ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಹೊಲಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಾವಳಿ ಗ್ರಾಮದಲ್ಲಿ ಅನೈರ್ಮಲ್ಯದ ಪರಿಣಾಮ ಸಾರ್ವಜನಿಕರು ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುತ್ತಿದ್ದಾರೆ.
“ಕಾಲಿಟ್ಟ ಕಡೆ ಗಲೀಜು, ಅಸ್ವಚ್ಛತೆ, ಎಲ್ಲೆಡೆ ಹರಿಯುತ್ತಿರುವ ದುರ್ವಾಸನೆಯುಕ್ತ ಮಲಿನ ನೀರಿನಿಂದಾಗಿ ಮಿತಿಮೀರಿದ ಸೊಳ್ಳೆಗಳ ಕಾಟ ಆರಂಭವಾಗಿದೆ. ನಿತ್ಯ ಅಪಾಯಕಾರಿ ಸ್ಥಿತಿಯಲ್ಲಿ ಇಲ್ಲಿನ ನಿವಾಸಿಗಳು ಓಡಾಟ ನಡೆಸುವಂತಾಗಿದೆ. ಇದೆಲ್ಲಾ ಗೊತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ” ಎಂದು ಸಾವಳಿ ಗ್ರಾಮಸ್ಥರು ಆರೋಪಿಸಿದರು.
ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಗ್ರಾಮಸ್ಥರು “ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕೂಡಾ ಆಮೆಗತಿಯಲ್ಲಿ ನಡೆಯುತ್ತಿದ್ದು, ರಸ್ತೆಯ ಮಧ್ಯಭಾಗದಲ್ಲಿ ಅಗೆದಿದ್ದಾರೆ. ಇದರಲ್ಲಿ ಕೊಳಚೆ ನೀರು, ಮಳೆನೀರು ಸಂಗ್ರಹವಾಗಿ ರಸ್ತೆಯ ತುಂಬೆಲ್ಲಾ ಹಾಗೂ ಬಡಾವಣೆಗಳಲ್ಲಿ ದುರ್ವಾಸನೆ ಬೀರುತ್ತಿದೆ. ಗ್ರಾಮದಲ್ಲಿ ಡೆಂಘೀ, ಮಲೇರಿಯಾ, ಚಿಕುಂಗುನ್ಯಾ ಸೇರಿದಂತೆ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು ವಿವಿ 17ನೇ ಘಟಿಕೋತ್ಸವ; 11,988 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
“ಗ್ರಾಮದಲ್ಲಿ ಈಗಾಗಲೇ ಹಲವರು ನಾನಾ ರೋಗಗಳಿಂದ ಬಳಲುತ್ತಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಗಳೂ ಇತ್ತ ತಿರುಗಿ ನೋಡಿಲ್ಲ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕು” ಎಂದು ಸಾವಳಿ ಗ್ರಾಮಸ್ಥರು ಆಗ್ರಹಿಸಿದರು.