“ಭೂಸ್ವಾಧೀನಕ್ಕೆ ಭೂಮಿ ಬಿಟ್ಟುಕೊಡಲು ನಾವು ರೆಡಿ. ಎಷ್ಟು ದಿನ ಅಂತ ಕೂಲಿ ಕೆಲಸ ಮಾಡ್ಕೊಂಡ್ ಇರ್ಲಿ ನಾವು?… ನಮ್ಮದೇ ಭೂಮಿಗಳನ್ನ ನಮ್ಮ ತಾತ ಮುತ್ತಾತಂದಿರು ಅನ್ನಕ್ಕಾಗಿ ಅತೀ ಕಡಿಮೆ ದುಡ್ಡಿಗೆ ಮಾರಿಕೊಂಡಿದ್ದಾರೆ. ಆ ಭೂಮಿ ಪ್ರಸ್ತುತ ಮೇಲ್ಜಾತಿಯವರ ಕೈಸೇರಿದೆ. ನಮ್ದು ಬರಡು ಭೂಮಿ ಅಲ್ಲಿ ಯಾವ ಬೆಳೆ ಬೆಳೆಯೋದು? ನಮಗೆ ಕೂಲಿಯೇ ಗತಿ.”
“ಇದುವರೆಗೆ ನಮ್ಮೂರಿನ ದಲಿತರು, ಹಿಂದುಳಿದವರು ಕೂಲಿ ಮಾಡ್ಕೊಂಡೇ ಜೀವನ ಮಾಡಿರೋದು. ಕೈಗಾರಿಕೆಗಳಾದರೆ ನಮ್ಮ ಜನರಿಗೆ ಸ್ಥಳೀಯವಾಗಿ ಕೆಲ್ಸ ಸಿಗುತ್ತೆ. ಆರ್ಥಿಕವಾಗಿ ನಮ್ ಜನ ಸುಧಾರಣೆ ಆಗ್ತಾರೆ. ಹೆಚ್ಚು ಭೂಮಿ ಇರೋರಿಗೆ ಹಣ ಬೇಕಿಲ್ಲ. ಹಾಗಾಗಿ ಅವರು ಭೂಸ್ವಾಧೀನಕ್ಕೆ ಒಪ್ಪುತ್ತಿಲ್ಲ”
“ಕೇವಲ 10% ಜನರ ಅಭಿಪ್ರಾಯವನ್ನ 100% ಜನರ ಅಭಿಪ್ರಾಯವೆಂಬಂತೆ ಬಿಂಬಿಸುತ್ತಿದ್ದಾರೆ. ಹಣ ಇರೋರು ಜನರನ್ನ ಸೇರಿಸಿಕೊಂಡು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಟಿವಿ ಹಾಗೂ ಪತ್ರಿಕೆಗಳಲ್ಲಿ ಸುದ್ದಿ ಮಾಡಿಸುತ್ತಿದ್ದಾರೆ. ಆದರೆ, ಎಸ್ಸಿ-ಎಸ್ಟಿ, ಹಿಂದುಳಿದ ಸಮುದಾಯದವರಿಗೆ ದುಡ್ಡಿಲ್ಲ. ನಮ್ ಅಭಿಪ್ರಾಯ ಸರಕಾರಕ್ಕೆ ತಿಳೀತಿಲ್ಲ. ದಲಿತರು, ಹಿಂದುಳಿದವರು ಭೂಸ್ವಾಧೀನಕ್ಕೆ ಭೂಮಿ ಕೊಡಲು ಸಿದ್ಧರಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮದವರಿಗೆ ಉದ್ಯೋಗ ಸಿಗುತ್ತೆ”…ಹಿಂಗಂದಿದ್ದು ಜಂಗಮಕೋಟೆ ಕ್ರಾಸ್ ಬಳಿಯ ಯಣ್ಣಂಗೂರು ಗ್ರಾಮದ ರವಿ, ವಿನಯ್ ಮತ್ತು ತಂಡ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ, ಹೊಸಪೇಟೆ, ಚೀಮಂಗಲ ಗ್ರಾಪಂ ವ್ಯಾಪ್ತಿಯ ಯಣ್ಣಂಗೂರು, ಬಸವಾಪಟ್ಟಣ, ನಡಿಪಿನಾಯಕನಹಳ್ಳಿ, ತಾದೂರು ಹತ್ತಿಗಾನಹಳ್ಳಿ, ಕೃಷ್ಣಹಳ್ಳಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆ.ಐ.ಎ.ಡಿ.ಬಿ ಭೂಸ್ವಾಧೀನಕ್ಕೆ ಮುಂದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಇದಕ್ಕಾಗಿ ಪಣ ತೊಟ್ಟಿದ್ದಾರೆ. ಈಗಾಗಲೇ ಡ್ರೋನ್ ಸರ್ವೆ ಕಾರ್ಯವನ್ನು ಮುಗಿಸಿ, ಗ್ರಾ.ಪಂ.ಗಳಿಂದ ಆಸ್ತಿಗಳ ವಿವರಗಳನ್ನು ಪ್ರಕಟಿಸಿದ್ದು, ಇದೇ ತಿಂಗಳ ಆ.14ರೊಳಗೆ ರೈತರು ಮತ್ತು ಸಾರ್ವಜನಿಕರಿಂದ ತಂಟೆ ತಗಾದೆಗಳಿಗೆ ಅರ್ಜಿ ಸಲ್ಲಿಸಲು ಸಮಯ ನಿಗದಿಗೊಳಿಸಿದೆ.
“ನಮ್ಮದು 8 ಎಕರೆ ಭೂಮಿ ಇದೆ. ಆ ಜಾಗದಲ್ಲಿ ಬೆಳೆ ಬೆಳೆಯಲಾಗುತ್ತಿಲ್ಲ. ಸರಕಾರ ಭೂಸ್ವಾಧೀನಪಡಿಸಿಕೊಂಡರೆ ನಮಗೂ ಸ್ವಲ್ಪ ಹಣ ಬರುತ್ತೆ. ಊರಿನ ಸಮೀಪ ಕೈಗಾರಿಕೆಗಳಾದರೆ ಸುತ್ತಮುತ್ತಲಿನವರಿಗೆ ಅನುಕೂಲವಾಗುತ್ತೆ. ಕೆಲವರು ಮಾತ್ರ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಹಿಂದುಳಿದವರಿಗೆ ಅನಾನುಕೂಲವಾಗುತ್ತಿದೆ” ಎನ್ನುತ್ತಾರೆ ಯಣ್ಣಂಗೂರು ಗ್ರಾಮದ ಹರೀಶ್.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಹೆಚ್ಚು ಭೂಮಿಯನ್ನು ಹೊಂದಿರುವ ಕೆಲ ಭೂ ಮಾಲೀಕರು ಭೂಸ್ವಾಧೀನಕ್ಕೆ ಅಡ್ಡಿಪಡಿಸುತ್ತಿದ್ದು, ಭೂಸ್ವಾಧೀನ ಕೈಬಿಡುವಂತೆ ಸಚಿವರ ಮೊರೆ ಹೋಗುತ್ತಿದ್ದಾರೆ. ನಡಿಪಿನಾಯಕನಹಳ್ಳಿ ಭಾಗದ ಕೆಲ ರೈತರು ಪ್ರಾಣ ಕೊಡುತ್ತೇವೆ ಭೂಮಿ ಕೊಡುವುದಿಲ್ಲ ಎಂದು ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ಜಿಲ್ಲೆಯ ಶಿಡ್ಲಘಟ್ಟ, ಕೈವಾರ ಬಳಿಯ ಮಸ್ತೇನಹಳ್ಳಿ, ಗೌರಿಬಿದನೂರು ಸೇರಿದಂತೆ ಹಲವೆಡೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಇದುವರೆಗೆ ಆ ಭೂಮಿ ಖಾಲಿಯೇ ಉಳಿದಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಖಾಲಿ ಭೂಮಿಯನ್ನು ಇಟ್ಟುಕೊಂಡು ರೈತರ ಕೃಷಿ ಭೂಮಿಯನ್ನು ಕಬಳಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂಬುದು ಕೆಲ ಮಂದಿ ರೈತರ ಅಭಿಪ್ರಾಯವಾಗಿದೆ.
ಶೇ.70ರಷ್ಟು ರೈತರು ಬೇಡ ಎಂದರೆ ಕೈ ಬಿಡುತ್ತೇವೆ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಇತ್ತೀಚೆಗಷ್ಟೇ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಂಗಮಕೋಟೆ ಬೆಂಗಳೂರಿಗೆ ಹತ್ತಿರವಾಗಿದ್ದು, ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಸಮೀಪದಲ್ಲಿದೆ. ಇಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಪ್ರಶಸ್ತವಾಗಿದೆಯೆಂದು 2238 ಎಕರೆ ಜಾಗವನ್ನು ಗುರುತಿಸಲಾಗಿದೆ. ಶೇ.70 ರಷ್ಟು ರೈತರು ಬೇಡವೆಂದರೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲಾಗುವುದು ಎಂದು ಈಗಾಗಲೇ ತಿಳಿಸಿದ್ದಾರೆ.
ಕೆ.ಐ.ಎ.ಡಿ.ಬಿ ಕಳ್ಳರ ಸಂತೆ : ಕೆ.ಐ.ಎ.ಡಿ.ಬಿ ಭೂಸ್ವಾಧೀನ ಪ್ರಕ್ರಿಯೆ ಒಂದು ರೀತಿ ಕಳ್ಳರ ಸಂತೆ ಇದ್ದಂತೆ. ಇದು ರೈತವಿರೋಧಿ ಪ್ರಕ್ರಿಯೆ. ಭೂಮಿಯನ್ನ ಕದಿಯಲಿಕ್ಕೆ ಬರುವ ಖದೀಮರು ಅವರು. ಜಂಗಮಕೋಟೆ ವ್ಯಾಪ್ತಿಯ ಭೂಸ್ವಾಧೀನವನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆ ತಾತ್ಕಾಲಿಕವಾಗಿ ತಡೆಹಿಡಿಯುತ್ತೇವೆ. ರೈತರೊಂದಿಗೆ ಸಭೆ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆ.ಐ.ಎ.ಡಿ.ಬಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ರೈತ ಮುಖಂಡ ಭಕ್ತರಹಳ್ಳಿ ಭೈರೇಗೌಡ ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭರ್ಜಿಯ ಕೊನೆಗೆ ಪ್ರೀತಿಯ ಮುಳ್ಳು ಚುಚ್ಚಿದ ತಾಯಂದಿರು – ಆಲಿಸಲಿ ‘ಮಕ್ಕಳು’
ಒಟ್ಟಾರೆಯಾಗಿ, ಜಂಗಮಕೋಟೆ ಭೂಸ್ವಾಧೀನ ಪ್ರಕ್ರಿಯೆಗೆ ರೈತರಲ್ಲೇ ಭಿನ್ನಸ್ವರ ಕೇಳಿಬರುತ್ತಿದ್ದು, ಕೆಲ ಮಂದಿ ಭೂಮಾಲೀಕರ ಹಿತಕ್ಕಾಗಿ, ಹಲವು ಮಂದಿ ರೈತರ ಅಹಿತ ಬಯಸುತ್ತಿರುವುದು ಸುಳ್ಳಾಗಿ ಉಳಿದಿಲ್ಲ. ಈ ನಿಟ್ಟಿನಲ್ಲಿ ಸರಕಾರ ಕೆಲ ಪ್ರಭಾವಿಗಳ ಮಾತನ್ನಷ್ಟೇ ಕೇಳದೇ, ಸಂಬಂಧಪಟ್ಟ ಎಲ್ಲ ರೈತರಿಂದಲೂ ಅಭಿಪ್ರಾಯ ಸಂಗ್ರಹಿಸಿ, ಭೂಮಿ ಕೊಡಲು ಸಿದ್ಧರಿರುವ ರೈತರಿಂದ ಭೂಮಿ ಪಡೆದು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ.
ವಿಜಯ ಕುಮಾರ್ ಗಜ್ಜರಹಳ್ಳಿ
ಪತ್ರಕರ್ತ, ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರು