“ಹೊಸದುರ್ಗವು ಪುರಾತನ ಹಿನ್ನೆಲೆಯನ್ನು ಹೊಂದಿದ್ದು, ಈ ಪಾವಿತ್ರ್ಯತೆಗೆ ಅಕ್ರಮ ಮದ್ಯ ಮಾರಾಟವು ಕಪ್ಪು ಚುಕ್ಕೆಯಾಗಿದೆ. ಅದನ್ನು ತೊಡೆದು ಹಾಕುವ ದೃಷ್ಟಿಯಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ಜೀವನ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಹೊಸದುರ್ಗ ತಿಳಿಸಿದರು.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೊಸದುರ್ಗ ಗ್ರಾಮದಲ್ಲಿ ಜೀವನ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ 8ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀರಾಮಚಂದ್ರ ಗುಡಿಯ ಆವರಣದಲ್ಲಿ “ಅಕ್ರಮ ಮದ್ಯ ಮಾರಾಟದಿಂದ ಗ್ರಾಮೀಣ ಪ್ರದೇಶದ ಜನರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮತ್ತು ಜಾಗೃತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, “ಐದು ಸಾವಿರ ವರ್ಷಗಳ ಹಿಂದೆಯೇ ಭಗವಾನ್ ಬುದ್ದರು ಮದ್ಯ ಮಾದಕಗಳ ಸೇವನೆಯನ್ನು ಮಾಡದ ಶುದ್ಧ ಜೀವನ ನಡೆಸುವ ಶಪಥವನ್ನು ನನಗೆ ನಾನೇ ಹಾಕಿಕೊಳ್ಳುತ್ತೇನೆ ಎಂಬ ತತ್ವವನ್ನು ಸಾರಿ ಜೀವನದ ಮೌಲ್ಯವನ್ನು ಸಾರಿದ್ದರು. ಇಂದು ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ” ಎಂದರು.

ಅಧ್ಯಕ್ಷ್ಯತೆ ವಹಿಸಿ ಮಾತನಾಡಿದ ಪಂಚಾಯತಿ ಅಧ್ಯಕ್ಷರಾದ ರಮೇಶ್, “ಗ್ರಾಮೀಣ ಜನರ ಆರೋಗ್ಯ ನೈರ್ಮಲ್ಯದ ಜೊತೆಗೆ ಜನ ಬದುಕಿಗೆ ಉತ್ತಮ ವಾತಾವರಣ ಕಲ್ಪಿಸುವುದು ಗ್ರಾಮ ಪಂಚಾಯತಿಯ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹೊಸದುರ್ಗ ಗ್ರಾಮ ಪಂಚಾಯತಿಯ ಸರ್ವ ಸದಸ್ಯರ ನಿರ್ಣಯ ಕೈಗೊಂಡಿದ್ದು, ಮುಂದೆ ಯಾರಾದರೂ ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಮಾರಾಟಗಾರರು, ಹಾಗೂ ಪೂರೈಕೆದಾರರ ಎದುರು ದಂಡ ಇಲ್ಲವೇ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಇಡೀ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಇನ್ನು ಮುಂದೆ ಅಕ್ರಮ ಮದ್ಯ ಮಾರಾಟ ನಿಷೇಧಿಸಿದ್ದೇವೆ. ಈ ನಿರ್ಣಯ ಕೈಗೊಂಡ ತಾಲೂಕಿನ ಮೊದಲ ಪಂಚಾಯತಿ ನಮ್ಮದಾಗಿದೆ” ಎಂದರು.
ಅಬಕಾರಿ ಅಧೀಕ್ಷಕರಾದ ಪ್ರದೀಪ್ ಮಾತನಾಡಿ, “ಅಕ್ರಮ ಮದ್ಯ ಮಾರಾಟದ ಮಾಹಿತಿ ನೀಡಿದರೆ ನಾವು ಕ್ರಮ ಕೈಗೊಳ್ಳಲು ಸಿದ್ದ” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕವಿಯತ್ರಿ , ಲೇಖಕಿ ರೂಪ ಹೊಸದುರ್ಗ ರವರಿಗೆ “ಜೀವನ ಸಾಹಿತ್ಯ ರತ್ನ ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಘು, ನಾರಾಯಣ, ಗ್ರಾಮ ಪಂಚಾಯತಿ ಸದಸ್ಯರಾದ ರಾಮಚಂದ್ರ, ನಾಗರಾಜ್ , ಗ್ರಾಮದ ಮುಖಂಡರಾದ ಮಲ್ಲೇಶ್, ಪುಟ್ಟೇಗೌಡ, ಗೋವಿಂದಯ್ಯ, ರವಿಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

