ಪ್ಯಾರಿಸ್‌ ಒಲಿಂಪಿಕ್ಸ್‌ | ವಿನೇಶ್‌ ಫೋಗಟ್‌ ಅನರ್ಹತೆ ಪ್ರಕರಣ ಎತ್ತುವ ಪ್ರಶ್ನೆಗಳು

Date:

Advertisements

50 ಕೆಜಿ ವಿಭಾಗವನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ವಿನೇಶ್‌ ಫೋಗಟ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವೇ ಇರುತ್ತಿರಲಿಲ್ಲ. ಅವರನ್ನು ಈ ಇಕ್ಕಟ್ಟಿಗೆ ದೂಡುವುದರ ಹಿಂದೆ ಯಾವ ಪ್ರಬಲ ಶಕ್ತಿ ಕೆಲಸವನ್ನು ಮಾಡಿತು ಎಂಬ ಗುಮಾನಿಯ ಪ್ರಶ್ನೆ ಮೂಡಿದರೆ ಅಚ್ಚರಿ ಪಡಬೇಕಿಲ್ಲ.


ವಿನೇಶ್ ಫೋಗಟ್‌ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ಕುಸ್ತಿ ಸ್ಪರ್ಧೆಯ 50 ಕೆಜಿ ವಿಭಾಗದ ಫೈನಲ್‌ನಲ್ಲಿ 100ಗ್ರಾಂಗಳ ಹೆಚ್ಚಿನ ತೂಕ ಹೊಂದಿದ್ದರಿಂದ ಅನರ್ಹಗೊಂಡಿದ್ದು ಬೇಜಾರಿನ ವಿಷಯವೇ ಸರಿ. ಇದಕ್ಕಾಗಿ ನಮ್ಮ ದೇಶಾದ್ಯಂತ ವಿವಿಧ ಮಾಧ್ಯಮಗಳ ಮೂಲಕ ಅನೇಕರು ತಮಗಾದ ದುಃಖವನ್ನು ತೋಡಿಕೊಂಡಿದ್ದಾರೆ. ಪ್ರಸ್ತುತ ವಿನೇಶ್ ಫೋಗಟ್‌ ಕುಸ್ತಿ ಆಟದಿಂದಲೇ ನಿವೃತ್ತಿಯನ್ನು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ನಿವೃತ್ತಿ ಬಗೆಗೆ ಪೋಸ್ಟ್‌ ಮಾಡಿರುವ ಅವರು, “ಕುಸ್ತಿ ನನ್ನ ವಿರುದ್ಧ ಜಯಶಾಲಿಯಾಗಿದೆ. ನಾನು ಸೋತಿದ್ದೇನೆ. ನನ್ನನ್ನು ಕ್ಷಮಿಸಿ. ನಿಮ್ಮ ಕನಸು ಮತ್ತು ನನ್ನ ಧೈರ್ಯ ನುಚ್ಚುನೂರಾಗಿದೆ. ಪ್ರಸ್ತುತ ನನಗೆ ಹೆಚ್ಚು ಶಕ್ತಿ ಇಲ್ಲ. ನನ್ನನ್ನು ಕ್ಷಮಿಸಿದ್ದಕ್ಕೆ ನಿಮಗೆ ಋಣಿಯಾಗಿರುತ್ತೇನೆ” ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಹಿಂದೆ ಷಡ್ಯಂತ್ರದ ನಾನಾ ವಿಷಯಗಳು ಹರಿದಾಡುತ್ತಿವೆ. ವಿನೇಶ್‌ ಅವರ ಅನರ್ಹತೆಯ ಹಿನ್ನೆಲೆಯಲ್ಲಿ, ಒಲಿಂಪಿಕ್ಸ್‌ನಲ್ಲಿ ಆಕೆಯ ಆಟ, ಅನುಸರಿಸಬೇಕಾದ ತಂತ್ರಗಳು, ತೂಕದ ನಿರ್ವಹಣೆ ಇತ್ಯಾದಿ ವಿಚಾರಗಳ ಮೇಲೆ ನಿಗಾ ಇಡುವ ಸಿಬ್ಬಂದಿಯ ಮೇಲೆ ಗುಮಾನಿಯನ್ನು ವ್ಯಕ್ತಪಡಿಸಲಾಗುತ್ತಿದೆ. ಭಾರತ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಸಂಜಯ್‌ ಕುಮಾರ್‌ ಸಿಂಗ್‌, “ಇದು ವಿನೇಶ್‌ ಅವರ ತಪ್ಪಲ್ಲ. ಕೋಚ್‌ಗಳು, ನೆರವು ಸಿಬ್ಬಂದಿ, ಪೌಷ್ಟಿಕಾಂಶ ತಜ್ಞರು ಈ ಪ್ರಮಾದದ ಪೂರ್ಣ ಹೊಣೆಯನ್ನು ಹೊತ್ತುಕೊಳ್ಳಬೇಕು. ಇವರ ಮೇಲೆ ಕ್ರಮವನ್ನು ಕೈಗೊಳ್ಳಬೇಕು” ಎಂದು ಮಾತನಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಪ್ರಸಂಗಗಳು ಜರುಗಿದಾಗ ಅವುಗಳ ನೈಜ ಕಾರಣಗಳು ಏನು ಮತ್ತು ಯಾವ ಮಟ್ಟದಲ್ಲಿ ಅವು ಬಹಿರಂಗಗೊಳ್ಳುತ್ತವೆ ಎಂಬುದು ಯೋಚನಾರ್ಹ ಸಂಗತಿ. ಮೂಲ ಕಾರಣಗಳು ತೆರೆಯ ಹಿಂದೆ ಸರಿದು, ಕೆಲವು ಅಧಿಕಾರಿಗಳನ್ನು ಬಲಿ ಕೊಡುವ ಸಂದರ್ಭಗಳೇ ಜಾಸ್ತಿ ಎಂಬುದು ತಿಳಿದಿರುವ ವಿಷಯವಾಗಿದೆ.

Advertisements

ನಿನ್ನೆ ಆಂಗ್ಲಸುದ್ದಿ ವಾಹಿನಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಟಗಾರ್ತಿಯಾಗಿದ್ದ ಒಲಿಂಪಿಯನ್‌ ಅಶ್ವಿನಿ ನಾಚಪ್ಪ ಒಂದು ವಿಷಯವನ್ನು ಬಹಿರಂಗಗೊಳಿಸಿದರು. ಅದೆಂದರೆ- ಪ್ಯಾರಿಸ್‌ ಒಲಿಂಪಿಕ್ಸ್‌ ಮಹಿಳಾ ಕುಸ್ತಿಪಟುಗಳ ಆಯ್ಕೆಯ ಸಂದರ್ಭದಲ್ಲಿ ವಿನೇಶ್ ಫೋಗಟ್‌ ಸ್ಪರ್ಧಿಸುವ 53 ಕೆಜಿ ತೂಕದ ವಿಭಾಗದಲ್ಲಿ ಆಕೆಗೆ ಸ್ಥಾನ ಇರಲಿಲ್ಲ. ಆದುದರಿಂದ ಅವರು ಅನಿವಾರ್ಯವಾಗಿ 50 ಕೆಜಿ ತೂಕದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಭಾರತದ ಹಾಕಿ ಟೀಂನ ಮಾಜಿ ಕ್ಯಾಪ್ಟನ್‌ ಹಾಗೂ ಒಲಿಂಪಿಕ್‌ ಗೋಲ್ಡ್‌ ಕ್ವೆಸ್ಟ್‌ ಸಂಸ್ಥೆಯ ಸಿಇಒ (ಅನೇಕ ವರ್ಷಗಳಿಂದ ವಿನೇಶ್ ಫೋಗಟ್‌ ಅವರಿಗೆ ಬೆಂಬಲವನ್ನು ನೀಡುತ್ತಿರುವ ಸಂಸ್ಥೆ) ವಿರೇನ್‌ ರಸ್ಕ್ವಿನ್‌ ಅವರ ಜೊತೆ
Scroll.in ಸಂದರ್ಶನವನ್ನು ನಡೆಸಿದೆ.

Viren
ವಿರೇನ್‌ ರಸ್ಕ್ವಿನ್‌

ವಿನೇಶ್‌ ಫೋಗಟ್ 55 ಕೆಜಿ ತೂಕವಿದ್ದರೂ, ಆಕೆ ಏಕೆ 50 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಬೇಕಾಯಿತು ಎಂಬ ಪ್ರಶ್ನೆಗೆ ರಸ್ಕ್ವಿನ್‌, “ಪ್ರಪಂಚದಾದ್ಯಂತ ಸಾಮಾನ್ಯವಾಗಿ ತಾವು ಇರುವ ತೂಕಕ್ಕಿಂತ 3-4 ಕೆಜಿ ಕಡಿಮೆ ತೂಕದ ವಿಭಾಗವನ್ನು ಎಲ್ಲ ಕುಸ್ತಿಪಟುಗಳು ಆಯ್ಕೆ ಮಾಡಿಕೊಳ್ಳುತ್ತಾರೆ. 5-6 ವರ್ಷಗಳಿಂದ ವಿನೇಶ್‌ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆಗಸ್ಟ್‌ 17ರಂದು ಅವರಿಗೆ ACL ಶಸ್ತ್ರಕ್ರಿಯೆ ಜರುಗಿತು. ಅವರು ಪುನಶ್ಚೇತನಗೊಳ್ಳುವ ಸಂದರ್ಭದಲ್ಲಿ ಕುಸ್ತಿಪಟು ಅಂತಿಮ್‌ ಪಂಘಾಲ್‌ಗೆ 53 ಕೆಜಿಯ ವಿಭಾಗದಲ್ಲಿ ಕೋಟಾ ನೀಡಲಾಯಿತು. ಕೋಟಾ ಸೀಲ್‌ ಆದ ತರುವಾಯ, ಒಂದು ದೇಶದಿಂದ ಒಬ್ಬ ಕುಸ್ತಿಪಟು ಮಾತ್ರ ಒಲಿಂಪಿಕ್‌ ವಿಭಾಗದಲ್ಲಿ ಸ್ಪರ್ಧಿಸಬಹುದು. ವಿನೇಶ್‌ ಆಟಕ್ಕೆ ಮರಳಿದ ನಂತರ ಆಕೆ ತನ್ನ ಎಂದಿನ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಇರಾದೆಯನ್ನು ಹೊಂದಿದ್ದರು. ಆಕೆ ಟ್ರಯಲ್‌ ದಿನಾಂಕಗಳ ಬಗೆಗೆ ಪಾರದರ್ಶಕತೆಯಿರಬೇಕೆಂದು ವಿನಂತಿಸಿದರು. ಆದರೆ ಸ್ಪಷ್ಟನೆ ದೊರೆಯಲಿಲ್ಲ. ಆದುದರಿಂದ ಅವರು 50 ಕೆಜಿ ವಿಭಾಗದಡಿ ಒಲಿಂಪಿಕ್‌ ಕ್ವಾಲಿಫಯರ್‌ನಲ್ಲಿ ಸ್ಪರ್ಧಿಸಿ ತಮ್ಮ ಕೋಟಾವನ್ನು ಗಳಿಸುವುದರಲ್ಲಿ ಸಫಲರಾದರು. ನಿಮಗೆ ತಿಳಿದಿರುವಂತೆ, ಆಕೆಯ ಆಯ್ಕೆ ಸರಿಯಾಗಿತ್ತು. ಆಕೆ ಜಪಾನಿನ ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ಸುಸಕಿ ಮತ್ತು ಇಬ್ಬರು ಕುಸ್ತಿಪಟುಗಳನ್ನು ಪರಾಭವಗೊಳಿಸಿ ಫೈನಲ್‌ ತಲುಪಿದರು” ಎಂದು ಉತ್ತರಿಸಿದ್ದಾರೆ.

50 ಕೆಜಿ ವಿಭಾಗವನ್ನು ಆಯ್ಕೆ ಮಾಡಿಕೊಳ್ಳದಿದ್ದರೇ ವಿನೇಶ್‌ ಫೋಗಟ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವೇ ಇರುತ್ತಿರಲಿಲ್ಲ. ಅವರನ್ನು ಈ ಇಕ್ಕಟ್ಟು ಪರಿಸ್ಥಿತಿಗೆ ದೂಡುವುದರ ಹಿಂದೆ ಯಾವ ಪ್ರಬಲ ಶಕ್ತಿ ಕೆಲಸವನ್ನು ಮಾಡಿತು ಎಂಬ ಗುಮಾನಿಯ ಪ್ರಶ್ನೆ ಮೂಡಿದರೇ, ಅಚ್ಚರಿ ಪಡಬೇಕಿಲ್ಲ!

ಕಳೆದ ವರ್ಷದ ಜನವರಿ ಮಾಹೆಯಲ್ಲಿ ಸಾಕ್ಷಿ ಮಲ್ಲಿಕ್‌, ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯ ಮತ್ತು ಇತರ ಅನೇಕ ಕುಸ್ತಿ ಪಟುಗಳು ದೆಹಲಿಯ ಜಂತರ್‌ ಮಂತರ್‌ನಲ್ಲಿ ಭಾರತ ಕುಸ್ತಿ ಫೆಡರೇಶನ್‌ನ ಅಧ್ಯಕ್ಷನಾಗಿದ್ದ, ಬಿಜೆಪಿಯ ಬಲಿಷ್ಠ ಸಂಸದನಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಕೆಲವು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಆಪಾದಿಸಿ ದೊಡ್ಡ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಮಹಿಳೆಯರ ಬಗೆಗೆ ಪುಂಖಾನುಪುಂಖವಾಗಿ ಮಾತನಾಡುವ ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್‌ ಶಾ ಈ ಆಪಾದನೆ ಕರಿತಂತೆ ತುಟಿ ಪಿಟಿಕ್‌ ಎನ್ನಲಿಲ್ಲ. ಸರ್ಕಾರ ಒಂದು ಸಮಿತಿಯನ್ನು ರಚಿಸಿತು.

ಬ್ರಿಜ್ ಭೂಷಣ್ ಸಿಂಗ್
ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌

ನಂತರ ನಡೆದ ಭಾರತ ಕುಸ್ತಿ ಫೆಡರೇಶನ್‌ ಚುನಾವಣೆಯಲ್ಲಿ 15 ಸ್ಥಾನಗಳ ಪೈಕಿ 13 ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಕೃಪಾಪೋಷಿತ ಪ್ಯಾನೆಲ್‌ನ ಮಂದಿಯ ಪಾಲಾಯಿತು. ಬ್ರಿಜ್‌ ಭೂಷಣ್‌ನ ಭಂಟ ಸಂಜಯ್‌ ಕುಮಾರ್‌ ಸಿಂಗ್‌ ಅಧ್ಯಕ್ಷರಾದರು. ಆ ಸಂದರ್ಭದಲ್ಲಿ ದೆಹಲಿಯ ಪ್ರೆಸ್‌ ಕ್ಲಬ್‌ ಆಫ್ ಇಂಡಿಯಾದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ವಿನೇಶ್‌ ಫೋಗಟ್‌, ಸಾಕ್ಷಿ ಮಲ್ಲಿಕ್‌ ಮತ್ತು ಬಜರಂಗ್‌ ಪುನಿಯ ಭಾಗವಹಿಸಿ ಚುನಾವಣೆಯ ಬೆಳವಣಿಗೆಗಳ ಬಗೆಗೆ ತಮ್ಮ ಅಸಮಾಧಾನವನ್ನು ಹೊರಗೆಡಹಿದರು. ಸಾಕ್ಷಿ ಮಲ್ಲಿಕ್‌ ತಮ್ಮ ಶೂಗಳನ್ನು ಟೇಬಲ್‌ ಮೇಲೆ ಇಟ್ಟು ಕುಸ್ತಿಯಿಂದ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಫೆಡರೇಶನ್‌ಗೆ ಒಬ್ಬ ಮಹಿಳೆ ಅಧ್ಯಕ್ಷೆ ಆಗಬೇಕೆಂಬ ಪ್ರತಿಭಟನಾನಿರತ ಕುಸ್ತಿಪಟುಗಳ ಉದ್ದೇಶ ಮಣ್ಣುಪಾಲಾಯಿತು.

ಮಹಿಳಾ ಕುಸ್ತಿಪಟುಗಳ ಪ್ರತಿಭಟನಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿನೇಶ್‌ ಫೋಗಟ್‌ ಅವರಿಗೆ ಬೇಕೆಂತಲೇ 53 ಕೆಜಿ ವಿಭಾಗದಲ್ಲಿ ಟ್ರಯಲ್ಸ್‌ನಲ್ಲಿ ಸ್ಥಾನವನ್ನು ಕಲ್ಪಿಸಲಾಗಲಿಲ್ಲವೇ ಎಂಬ ಸಂಶಯದ ಪ್ರಶ್ನೆ ಅನೇಕರಲ್ಲಿ ಏಳಬಹುದು. ಕೇಂದ್ರ ಸರ್ಕಾರ, ಕುಸ್ತಿ ಫೆಡರೇಶನ್‌, ಮಹಿಳಾ ಕುಸ್ತಿಪಟುಗಳ ವಿಚಾರದಲ್ಲಿ ನಡೆದುಕೊಂಡ ರೀತಿ ನಮ್ಮಲ್ಲಿ ಇನ್ನು ದೊಡ್ಡ ಮಟ್ಟದಲ್ಲೇ ಇರುವ ಪಿತೃಪ್ರಧಾನತೆಯನ್ನು ಎತ್ತಿತೋರಿಸುತ್ತದೆ. ನಮ್ಮ ದೇಶದ ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ನೆಲೆವೂರಿರುವ ಕ್ಷುದ್ರ ರಾಜಕೀಯ, ಗುಂಪುಗುಳಿತನ, ಪಕ್ಷಪಾತ, ಭ್ರಷ್ಟಾಚಾರ ಇತ್ಯಾದಿ ಅಪಸವ್ಯಗಳು ಅನೇಕ ಪ್ರತಿಭಾನ್ವಿತ ಆಟಗಾರರ ಭವಿಷ್ಯಕ್ಕೆ ಕಂಠಕಪ್ರಾಯವಾಗಿರುವುದಕ್ಕೆ ಅನೇಕ ನಿದರ್ಶನಗಳಿವೆ. ಇಂತಹ ಸಂಸ್ಥೆಗಳು ಪ್ರಭಾವಶಾಲಿ ರಾಜಕಾರಣಿಗಳ ಆಡುಂಬೋಲವಾಗಿರುವುದು ಕೂಡ ಒಂದು ದುರಂತದ ವಿಷಯ.

ವಿನೇಶ್‌ ಫೋಗಾಟ್‌ ಭಾರತಕ್ಕೆ ಒಲಿಂಪಿಕ್‌ ಪದಕವಿಲ್ಲದೆ ಹಿಂದಿರುಗಬಹುದು. ಆದರೆ ಭಾರತದ ಕ್ರೀಡಾಪ್ರೇಮಿಗಳ ಮನದಲ್ಲಿ ಅವರು ಚಿನ್ನದ ಸ್ಥಾನವನ್ನು ಗಳಿಸಿದ್ದಾರೆ!

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X