‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’; ಬಿದ್ದ ಕನಸುಗಳನ್ನು ಸಿಕ್ಕಷ್ಟು ಎದೆಗೆ ಬಾಚಿಕೊಂಡಿರುವ ಸಂಗೀತಗಾರ

Date:

Advertisements

ಕನ್ನಡ ರಂಗಭೂಮಿಯ ಸೃಜನಶೀಲ ನಿರ್ದೇಶಕ ಕೆ. ಪಿ. ಲಕ್ಷ್ಮಣ್‌ ನಿರ್ದೇಶನದ, ʼಜಂಗಮ ಕಲೆಕ್ಟಿವ್‌ʼ ತಂಡ ಪ್ರಸ್ತುತಪಡಿಸಿದ ʼಬಾಬ್‌ ಮಾರ್ಲಿ ಫ್ರಮ್‌ ಕೋಡಿಹಳ್ಳಿʼ ನಾಟಕ ಅಪಾರ ಜನಮನ್ನಣೆ ಗಳಿಸಿದೆ. ಪಾತ್ರಧಾರಿಗಳಾದ ಚಂದ್ರು, ಶ್ವೇತ, ಭರತ್ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದಂತೆ ಪಾತ್ರಗಳಿಗೆ ಜೀವ ಬಸಿದಿದ್ದಾರೆ.

“ಬಾಲ್ಯ ಎನ್ನುವುದು ಅನುಭವಗಳ ಸಂತೋಷದ ನಿಧಿ, ಗೋಲ್ಡನ್‌ ಮೆಮೊರೀಸ್” ಎಂದು‌ ಎಲ್ಲರೂ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಅದು ನೋವಿನ ಕಣಜವಾಗಿದ್ದರೆ, ಹರೆಯದ ಮತ್ತು ನಂತರದ ಬಾಳು ಕಹಿಯಾಗಿ ಬೆಂಬಿಡದೆ ಕಾಡುತ್ತದೆ. ಅದೆಲ್ಲವನ್ನೂ ನುಂಗಿಕೊಂಡು, ಊರಿನ-ಕಹಿ ನೆನಪುಗಳ ಕಕ್ಷೆ ದಾಟಬೇಕೆಂದು ಬಯಸಿ ಹೇಗೊ ಕನಸುಗಳ ಮೂಟೆಯನ್ನ ಬೆನ್ನೇರಿಕೊಂಡು ಬರುತ್ತಾರೆ ಬೆಂಗಳೂರೆಂಬ ಮಹಾನಗರಕ್ಕೆ. ಅವರ ಮೂಲವನ್ನು ಜಾತಿಗಷ್ಟೆ ಸೀಮಿತ ಮಾಡಿ ನೋಡುವ ತುಸು ʻಲಿಬರಲ್‌ ಮಹಾನಗರʼದ ಜನರಿಂದ ಮೂಲ ಮುಚ್ಚಿಡಬೇಕಾದ ಅನಿವಾರ್ಯತೆ ಈ ಮೂವರದ್ದು. ಆದರೆ ಒಂದು ಮೂಳೆಯ ತುಂಡು ಅವರ ಮೂಲವನ್ನು ಜಗಜ್ಜಾಹೀರು ಮಾಡಿದೆ. ಈಗ ಮಾರನೇ ದಿನ ಮನೆ ಹುಡುಕಬೇಕು ಬೀದಿಗೆ ಬಿದ್ದು. ಆ ಆಕ್ರೋಶವೇ ಒಂದು ರಾತ್ರಿಯಾದರೂ ಅಷ್ಟು ದಿನ ಬಚ್ಚಿಕೊಂಡದ್ದನ್ನ ಒಬ್ಬರೆದುರೊಬ್ಬರು ಮನ ಬಿಚ್ಚಿ ಮಾತನಾಡುವಂತಾಗುತ್ತದೆ. ಈ ಸಾತ್ವಿಕ ಆಕ್ರೋಶದಲ್ಲಿ ಆವೇಶವಿಲ್ಲ, ದ್ವೇಷವಿಲ್ಲ, ಭಾವೋದ್ವೇಗವಿಲ್ಲ.

