ಬಾಂಗ್ಲಾದೇಶದ ಹೈಕೋರ್ಟ್ ಕಳೆದ ಜೂನ್‌ನಲ್ಲಿ ನೀಡಿದ ತೀರ್ಪಿನಲ್ಲಿ 1971ರ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನೆ ಸಿಬ್ಬಂದಿಯ ಮಕ್ಕಳು, ಸಂಬಂಧಿಕರಿಗೆ ಶೇ. 30ರಷ್ಟು ಕೋಟಾ ನೀಡಬೇಕೆಂದು ಆದೇಶ ನೀಡಿತ್ತು. ದೇಶಾದ್ಯಂತ ಹೈಕೋರ್ಟ್ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈಗ ಗಲಭೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಓಡಿಹೋಗಿದ್ದಾರೆ...
ಭಾರತದ ನೆರೆಯ ದೇಶ ಬಾಂಗ್ಲಾದೇಶದಲ್ಲಿ ಕೆಲವು ದಿನಗಳ ಮಟ್ಟಿಗೆ ತಣ್ಣಗಾಗಿದ್ದ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಆಗಸ್ಟ್ 4 ರಂದು ಸರ್ಕಾರದ ವಿರುದ್ಧ ನಡೆದ ಸಂಘರ್ಷದಲ್ಲಿ ಒಂದೇ ದಿನದಲ್ಲಿ ಪೊಲೀಸರು ಒಳಗೊಂಡು ಸುಮಾರು ನೂರು ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಢಾಕಾ ಸೇರಿದಂತೆ ರಾಷ್ಟ್ರದ ಬಹುತೇಕ ಜಿಲ್ಲೆಗಳಲ್ಲಿ ನಿನ್ನೆ ಸಂಜೆಯಿಂದಲೇ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ ವಿಧಿಸಲಾಗಿದೆ. ಕಳೆದ ತಿಂಗಳು ದೇಶಾದ್ಯಂತ ಸ್ಫೋಟಗೊಂಡಿದ್ದ ಇದೇ ರೀತಿಯ ಪ್ರತಿಭಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಅಧಿಕಾರಾವಧಿಯಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅಸಲಿಗೆ ಮೀಸಲಾತಿ ಹಾಗೂ ಪ್ರಧಾನಿಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷ ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಸಂಘರ್ಷವೇ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಹತ್ತಾರು ಕಾರಣಗಳಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ದೇಶದಲ್ಲಿ ಎಲ್ಲ ಕಚೇರಿಗಳು, ಬ್ಯಾಂಕ್‌ಗಳು, ಕಾರ್ಖಾನೆಗಳು ತೆರೆದಿದ್ದರೂ ಕೆಲಸ ಮಾಡಲು ಎರಡು ದಿನಗಳಿಂದ ಸಿಬ್ಬಂದಿಗಳು ಬಂದಿಲ್ಲ. ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿ ರಸ್ತೆ ತಡೆ ನಡೆಸಿ ನಾಗರಿಕರಿಗೆ ತೆರಿಗೆ ಮತ್ತು ಇತರ ಸರ್ಕಾರಿ ಬಿಲ್‌ಗಳನ್ನು ಪಾವತಿಸದಂತೆ ಅಸಹಕಾರ ಚಳವಳಿಗೆ ಮನವಿ ಮಾಡಿದ್ದರು. ಕೊನೆಗೆ ದೇಶದ ಜನರ ಆವೇಶಕ್ಕೆ ಮಣಿದಿರುವ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶ ತೊರೆದು ಓಡಿಹೋಗಿದ್ದಾರೆ.
ಹೆಚ್ಚಿದ ನಿರುದ್ಯೋಗ, ಭ್ರಷ್ಟಾಚಾರ
ಸರ್ಕಾರದ ವಿರುದ್ಧದ ಪ್ರತಿಭಟನೆಯ ಕಿಚ್ಚು ಏಕಾಏಕಿ ಶುರುವಾಗಿದ್ದಲ್ಲ. ದೇಶದ ಲಕ್ಷಾಂತರ ಬಡವರು, ನಿರುದ್ಯೋಗಿಗಳು ತಮ್ಮ ಆಕ್ರೋಶವನ್ನು ಹಲವು ವರ್ಷಗಳಿಂದ ನುಂಗಿಕೊಂಡು ಬಂದಿದ್ದರು. ಹಣದುಬ್ಬರ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಅಭಿವೃದ್ಧಿಯ ಕಡೆಗಣನೆ ಮತ್ತು ಕುಗ್ಗುತ್ತಿರುವ ವಿದೇಶಿ ವಿನಿಮಯ ದರ ಸೇರಿದಂತೆ ಹಲವು ರೀತಿಯ ಅಸಮಾಧಾನಗಳಿಂದ ಹಿಂಸಾಚಾರ ಶುರುವಾಗಿದೆ. ಬಾಂಗ್ಲಾದೇಶದಲ್ಲಿನ 17 ಕೋಟಿ ಜನಸಂಖ್ಯೆಯಲ್ಲಿ ಮೂರೂವರೆ ಕೋಟಿಗೂ ಹೆಚ್ಚು ಯುವಜನರಿಗೆ ಉದ್ಯೋಗವಿಲ್ಲ ಅಥವಾ ಸರಿಯಾದ ಶಿಕ್ಷಣವನ್ನು ಪಡೆದುಕೊಂಡಿಲ್ಲ. ಒಟ್ಟಾರೆ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಮಂದಿ 15 ರಿಂದ 50 ವರ್ಷ ವಯಸ್ಸಿನವರು. ಇವರಲ್ಲಿ ಬಹುತೇಕರಿಗೆ ಉದ್ಯೋಗ ಹಾಗೂ ಶಿಕ್ಷಣವಿಲ್ಲ. ಅಲ್ಲದೆ ಅಧಿಕೃತ ಮಾಹಿತಿಯ ಪ್ರಕಾರ ಪ್ರತಿ ವರ್ಷ 20 ಲಕ್ಷ ಯುವಜನರು ನಿರುದ್ಯೋಗಿಗಳಾಗುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ಕಾಯಕಲ್ಪದ ಅಗತ್ಯವಿದೆ
ಕಳೆದ 5 ವರ್ಷಗಳಲ್ಲಿ ಸರ್ಕಾರ ಕೇವಲ 3.5 ಲಕ್ಷ ಸರ್ಕಾರಿ ನೇಮಕಾತಿಗಳನ್ನು ಮಾಡಲಾಗಿದ್ದು, ಲಕ್ಷಾಂತರ ಹುದ್ದೆಗಳು ಖಾಲಿ ಉಳಿದಿದೆ. ಉದ್ಯೋಗವನ್ನು ಭರ್ತಿ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಅಲ್ಲದೆ ಇದಕ್ಕೆ ಬೇಕಾದ ಬೊಕ್ಕಸವು ಸರ್ಕಾರದ ಖಜಾನೆಯಲ್ಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಹಣದುಬ್ಬರದ ಪ್ರಮಾಣ ಮಿತಿಮೀರಿದೆ. ವಿದೇಶಿ ವಿನಿಮಯ ದರ ತಳ ಕಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಅದಲ್ಲದೆ ಬಾಂಗ್ಲಾದೇಶದ ಇತಿಹಾಸದಲ್ಲಿ ವಿದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಮಾಡಿದ ಸಾಲವು ತೀವ್ರ ಪ್ರಮಾಣದಲ್ಲಿದೆ. ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಪೊಳ್ಳು ವಾದವನ್ನು ಮಾಧ್ಯಮಗಳ ಮುಂದುಡುತ್ತಿದ್ದ ಪ್ರಧಾನಿ ಹಸೀನಾ ಅವರು ನಿರುದ್ಯೋಗ, ರಾಷ್ಟ್ರದ ಏಳಿಗೆಗೆ ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ನಿರಂಕುಶಾಧಿಕಾರದ ಆಡಳಿತದ ಮೂಲಕ ದೇಶ ಹಾಗೂ ಇಲ್ಲಿನ ಬಡಜನರನ್ನು ಅಧೋಗತಿಗೆ ತಳ್ಳಿದ್ದಾರೆ. ಸರ್ಕಾರದ ದಬ್ಬಾಳಿಕೆಯಿಂದಲೇ ಸಾರ್ವಜನಿಕರ ಕೋಪ ಈಗ ಮುಗಿಲುಮುಟ್ಟಿದೆ ಎಂದು ದೇಶದ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆಡಳಿತ ಪಕ್ಷದ ಪರವಾಗಿದ್ದ ಮೀಸಲಾತಿ ತೀರ್ಪು
ಬಾಂಗ್ಲಾದೇಶದ ಹೈಕೋರ್ಟ್ ಕಳೆದ ಜೂನ್‌ನಲ್ಲಿ ನೀಡಿದ ತೀರ್ಪಿನಲ್ಲಿ 1971ರ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನೆ ಸಿಬ್ಬಂದಿಯ ಮಕ್ಕಳು, ಸಂಬಂಧಿಕರಿಗೆ ಶೇ. 30ರಷ್ಟು ಕೋಟಾ ನೀಡಬೇಕೆಂದು ಆದೇಶ ನೀಡಿತ್ತು. ಇದರಿಂದ ಪ್ರತಿಭಾನ್ವಿತರ ಜೊತೆ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಅಂಗವಿಕಲರಿಗೆ ಅನ್ಯಾಯವಾಗಿತ್ತು. ತೀರ್ಪು ಪ್ರಕಟವಾದ ನಂತರ ಈ ಮೀಸಲಾತಿ ವ್ಯವಸ್ಥೆ ತಾರತಮ್ಯದಿಂದ ಕೂಡಿದೆ. ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಅವಾಮಿ ಲೀಗ್ ಪಕ್ಷದ ಮುಖ್ಯಸ್ಥೆ ಹಾಗೂ ಪ್ರಧಾನಿ ಶೇಖ್ ಹಸೀನಾರ ಬೆಂಬಲಿಗರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಇದರಿಂದ ಪ್ರತಿಭಾವಂತ ಯುವಕರು, ಹಿಂದುಳಿದವರಿಗೆ ಉದ್ಯೋಗ ಸಿಗುತ್ತಿಲ್ಲ, ಬದಲಿಗೆ ಅನರ್ಹರನ್ನು ಸರ್ಕಾರಿ ನೌಕರಿಯಲ್ಲಿ ತುಂಬಲಾಗುತ್ತಿದೆ. ಹಾಗಾಗಿ, ಈ ಮೀಸಲಾತಿ ವ್ಯವಸ್ಥೆ ಕೊನೆಗೊಳಿಸಿ ಮೆರಿಟ್ ಆಧಾರಿತ ನೇಮಕಾತಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.
ಅಲ್ಲದೆ ದೇಶಾದ್ಯಂತ ಹೈಕೋರ್ಟ್ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗಿ ಜುಲೈ 1ರಂದು ಆಂದೋಲನವನ್ನು ಪ್ರಚೋದಿಸಿತು. ಬಾಂಗ್ಲಾದೇಶದಾದ್ಯಂತ ವಿದ್ಯಾರ್ಥಿಗಳು ನ್ಯಾಯಾಲಯದ ಆದೇಶದ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ಆದರೆ, ಪ್ರತಿಭಟನೆ ನಡೆಸಲು ಮುಂದಾದಾಗ ಅಡೆತಡೆಗಳು ಎದುರಾದವು. ಆಡಳಿತ ಪಕ್ಷದ ವಿದ್ಯಾರ್ಥಿ ಘಟಕವು ಈ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ಅದರ ಹೊರತಾಗಿಯೂ ಅದು ಬಹುಮಟ್ಟಿಗೆ ಶಾಂತಿಯುತವಾಗಿತ್ತು. ಏಕೆಂದರೆ ವಿದ್ಯಾರ್ಥಿಗಳು ಆಡಳಿತ ಪಕ್ಷದ ಹಿಂಸಾಚಾರದ ವಿರುದ್ಧ ಸೇಡು ತೀರಿಸಿಕೊಳ್ಳದಿರಲು ನಿರ್ಧರಿಸಿದರು.
