ಬೆಂಗಳೂರಿನಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಕಳೆದ 12 ವರ್ಷಗಳಲ್ಲಿ 485 ಹೆಣ್ಣುಮಕ್ಕಳು ನಾಪತ್ತೆಯಾಗಿದ್ದು, ಈವರೆಗೆ ಯಾರೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಕೌಟುಂಬಿಕ ಕಲಹ, ಮನಸ್ತಾಪ, ಪ್ರೇಮ ಪ್ರಕರಣ, ಅಪಹರಣ, ಕಳ್ಳಸಾಗಣೆಯಂತಹ ಕಾರಣಗಳಿಂದ ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ತಮ್ಮ ಮನೆಯ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಲು ಹಿಂದೇಟು ಹಾಕುವ ಕುಟುಂಬಸ್ಥರು, ಅವರದ್ದೇ ರೀತಿಯಲ್ಲಿ ಹುಡುಕಲು ಯತ್ನಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಕಳೆದ 12 ವರ್ಷಗಳಲ್ಲಿ 16 ವರ್ಷಗೊಳಗಿನ 162 ಬಾಲಕಿಯರು, 17ರಿಂದ 18 ವರ್ಷ ವಯಸ್ಸನ 82 ಹುಡುಗಿಗರು, 19ರಿಂದ 21 ವರ್ಷದೊಳಗಿನ 173 ಯುವತಿಯರು ಹಾಗೂ 22 ವರ್ಷ ಮೇಲ್ಪಟ್ಟ 58 ಯುವತಿಯರು ಕಾಣೆಯಾಗಿದ್ದಾರೆ. ಅವರಲ್ಲಿ ಯಾರೂ ಕೂಡ ಪತ್ತೆಯಾಗಿಲ್ಲ. ಅದರಲಲೂ ಕಾಣೆಯಾದ ಹೆಣ್ಣುಮಕ್ಕಳ ಪೈಕಿ 70%ರಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ ಎಂದು ವರದಿಗಳು ಹೇಳಿವೆ.
“ಕಾಣೆಯಾಗಿದ್ದ ಹೆಣ್ಣುಮಕ್ಕಳು ಮರಳಿ ಮನೆಗೆ ಬಂದರೆ, ನೆರೆಹೊರೆಯವರಿಂದ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ನಾನಾ ರೀತಿಯ ಆರೋಪಗಳಿಗೆ ಅವರು ತುತ್ತಾಗುತ್ತಾರೆ ಎಂಬ ಭಯದಿಂದ ಕುಟುಂಬಸ್ಥರು ತನಿಖೆಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಹೀಗಾಗಿ, ಕೆಲವು ಪ್ರಕರಣಗಳಿಗೆ ಯಾವುದೇ ಸ್ಪಂದನೆ ಸಿಗದೆ, ಕೈಬಿಡುವ ಸಂದರ್ಭ ಎದುರಾಗುತ್ತದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.