ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆ ನಿಯಂತ್ರಣ ಸಾಧಿಸುವ ಮಸೂದೆಯು ಕಾನೂನಾದರೆ, ಹಿಂದೆ ಸರ್ಕಾರವು ರೂಪಿಸಿದ ಅಥವಾ ಬಳಸಿದ ಯಾವುದೇ ಕ್ರಮಕ್ಕಿಂತ ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಬಹುದು ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಧಾನಿ ಮೋದಿ – ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರೀ ಪ್ರಯತ್ನ ಹಾಕುತ್ತಿದೆ. ಅದಕ್ಕಾಗಿಯೇ, ಹೊಸ ‘ಪ್ರಸಾರ ಮಸೂದೆ’ಯನ್ನೂ ಪ್ರಸ್ತಾಪಿಸಿದೆ. ಈ ಮಸೂದೆಯಲ್ಲಿರುವ ಅಂಶಗಳು ಹಿಂದೆಂದೂ ನೋಡಿರದ ರೀತಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗಂಭೀರವಾಗಿ ಪ್ರತಿಬಂಧಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾಗಿಯೇ, ವಾಟ್ಸಾಪ್ ಸೇರಿದಂತೆ ಕೆಲ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು ‘ನಮ್ಮನ್ನು ಹೆಚ್ಚು ನಿಯಂತ್ರಿಸಲು ನೋಡಿದರೆ, ಗೌಪ್ಯತೆ ಬದ್ದತೆಯನ್ನು ಮುರಿಯಲು ಯತ್ನಿಸಿದರೆ, ನಾವು ಭಾರತವನ್ನೇ ತೊರೆಯುತ್ತೇವೆ’ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
ಕೇಬಲ್ ಟಿವಿ ನಿಯಮಾವಳಿಗಳನ್ನು ಬದಲಿಸಲು ಉದ್ದೇಶಿಸಿರುವ ‘ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ’ಯ ಮೊದಲ ಕರಡನ್ನು ಕಳೆದ ವರ್ಷ ಸಾರ್ವಜನಿಕ ಪರಾಮರ್ಶೆಗಾಗಿ ಬಿಡುಗಡೆ ಮಾಡಲಾಗಿತ್ತು. ಪ್ರತಿಕ್ರಿಯೆಗಳನ್ನು ಕಟ್ಟುನಿಟ್ಟಾದ ಗೌಪ್ಯತೆಯ ಷರತ್ತುಗಳೊಂದಿಗೆ ಪಡೆಯಲಾಗಿತ್ತು. ತಜ್ಞರು ಯಾವ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಸರ್ಕಾರ ಬಹಿರಂಗಗೊಳಿಸಿಲ್ಲ. ಇದೀಗ, ಹೊಸ ಕರಡನ್ನು ಪ್ರಸ್ತಾಪಿಸಲಾಗಿದೆ.
ಅಭಿಪ್ರಾಯಗಳನ್ನು ಗೌಪ್ಯವಾಗಿಡುವುದು ಸರಿಯಾದ ನಡೆಯಲ್ಲ. ಯಾಕೆಂದರೆ, ಮೂಲಭೂತ ಸಾಂವಿಧಾನಿಕ ಹಕ್ಕಿನ ಮೇಲೆ ಪರಿಣಾಮ ಬೀರುವ ಮಸೂದೆಯ ಕುರಿತು ಸಮಾಲೋಚನೆಗಳ ಬಗ್ಗೆ ಯಾವುದೇ ಗೌಪ್ಯತೆ ಇರಬಾರದು. ಹೀಗಾಗಿ, ಮಸೂದೆಯನ್ನು ಅಭಿಪ್ರಾಯಗಳನ್ನು ರಹಸ್ಯವಾಗಿ ಇಟ್ಟಿರುವುದಕ್ಕಾಗಿ ಮಾತ್ರವಲ್ಲದೆ, ಅದರ ವಿವಾದಾತ್ಮಕ ನಿಬಂಧನೆಗಳ ಕಾರಣಕ್ಕೂ ಟೀಕಿಸಲಾಗುತ್ತಿದೆ
ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪ್ರಪಂಚದಾದ್ಯಂತ ಆನ್‌ಲೈನ್ ವಿಡಿಯೋಗ್ರಾಫರ್‌ಗಳು ಪ್ರಸ್ತಾವಿತ ಕಾನೂನಿನ ವ್ಯಾಪ್ತಿಗೆ ಒಳಪಡುವ ಸಾಧ್ಯತೆಗಳಿವೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದ ಮಲ್ಟಿಮೀಡಿಯಾ ವಿಷಯವನ್ನು ಅಪ್‌ಲೋಡ್ ಮಾಡುವ ಮೂಲಕ ಆದಾಯ ಗಳಿಸುವವರನ್ನು ಡಿಜಿಟಲ್ ಸುದ್ದಿ ಪ್ರಸಾರಕರು ಎಂದು ಪರಿಗಣಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ಯೂಟ್ಯೂಬರ್‌ಗಳು ಮತ್ತು ಇನ್‌ಸ್ಟಾಗ್ರಾಮರ್‌ಗಳ ಮೇಲಿನ ನಿಯಂತ್ರಣವು ಅಭಿವ್ಯಕ್ತಿ ಹಕ್ಕನ್ನು ವ್ಯಕ್ತಪಡಿಸುವ ವಿಧಾನದ ಮೇಲಿನ ನಿರ್ಬಂಧಗಳಿಗೆ ಕಾರಣವಾಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವಿಷಯ ರಚನೆ ಮತ್ತು ಪ್ರಸಾರ ಮಾಡುವವರು ನಿಯಂತ್ರಿತ ವ್ಯವಸ್ಥೆಯೊಂದಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅವರು ರಚಿಸುವ ವಿಷಯವನ್ನು ಪರಿಶೀಲಿಸಲು ವಿಷಯ ಮೌಲ್ಯಮಾಪನ ಸಮಿತಿಗಳನ್ನು ಸ್ಥಾಪಿಸಬೇಕಾಗುತ್ತದೆ.
ಮಾತ್ರವಲ್ಲದೆ, ತಮ್ಮ ಬಳಕೆದಾರರ ಬಗ್ಗೆ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸದ ಸಾಮಾಜಿಕ ಮಾಧ್ಯಮ ಕಂಪನಿಗಳು ಕ್ರಿಮಿನಲ್ ಮೊಕದ್ದಮೆಗಳನ್ನೂ ಎದುರಿಸಬೇಕಾಗುತ್ತದೆ. ಬೇಡಿಕೆಯ ಮೇರೆಗೆ ಬಳಕೆದಾರರ ಬಗ್ಗೆ ಎಲ್ಲ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಬೇಕಾಗುತ್ತದೆ. ಜಾಹೀರಾತು ಜಾಲಗಳನ್ನೂ ಸರ್ಕಾರವು ನಿಯಂತ್ರಿಸುತ್ತದೆ. ಮಸೂದೆಯು ದಂಡಗಳು, ಹೊಣೆಗಾರಿಕೆಗಳು ಸೇರಿದಂತೆ ಇನ್ನೂ ಹಲವು ರೀತಿಯ ವಿವಾದಾತ್ಮಕ ನಿಬಂಧನೆಗಳನ್ನು ಹೊಂದಿದೆ.
ತಮ್ಮ ವಿರುದ್ಧ ಸಾಮಾಜಿಕ ವೇದಿಕೆಗಳಲ್ಲಿ ದನಿ ಎತ್ತುವವರ ದನಿಯನ್ನು ಉಡಗಿಸಲು ಈ ನಿಬಂಧನೆಗಳನ್ನು ಕೇಂದ್ರ ಸರ್ಕಾರವು ಬಳಸಿಕೊಳ್ಳಲಿದೆ. ಅಲ್ಲದೆ, ಇನ್ನೂ ಕೆಲವರನ್ನು ಅಂದರೆ, ತಮ್ಮ ಪರವಾಗಿ ನಿರಂತರವಾಗಿ ಪ್ರಚಾರ ಮಾಡುವವರನ್ನು ಪ್ರೇರೇಪಿಸಲು ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತದೆ. ಅಭಿವ್ಯಕ್ತಿ ಹಕ್ಕಿನ ಬಗ್ಗೆ ಮಸೂದೆಯಲ್ಲಿ ಅಸ್ಪಷ್ಟತೆ ಇದೆ. ಮಸೂದೆಯಲ್ಲಿ ‘ಸೂಚಿಸಬಹುದಾದಂತೆ’ (‘as may be prescribed’) ಎಂಬ ವಾಕ್ಯವನ್ನು 42 ಬಾರಿ ಬಳಸಲಾಗಿದೆ. ಈ ವಾಕ್ಯವು ಯಾವುದೇ ವಿಚಾರದಲ್ಲಿ ವಿವೇಚನೆ ಮತ್ತು ಪರಿಣಾಮವನ್ನು ನಿರ್ಧರಿಸಲು ಸರ್ಕಾರಕ್ಕೆ ಹೆಚ್ಚಿನ ಅವಕಾಶ ಒದಗಿಸುತ್ತದೆ ಎಂಬುದನ್ನು ಊಹಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷಗಳು ಸರ್ಕಾರವು ಸತ್ಯವನ್ನು ಹತ್ತಿಕ್ಕುತ್ತಿದೆ. ಪ್ರಜಾಪ್ರಭುತ್ವ ವಿರೋಧಿ ಮತ್ತು ಕ್ರೂರ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿವೆ. ಮಸೂದೆಯು ಕಾನೂನಾದರೆ, ಹಿಂದೆ ಸರ್ಕಾರವು ರೂಪಿಸಿದ ಅಥವಾ ಬಳಸಿದ ಯಾವುದೇ ಕ್ರಮಕ್ಕಿಂತ ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಬಹುದು ಎಂದು ಹೇಳಲಾಗುತ್ತಿದೆ.