‘ವಚನ ದರ್ಶನ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜ ಯೋಗೇಂದ್ರ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಾನಿಧ್ಯ ವಹಿಸಲು ಮೂರುಸಾವಿರ ಮಠ ಸ್ವಾಮೀಜಿಗಳನ್ನು ಆಹ್ವಾನಿಸಲಾಗಿತ್ತು. ಈ ಕುರಿತು ಸ್ವಾಮೀಜಿ ಮಾತನಾಡಿ, ‘ವಚನ ದರ್ಶನ’ ಅಂತ ಪುಸ್ತಕದ ಮೇಲೆ ಬರೆದ್ದಿದ್ದಕ್ಕೆ ನಾನು ತಕ್ಷಣ ಒಪ್ಪಿಕೊಂಡಿದ್ದೆ. ನಂತರ ಅದು ದೋಷಪೂರಿತ ಪುಸ್ತಕ ಎಂದು ಗೊತ್ತಾಗಿದೆ. ಆದ್ದರಿಂದ ನಾವು ಕಾರ್ಯಕ್ರಮಕ್ಕೆ ಹೋಗುವುದಿಲ್ಲ” ಎಂದು ‘ಬಸವ ಭಕ್ತರ ಅನುಯಾಯಿಗಳ ಒಕ್ಕೊಟ’ದ ಪರವಾಗಿ ಸ್ವಾಮೀಜಿ ಭೇಟಿ ಮಾಡಿದ ತಂಡಕ್ಕೆ ತಿಳಿಸಿದರು.
“ಶರಣರು ವೇದಗಳನ್ನು, ಆಗಮಗಳನ್ನು ಒಪ್ಪಿಕೊಂಡಿಲ್ಲ ಮತ್ತು ಅವುಗಳನ್ನು ವಿರೋಧಿಸಿ ಸಾಕಷ್ಟು ವಚನಗಳನ್ನು ಬರೆದಿದ್ದಾರೆ. ಇನ್ನೊಂದು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀಗಳು ಬಸವಣ್ಣನವರನ್ನು ಹಿಂದೆ, ಇಂದು, ಮುಂದೆಯೂ ಹಿಂದೂ ಎಂದು ಕರೆದು ವಿವಾದ ಎಬ್ಬಿಸಿದ್ದರು. ಬಸವಣ್ಣನವರು ಲಿಂಗಾಯತರೋ ಅಥವಾ ಹಿಂದುಗಳೊ ಎಂದು ಸ್ವಾಮೀಜಿಯವರನ್ನು ಒಕ್ಕೂಟದ ತಂಡ ಕೇಳಿದಾಗ ಬಸವಣ್ಣನವರು ಹಿಂದೂ ಅಲ್ಲ ಲಿಂಗಾಯತ ಎಂದು ತಿಳಿಸಿದರು.
ವಚನ ದರ್ಶನ ಪುಸ್ತಕದ ವಿವಾದಕ್ಕೆ ಪ್ರತಿಯಾಗಿ ಲಿಂಗಾಯತರೆಲ್ಲಾ ಸಂಘಟಿತರಾಗಿ ನಿಜ ವಿಚಾರಗಳನ್ನು ಜನರಿಗೆ ತಲುಪಿಸಬೇಕು, ಜನರು ಒಳಪಂಗಡದ ಹೆಸರುಗಳನ್ನು ಹೇಳುವುದನ್ನು ಬಿಟ್ಟು, ಕೇವಲ ಲಿಂಗಾಯತ ಎಂದು ಹೇಳುವುದನ್ನು ಶುರು ಮಾಡಬೇಕು, ನಮ್ಮದು ಯಾವುದೇ ಒಂದು ಉಪಪಂಗಡಕ್ಕೆ ಸೇರಿದ ಮಠ ಅಲ್ಲ. ಇದು ಒಂದು ಲಿಂಗಾಯತ ಮಠ ಮಾತ್ರ ಎಂದರು.
ಒಕ್ಕೊಟದ ತಂಡ ವಚನ ದರ್ಶನ ಪುಸ್ತಕದ ಬೆಂಬಲಕ್ಕೆ ನಿಂತಿರುವ ಮಠಾಧಿಪತಿಗಳಿಗೆ ಕೇಳಿರುವ 10 ಪ್ರಶ್ನೆಗಳ ಒಂದು ಪ್ರತಿಯನ್ನು ಶ್ರೀಗಳಿಗೆ ಕೊಟ್ಟಿತು. ಅದನ್ನು ಸ್ವೀಕರಿಸಿ ಶ್ರೀಗಳು ಎಲ್ಲ ಪ್ರಶ್ನೆಗಳು ಸರಿಯಾಗಿವೆ ಎಂದರು.
ವಚನ ದರ್ಶನ ಪುಸ್ತಕದ ಕಾರ್ಯಕ್ರಮಗಳಿಗೆ ಹೋಗುತ್ತಿರುವ ಲಿಂಗಾಯತ ಸ್ವಾಮೀಜಿಗಳಿಗೆ ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ್ ಎಸ್ ಚೋಂಡಿ ಸುಮಾರು 10 ಪ್ರಶ್ನೆಗಳನ್ನು ಕೇಳಿದ್ದು, ಉತ್ತರಿಸಲು ಆಗ್ರಹಿಸಿದ್ದಾರೆ.
ನೀವು ಬಸವ ಅನುಯಾಯಿಗಳೆ? ಬಸವ ತತ್ವದ ಬಗ್ಗೆ ನಿಮಗೆ ನಂಬಿಕೆಯಿದೆಯೇ? 12ನೇ ಶತಮಾನದಲ್ಲಿ ಶರಣ ಚಳುವಳಿ ದುರಂತ ಅಂತ್ಯ ಕಾಣಲು ಕಾರಣವೇನು? ಬಸವಣ್ಣನವರನ್ನು ವಿರೋಧಿಸಿದವರಲ್ಲಿ ಯಾರು ಪ್ರಮುಖರು? ಯಾವ ಕಾರಣದಿಂದ ಅವರು ಬಸವಣ್ಣನವರನ್ನು ವಿರೋಧಿಸಿದರು? ಬಸವಣ್ಣ ಜಾತೀಯತೆ, ವರ್ಣ, ವೈದಿಕ ಆಚರಣೆ, ವೇದ ಉಪನಿಷತ್ತುಗಳನ್ನು ಒಪ್ಪಿಕೊಂಡಿದ್ದರೆ ಅಥವಾ ಇಲ್ಲವೇ? ಕಾರಣ ಕೊಡಿ? ವಚನ ದರ್ಶನ ಪುಸ್ತಕ ಮುಖ್ಯ ವಾದವೆಂದರೆ ವಚನಗಳು ವೇದ, ಉಪನಿಷತ್ತುಗಳನ್ನು ವಿರೋಧಿಸಲಿಲ್ಲ ಎನ್ನುವುದು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಬಸವಣ್ಣ ಹಿಂದು ಇಂದು ಮುಂದು ಒಬ್ಬ ಹಿಂದೂ ಅಂತ ಕೆಲವರು ಹೇಳಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ವಚನ ದರ್ಶನ ಪುಸ್ತಕವನ್ನು ಸಹಸ್ರಾರು ಲಿಂಗಾಯತರು ವಿರೋಧಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ವ್ಯಾಪಕ ಟೀಕೆಯಾಗುತ್ತಿದೆ? ಇದಕ್ಕೆ ಕಾರಣವೇನು? ವಚನ ದರ್ಶನ ಪುಸ್ತಕದ ಹಿಂದೆ ಇರುವ ವ್ಯಕ್ತಿ, ಸಂಘಟನೆಗಳು ಯಾವುವು? ಅವರ ಉದ್ದೇಶವೇನು? ಸಂಘ ಪರಿವಾರದವರು ಪದೇ ಪದೇ ಬಸವಣ್ಣನವರ ಮೇಲೆ, ವಚನಗಳ ಮೇಲೆ ಈ ತರಹದ ಕಾರ್ಯಕ್ರಮಗಳನ್ನು ಮಾಡುತ್ತಿರಲು ಕಾರಣವೇನು? ಇಷ್ಟೊಂದು ವಿವಾದ ಹುಟ್ಟು ಹಾಕಿರುವ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಹೋಗಿ ಲಿಂಗಾಯತರ ವಿರೋಧ ಕಟ್ಟಿಕೊಳ್ಳಲು ತಯಾರಿದ್ದೀರಿ. ಇದಕ್ಕೆ ಕಾರಣವೇನು? ಎಂದು ಕೇಳಿದ್ದಾರೆ.
ಕುಮಾರಣ್ಣ ಪಾಟೀಲ, ಬಸವರಾಜ್ ಹೊಲ್ಲೋಳಿ, ಚಿಂತಾಮಣಿ ಸಿಂದಗಿ, ಗುರುರಾಜ್ ಅವರಾದಿ ಒಕ್ಕೂಟದ ಮುಂತಾದವರು ಇದ್ದರು.