“ಮನವೆಲ್ಲ ಬಯಲಾಗಿ…” ಎಂದು ಹಾಡುತ್ತಲೇ ನಾಟಕವನ್ನ ಶುರು ಮಾಡುವ ಬಾಬ್‌ ಮಾರ್ಲಿ ಕೊನೆಗೆ “ನನ್ನ ಹಾಡು ಬೇರೆಯಲ್ಲವೇ?” ಎಂದು ಕೇಳುತ್ತಾನೆ. ಹಾಗಾದರೆ ಅವರು ಹಾಡಬೇಕಾದ ತನ್ನದೇ ಹಾಡು ಯಾವುದು? ತನ್ನದಲ್ಲದ ಹಾಡನ್ನು ಹಾಡುವ ಅನಿವಾರ್ಯತೆಯಾದರೂ ಏನು? ಇದೆಲ್ಲವನ್ನು ನಾಟಕದಲ್ಲಿಯೇ ನೋಡಿ ಅನುಭಾವಿಸಿ ತಿಳಿಯಬೇಕು. ಇವನು ಜಮೈಕಾದ ಹಾಡುಗಾರನಲ್ಲ. ಬದಲಿಗೆ ಭಾರತದಲ್ಲಿಯೇ ಜನಿಸಿ ಅಂಚಿಗೆ ದೂಡಲ್ಪಟ್ಟ, ಬಿದ್ದ ಕನಸುಗಳನ್ನ ಸಿಕ್ಕಷ್ಟು ಎದೆಗೆ ಬಾಚಿಕೊಂಡಿರುವ ಸಂಗೀತಗಾರ. ಇವನೆದೆಯ ದನಿಗೆ ಬೇಕಿರದ ರಾಗದ ಹೊರೆಯನ್ನು ಏರಿಸುತ್ತಿರುವ ಆ ಶಕ್ತಿಯ ಮೂಲ ಯಾವುದು? ಕೇಳಿಕೊಳ್ಳುವಂತೆ ಮಾಡುತ್ತಾರೆ ಈ ಬಾಬ್‌ ಮಾರ್ಲಿ ಮತ್ತು ಗೆಳೆಯರು.

Advertisements

ಇವರಿಗೆ ಊರಲ್ಲಿ ನೆಲೆಯಿದೆ, ಆದರೆ ಅಸ್ಮಿತೆ ಅವರದ್ದಲ್ಲವಾಗಿದೆ. ಚದುರಿದ ನದಿಗಳು ಒಂದೆಡೆ ಸೇರಿದಂತೆ, ಬಾಡಿಗೆ ಶೇರ್‌ ಮಾಡಿಕೊಂದು ಒಂದೇ ಸೂರಿನಲ್ಲಿ ಕನಸುಗಳನ್ನು ಕಾಪಿಟ್ಟುಕೊಂಡು ಬದುಕುತ್ತಿದ್ದಾರೆ. ಆದರೆ, ಎಲ್ಲಿ ಹೋದರೂ ಚಿಕ್ಕಚಿಕ್ಕ ಗೆರೆ ಕೊರೆದು ಇವರನ್ನು ಸಿಲುಕಿಸುತ್ತಿವೆ. ಗೆರೆಗಳ ಬರೆಗಳು ಮತ್ತೆ ಮತ್ತೆ ಮೂಡಿದಂತೆ, ಅದನ್ನ ಅಳಿಸಿ ಹಾಕುತ್ತಲೇ ಮರು ಹುಟ್ಟು ಪಡೆಯುತ್ತಿವೆ. ಮಿಂಚುಹುಳುವಿನೊಲವು ಹೊಂದಿರುವ ಸಾಕ್ಯನು ತನ್ನದೇ ಊರಿನಲ್ಲಿ ಮಿಂಚುಹುಳು ಹಿಡಿಯಲು ಹೋಗಿ ಸುಟ್ಟ ಗಾಯದ ನೆನಪನ್ನು ಹೊತ್ತುಕೊಂಡು ನಮ್ಮೆದುರು ನಿಂತಿದ್ದಾನೆ.

ಇವರ ಮುಂದೆ ಬೆತ್ತಲಾಗಲು ಇವರ ಮೇಲೆ ನಂಬಿಕೆಯಿಲ್ಲ ಎಂದು ಉತ್ತರಿಸುತ್ತಲೇ ಸವಾಲನ್ನು ಎಸೆಯುತ್ತಾಳೆ ನದಿ. ಕೂಡು ಸಮಾಜವೆಂದರೆ ಒಂದು ನಂಬಿಕೆಯಲ್ಲವೆ? ಹಾಗಾದರೆ ಅವಳ ನಂಬಿಕೆ ಎಲ್ಲಿ ಅಲುಗಾಡಿದೆ. ಶೋಷಣೆಯ ಪಾತ್ರವನ್ನು ಪಾತ್ರವೇ ನಿರಾಕರಿಸಿ ಬಂಡಾಯ ವ್ಯಕ್ತಪಡಿಸುವ ಸಾತ್ವಿಕ ಸಿಟ್ಟು ಇಲ್ಲಿದೆ. ಸಮಾನ ದುಃಖಿಗಳಾದ ಇವರನ್ನ ಒಂದೊಂದು ಚಿಕ್ಕ ಗೆರೆಯಲ್ಲೇ ಕೂರಿಸಿದ್ದಾರೆ. ಆ ಗೆರೆಯನ್ನ ಅಳಿಸಿ ಹಾಕುವುದರಲ್ಲೇ ಬದುಕು ಸವೆಸುತ್ತಿರುವುದು ವಿಪರ್ಯಾಸ.

