ದೇಶದಲ್ಲಿರುವ ಧರ್ಮರಕ್ಷಕರ ಆಡಳಿತ ವ್ಯವಸ್ಥೆ ವಿನೇಶ್ ಫೋಗಟ್‌ರನ್ನು ದೆಹಲಿಯ ಬೀದಿಗಳಲ್ಲಿ ಎಳೆದಾಡಿದ್ದರಿಂದ ಹಿಡಿದು ಒಲಿಂಪಿಕ್ ಪದಕದವರೆಗೂ ಕಾಡಿದೆ. ಆ ನೋವು ನುಂಗಿ ದೇಶಕ್ಕಾಗಿ ಆಡಿ, ಮಾಡಿದ ಫೋಗಟ್ ಸಾಧನೆ ಅಭೂತಪೂರ್ವ. ಆದರೆ ಅದನ್ನು ಸಂಭ್ರಮಿಸುವ ನೈತಿಕತೆಯನ್ನು ನಾವು- ಭಾರತೀಯರು ಕಳೆದುಕೊಂಡಿದ್ದೇನೆ. ಏಕೆಂದರೆ, ಅವರೊಂದಿಗೆ ನಿಲ್ಲುವ ಸಂದರ್ಭದಲ್ಲಿ ನಿಲ್ಲದೆ ಅವರನ್ನು ಸೋಲಿಸಿದ್ದೇವೆ.
ಒಲಿಂಪಿಕ್ಸ್ ಫೈನಲ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್ ಫೋಗಟ್, ‘ಅಮ್ಮಾ, ಕುಸ್ತಿ ನನ್ನ ವಿರುದ್ಧ ಗೆದ್ದಿದೆ, ನಾನು ಸೋತಿದ್ದೇನೆ. ನನ್ನನ್ನು ಕ್ಷಮಿಸಿ. ನಿಮ್ಮ ಕನಸು ಮತ್ತು ನನ್ನ ಧೈರ್ಯ ನುಚ್ಚುನೂರಾಗಿದೆ. ಈಗ ನನಗೆ ಹೆಚ್ಚಿನ ಶಕ್ತಿ ಇಲ್ಲ. ನನ್ನನ್ನು ಕ್ಷಮಿಸಿದ್ದಕ್ಕೆ ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ’ ಎಂದು ‘ಎಕ್ಸ್’ ಮೂಲಕ ಕುಸ್ತಿಗೆ ವಿದಾಯ ಘೋಷಿಸಿದ್ದಾರೆ.
ವಿನೇಶ್ ಫೋಗಟ್‌ರ ಈ ವಿದಾಯ ಕೋಟ್ಯಂತರ ಭಾರತೀಯರ ಎದೆಯನ್ನು ಭಾರವಾಗಿಸಿದೆ. ಭಾವನಾತ್ಮಕ ತೊಳಲಾಟಕ್ಕೆ ದೂಡಿದೆ. ಕರುಳಿಗೆ ಕಿಡಿ ತಾಕಿಸಿ ನೋವು, ಹತಾಶೆ, ಸೋಲು, ಸಿಟ್ಟನ್ನು ಹೊರಹಾಕುತ್ತಿದೆ. ಅಧಿಕಾರಸ್ಥರ ಸೋಗಲಾಡಿತನವನ್ನು ಬಯಲು ಮಾಡುತ್ತಿದೆ. ದೇಶ ಸಾಗುತ್ತಿರುವ ದಿಕ್ಕನ್ನೂ ತೆರೆದು ತೋರುತ್ತಿದೆ.
