ಸರ್ಕಾರ ಅಂಗನವಾಡಿಗಳನ್ನು ಉನ್ನತೀಕರಿಸಲು ಮುಂದಾಗಿದೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 368 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದು ಮಾತ್ರ ವಾಸ್ತವ.
ಅಂಗನವಾಡಿಗಳ ಉನ್ನತೀಕರಣಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಅಂಗನವಾಡಿಗಳಲ್ಲೇ ಎಲ್.ಕೆ.ಜಿ – ಯು.ಕೆ.ಜಿ ಆರಂಭಕ್ಕೆ ಸಮ್ಮತಿ ಸೂಚಿಸಿದೆ. ಆದರೆ, ಎಲ್ಲೆಲ್ಲಿ ಎಲ್.ಕೆ.ಜಿ – ಯುಕೆಜಿ ಆರಂಭಿಸಬೇಕು ಎಂಬುದರ ಕುರಿತು ಸ್ಪಷ್ಟತೆಯೇ ಇಲ್ಲವಾಗಿದೆ. ಜತೆಗೆ ಅಂಗನವಾಡಿಗಳ ಮೂಲಸೌಕರ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.40 ರಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲವಾಗಿದ್ದು, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕಿದೆ.
ಜಿಲ್ಲಾದ್ಯಂತ 2014 ಅಂಗನವಾಡಿ ಕೇಂದ್ರಗಳಿದ್ದು, 1197 ಅಂಗನವಾಡಿ ಕೇಂದ್ರಗಳು ಮಾತ್ರ ಸ್ವಂತ ಕಟ್ಟಡಗಳನ್ನು ಹೊಂದಿವೆ. ಉಳಿದಂತೆ 276 ಕೇಂದ್ರಗಳು ಸರಕಾರಿ ಶಾಲಾ ಕಟ್ಟಡಗಳಲ್ಲಿ, 145 ಕೇಂದ್ರಗಳು ಸಮುದಾಯ ಭವನಗಳಲ್ಲಿ, 28 ಕೇಂದ್ರಗಳು ಪಂಚಾಯಿತಿ ಕಟ್ಟಡಗಳಲ್ಲಿ ನಡೆಯುತ್ತಿದ್ದು, 368 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವುದು ಇಲಾಖೆಯಿಂದ ತರಿಸಿಕೊಂಡ ಮಾಹಿತಿಯಲ್ಲಿ ಲಭ್ಯವಾಗಿದೆ.

ನಿವೇಶನ ಇದೆ, ಕಟ್ಟಡವಿಲ್ಲ!
ಜಿಲ್ಲಾದ್ಯಂತ 52 ಅಂಗನವಾಡಿಗಳಿಗಾಗಿ ನಿವೇಶನ ಕಾಯ್ದಿರಿಸಲಾಗಿದೆ. ಆದರೆ, ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಸುವ ಸ್ಥಿತಿ ಇದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ನಿಗದಿಗೊಳಿಸಬೇಕಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.
ಹಲವು ಅಂಗನವಾಡಿ ಕೇಂದ್ರಗಳು ಸ್ವಂತ ನಿವೇಶನಗಳನ್ನು ಹೊಂದಿದ್ದರೂ, ಸರಕಾರದಿಂದ ಸೂಕ್ತ ಅನುದಾನ ಬಿಡುಗಡೆಯಾಗುತ್ತಿಲ್ಲ. ಸರ್ಕಾರಗಳು ಬದಲಾದರೂ ಸಹ ಅಂಗನವಾಡಿಗಳಿಗೆ ಅಗತ್ಯವಿರುವ ಸೌಕರ್ಯ ನೀಡುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂಬುದು ಇಲಾಖೆಯ ಅಧಿಕಾರಿಗಳ ಅಳಲು.
ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ, “ಅಂಗನವಾಡಿಗಳಲ್ಲಿ ಎಲ್.ಕೆ.ಜಿ – ಯು.ಕೆ.ಜಿ ಆರಂಭ ಸ್ವಾಗತಾರ್ಹ. ಎಲ್ಲೆಲ್ಲಿ ಆರಂಭ ಎಂಬುದರ ಕುರಿತು ಇನ್ನೂ ಮಾಹಿತಿ ಇಲ್ಲ. ಆದರೆ, ಸಾಕಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಸರಕಾರ ಅನುದಾನ ಬಿಡುಗಡೆ ಮಾಡಬೇಕಿದೆ” ಎಂದು ಹೇಳಿದರು.
ಅಂಗನವಾಡಿಗಳ ಸಮಸ್ಯೆಯ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಮುನಿಕೃಷ್ಣಪ್ಪ, ಅಂಗನವಾಡಿಗಳಲ್ಲಿ ಎಲ್.ಕೆ.ಜಿ. – ಯುಕೆ.ಜಿ ಆರಂಭಕ್ಕೂ ಮುನ್ನ ಅಂಗನವಾಡಿಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಆನಂತರ ಸರಕಾರ ಉನ್ನತೀಕರಣದ ಚಿಂತನೆ ನಡೆಸಲಿ. ಮಕ್ಕಳಿಗೆ ಸಿಗಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಮೊದಲು ಆಸಕ್ತಿ ವಹಿಸಿ, ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಒಟ್ಟಾರೆಯಾಗಿ ಅಂಗನವಾಡಿಗಳಲ್ಲಿ ಎಲ್.ಕೆ.ಜಿ – ಯು.ಕೆ.ಜಿ ಆರಂಭಿಸುವ ನಿಟ್ಟಿನಲ್ಲಿ ಸರಕಾರ ಅಂಗನವಾಡಿಗಳ ಉನ್ನತೀಕರಣಕ್ಕೆ ಮುಂದಾಗಿದ್ದು ಸರಿ. ಆದರೆ, ಅಂಗನವಾಡಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೂಡಲೇ ಅನುದಾನ ಬಿಡುಗಡೆ ಮಾಡಬೇಕಿದೆ. ಅಂತೆಯೇ ಬಜೆಟ್ ನಲ್ಲೂ ಅಂಗನವಾಡಿಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಎಂಬುದು ಅಧಿಕಾರಿ ವರ್ಗ ಮತ್ತು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ವಿಜಯ ಕುಮಾರ್ ಗಜ್ಜರಹಳ್ಳಿ
ಪತ್ರಕರ್ತ, ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರು