ಆರೋಗ್ಯವಂತ ಸಮಾಜಕ್ಕೆ ತಾಯಿ-ಮಗುವಿನ ಆರೈಕೆ ಎಷ್ಟು ಅವಶ್ಯವೋ, ಅದೇ ರೀತಿ ಮಗುವಿಗೆ ಸ್ತನ್ಯ ಪಾನವೇ ಅತ್ಯುತ್ತಮ ಆರೋಗ್ಯ ಎಂಬ ಅರಿವು ಗ್ರಾಮೀಣ ಭಾಗದಲ್ಲಿ ತಿಳಿಸಲಾಗಿದೆ. ಮಗುವಿಗೆ ರೋಗ ನಿರೋಧಕ ಶಕ್ತಿ ಹಾಗೂ ಪೌಷ್ಟಿಕಾಂಶ ಯತೇಚ್ಛವಾಗಿ ತಾಯಿ ಹಾಲು ನೀಡುವ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ನಡಲಾಗುತ್ತಿದೆ ಎಂದು ಸಿಡಿಪಿಒ ಮಹೇಶ್ ತಿಳಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಎಂ ಎಚ್ ಪಟ್ಟಣದ ಅಂಗನವಾಡಿ ಕೇಂದ್ರದ ಬಳಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಆರೋಗ್ಯ ದೃಷ್ಟಿಯಿಂದ ಬಾಣಂತಿ ಮಗುವಿಗೆ ಸೂಕ್ತ ಆಹಾರ ಕ್ರಮ ಅನುಸರಿಸಲಾಗುತ್ತದೆ. ಆದರೆ ಕೆಲವರು ಮೂಢನಂಬಿಕೆ ಮೌಢ್ಯದಂತಹ ಅಂಶ ಬಳಸುವ ಪದ್ಧತಿ ಬಗ್ಗೆ ಎಚ್ಚರಿಕೆ ನೀಡುವ ಕೆಲಸ ಸ್ಥಳೀಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಿಳಿ ಹೇಳಬೇಕು” ಎಂದು ಸಲಹೆ ನೀಡಿದರು.
“ತಾಯಿ ಹಾಲು ಅಮೃತಕ್ಕೆ ಸಮಾನ. ಮಗು ಜನಿಸಿದ ತಕ್ಷಣ ತಾಯಿಯ ಹಾಲನ್ನು ನೀಡಬೇಕು, ಹೊರಗಿನ ಹಾಲನ್ನು ಹಾಕದೆ ತಾಯಿ ಹಾಲನ್ನೇ ಅತಿ ಹೆಚ್ಚು ಹಾಕಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ವಿಶ್ವ ಸ್ತನ್ಯಪಾನ ಸಪ್ತಾಹ 2024ರ ಘೋಷ ವಾಕ್ಯ ‘ಕೊರತೆಗಳನ್ನು ಕೊನೆಗೊಳಿಸಿ ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ’ ಎನ್ನುವ ಘೋಷವಾಕ್ಯದಂತೆ ಗರ್ಭಿಣಿ ಮತ್ತು ಬಾಣಂತಿಯರು ಹಾಗೂ ಮಕ್ಕಳ ತಾಯಂದಿರಿಗೆ ಎದೆಯ ಹಾಲಿನ ಮಹತ್ವದ ಅರಿವು ಮೂಡಿಸಬೇಕಿದೆ. ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರದಲ್ಲಿ ಸಪ್ತಾಹ ಕಾರ್ಯಕ್ರಮ ನಡೆಸಿ ತಾಯಿ ಹಾಲಿನ ಮಹತ್ವ ತಿಳಿಸಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪ್ರೇಯಸಿಗೆ ಬೇರೆ ಯುವಕನ ಜೊತೆ ನಿಶ್ಚಿತಾರ್ಥ: ಆತ್ಮಹತ್ಯೆಗೆ ಶರಣಾದ ಪ್ರಿಯಕರ
ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ ಭರಿತ ಆಹಾರ ಕ್ರಮದ ಬಗ್ಗೆ ತಿಳಿಸಿ ಆಹಾರದ ಪ್ಯಾಕೆಟ್ ನೀಡಲಾಯಿತು.
ವೇದಿಕೆಯಲ್ಲಿ ಎಂ ಎಚ್ ಪಟ್ಟಣ ಗ್ರಾ.ಪಂ ಪಿಡಿಒ ಸಿದ್ದರಾಮಯ್ಯ, ಕಾರ್ಯದರ್ಶಿ ಶೇಖರ್, ಮುಖ್ಯ ಶಿಕ್ಷಕಿ ನೀಲಮ್ಮ, ಅಂಗನವಾಡಿ ಮೇಲ್ವಿಚಾರಕಿ ಪುಷ್ಪಲತಾ, ಕಾರ್ಯಕರ್ತೆ ಶ್ರೀರಂಗಮ್ಮ ಸೇರಿದಂತೆ ಇತರರು ಇದ್ದರು.