ಆದರೆ ಪ್ರತಿಭಟನಾಕಾರರ ಮೇಲೆ ಹಲ್ಲೆ, ಸಾವುನೋವುಗಳು ತೀವ್ರವಾದಾಗ ಹತ್ತಾರು ವಿವಿ ವಿದ್ಯಾರ್ಥಿಗಳು, ಆಡಳಿತ ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಕಾರಣ ಹಿಂಸಾಚಾರ ಭುಗಿಲೆದ್ದಿತು. ಸಂಘರ್ಷದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಪ್ರತಿಭಟನೆ ಹೆಚ್ಚಾದ ನಂತರದಲ್ಲಿ ಮೀಸಲಾತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಸೇನೆಯ ನಿವೃತ್ತ ಸಿಬ್ಬಂದಿಯ ಮಕ್ಕಳು, ಸಂಬಂಧಿಕರಿಗೆ ನೀಡಿದ್ದ ಕೋಟಾವನ್ನು ಶೇ 5ಕ್ಕೆ ಇಳಿಸಿ ಆದೇಶಿಸಿತ್ತು.
ಚುನಾವಣೆ ಬಹಿಷ್ಕರಿಸಿದ್ದ ವಿಪಕ್ಷಗಳು
ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದು, ಜನವರಿಯಲ್ಲಷ್ಟೆ ಸಾರ್ವರ್ತಿಕ ಚುನಾವಣೆಗಳು ನಡೆದಿದ್ದವು. ಸರ್ಕಾರದ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಸೇರಿದಂತೆ ಹಲವಾರು ಕಾರಣಗಳಿಂದ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ಪ್ರಮುಖ ವಿರೋಧ ಪಕ್ಷ ಬಿಎನ್‌ಪಿ ಮತ್ತು ಅದರ ಮಿತ್ರಪಕ್ಷಗಳು ಮತದಾನದ ದಿನ 48 ತಾಸುಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು. ಇವೆಲ್ಲವುಗಳ ಹೊರತಾಗಿಯೂ ಶೇ.40 ರಷ್ಟು ಮತದಾನವಾಗಿ ಶೇಖ್ ಹಸೀನಾ ಅವರು ದಾಖಲೆಯ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಬಾಂಗ್ಲಾದೇಶದ ಉದಯಕ್ಕೆ ಪ್ರಮುಖ ಪಾತ್ರ ವಹಿಸಿದ್ದ ಭಾರತ
ಬಾಂಗ್ಲಾದೇಶ ಎಂದು ಈಗ ಕರೆಯುವ ದೇಶವು 1947ರ ನಂತರ ಪಾಕಿಸ್ತಾನದ ಭಾಗವಾಗಿತ್ತು. ಅದನ್ನು ಪೂರ್ವ ಪಾಕಿಸ್ತಾನವೆಂದು ಕರೆಯಲಾಗುತ್ತಿತ್ತು. 1970ರಲ್ಲಿ ನಡೆದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನೆಲೆಯಾಗಿದ್ದ ಶೇಖ್ ಮುಜೀಬ್ ಉರ್ ರೆಹಮಾನ್ ಅವರ ನೇತೃತ್ವದ ಅವಾಮಿ ಲೀಗ್ ಸ್ಪಷ್ಟ ಬಹುಮತ ಪಡೆಯಿತು. ಆದರೆ ಸೇನೆ ಮೇಲೆ ಹಿಡಿತ ಹೊಂದಿದ್ದ ಪಾಕಿಸ್ತಾನವು ಅವಾಮಿ ಲೀಗ್ ಅಧಿಕಾರ ಸ್ವೀಕರಿಸುವುದನ್ನು ತಡೆಯಲು ಢಾಕಾದಲ್ಲಿ ‘ಆಪರೇಷನ್ ಸರ್ಚ್ ಲೈಟ್’ ಎಂಬ ಹೆಸರಿನಲ್ಲಿ ನರಮೇಧ ನಡೆಸಿ ನೂರಾರು ಜನರನ್ನು ಕೊಲ್ಲಲಾಗಿತ್ತು.
