ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಲ್ಲಿ ರಾಮ, ರಾಮಾಯಣ, ರಾಮರಾಜ್ಯ, ಮಂದಿರಗಳು…

Date:

ತಮ್ಮ ಬರಹಗಳು ಮತ್ತು ಭಾಷಣಗಳ ಮೂಲಕ ಗಾಂಧೀಜಿಯವರು ರಾಮರಾಜ್ಯದ ಪರಿಕಲ್ಪನೆಯನ್ನು ವಿವರಿಸಿದ್ದಾರೆ. ಒಂದು ನಾಡಿನಲ್ಲಿ ಧರ್ಮ ಮತ್ತು ಎಲ್ಲ ಚರಾಚರ ಜೀವಿಗಳು, ಮೇಲು -ಕೀಳು, ಚಿಕ್ಕವರು-ವಯಸ್ಸಾದವರು ಯಾರೇ ಆಗಿರಲಿ ಸುಖ, ಶಾಂತಿ ಹಾಗೂ ಸೌಹಾರ್ದತೆಯಿಂದ ಜೀವಿಸಿ, ಅಲ್ಲಿ ವಿಶ್ವಾತ್ಮಕ ಪ್ರಜ್ಞೆ ನೆಲೆಸಿದ್ದರೇ ಅದೇ ರಾಮರಾಜ್ಯ ಎಂದು ಅವರು ಗುರುತಿಸಿದ್ದರು

 

ಮಹಾತ್ಮ ಗಾಂಧೀಜಿಯವರು ವೈಷ್ಣವ ಪಂಥವನ್ನು ಅನುಸರಿಸುವ ಕುಟುಂಬದಲ್ಲಿ ಜನಿಸಿದವರು. ಅವರ ಮನೆಯ ದೈನಂದಿನ ಕೆಲಸಗಳನ್ನು ಮಾಡಲು ರಂಭಾ ಎಂಬ ಸಹಾಯಕಿ ಇದ್ದರು. ಅವರಿಗೆ ಮೋಹನದಾಸನ ಮೇಲೆ ತುಂಬ ಅಕ್ಕರೆಯಿತ್ತು. ಚಿಕ್ಕಂದಿನಲ್ಲಿ ಗಾಂಧೀಜಿಯವರಿಗೆ ಭೂತ, ಪ್ರೇತ, ಪಿಶಾಚಿಗಳ ಭಯವಿತ್ತು. ಈ ಹೆದರಿಕೆಯನ್ನು ನಿವಾರಿಸಿಕೊಳ್ಳಲು, ರಂಭಾ ಗಾಂಧೀಜಿಯವರು ರಾಮನಾಮವನ್ನು ಪಠಿಸುವಂತೆ ಸಲಹೆಯನ್ನು ಇತ್ತರು. ಅವರಿಗೆ ಈ ಪರಿಹಾರಕ್ಕಿಂತ ರಂಭಾ ಅವರ ಮೇಲೆ ಹೆಚ್ಚಿನ ನಂಬಿಕೆಯಿತ್ತು! ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಅವರಿಗೆ ರಾಮನಾಮವನ್ನು ಪಠಿಸುವ ಪರಿಪಾಠ ಶುರುವಾಯಿತು. ಅವರು ಇಂತಹ ವಿಷಯಗಳನ್ನು ತಮ್ಮ ʼಸತ್ಯದೊಡನೆ ನನ್ನ ಪ್ರಯೋಗಗಳುʼ ಎಂಬ ಆತ್ಮಚರಿತ್ರೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದಿಂದ 1915ರಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿದರು. ಆ ಸಂದರ್ಭದಲ್ಲಿ, ಅವರ ಗುರುಗಳಾಗಿದ್ದ ಗೋಪಾಲ ಕೃಷ್ಣ ಗೋಖಲೆಯವರು ಗಾಂಧೀಜಿಯವರಿಗೆ ದೇಶಾದ್ಯಂತ ಸಂಚರಿಸಲು ಸೂಚಿಸಿದರು. ಗಾಂಧೀಜಿಯವರು ರಾಮಾಯಣದ ಕೃತಿಯನ್ನು ಹಿಡಿದುಕೊಂಡೇ ಇಡೀ ದೇಶವನ್ನು ಸುತ್ತಿದರು. ಬ್ರಿಟಷರ ದಾಸ್ಯದಿಂದ ಮುಕ್ತವಾಗಲು ಮತ್ತು ಭಾರತದ ಸಮಾಜವನ್ನು ಆವರಿಸಿದಂತಹ ಕ್ಲೇಶದ ವಾತಾವರಣವನ್ನು ನಿವಾರಿಸಲು ರಾಮ ಮತ್ತು ಖಾದಿ ಮುಖ್ಯವಾದ ಅಸ್ತ್ರಗಳಾಗಬಹುದು ಎಂದು ಮನಗಂಡರು.

ಅಕ್ಟೋಬರ್‌ 31, 1947ರಂದು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಿಂದ ನಮ್ಮಲ್ಲಿ ನೆಲೆಗೊಳ್ಳಲು ನಿರಾಶ್ರಿತರು ದೆಹಲಿಗೆ ಬಂದಿರುತ್ತಾರೆ. ಅವರನ್ನು ಉದ್ದೇಶಿಸಿ ಗಾಂಧೀಜಿಯವರು ಮಾತನಾಡುತ್ತ, “ನಾನು ಆಶಾವಾದಿಯಾಗಿದ್ದೇನೆ. ಇಂದು ಬೆಳಗಿನ ಜಾವ ಮನುಷ್ಯನ ವಿಶ್ವಾಸ ಹಾಗೂ ಆಶಾವಾದ ಕುರಿತು ನನ್ನ ಮೊಮ್ಮಗಳಾದ ಮನುವಿನೊಡನೆ ಮಾತನಾಡುತ್ತಿದ್ದೆ. ದೇವರು ನನಗೆ ಸತ್ವಪರೀಕ್ಷೆಯನ್ನು ಒಡ್ಡುತ್ತಿದ್ದಾನೆ. ನಾನು ಸತ್ಯಸಂಧನಾಗಿದ್ದರೇ, ರಾಮನಾಮದಲ್ಲಿ ನನಗೆ ಅಚಲ ವಿಶ್ವಾಸವಿದ್ದರೇ, ನಾನು ದೃಢ ನಿರ್ಧಾರವನ್ನು ಹೊಂದಿದವನಾಗಿದ್ದರೇ, ರಾಮನಾಮವನ್ನು ಉಚ್ಚರಿಸುತ್ತ, ಹಿಂದೂ-ಮುಸಲ್ಮಾನ ಐಕ್ಯತೆಯೆಂಬ ಯಜ್ಞಕುಂಡಕ್ಕೆ ನನ್ನನ್ನೇ ನಾನು ಆಹುತಿಯಾಗಿಸಿಕೊಳ್ಳುತ್ತೇನೆ. ನೀವೆಲ್ಲರೂ ನನ್ನ ಮಕ್ಕಳಂತೆ ಇದ್ದೀರಿ. ನನ್ನ ಸಲಹೆಯನ್ನು ಆಲಿಸಿ… ಭಾರತದ ಯಾವುದೇ ಅಪರಿಚಿತ ನಗರದಲ್ಲಿ ನಿರಾಶ್ರಿತರಾಗಿ ಬದುಕುವುದ್ದಕ್ಕಿಂತ ಸಿಂಧ್‌ಗೆ ವಾಪಸ್ಸು ಹೋಗಿ. ಇಲ್ಲದಿದ್ದರೇ, ನಮ್ಮ ದೇಶದ ಲಕ್ಷಾಂತರ ಹಳ್ಳಿಗಳಿಗೆ ಹೋಗಿ…” ಎಂದು ತಿಳಿಸುತ್ತಾರೆ!