ಕೆಸರು ಗದ್ದೆಯಂತಾದ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ತುಮಕೂರು ಜಿಲ್ಲೆಯ ಮೂರು ಗ್ರಾಮದ ಜನರು ಸಾಗರನಹಳ್ಳಿಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ ಹತ್ತಾರು ವರ್ಷದಿಂದ ಸಾಗರನಹಳ್ಳಿ ರಸ್ತೆ ಗುಂಡಿಗಳಿಂದ ಕೂಡಿದ್ದು ಸಾರ್ವಜನಿಕರಿಗೆ ಓಡಾಡಲು ತೊಂದರೆ ಒಂದು ಕಡೆಯಾದರೆ ಮತ್ತೊಂದು ಕಡೆ ಗುಬ್ಬಿ ತಾಲ್ಲೂಕಿನ ಸಾಗರನಹಳ್ಳಿ, ಕಲ್ಲು ಕೋಡಿ ಹಾಗೂ ಅಂಕಾಪುರ ಗ್ರಾಮದಲ್ಲಿ ರಸ್ತೆ ಚರಂಡಿ ಇಲ್ಲದೆ ಸಂಪೂರ್ಣ ಕೆಸರುಗದ್ದೆಯಾಗಿದೆ. ಹಾಲಿನ ಡೈರಿಗೆ ತೆರಳಲು ರೈತರ ಪರದಾಟ ಹಾಗೂ ಮಳೆ ಬಂದರೆ ಮಕ್ಕಳು ವೃದ್ಧರು ಮನೆಯಿಂದ ಹೊರ ಬಾರದ ದುಸ್ಥಿತಿ ಎದುರಾಗಿದೆ. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಮನವಿ ನೀಡಿ ಬೇಸತ್ತ ಮೂರು ಹಳ್ಳಿಯ ಗ್ರಾಮಸ್ಥರು ದಿಢೀರ್ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಮುಂದಿನ ಸ್ಥಳೀಯ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಸಾಗರನಹಳ್ಳಿ ಗ್ರಾಮದಲ್ಲಿ ರಸ್ತೆಯಲ್ಲಿ ಜಮಾಯಿಸಿದ ನೂರಾರು ಗ್ರಾಮಸ್ಥರು, ಗ್ರಾಮ ಪಂಚಾಯಿತಿಗೆ ಮನವಿ ನೀಡಿದರೂ ಇತ್ತ ಕಡೆ ಗಮನಹರಿಸಿಲ್ಲ. ಕೇಳಿದರೆ ಅನುದಾನ ಇಲ್ಲ. ರಸ್ತೆ ದುರಸ್ಥಿ ಮಾಡುವುದು ಕಷ್ಟ ಎಂದು ಕೈ ಚೆಲ್ಲುತ್ತಾರೆ. ಈ ಗ್ರಾಮಕ್ಕೆ ಬಂದ ಪಿಡಿಓ ಮೇಡಂ ಅವರೇ ಕೆಸರಿನಲ್ಲಿ ಬಿದ್ದು ಎದ್ದು ಹೋಗಿದ್ದಾರೆ. ಆದರೂ ನಮ್ಮ ಕಷ್ಟ ಅವರಿಗೆ ಅರ್ಥ ಆಗಿಲ್ಲ ಎಂದು ಕಿಡಿಕಾರಿದರು.