ಇಂದು ಸಂಸತ್ ಅಧಿವೇಶನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ಒಂದಾಗಿ, ವಿನೇಶ್ ಫೋಗಟ್ ವಿಷಯದಲ್ಲಿ ಸರ್ಕಾರ ಗಟ್ಟಿಯಾದ ನಿಲುವು ಪ್ರದರ್ಶಿಸಿಲ್ಲ. ನಮ್ಮ ರಾಷ್ಟ್ರದ ಹೀರೋಗಳಾದ ಕ್ರೀಡಾಪಟುಗಳನ್ನು ರಕ್ಷಿಸಿಲ್ಲ. ಕೆಲವು ಸಂಸದರು ಆಕೆಯ ಮನೋಬಲ ಕುಗ್ಗಿಸುವ ಮಾತುಗಳನ್ನಾಡಿದ್ದಾರೆ ಮತ್ತು ಆಕೆಯ ಆಟಕ್ಕೆ ತೊಂದರೆ ಕೊಡುವಂತಹ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸತ್ತನ್ನು ಬಹಿಷ್ಕರಿಸಿ ಹೊರಬಂದಿದ್ದಾರೆ.
ಇದು ಆಕೆಗೆ ಸಲ್ಲಬೇಕಾದ ಗೌರವ. ಆದರೆ ಆಡಳಿತ ಪಕ್ಷ ಆಕೆಯ ವಿಷಯದಲ್ಲಿ ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ ಎಂಬುದು ಇಡೀ ದೇಶಕ್ಕೇ ಗೊತ್ತಾಗಿದೆ. ಮಾತಿಗೆ ಮುಂಚೆ ದೇಶ ಮೊದಲು ಎನ್ನುವವರ ಸೋಗಲಾಡಿತನ ಅವರ ಹೇಳಿಕೆಗಳು, ವರ್ತನೆಗಳಿಂದಲೇ ಹೊರಬೀಳುತ್ತಿದೆ. ಬಿಜೆಪಿಯ ಐಟಿ ಸೆಲ್ ಮತ್ತು ಗೋದಿ ಮೀಡಿಯಾಗಳಂತೂ, ನಿನ್ನೆಯಿಂದ ವಿನೇಶ್ ಫೋಗಟ್‌ರನ್ನು ಕುಟುಕಿ ಕೊಲೆ ಮಾಡುತ್ತಿವೆ.
ಇವುಗಳ ನಡುವೆಯೇ, ಪ್ರಧಾನಿ ಮೋದಿಯವರು ಕನಿಕರ ತೋರಿ, ಕಣ್ಣೀರು ಸುರಿಸಿ, ‘ನೀನು ಚಾಂಪಿಯನ್‌ರಲ್ಲಿ ಚಾಂಪಿಯನ್. ನೀನು ದೇಶದ ಹೆಮ್ಮೆ. ಎಲ್ಲರ ಸ್ಪೂರ್ತಿ. ಧೈರ್ಯಸ್ಥೆ. ನಿನ್ನ ಅನರ್ಹತೆ ನನಗೆ ಆಘಾತ ಉಂಟು ಮಾಡಿದೆ’ ಎಂಬ ತುಟಿಯಂಚಿನ ಮಾತುಗಳನ್ನು ಆಡಿ, ಅಂತರಂಗದಲ್ಲಿ ಅತ್ಯಾಚಾರಿಯನ್ನು ಅಪ್ಪಿಕೊಂಡಿದ್ದಾರೆ. ನಟಿ, ನೃತ್ಯಗಾತಿ ಎಂದು ಹೆಸರು ಮಾಡಿರುವ, ಆ ಮಾನದಂಡಗಳ ಮೇಲೆಯೇ ಸಂಸತ್ತಿಗೆ ಆಯ್ಕೆಯಾಗಿ ಬಂದಿರುವ ಹೇಮಾಮಾಲಿನಿ ಎಂಬ ಮಹಿಳೆ, ವಿನೇಶ್ ಫೋಗಟ್ ಅನರ್ಹತೆಯ ಬಗ್ಗೆ ಅಸಂಬದ್ಧವಾಗಿ ಮಾತಾಡಿ, ಒಳಗಿನ ಹೊಲಸನ್ನು ಹೊರಹಾಕಿದ್ದಾರೆ.
ವಿಪರ್ಯಾಸಕರ ಸಂಗತಿ ಎಂದರೆ, ಆರು ಸಲ ಚಾಂಪಿಯನ್ ಆದ, ಒಲಿಂಪಿಕ್ ಚಿನ್ನದ ಪದಕ ಗೆದ್ದ ಅಮೆರಿಕಾದ ಜೋರ್ಡಾನ್ ಎಂಬ ಕುಸ್ತಿಪಟು, ವಿನೇಶ್ ಫೋಗಟ್ ಪರ ನಿಂತು ಆಕೆಗೆ ಬೆಳ್ಳಿ ಪದಕವಾದರೂ ಕೊಡಬೇಕು ಎಂದಿದ್ದಾರೆ. ಆದರೆ ನಮ್ಮ ಘನತೆವೆತ್ತ ಕೇಂದ್ರ ಸರ್ಕಾರದ ಕ್ರೀಡಾ ಸಚಿವರು, ವಿನೇಶ್ ಫೋಗಟ್‌ಗಾಗಿ 75 ಲಕ್ಷ ವ್ಯಯಿಸಿರುವ ಹಣದ ಲೆಕ್ಕ ಕುರಿತು ಮಾತನಾಡಿ, ತಮ್ಮ ‘ಆದ್ಯತೆ’ಯನ್ನು ಅರುಹಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸರ್ವಾಧಿಕಾರಿಗಳ ಪತನಕ್ಕೆ ಕನ್ನಡಿ ಹಿಡಿದ ಬಾಂಗ್ಲಾದೇಶ
2021ರಲ್ಲಿ ಪ್ರಧಾನಿ ಮೋದಿಯವರು ವಿನೇಶ್ ಫೋಗಟ್ ಪಕ್ಕ ನಿಂತು ಕ್ರೀಡಾಪ್ರೇಮಿಯಂತೆ ಪೋಸು ಕೊಟ್ಟಿದ್ದರು. ಫೋಗಟ್‌ರನ್ನು ಹಾಡಿ ಹೊಗಳಿದ್ದರು. ಅದೇ ಫೋಗಟ್, ಕುಸ್ತಿ ಫೆಡರೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಷ್ ಭೂಷಣ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ದೆಹಲಿಯಲ್ಲಿ ಧರಣಿ ಕೂತಾಗ- ಮೌನಕ್ಕೆ ಶರಣಾಗಿದ್ದರು. ಪೊಲೀಸರನ್ನು ಬಿಟ್ಟು ಎಳೆದಾಡಿಸಿದರು. ಮಾನವಂತರು ಫೋಗಟ್ ಪರ ನಿಂತಾಗಲೂ, ಮೋದಿಯವರು ಬ್ರಿಜ್ ಭೂಷಣ್ ಬಿಟ್ಟುಕೊಡಲಿಲ್ಲ. ಆ ಅತ್ಯಾಚಾರಿಯ ಪರ ನಿಂತವರು, ಫೋಗಟ್‌ರನ್ನು ಪ್ರೋತ್ಸಾಹಿಸುವುದುಂಟೇ?
ವಿನೇಶ್ ಫೋಗಟ್ ವಿರುದ್ಧದ ಪಿತೂರಿ ಪ್ಯಾರಿಸ್‌ನಲ್ಲಿ ನಡೆದಿಲ್ಲ, ಅದು ಭಾರತದಲ್ಲೇ, ಕುಸ್ತಿ ಫೆಡರೇಷನ್‌ನಿಂದಲೇ ಎನ್ನುವುದು ಈಗ ಜಗಜ್ಜಾಹೀರಾಗುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಕುಸ್ತಿಪಟುಗಳ ಆಯ್ಕೆ ಸಂದರ್ಭದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಾಗಿದ್ದ ವಿನೇಶಗೆ ಬಲವಂತವಾಗಿಯೇ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಲಾಯಿತು. ಒಪ್ಪಿಕೊಳ್ಳದಿದ್ದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಭಾಗವಹಿಸಲು ಸಾಧ್ಯವಿಲ್ಲ ಎಂಬ ವಾತಾವರಣ ಸೃಷ್ಟಿಸಲಾಯಿತು. ಕೊನೆಗೂ ವಿನೇಶ್ 3 ಕೆಜಿ ತೂಕ ಇಳಿಸಿ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದನ್ನು ಸಾಧ್ಯವಾಗಿಸಿಕೊಂಡಿದ್ದರು. ಆದರೆ ಪ್ಯಾರಿಸ್ ಪ್ರವಾಸ, ಅಲ್ಲಿಯ ಆಹಾರ, ಕೋಚ್‌ಗಳ ಆಜ್ಞೆ-ಆದೇಶಗಳ ಫಲವಾಗಿ ನೂರು ಗ್ರಾಂಗಳಷ್ಟು ಹೆಚ್ಚಾಗಿಯೇ ಇತ್ತು. ಮಂಗಳವಾರ ರಾತ್ರಿ ತೂಕ ಇಳಿಸಲು ಒಂದು ಹನಿ ನೀರನ್ನೂ ಕುಡಿಯದೇ ಎಲ್ಲ ರೀತಿಯ ದೇಹದಂಡನೆಯ ವ್ಯಾಯಾಮಗಳನ್ನು ಮಾಡಲಾಗಿತ್ತು. ತಲೆ ಕೂದಲು ಕತ್ತರಿಸಿ, ಕನಿಷ್ಠ ಬಟ್ಟೆ ಧರಿಸಿದರೂ, ನೂರು ಗ್ರಾಂನಿಂದಾಗಿ ಅನರ್ಹಳಾಗುವಂತಾಯಿತು.
ಬ್ರಿಜ್ ಭೂಷಣ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿನೇಶ್ ಫೋಗಟ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸದಂತೆ ಮಾಡುವ ದುಷ್ಟ ಪ್ರಯತ್ನವನ್ನೂ ಮೀರಿ ತೂಕ ಇಳಿಸಿದ್ದರು, ಫೈನಲ್ ಪ್ರವೇಶಿಸಿದ್ದರು. ಕೊನೆಗೂ ದುಷ್ಟರ ಪಿತೂರಿಗೆ ಬಲಿಯಾದರು.
ದೇಶದಲ್ಲಿರುವ ಧರ್ಮರಕ್ಷಕರ ಆಡಳಿತ ವ್ಯವಸ್ಥೆ ಫೋಗಟ್‌ರನ್ನು ದೆಹಲಿಯ ಬೀದಿಗಳಲ್ಲಿ ಎಳೆದಾಡಿದ್ದರಿಂದ ಹಿಡಿದು ಒಲಿಂಪಿಕ್ ಪದಕದವರೆಗೂ ಕಾಡಿದೆ. ಆ ನೋವು ನುಂಗಿ ದೇಶಕ್ಕಾಗಿ ಆಡಿ, ಮಾಡಿದ ಫೋಗಟ್ ಸಾಧನೆ ಅಭೂತಪೂರ್ವ.
ಆದರೆ ಅದನ್ನು ಸಂಭ್ರಮಿಸುವ ನೈತಿಕತೆಯನ್ನು ನಾವು- ಭಾರತೀಯರು ಕಳೆದುಕೊಂಡಿದ್ದೇನೆ. ಏಕೆಂದರೆ, ಅವರೊಂದಿಗೆ ನಿಲ್ಲುವ ಸಂದರ್ಭದಲ್ಲಿ ನಿಲ್ಲದೆ ಅವರನ್ನು ಸೋಲಿಸಿದ್ದೇವೆ. ಅವರಿಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೇವೆ.