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಂತ ಗೋಸ್ವಾಮಿ ತುಳಸಿದಾಸ್ ರಚಿಸಿದ ರಾಮಚರಿತ ಮಾನಸ್‌ ಗಾಂಧೀಜಿಯವರಿಗೆ ತುಂಬ ಪ್ರಿಯವಾಗಿತ್ತು. ಅವರ ಕೆಲವು ಸ್ನೇಹಿತರು ತುಳಸಿದಾಸರ ರಾಮಾಯಣದಲ್ಲಿರುವ ಸ್ತ್ರೀವಿರೋಧಿ (ರಾಮನಿಂದ ಸೀತೆಗಾದ ಅನ್ಯಾಯ) ಅಂಶಗಳು ಮತ್ತು ರಾಮ ವಾಲಿಯ ಜೊತೆ ನಡೆದುಕೊಂಡ ಬಗೆ ಇತ್ಯಾದಿಗಳನ್ನು ಪ್ರಸ್ತಾಪಿಸಿ, ರಾಮಾಯಣ ಒಂದು ಶ್ರೇಷ್ಠ ಗ್ರಂಥ ಎಂಬ ತನ್ನ ನಿಲುವನ್ನು ಪ್ರಶ್ನಿಸುವುದರ ಕುರಿತು ʼಯಂಗ್‌ ಇಂಡಿಯಾʼ ಪತ್ರಿಕೆ (ಅಕ್ಟೋಬರ್‌ 31, 1929) ಹೀಗೆ ಬರೆದಿದ್ದಾರೆ. ʼಪ್ರತಿ ಅಂಶದ ಟೀಕೆಯನ್ನು ಒಂದೊಂದಾಗಿ ಪರಿಗಣಿಸಿದಾಗ, ಅದನ್ನು ಅಲ್ಲಗಳೆಯುವುದು ಕಷ್ಟವಾಗುತ್ತದೆ. ಇಡೀ ರಾಮಾಯಣವನ್ನು ಇದೇ ರೀತಿಯಲ್ಲಿ ಖಂಡಿಸಬಹುದು. ಆದರೆ ಹೀಗೆ ಎಲ್ಲದರ ಮತ್ತು ಎಲ್ಲರ ಬಗೆಗೆ ಖಂಡಿಸಬಹುದು. ವೇದಗಳು, ಬೈಬಲ್‌ ಮತ್ತು ಖುರಾನ್‌ ಕೂಡ ಖಂಡನೆಗೆ ಒಳಗಾಗಿವೆ. ಒಂದು ಪುಸ್ತಕವನ್ನು ಇಡಿಯಾಗಿ ಅವಲೋಕಿಸಬೇಕು. ರಾಮಾಯಣದಲ್ಲಿ ಕೌಸಲ್ಯ, ಸುಮಿತ್ರಾ, ಶಬರಿ, ಅಹಲ್ಯಾ, ಮಂಡೋದರಿ ಅಂತಹವರ ವ್ಯಕ್ತಿ ಚಿತ್ರಣವೂ ಇದೆ. ಈ ಪುರಾಣವನ್ನು ಖಂಡಿಸುವವರಿಗೆ ಪ್ರಾಮಾಣಿಕ ಸಂಶಯಗಳಿದ್ದರೇ, ಅವರು ಯಾರ ವ್ಯಾಖ್ಯಾನಗಳನ್ನು ಯಾಂತ್ರಿಕವಾಗಿ ಸ್ವೀಕರಿಸಬಾರದು. ಅವರಿಗೆ ಯಾವ ಭಾಗಗಳಲ್ಲಿ ಸಂಶಯವಿದೆಯೋ, ಅಂತಹದ್ದನ್ನು ಬಿಟ್ಟುಬಿಡಬೇಕು.