ಜನ ಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿಲ್ಲ. ಈ ಕೂಡಲೇ ಕ್ರಮ ವಹಿಸದಿದ್ದರೆ ಕಚೇರಿ ಮುತ್ತಿಗೆ, ರಸ್ತೆ ಹೆದ್ದಾರಿ ಬಂದ್ ಹಾಗೂ ಚುನಾವಣಾ ಬಹಿಷ್ಕಾರ ಮಾಡುವುದು ಖಚಿತ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ನಿತ್ಯ ನೂರಾರು ಮಕ್ಕಳು ಶಾಲಾ ಕಾಲೇಜಿಗೆ ಸಾಗರನಹಳ್ಳಿ ಗ್ರಾಮದಲ್ಲಿ ಬಸ್ಸಿಗಾಗಿ ಕಾದಿರುತ್ತಾರೆ. ಆದರೆ ರಸ್ತೆ ಸರಿ ಇಲ್ಲ. ಮಳೆ ಬಂದಿದೆ ಎಂದು ಸರ್ಕಾರಿ ಬಸ್ಸು ಕುಂದರನಹಳ್ಳಿ ಗ್ರಾಮದಿಂದ ತೆರಳುತ್ತದೆ. ಹೀಗೆ ಮಕ್ಕಳು ನಡೆದು ಹೆದ್ದಾರಿಗೆ ಹೋಗಿ ಶಾಲೆಗೆ ತೆರಳುತ್ತಾರೆ. ಇಲ್ಲವಾದಲ್ಲಿ ಗ್ರಾಮದ ಬೈಕ್ ಗಳನ್ನೇ ಅವಲಂಬಿಸಿ ಹೋಗುತ್ತಾರೆ. ಈ ಜೊತೆಗೆ ಊರಿನ ಎಲ್ಲಾ ರಸ್ತೆಗಳು ಚರಂಡಿ ಇಲ್ಲದೆ ಕೆಸರುಮಯವಾಗಿದೆ. ಓಡಾಡುವುದೇ ಕಷ್ಟ ಎನಿಸಿದ ರಸ್ತೆಯಲ್ಲಿ ಬಿದ್ದು ಎದ್ದ ಘಟನೆ ನಿತ್ಯ ನಡೆಯುತ್ತದೆ. ಹೀಗೆ ಹಾಲಿನ ಡೈರಿಗೆ ಬರುವಾಗ್ಗೆ ಬಿದ್ದು ಹಾಲು ಮಣ್ಣು ಪಾಲಾದ ಘಟನೆ ಪ್ರತಿನಿತ್ಯ ಕೇಳುತ್ತಿದ್ದೇವೆ ಎಂದು ಕಲ್ಲುಕೋಡಿಯ ಮಹಿಳೆ ಪಾರ್ವತಮ್ಮ ಅಳಲು ತೋಡಿಕೊಂಡರು.
ಗ್ರಾಮದ ರಸ್ತೆಯಿಂದ ಗ್ರಾಮಸ್ಥರ ಮನೆಗಳಿಗೆ ಸಂಬಂಧಿಕರೇ ಬರುತ್ತಿಲ್ಲ ಎಂಬ ಆರೋಪ ಮಾಡಿದ ಕೆಲ ಗ್ರಾಮಸ್ಥರ ಹೇಳಿಕೆ ಹಾಸ್ಯ ಎನಿಸಿದರೂ ರಸ್ತೆಯಿಂದ ನೆಂಟಸ್ತಿಕೆ ದೂರವಾಗುತ್ತಿದೆ ಎಂಬ ನೋವು ಹಂಚಿಕೊಂಡರು.
ಗ್ರಾಮ ಠಾಣಾ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಹಣವಿಲ್ಲ ಎನ್ನುವ ಪಂಚಾಯಿತಿ ನಮ್ಮ ತೆರಿಗೆ ಹಣ ಏನು ಮಾಡಿದೆ ಎಂದು ಆಕ್ರೋಶವಾಗಿ ಪ್ರಶ್ನೆ ಮಾಡಿದರು.
ಶೀಘ್ರ ರಸ್ತೆ ಸರಿಪಡಿಸದಿದ್ದರೆ ಉಗ್ರ ಹೋರಾಟಕ್ಕೂ ಸಿದ್ದವಿದ್ದೇವೆ ಎಂದು ಎಚ್ಚರಿಕೆ ನೀಡಿ ಏಳು ದಿನಗಳ ಗಡುವು ಸಹ ನೀಡಿದ್ದಾರೆ.
“ಮೂಲಭೂತ ಸೌಕರ್ಯ ಎನಿಸಿದ ನೀರು, ಚರಂಡಿ, ರಸ್ತೆ ಇದನ್ನು ನೀಡದ ತ್ಯಾಗಟೂರು ಗ್ರಾಮ ಪಂಚಾಯಿತಿ ಕಲ್ಲುಕೋಡಿ ಮತ್ತು ಸಾಗರನಹಳ್ಳಿ ಗ್ರಾಮಕ್ಕೆ ಜಲ ಜೀವನ್ ನೀರು ಕೊಡುವ ಭರದಲ್ಲಿ ರಸ್ತೆ ಅಗೆದು ಹಾಗೆಯೇ ಬಿಟ್ಟ ಕಾರಣ ರಸ್ತೆ ಹಾಳಾಗಿದೆ. ಸಿಸಿ ರಸ್ತೆ ಎಂಬುದು ಮೂವತ್ತು ವರ್ಷದಿಂದ ಕಾಣದ ಈ ಗ್ರಾಮಗಳಿಗೆ ಚರಂಡಿ ಎಂಬುದು ಇಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮೂರು ಕಡೆ ಮನವಿ ಮಾಡಿ ಜನಪ್ರತಿನಿಧಿಗಳಿಗೆ ತಿಳಿಸಿದ್ದೆವು. ಆದರೂ ಯಾರೊಬ್ಬರೂ ಇತ್ತ ಕಡೆ ಸುಳಿದಿಲ್ಲ. ಮಳೆಗಾಲದಲ್ಲಿ ನಮ್ಮ ಪಾಡು ಹೇಳತೀರದು. ಇವೆಲ್ಲಾ ಮೂಲ ಸಮಸ್ಯೆಗೆ ಉತ್ತರ ನೀಡದ ಆಡಳಿತವನ್ನು ಧಿಕ್ಕರಿಸಲು ನಿರ್ಧರಿಸಿ ಮುಂಬರುವ ಚುನಾವಣಾ ಬಹಿಷ್ಕಾರ ಮಾಡುವುದು ಖಚಿತ” ಎಂದು ಗುರುಮೂರ್ತಿ ಹೇಳಿದರು.
ಪ್ರಭಾವಿ ರಾಜಕಾರಣಿಗಳೇ ಇರುವ ಸಾಗರನಹಳ್ಳಿ ಗ್ರಾಮಕ್ಕೆ ಸಂಪರ್ಕ ರಸ್ತೆ ಇಲ್ಲ. ಮಾಜಿ ಸಚಿವ ಸಾಗರನಹಳ್ಳಿ ರೇವಣ್ಣ ಅವರ ಸ್ವಗ್ರಾಮಕ್ಕೆ ಈ ದುಸ್ಥಿತಿ ಬಂದಿರುವುದು ವಿಪರ್ಯಾಸ. ಮಳೆ ಬಂದರೆ ಈ ರಸ್ತೆಗೆ ಬಸ್ಸು ಬರುವುದಿಲ್ಲ. ಅಂಕಾಪುರ, ಕಲ್ಲು ಕೋಡಿ ಗ್ರಾಮಕ್ಕೆ ಈ ರಸ್ತೆ ಅನಿವಾರ್ಯ. ಕೆಸರು ಗುಂಡಿ ಮುಚ್ಚಲು ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳ ಮೊಂಡುತನ ಗ್ರಾಮಸ್ಥರನ್ನು ಕೆರಳಿಸಿದೆ. ಸ್ಥಳೀಯ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿ ಯೋಗೀಶ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಮಯ್ಯ, ರೇಣುಕಯ್ಯ, ಜಗದೀಶ್, ರವೀಶ್, ಜಯಣ್ಣ, ಸುರೇಶ್, ನಾಗರಾಜು, ಲೋಕೇಶ್, ಗಂಗಾಧರ್, ಚರಣ್ ಕುಮಾರ್, ಸುಪ್ರೀತ್ ಇತರರು ಇದ್ದರು.