Bob Marli

ಕೋಡಿಹಳ್ಳಿ ಒಂದೂರಿನ ಹೆಸರು, ನೆಲ ಮಾತ್ರ. ಅಂತಹ ಸಾವಿರಾರು ಹಳ್ಳಿಗಳು ಈ ಭಾರತದಲ್ಲಿ ಸ್ಥಾಯಿಯಾಗಿ ನಿಂತಿವೆ. ಹಳ್ಳಿ ಎಂದರೆ ಹಸಿರು, ಚಿಗುರು ಎಂದೇ ರೊಮ್ಯಾಂಟಿಸಮ್‌ನಲ್ಲಿ ಬಗೆಯುವವರಿಗೆ ಇಲ್ಲಿನ ತಣ್ಣಗಿನ ಕ್ರೌರ್ಯವನ್ನ ಈ ಮೂವರು ಮುಖಕ್ಕೆ ಹೊಡೆದಂತೆ ಹೇಳಿ ಮನವನ್ನ ತಟ್ಟಿ ನೋಡಿಕೊಳ್ಳುವಂತೆ ಮಾಡುತ್ತಾರೆ. ಜೊತೆಯಲ್ಲಿ ಅಂಬೇಡ್ಕರ್‌ ಅವರ ಅನುಭವದ ಸಾಲುಗಳು, ರೋಹಿತ್‌ ವೇಮುಲನ ಕೊನೆಯ ಮಾತುಗಳು, ಎನ್. ಕೆ. ಹನುಮಂತಯ್ಯ ಮತ್ತು ಚಂದ್ರಶೇಖರ ಕೆ. ಅವರ ಕಾವ್ಯದ ಸಾಲುಗಳು ನಮ್ಮನ್ನು ಎದುರುಗೊಂಡು ನಾಟಕದ ರಂಗು ಹೆಚ್ಚಿಸುತ್ತವೆ.

ಮೊಟ್ಟೆಯೂ ಆಹಾರದ ಒಂದು ಭಾಗವಾಗದೇ, ರಾಜಕೀಯವಾಗಿ ಮಾರ್ಪಟ್ಟಿರುವುದು, ಜಾತ್ರೆ ಅಂದರೆ ಕೇವಲ ಎಲ್ಲರನ್ನೂ ಒಗ್ಗೂಡಿಸುವ-ಸಂಬಂಧಗಳನ್ನು ಬೆಸೆಯುವ ಆಚರಣೆ ಮಾತ್ರವೇ? ನಮ್ಮದೇ ಸಾವುಗಳ ದ್ಯೋತಕವಾದ ಇವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವಲ್ಲ. ಇದು ಹಿಂಬಾಗಿಲಿನಿಂದ ನಮ್ಮನ್ನು ಬೇರ್ಪಡಿಸುವ ಸಂಸ್ಕೃತಿಯ ಆಚರಣೆಯಲ್ಲವೇ? ಈ ʻಸುವ್ಯವಸ್ಥೆʼಯನ್ನು ವಿಡಂಬನೆಯ ಮೂಲಕವೇ ಅನಾವರಣಗೊಳಿಸಿ ಪ್ರೇಕ್ಷಕರನ್ನು ರಂಜಿಸಿ ಎದುರಿಗೆ ನಿಲ್ಲಿಸಿಕೊಂಡು ಪ್ರಶ್ನಿಸುತ್ತಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಈ ಪ್ರಶ್ನೆಯನ್ನು ಕೇಳಲು ಎದೆಗಾರಿಕೆಯೂ ಬೇಕು. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಕೆ. ಪಿ. ಲಕ್ಷ್ಮಣ್‌ ಅವರ ತಂಡ. ಪಾತ್ರಧಾರಿಗಳಾದ ಚಂದ್ರು, ಶ್ವೇತ, ಭರತ್ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದಂತೆ ಪಾತ್ರಗಳಿಗೆ ಜೀವ ಬಸಿದಿದ್ದಾರೆ.

ಶ್ರೇಷ್ಠ – ಕನಿಷ್ಠವೆಂಬ ತಕ್ಕಡಿ ಹೊಯ್ದಾಡುವಷ್ಟು ಕಾಲ ಈ ಬಾಬ್ ಮಾರ್ಲಿ, ನದಿ, ಸಾಕ್ಯರಂಥವರದ್ದು ಎಂದೂ ಮುಗಿಯದ ಯುದ್ಧ ಎಂಬ ವಾಸ್ತವವನ್ನು ವಿಡಂಬನೆ, ತೆಳು ಹಾಸ್ಯದ ಮೂಲಕ ತೆರೆದಿಡುವುದನ್ನ ರಂಗದ ಮೇಲೆಯೇ ನೋಡಬೇಕಾದ ರಂಗಚಿತ್ರ ʼಬಾಬ್‌ ಮಾರ್ಲಿ ಫ್ರಮ್‌ ಕೋಡಿಹಳ್ಳಿʼ.

ಪಲ್ಲವಿ
ಎಡೆಯೂರು ಪಲ್ಲವಿ
+ posts

ಯುವ ಲೇಖಕಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ನಾಟಕವನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸಿದ್ದಾರೆ. ಇನ್ನಷ್ಟು ವಿಸ್ತಾರವಾಗಿ ಬರೆಯಬಹುದಿತ್ತು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

Download Eedina App Android / iOS

X