ಗಾಂಧೀಜಿಯವರ ಹಲವು ನಿಲುವುಗಳ ಬಗೆಗೆ ಅನೇಕರಿಗೆ ಹಲವು ತಕರಾರುಗಳಿದ್ದವು. ಆದರೆ ಅವರು ಎಲ್ಲ ವಾದ, ವಾಗ್ವಾದ, ಭಿನ್ನಾಭಿಪ್ರಾಯ, ಖಂಡನೆಗಳನ್ನು ಪರಾಂಬರಿಸಿ, ಅವುಗಳು ಯಾರಿಂದ ಬಂದವೋ, ಅವರ ಜೊತೆ ಸಾಧ್ಯವಾದಷ್ಟು ಸಂವಾದವನ್ನು ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಬಾಪು, ರವೀಂದ್ರನಾಥ ಟಾಗೂರ್‌, ಅಂಬೇಡ್ಕರ್, ಜವಾಹರಲಾಲ್‌ ನೆಹರು, ಸುಭಾಶ್ಚಂದ್ರ ಬೋಸ್, ಮಹಮ್ಮದ್‌ ಅಲಿ ಜಿನ್ನಾ, ಎಡಪಂಥೀಯರು ಮತ್ತು ಇನ್ನೂ ಅನೇಕರ ಜೊತೆ ನಡೆದ ಸಂವಾದಗಳನ್ನು ನೆನಪಿಸಿಕೊಳ್ಳಬಹುದು. ಹಾಲಿ ನಮ್ಮ ದೇಶದಲ್ಲಿ ಯಾವುದೇ ವಿಚಾರಗಳ ಬಗೆಗೆ ಭಿನ್ನಮತವನ್ನು ವ್ಯಕ್ತಪಡಿಸಿದರೆ ಯಾವ ತೆರನಾದ ಪ್ರತಿಕ್ರಿಯೆಗಳು ಬರುತ್ತವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ತಮ್ಮ ಬರಹಗಳು ಮತ್ತು ಭಾಷಣಗಳ ಮೂಲಕ ಗಾಂಧೀಜಿಯವರು ರಾಮರಾಜ್ಯದ ಪರಿಕಲ್ಪನೆಯನ್ನು ವಿವರಿಸಿದ್ದಾರೆ. ಒಂದು ನಾಡಿನಲ್ಲಿ ಧರ್ಮ ಮತ್ತು ಎಲ್ಲ ಚರಾಚರ ಜೀವಿಗಳು, ಮೇಲು ಅಥವಾ ಕೀಳು, ಚಿಕ್ಕವರು ಅಥವಾ ವಯಸ್ಸಾದವರು ಯಾರೇ ಆಗಿರಲಿ ಸುಖ, ಶಾಂತಿ ಹಾಗೂ ಸೌಹಾರ್ದತೆಯಿಂದ ಜೀವಿಸಿ, ಅಲ್ಲಿ ವಿಶ್ವಾತ್ಮಕ ಪ್ರಜ್ಞೆ ನೆಲೆಸಿದ್ದರೇ ಅದೇ ರಾಮರಾಜ್ಯ

