊಂಡಿವೆ. ಸಣ್ಣ ಹೊಳೆಯನ್ನು ಸಮರ್ಪಕವಾಗಿ ಶುಚಿಗೊಳಿಸಿಲ್ಲ. ಗಿಡಗಂಟಿಗಳು ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ನೀರಿನ ಒತ್ತಡ ಹೆಚ್ಚಾಗಿ ಮನೆಗಳು ಜಲಾವೃತಗೊಂಡಿವೆ. ಇದಕ್ಕೆಲ್ಲ ಗ್ರಾಮ ಪಂಚಾಯಿತಿಯೇ ನೇರಹೊಣೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಜುಲೈ 31ರ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಮೊಳಹಳ್ಳಿ ಗ್ರಾಮದ ಕಂಬಳಗದ್ದೆ ಮನೆಯ ಪ್ರದೀಪ್ ಶೆಟ್ಟಿ, ಗೀತಾಶೆಟ್ಟಿ, ಪ್ರೇಮಶೆಟ್ಟಿಯವರ ಮನೆ ಸಂಪೂರ್ಣವಾಗಿ ಕುಸಿದು ನೆಲಸಮವಾಗಿದೆ. ನದಿಗಳ ನೀರು ಸಂಪೂರ್ಣವಾಗಿ ಮೇಲ್ಭಾಗಕ್ಕೆ ಬಂದಿದ್ದು, ಮನೆಯಲ್ಲಿನ ಅಪಾರ ವಸ್ತುಗಳನ್ನು ಹಾನಿ ಮಾಡಿದೆ. ರಾತ್ರಿ ಸಮಯದಲ್ಲೇ ಜಾನುವಾರುಗಳನ್ನು ಸಂಬಂಧಿಕರ ಮನೆಗೆ ಬಿಡಲಾಗಿದೆ. ಸಂತ್ರಸ್ತರೂ ಕೂಡಾ ಸುರಕ್ಷತೆ ದೃಷ್ಟಿಯಿಂದ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಹುದೊಡ್ಡ ಅನಾಹುತ ತಪ್ಪಿದೆ. ಪ್ರತಿ ಬಾರಿಯೂ ಮಳೆಗಾಲದಲ್ಲಿ ನೀರು ಮೇಲ್ಬಾಗಕ್ಕೆ ಬರುತ್ತಿದ್ದು, ಕಳೆದ ಬಾರಿ ಮಳೆಗಾಲದ ಸಂದರ್ಭದಲ್ಲಿ ಮನೆಯ ಅಂಗಳಕ್ಕೆ ನೀರು ನುಗ್ಗಿತ್ತು. ಮನೆಯಲ್ಲಿದ್ದ ಅಪಾರ ವಸ್ತುಗಳು ಹಾನಿಯಾಗಿದ್ದು, ಮನೆಯ ಪೀಠೋಪಕರಣಗಳು, ಟಿವಿ, ಫ್ರೀಡ್ಜ್ ಸೇರಿದಂತೆ ಬಹುತೇಕ ವಸ್ತುಗಳು ಹಾನಿಯಾಗಿದ್ದವೆಂದು ವರದಿಯಾಗಿತ್ತು.

“ಜಿಲ್ಲಾಧಿಕಾರಿ, ತಾಲೂಕು ತಹಶೀಲ್ದಾರರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮೊಳಹಳ್ಳಿ ಕಂಬಳಗದ್ದೆ ಮನೆಗೆ ಆಗಮಿಸಿ ಸೂಕ್ತ ಪರಿಹಾರದ ಭರವಸೆಯನ್ನು ನೀಡಿ, “ಕುಸಿದಂತಹ ಮನೆಗೆ ಸಮರ್ಪಕವಾಗಿ ಹಂತಹಂತವಾಗಿ ಪರಿಹಾರವನ್ನು ನೀಡುತ್ತೇವೆಂದು ಭರವಸೆ ನೀಡುವುದರೊಂದಿಗೆ ಮನೆಯ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ” ಎಂದು ವೇಣು ಗೋಪಾಲ್ ಶೆಟ್ಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
“ಜಿಲ್ಲಾಧಿಕಾರಿ, ತಹಶೀಲ್ದಾರರು, ಪಂಚಾಯತ್ ಅಧಿಕಾರಿಗಳು ಆಗಮಿಸಿ ಸೂಕ್ತ ಭರವಸೆ ನೀಡಿದ್ದು, ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಪೂರ್ತಿ ಪ್ರಮಾಣದ ಮನೆಯನ್ನು ನಿರ್ಮಿಸಿಕೊಳ್ಳುವಂತೆ ಭರವಸೆ ನೀಡಿದ್ದಾರೆ. ಮಳೆನೀರು ಸಂಪೂರ್ಣವಾಗಿ ಮನೆಗೆ ನುಗ್ಗಿದ್ದರಿಂದ ಮನೆ ಕುಸಿದಿದೆ. ಜಾನುವಾರು ಹಾಗೂ ಇತರ ಪರಿಕರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ” ಎಂದರು.
ಲಾ ನಿನಾ ಮಾರುತ, ಹವಮಾನ ಇಲಾಖೆಯಿಂದ ಎಚ್ಚರಿಕೆ
ಭಾರೀ ಮಳೆಗೆ ಕರಾವಳಿ ಕರ್ನಾಟಕ ಮಾತ್ರವಲ್ಲದೆ ದೇಶದ ಹಲವು ರಾಜ್ಯಗಳಲ್ಲಿ ಅನಾಹುತ ಸೃಷ್ಟಿಯಾಗಿದೆ. ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಬಹಿರಂಗವಾಗಿದೆ. “ಇದೇ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಲಾ ನಿನಾ ಚಂಡಮಾರುತ ಉಂಟಾಗಲಿದ್ದು, ಇದು ಭಾರೀ ಮಳೆಯನ್ನೇ ತರಿಸಲಿದೆ” ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಗದಗ | ಬಾಲೆಹೊಸೂರು ಗ್ರಾಮದ ರಸ್ತೆಯುದ್ಧಕ್ಕೂ ತಗ್ಗು ಗುಂಡಿಗಳು; ದುರಸ್ತಿಗೆ ಸ್ಥಳೀಯರ ಆಗ್ರಹ
“ಅಗಸ್ಟ್ ಮೊದಲ ವಾರಾಂತ್ಯಕ್ಕೆ ಮಳೆ ಕಡಿಮೆಯಾಗಲಿದೆ. ಆದರೆ ಆಗಸ್ಟ್ ಅಂತ್ಯ ಹಾಗೂ ಸೆಪ್ಟೆಂಬರ್‌ನಲ್ಲಿ ಲಾ ನಿನಾ ಚಂಡಮಾರುತ ಉಂಟಾಗಿ ಅವಾಂತರ ಸೃಷ್ಟಿಸಲಿದೆ. ಲಾ ನಿನಾ ಚಂಡಮಾರುತದಿಂದ ಒಂದೇ ಬಾರಿಗೆ ಭಾರೀ ಮಳೆ ಸುರಿಯುವ ಕಾರಣ ಹಲವು ಅವಘಡ ಸಂಭವಿಸುವ ಸಾಧ್ಯತೆ ಇದೆ. ಪ್ರಮುಖವಾಗಿ ಬೆಟ್ಟದ ತಪ್ಪಲಿನ ಪ್ರದೇಶ, ನದಿ ಪಾತ್ರದ ಪ್ರದೇಶಗಳಲ್ಲಿ ಅಪಾಯ ಹೆಚ್ಚು. ಅಪಾಯಾಕಾರಿ ಬೆಟ್ಟ, ಪರ್ವತಗಳು ಕುಸಿಯುವ ಭೀತಿ ಹೆಚ್ಚಾಗಿದೆ. ಇನ್ನು ನದಿಗಳು ಉಕ್ಕಿ ಹರಿಯಲಿವೆ. ಈ ವೇಳೆ ಭೂಕುಸಿತದ ಅಪಾಯಗಳೂ ಕೂಡ ದಟ್ಟವಾಗಿವೆ” ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
“ಮಧ್ಯ ಹಾಗೂ ಪೂರ್ವ ಸಮಭಾಜಕ ಪೆಸಿಫಿಕ್‌ನಲ್ಲಿ ಸಮುದ್ರದ ತಂಪಾದ ವಾತಾವರಣದಿಂದ ರೂಪುಗೊಳ್ಳುವ ಲಾ ನಿನಾ ಚಂಡಮಾರುತ ಭಾರತದಲ್ಲಿ ಹೆಚ್ಚಿನ ಮಳೆ ಸುರಿಸಲಿದೆ. ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಲಿದೆ” ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