1971ರ ಮಾರ್ಚ್ 25ರಂದು ಪೂರ್ವ ಪಾಕಿಸ್ತಾನವನ್ನು ಸ್ವತಂತ್ರ, ಸಾರ್ವಭೌಮ ಬಾಂಗ್ಲಾದೇಶ ಎಂದು ಘೋಷಿಸಲಾಯಿತು. ಇದರ ವಿರುದ್ಧ ಪಾಕಿಸ್ತಾನವು ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ನರಮೇಧ ನಡೆಸಿತು. ಆ ಸಂದರ್ಭದಲ್ಲಿ ಲಕ್ಷಾಂತರ ಬಂಗಾಳಿ ಸಮುದಾಯದವರು ಜೀವ ಉಳಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ವಲಸೆ ಬಂದರು. ಬಾಂಗ್ಲಾದೇಶದ ಜನರು ತಮ್ಮ ದೇಶದ ರಕ್ಷಣೆಗಾಗಿ ಪಾಕ್ ಸೇನೆಯ ವಿರುದ್ಧ ಹೋರಾಟ ನಡೆಸಲು ಸಂಘಟಿತರಾದರು. ಈ ಹೋರಾಟಕ್ಕೆ ಭಾರತವು ಎಲ್ಲ ರೀತಿಯ ನೆರವು ನೀಡಿತು. ಬಾಂಗ್ಲಾ ಪರ ನಿಂತ ಕಾರಣ ಭಾರತದ ಮೇಲೆ ಪಾಕ್ ಯುದ್ಧ ಸಾರಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆದೇಶದ ಮೇರೆಗೆ ಕೆಚ್ಚೆದೆಯ ಹೋರಾಟ ನಡೆಸಿದ ಭಾರತೀಯ ಸೇನೆ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶದ ಸ್ವತಂತ್ರ ದೇಶದ ಉದಯಕ್ಕೆ ಕಾರಣವಾಗಿತ್ತು. 1972ರಲ್ಲಿ ಶೇಖ್ ಮುಜೀಬ್ ಉರ್ ರೆಹಮಾನ್ ಅವರು ಬಾಂಗ್ಲಾದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
ನಿಲ್ಲದ ಹಿಂಸಾಚಾರ
ಶೇಖ್ ಹಸೀನಾ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ದೇಶಾದ್ಯಂತ ಒಂದು ದಿನದಲ್ಲಿ ನಡೆದ ಹಿಂಸಾಚಾರದಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅವಾಮಿ ಲೀಗ್ ಪಕ್ಷ ಹಾಗೂ ವಿಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳ ನಡುವಿನ ಕಾಳಗ ಮಾತ್ರ ಇನ್ನೂ ನಿಂತಿಲ್ಲ. ರಾಷ್ಟ್ರದ ಹಲವು ಕಡೆಗಳಿಂದ ಹಿಂಸಾಚಾರದ ಪ್ರಕರಣಗಳು ಮತ್ತಷ್ಟು ವರದಿಯಾಗುತ್ತಿವೆ. ಈ ನಡುವೆ ಸೇನೆ ಮಧ್ಯಂತದ ಸರ್ಕಾರ ರಚಿಸುವುದಾಗಿ ಜನತೆಗೆ ತಿಳಿಸಿದೆ.