ಎಂದು ಅವರು ಗುರುತಿಸಿದ್ದರು. ಯಂಗ್‌ ಇಂಡಿಯಾ, 19-09-1929, ಪುಟ 305ರಲ್ಲಿ ಅವರು, ʼರಾಮರಾಜ್ಯವೆಂದರೆ ಅದು ಹಿಂದೂ ರಾಜ್ಯವಲ್ಲ. ನನ್ನ ಅರ್ಥದಲ್ಲಿ, ಅದು ದೈವಿಕ ರಾಜ್ಯ, ದೇವರ ರಾಜ್ಯ. ನನಗೆ ರಾಮನೂ ರಹೀಮನೂ ಒಂದೇ. ನಾನು ಸದಾಚಾರ ಮತ್ತು ಸತ್ಯದ ದೇವರನ್ನು ಗುರುತಿಸುತ್ತೇನೆ…ʼ ಎಂದು ದಾಖಲಿಸಿದ್ದಾರೆ.

ಮಾರ್ಚ್‌ 18, 1939ರಂದು ಅಂದರೆ ಸುಮಾರು 85 ವರ್ಷಗಳ ಹಿಂದೆ ದೆಹಲಿಯಲ್ಲಿ ಪ್ರಸಿದ್ಧ ಲಕ್ಷ್ಮೀನಾರಾಯಣ ದೇಗುಲ (ಬಿರ್ಲಾ ಮಂದಿರ್)‌ದ ಉದ್ಘಾಟನೆಯ ಸಮಾರಂಭದಲ್ಲಿ ನೆರೆದಿದ್ದ ದೊಡ್ಡ ಸಂಖ್ಯೆಯ ಜನರನ್ನು ಉದ್ದೇಶಿಸಿ ಮಾತನಾಡುತ್ತ ದೇಗುಲದ ಆಶಯ, ಅರ್ಥ ಮತ್ತು ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ. ದೇಗುಲ ಮತೀಯ ಬಹುತ್ವವನ್ನು ಗೌರವಿಸಬೇಕು; ಕೋಮು ದ್ವೇ಼ಷವನ್ನು ತಿರಸ್ಕರಿಸಬೇಕು ಎಂದು ಸಾರುತ್ತಾರೆ. ಅಲ್ಲದೆ, ದೇಗುಲಗಳಲ್ಲಿ ಎಲ್ಲ ಜಾತಿಗಳ ಮಂದಿಗೆ, ಯಾವ ಬಗೆಯ ತಾರತಮ್ಯವಿಲ್ಲದೆ ಪ್ರವೇಶಾವಕಾಶಯಿರಬೇಕೆಂಬುದು ಅವರ ದಿಟ್ಟ, ಗಟ್ಟಿ ಪ್ರತಿಪಾದನೆಯಾಗಿತ್ತು.

ಮಹಾತ್ಮ ಗಾಂಧೀಜಿಯವರು ಅಧ್ಯಾತ್ಮವಾದಿಯಾಗಿದ್ದರು. ಅವರು ಮತಧಾರ್ಮಿಕ ವಿಷಯಗಳ ಬಗೆಗೆ ತಮ್ಮ ಭಾಷಣಗಳು ಮತ್ತು ಬರವಣಿಗೆಗಳಲ್ಲಿ ಮುಕ್ತವಾಗಿ ತಮ್ಮ ಆಲೋಚನೆಗಳನ್ನು ಹರಿಯಬಿಟ್ಟಿದ್ದಾರೆ. ಸನಾತನ ಮತ್ತು ವರ್ಣಾಶ್ರಮ ಧರ್ಮವನ್ನು ಎತ್ತಿಹಿಡಿದರೂ, ಅವರು ಸಂಕುಚಿತ ಭಾವನೆಗಳನ್ನು ಹೊಂದಿರಲಿಲ್ಲ. ಅವರಲ್ಲಿ ತಾನು ನಂಬಿದ ಮತಧಾರ್ಮಿಕ ಮೌಲ್ಯಗಳೇ ಶ್ರೇಷ್ಠ, ಇತರರದ್ದು ನಿಕೃಷ್ಟ ಎಂಬ ವ್ಯಸನ ಇರಲಿಲ್ಲ. ಅವರದ್ದು ಎಲ್ಲ ಮತಧರ್ಮಗಳನ್ನು ಸಮಭಾವದಿಂದ ಕಾಣುವ ದೃಷ್ಟಿಕೋನವಾಗಿತ್ತು. ಬೇರೆ ಮಾತುಗಳಲ್ಲಿ ಹೇಳಬಹುದಾದರೇ, ಇಂತಹ ವಿಷಯಗಳಲ್ಲಿ ಅವರದ್ದು ವಿಶ್ವಾತ್ಮಕ ನೋಟವಾಗಿತ್ತು.

ಮಹಾತ್ಮ ಗಾಂಧೀಜಿಯವರು ಹುತಾತ್ಮರಾಗಿ ಎಪ್ಪತ್ತೈದು ವರ್ಷಗಳಾಗಿವೆ. ಪ್ರಸ್ತುತ ಮೇಲೆ ಪ್ರಸ್ತಾಪಿಸಿರುವ ಅವರ ಅದರ್ಶ, ಆಶಯ, ಕಾಣ್ಕೆಗಳು ಏನಾಗಿವೆ ಎಂಬುವುದರ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ)...

ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?

ಆಯುರ್ವೇದದಿಂದ ತಯಾರಿಸಲ್ಪಟ್ಟ ಪತಂಜಲಿ ಕೊರೊನಿಲ್ ಮಾತ್ರೆಯನ್ನು ಸರ್ಕಾರವೇ ಮುಂದೆ ನಿಂತು ಮಾರಾಟ...