ಅಂತಾರಾಷ್ಟ್ರೀಯ ಸಂಘಟನೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಯುನೈಟೆಡ್ ಇದರ ಹದಿನೈದನೇ ವರ್ಷದ ವಾರ್ಷಿಕೋತ್ಸವವು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ರಾಜಧಾನಿ ದುಬೈನಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ರಾಮನಗರದ ಸಮಾಜಸೇವಕ ಹಾಗೂ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆಯ ರಾಜ್ಯ ಸಲಹೆಗಾರರಾದ ಕುಮಾರಸ್ವಾಮಿ, ಹಾಗೂ ಚಿತ್ರಸಾಹಿತಿ, ಕವಿ, ನಿರ್ಮಾಪಕ ನಾಗೇಂದ್ರ ಪ್ರಸಾದ್ , ಮತ್ತು ದಲಿತಪರ ಹೋರಾಟಗಾರರಾದ ಎಂ ಎನ್ ಆರ್ ರವೇಶ್ ಅವರಿಗೆ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ದುಬೈಯ ಕರಾಮಾದಲ್ಲಿನ ಪಂಚತಾರಾ ಹೋಟೆಲ್ ಪಾರ್ಕ್ ರೆಜಿಸ್‌ನಲ್ಲಿ ಜರಗಿದ ವರ್ಣರಂಜಿತ ಸಮಾರಂಭದಲ್ಲಿ ಇಪ್ಪತ್ತೆರಡು ದೇಶಗಳ ವಿವಿಧ ಪ್ರತಿನಿಧಿಗಳೊಂದಿಗೆ ಭಾರತದ ನಾಲ್ವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದುಬೈ ದೇಶದ ರಾಜಮನೆತನದ ಹಿಸ್ ಎಕ್ಸೆಲೆನ್ಸಿ ಮುಹಮ್ಮದ್ ಬಿನ್ ಅಬ್ದುಲ್ಲಾ ಅಲ್ ಮಝರೂಕಿ , ಹಿಸ್ ಎಕ್ಸೆಲೆನ್ಸಿ ಜುಮಾ ಅಲ್ ಮದನಿ , ಹರ್ ಎಕ್ಸೆಲೆನ್ಸಿ ಮುನೀರಾ ಅಲ್ ಬಲೂಷಿ, ಬೀದರ್ ಶಾಹೀನ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಅಬ್ದುಲ್ ಖದೀರ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು.
ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಯುನೈಟೆಡ್ ಸಂಘಟನೆಯ ಸ್ಥಾಪಕ ಹಾಗೂ ಅಂತಾರಾಷ್ಟ್ರೀಯ ಅಧ್ಯಕ್ಷರಾದ ಶಕೀಲ್ ಹಸನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯನ್ನು ಹದಿನೈದು ವರ್ಷಗಳ ಹಿಂದೆ ಸ್ಥಾಪಿಸಿದ ಬಗ್ಗೆ ವಿವರ ನೀಡಿದರು.
“ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರೆಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದು ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾಗಿದ್ದು ಇಂದಿನ ಆದ್ಯ ಕರ್ತವ್ಯಗಳಲ್ಲೊಂದು” ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ದಾನಿಶ್ ಮುಹಮ್ಮದ್ , ಹಮೀದ್ ಸಾಗರ , ಸಯ್ಯದ್ ಅಹಮದ್ ಬಸ್ರುರು ಉಪಸ್ಥಿತರಿದ್ದರು.
