ಈಗಾಗಲೇ ಹೆಚ್ಚಿನ ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಬಾಂಗ್ಲಾ, ಪ್ರತಿಭಟನೆಯ ಕಾರಣದಿಂದಾಗಿ ಮತ್ತಷ್ಟು ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿವೆ. ಪ್ರತಿಭಟನೆಯನ್ನು ಶಮನಗೊಳಿಸುವುದು ಸವಾಲಾಗಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಸರ್ಕಾರಿ ಉದ್ಯೋಗ ಮೀಸಲಾತಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಗಳು ಇಲ್ಲಿಯವರೆಗೆ ಕನಿಷ್ಠ ಎಂದರೂ 100 ಮಂದಿ ಸಾವಿಗೆ ಕಾರಣವಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ದೇಶ ತೊರೆದಿದ್ದಾರೆ. ಬಾಂಗ್ಲಾ ಸೇನೆ ಮಧ್ಯಂತರ ಸರ್ಕಾರ ರಚಿಸಲಿದೆ ಎಂದು ಸೇನಾ ಮುಖ್ಯಸ್ಥ ವಕಾರ್–ಉಝ್–ಝಮಾನ್ ಹೇಳಿದ್ದಾರೆ. ಈಗಾಗಲೇ ಹೆಚ್ಚಿನ ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಬಾಂಗ್ಲಾ, ಪ್ರತಿಭಟನೆಯ ಕಾರಣದಿಂದಾಗಿ ಮತ್ತಷ್ಟು ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿವೆ. ಪ್ರತಿಭಟನೆಯನ್ನು ಶಮನಗೊಳಿಸುವುದು ಸವಾಲಾಗಿದೆ.
ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿನ್ನೆಲೆ
1971 ಡಿಸೆಂಬರ್ 16 ರಂದು ಬಾಂಗ್ಲಾದೇಶವು ಪಾಕಿಸ್ತಾನದಿಂದ ವಿಭಜನೆಗೊಂಡು ಸ್ವತಂತ್ರವಾಯಿತು (ಅವಾಮಿ ಲೀಗ್ ಮೂಲಕ ಶೇಖ್ ಮುಜಿಬುರ್ ರೆಹಮಾನ್ ಈ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು). ನಂತರ ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿ ವ್ಯವಸ್ಥೆಯನ್ನು ಸೆಪ್ಟೆಂಬರ್ 5, 1972ರಲ್ಲಿ ಅಧಿಸೂಚಿಸಲಾಯಿತು. ಇದರಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆಗಳಲ್ಲಿ ಶೇ.30 ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಶೇ.10 ಮಹಿಳೆಯರಿಗೆ, ಶೇ.10 ಹಿಂದುಳಿದ ಜಿಲ್ಲೆಗಳಿಗೆ, ಬುಡಕಟ್ಟು ಸಮುದಾಯಗಳ ಸದಸ್ಯರಿಗೆ ಶೇ.5 ಮತ್ತು ಅಂಗವಿಕಲರಿಗೆ ಶೇ.1 ಮೀಸಲಿಡಲಾಯಿತು.
ಶೇಖ್ ಮುಜಿಬುರ್ ರೆಹಮಾನ್ ಹತ್ಯೆಯ ನಂತರದ ಪರಿಸ್ಥಿತಿ
ಆಗಸ್ಟ್ 1975ರಲ್ಲಿ ಬಾಂಗ್ಲಾದೇಶದ ಮೊದಲ ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಯ ನಂತರ 1996 ರವರೆಗೆ ಈ ಮೀಸಲಾತಿಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲಾಯಿತು. ಶೇಖ್ ಮುಜಿಬುರ್ ರೆಹಮಾನ್ ಅವರ ಮಗಳು ಶೇಖ್ ಹಸೀನಾ ಮೊದಲ ಬಾರಿಗೆ ಪ್ರಧಾನಿಯಾದರು. ಅವರ ಆಡಳಿತದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೀಸಲಾತಿಯ ಪ್ರಯೋಜನಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೂ ವಿಸ್ತರಿಸಲಾಯಿತು.
2001ರ ನಂತರದ ಪರಿಸ್ಥಿತಿ
2001ರಲ್ಲಿ ಅವಾಮಿ ಲೀಗ್ ಅಧಿಕಾರ ಕಳೆದುಕೊಂಡ ನಂತರ ಸ್ವಾತಂತ್ರ್ಯ ಹೋರಾಟಗಾರರ ಮೀಸಲಾತಿ ಜಾರಿ ಪ್ರಕ್ರಿಯೆಯು ಮತ್ತೆ ನಿಧಾನವಾಯಿತು. ಆದರೆ, 2009ರಲ್ಲಿ ಮತ್ತೆ ಹಸೀನಾ ಪ್ರಧಾನಿಯಾಗಿ ಮರಳಿದರು. ಎರಡು ವರ್ಷಗಳ ನಂತರ ಸ್ವಾತಂತ್ರ್ಯ ಹೋರಾಟಗಾರರ ಮೀಸಲಾತಿಯ ಪ್ರಯೋಜನಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳಿಗೂ ಲಭ್ಯವಾಗುವಂತೆ ಕ್ರಮ ವಹಿಸಿದರು.
2018ರಲ್ಲಿ ಮೀಸಲಾತಿ ರದ್ದು
2018ರಲ್ಲಿ ಅಂದಿನ ಹಸೀನಾ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರ ಮತ್ತು ಇತರ ಮೀಸಲಾತಿಗಳನ್ನು ಪ್ರಧಾನ ಮಂತ್ರಿಯ ಕಾರ್ಯಕಾರಿ ಆದೇಶದ ಮೂಲಕ ರದ್ದುಗೊಳಿಸಿತು. ನಂತರ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯದ ಹೈಕೋರ್ಟ್ ವಿಭಾಗವು 2024 ಜೂನ್ 5ರ ತನ್ನ ಆದೇಶದಲ್ಲಿ, ಸರ್ಕಾರದ ಈ ನಿರ್ಧಾರವು ಅನಿಯಂತ್ರಿತವಾಗಿದೆ ಎಂದು ತೀರ್ಪು ನೀಡಿತು. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಸಂತತಿಯು ದೇಶದ ನಾಗರಿಕರಲ್ಲಿ ಅತ್ಯಂತ ಹಿಂದುಳಿದ ವಿಭಾಗಗಳಲ್ಲಿ ಒಂದಾಗಿ ಉಳಿದಿದೆ. ಮೀಸಲಾತಿಯ ಮರುಜಾರಿಯಾಗಬೇಕು ಎಂದು ಹೇಳಿತು.
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ?
ಸರ್ಕಾರಿ ನೌಕರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಶೇ.30ರಷ್ಟು ಮೀಸಲಾತಿಯ ಮರುಜಾರಿಯನ್ನು ವಿರೋಧಿಸಿ ಪ್ರತಿಭಟನೆಗಳು ಭುಗಿಲೆದ್ದವು. ಪ್ರತಿಭಟನೆಯ ನೇತೃತ್ವವನ್ನು ಬಾಂಗ್ಲಾದೇಶದ ಯುವಕರು ವಹಿಸಿದರು. ಪಾಕಿಸ್ತಾನದಿಂದ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಮತ್ತು ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಎಲ್ಲ ಹಂತಗಳಲ್ಲಿ ಸರ್ಕಾರಿ ಉದ್ಯೋಗದಲ್ಲಿ 30% ಮೀಸಲಾತಿ ನೀಡುವುದನ್ನು ಅವರು ವಿರೋಧಿಸಿದರು.
ಬಾಂಗ್ಲಾದೇಶದ ಪ್ರಧಾನಿ ನೀಡಿದ ಹೇಳಿಕೆ
“ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಮತ್ತು ಮೊಮ್ಮಕ್ಕಳು ಪ್ರತಿಭಾವಂತರಲ್ಲವೇ? ರಜಾಕಾರರ ಮಕ್ಕಳು ಮತ್ತು ಮೊಮ್ಮಕ್ಕಳು ಮಾತ್ರ ಪ್ರತಿಭಾವಂತರೇ? ಅವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಏಕೆ ಇಷ್ಟೊಂದು ದ್ವೇಷ? ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳಿಗೆ ಮೀಸಲಾತಿ ಸೌಲಭ್ಯ ಸಿಗದಿದ್ದರೆ ಅದರ ಲಾಭ ರಜಾಕಾರರ ಮೊಮ್ಮಕ್ಕಳಿಗೆ ಸಿಗಬೇಕೇ?” ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಕೆಲವು ದಿನಗಳ ಹಿಂದೆ ಹೇಳಿದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಡವನ ಬದುಕು ಬದಲಿಸಿದ ರಾಹುಲ್ ಗಾಂಧಿ ಮತ್ತು ಮೋದಿ
ಈ ಹೇಳಿಕೆಯಿಂದ ಪರಿಸ್ಥಿತಿಯು ಮತ್ತಷ್ಟು ಉದ್ವಿಗ್ನಗೊಂಡಿತು. ಇದರಲ್ಲಿ ಅವರು ಪ್ರತಿಭಟನಾಕಾರರನ್ನು ರಜಾಕಾರರ ವಂಶಸ್ಥರೊಂದಿಗೆ ಸಮೀಕರಿಸಿ ಹೊಲಿಸಿದಂತಿತ್ತು. (ರಜಾಕಾರರು ಪಾಕಿಸ್ತಾನದ ಮಿಲಿಟರಿಯ ಕೂಲಿ ಸಹಯೋಗಿಗಳಾಗಿದ್ದು, ಅವರು ಕೊಲೆ ಮತ್ತು ಅತ್ಯಾಚಾರದ ಕ್ರೂರ ಅಭಿಯಾನವನ್ನು ಮುನ್ನಡೆಸಿದ್ದರು. ಇದರಲ್ಲಿ 1971ರಲ್ಲಿ ಕೆಲವು ತಿಂಗಳುಗಳ ಅಂತರದಲ್ಲಿ ಸುಮಾರು 30 ಲಕ್ಷ ಬಾಂಗ್ಲಾದೇಶಿಗಳು ಕೊಲ್ಲಲ್ಪಟ್ಟರು ಎಂದು ಅಂದಾಜಿಸಲಾಗಿದೆ)
ನ್ಯಾಯಾಲಯದ ಆದೇಶದಿಂದ ಹಿಂಸಾಚಾರ ನಡೆದಿದೆ
ಜೂನ್ 5 ರಂದು, ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ನ ಹೈಕೋರ್ಟ್ ವಿಭಾಗವು ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ 30% ಉದ್ಯೋಗ ಮೀಸಲಾತಿಯನ್ನು ಮರುಸ್ಥಾಪಿಸಿತು. ಈ ಮೀಸಲಾತಿಗಳನ್ನು ತೆಗೆದುಹಾಕುವ 2018ರ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿತು.
ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸರ್ಕಾರ ಸಹಮತ ವ್ಯಕ್ತಪಡಿಸಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್‌ನ ತೀರ್ಪನ್ನು ಅಮಾನತುಗೊಳಿಸಿದೆ. ಆಗಸ್ಟ್ 7 ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಮೀಸಲಾತಿಯನ್ನು ಶೇ.10ಕ್ಕೆ ಮಿತಿಗೊಳಿಸಬೇಕು ಎಂದು ಆಗ್ರಹಿಸಿ ಏಪ್ರಿಲ್‌ನಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಘರ್ಷಣೆಯು ಪೊಲೀಸರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ ಛತ್ರ ಲೀಗ್‌ನೊಂದಿಗೆ ನಡೆಯುತ್ತಿದೆ.
ಪ್ರಸ್ತುತ ಬಾಂಗ್ಲಾದೇಶದ ಆರ್ಥಿಕತೆ ಮತ್ತು ಉದ್ಯೋಗದ ಸ್ಥಿತಿಗತಿ
ತಜ್ಞರ ಪ್ರಕಾರ, ಹೆಚ್ಚಿನ ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಕುಗ್ಗುತ್ತಿರುವ ವಿದೇಶಿ ವಿನಿಮಯ ಮೀಸಲು ಸೇರಿದಂತೆ ಆರ್ಥಿಕ ಅಸಮಾಧಾನದಿಂದ ಹಿಂಸಾಚಾರವು ಈಗ ವ್ಯಾಪಕ ರೂಪ ಪಡೆಯುತ್ತಿದೆ. ಸರ್ಕಾರಿ ಉದ್ಯೋಗಗಳು ನಿಗದಿತ ವೇತನ ಮತ್ತು ಭದ್ರತೆಯ ಕಾರಣದಿಂದಾಗಿ ಬಾಂಗ್ಲಾದೇಶದಲ್ಲಿ ಇವುಗಳಿಗೆ ಹೆಚ್ಚು ಬೇಡಿಕೆಯಿದೆ. 2019 ಮತ್ತು 2023 ರ ನಡುವೆ ಕೇವಲ 3.5 ಲಕ್ಷ ಸರ್ಕಾರಿ ನೇಮಕಾತಿಗಳನ್ನು ಮಾಡಲಾಗಿದ್ದು, ಪ್ರಸ್ತುತ 5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ.