ಮುಸ್ಲಿಂ ಸಮುದಾಯದ ಆಸ್ತಿಯನ್ನು ಅವರಿಂದ ಕಸಿದುಕೊಳ್ಳುವುದು, ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಆರ್ಥಿಕ ನೆರವಿನ ಆಧಾರವಾಗಿದ್ದ ವಕ್ಫ್ ಆಸ್ತಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ವಕ್ಫ್ ಆಸ್ತಿಯ ಆದಾಯದಿಂದ ವಕ್ಫ್ ಮಂಡಳಿಗಳು ನಡೆಸುತ್ತಿದ್ದ ಸಾಮಾಜಿಕ ಕಾರ್ಯಗಳಿಗೆ ಕೊಕ್ಕೆ ಹಾಕುವುದು ಕೇಂದ್ರದ ಹುನ್ನಾರವಾಗಿದೆ.
ವಕ್ಫ್ ಬೋರ್ಡ್ ಕಾಯ್ದೆ- 1995ಕ್ಕೆ ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ತಿದ್ದುಪಡಿಯು ರಾಜಕೀಯ ವಾಗ್ಯುದ್ದಕ್ಕೆ ಕಾರವಾಗಿದೆ. ‘ವಕ್ಫ್ (ತಿದ್ದುಪಡಿ) ಮಸೂದೆ-2024’ರಲ್ಲಿ ಹೇಳಲಾಗಿರುವ ಪ್ರಸ್ತಾವನೆಗಳು ಮುಸ್ಲಿಂ ಸಮುದಾಯದ ಭೂಮಿ, ಸ್ವತ್ತುಗಳು ಮತ್ತು ಸಂವಿಧಾನದ 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ‘ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ’ವನ್ನು ಕಸಿದುಕೊಳ್ಳುತ್ತದೆ. ಮಸೂದೆಯು ಅಸಂವಿಧಾನಿಕ, ಅಲ್ಪಸಂಖ್ಯಾತ ವಿರೋಧಿ ಮತ್ತು ವಿಭಜನಾಕಾರಿ ಎಂದು ವಿಪಕ್ಷಗಳು ಆರೋಪಿಸಿವೆ. ವಕ್ಫ್ ಮಂಡಳಿಗಳನ್ನು ನಿಯಂತ್ರಿಸಬೇಕೆಂದು ಮುಸ್ಲಿಂ ಸಮುದಾಯದಿಂದಲೇ ಬೇಡಿಕೆ ಬಂದಿತ್ತೆಂದು ಹೇಳುತ್ತಿರುವ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಿದೆ.
ಮಸೂದೆಯ ವಿರುದ್ಧ ಸಂಸತ್ತಿನ ಒಳಗೂ – ಹೊರಗೂ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ.
ಅಂದಹಾಗೆ, ಮುಸ್ಲಿಮರ ವಿರುದ್ಧ ನಿರಂತರವಾಗಿ ದ್ವೇಷ ಕಾರುತ್ತ, ಕೋಮು ವಿಷ ಹರಡುತ್ತಾ, ಕೋಮು ಪ್ರಚೋಚನೆ ಮಾಡುತ್ತಿರುವ ಬಿಜೆಪಿ, ಈ ‘ವಕ್ಫ್ (ತಿದ್ದುಪಡಿ) ಮಸೂದೆ-2024’ಯನ್ನು ಯಾಕೆ ಜಾರಿಗೆ ತಂದಿದೆ, ಅದರ ಉದ್ದೇಶವೇನು, ಮಸೂದೆ ಸೃಷ್ಟಿಸಿರುವ ವಿವಾದಗಳೇನು, ಮಸೂದೆಯು ವಕ್ಫ್ ಆಸ್ತಿಯನ್ನು ಕಿತ್ತುಕೊಳ್ಳುವ ಹುನ್ನಾರದ ಭಾಗವಾಗಿದೆಯೇ? ನೋಡೋಣ…
ವಕ್ಫ್ ಆಸ್ತಿ ಎಂದರೇನು?
ಮುಸ್ಲಿಮರು ನಿರ್ದಿಷ್ಟ ಉದ್ದೇಶಕ್ಕಾಗಿ ವಕ್ಫ್‌ಗೆ ನೀಡಿದ ಆಸ್ತಿಯಾಗಿದೆ. ಹಿಂದು ಧರ್ಮದಲ್ಲಿ ದೇವಾಲಯ, ದೇವರ ಹೆಸರಿನಲ್ಲಿ ಅಥವಾ ದೇವರಿಗಾಗಿ ದಾನ ನೀಡಿದ ಭೂಮಿ ಅಥವಾ ಆಸ್ತಿಗಳು ಹೇಗೆ ಇರುತ್ತವೆಯೋ, ಅದೇ ರೀತಿ, ಮುಸ್ಲಿಂ ಧರ್ಮದಲ್ಲಿ ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ದಾನ ನೀಡಲಾದ ಚರಾಸ್ತಿ ಅಥವಾ ಸ್ಥಿರಾಸ್ತಿಯನ್ನು ‘ವಕ್ಫ್ ಆಸ್ತಿ’ ಎನ್ನಲಾಗುತ್ತದೆ. ಇದನ್ನು, ವಕ್ಫ್ ಮಂಡಳಿ ನಿರ್ವಹಿಸುತ್ತದೆ.
ಮುಸ್ಲಿಂ ಧಾರ್ಮಿಕ ಆಸ್ತಿಗಳ ಉತ್ತಮ ನಿರ್ವಹಣೆ ಮತ್ತು ಆಡಳಿತದ ಉದ್ದೇಶಕ್ಕಾಗಿ 1995ರಲ್ಲಿ ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಅಂದಿನಿಂದ, ವಕ್ಫ್ ಮಂಡಳಿಯು ಮುಸ್ಲಿಂ ಸಮುದಾಯಕ್ಕೆ ಸೇರಿದ ಧಾರ್ಮಿಕ ಆಸ್ತಿಗಳ ನಿರ್ವಹಣೆಯನ್ನು ಮಾಡುತ್ತಿತ್ತು.
ವಕ್ಫ್ ಆಸ್ತಿಯನ್ನು ಸಾರ್ವಜನಿಕ ದತ್ತಿ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ವಕ್ಫ್ ಆಸ್ತಿಗಳಿಂದ ಬರುವ ಆದಾಯವನ್ನು ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಗಳು, ಸ್ಮಶಾನಗಳು, ಮಸೀದಿಗಳು ಮತ್ತು ಆಶ್ರಯ ಮನೆಗಳಿಗೆ ವಿನಿಯೋಗಿಸಲಾಗುತ್ತಿತ್ತು. ಹೆಚ್ಚಾಗಿ ಹಿಂದುಳಿದ ಮುಸ್ಲಿಮರಿಗೆ ಇದರಿಂದ ನೆರವು ದೊರೆಯುತ್ತಿತ್ತು.
ವಕ್ಫ್ ಬೋರ್ಡ್ ಎಂದರೇನು?
ವಕ್ಫ್ ಆಸ್ತಿಯನ್ನು ನಿರ್ವಹಿಸಲು ನಾಮನಿರ್ದೇಶಿತ ಸದಸ್ಯರನ್ನು ಹೊಂದಿರುವ ಕಾನೂನಾತ್ಮಕ ಘಟಕ – ವಕ್ಫ್ ಬೋರ್ಡ್. ಮಂಡಳಿಯು ವಕ್ಫ್ ಆಸ್ತಿಯಿಂದ ಬರುವ ಆದಾಯವನ್ನು ಉದ್ದೇಶಿತ ಉದ್ದೇಶಗಳಿಗಾಗಿ ಬಳಸಲು ಮತ್ತು ನಿರ್ವಹಿಸಲು ಪ್ರತಿ ಆಸ್ತಿಗೆ ಒಬ್ಬ ಪಾಲಕನನ್ನು ನೇಮಿಸುತ್ತದೆ.
1964ರಲ್ಲಿ ಸ್ಥಾಪನೆಯಾದ ಸೆಂಟ್ರಲ್ ವಕ್ಫ್ ಕೌನ್ಸಿಲ್ (CWC), ಭಾರತದಾದ್ಯಂತ ರಾಜ್ಯ ಮಟ್ಟದ ವಕ್ಫ್ ಮಂಡಳಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸಲಹೆ ನೀಡುತ್ತದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವಕ್ಫ್ ಮಂಡಳಿಯನ್ನು ಕಾನೂನುಬದ್ದಗೊಳಿಸಿ 1995ರಲ್ಲಿ ಕಾಯ್ದೆಯನ್ನು ತರಲಾಗಿತ್ತು. ಬಳಿಕ, 2013ರಲ್ಲಿ ತಿದ್ದುಪಡಿಯೊಂದಿಗೆ, ವಕ್ಫ್ ಮಂಡಳಿಗೆ ಆಸ್ತಿಯನ್ನು ‘ವಕ್ಫ್ ಆಸ್ತಿ’ ಎಂದು ಗೊತ್ತುಪಡಿಸುವ ಅಧಿಕಾರವನ್ನೂ ನೀಡಲಾಗಿತ್ತು. ಜೊತೆಗೆ, ಸೆಕ್ಷನ್ 6ರಲ್ಲಿ ವಕ್ಫ್ ಆಸ್ತಿ ವಿಚಾರಕ್ಕೆ ವಿವಾದ ಉಂಟಾದರೆ, ಅಂತಹ ವಿಷಯವನ್ನು ಪರಿಶೀಲಿಸಿ, ನಿರ್ಧರಿಸುವ ಅಧಿಕಾರವನ್ನು ನ್ಯಾಯಮಂಡಳಿಗೆ ನೀಡಲಾಯಿತು.
ಮಸೂದೆಯಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳು – ಹಿಂದಿನ ಹುನ್ನಾರಗಳು!
ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಮಸೂದೆಯು ವಕ್ಫ್ ಆಸ್ತಿಯನ್ನು ನಿರ್ವಹಿಸುವಲ್ಲಿ ವಕ್ಫ್ ಮಂಡಳಿಗೆ ನೀಡಲಾಗಿರುವ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಅಥವಾ ನಿರ್ಬಂಧಿಸುತ್ತದೆ. ವಕ್ಫ್ ಮಂಡಳಿಯ ಮೇಲೆ ಸವಾರಿ ಮಾಡುವ ಮೂಲಕ ಆ ಆಸ್ತಿಗಳನ್ನು ಸರ್ಕಾರ ನಿಯಂತ್ರಿಸಲು ಅವಕಾಶ ನೀಡುತ್ತದೆ.
ಯಾವುದೇ ವಕ್ಫ್ ಆಸ್ತಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ, ಆಸ್ತಿ ಮೌಲ್ಯಮಾಪನ ಮಾಡಲಾಗುತ್ತದೆ.
ಮತ್ತೊಂದು ಆಘಾತಕಾರಿ ವಿಚಾರವೆಂದರೆ, ನಿರ್ದಿಷ್ಟವಾಗಿ ಯಾವುದೇ ಆಸ್ತಿಯು ವಕ್ಫ್ ಆಸ್ತಿಯೇ ಅಲ್ಲವೇ ಎಂದು ನಿರ್ಧರಿಸುವಲ್ಲಿ ವಕ್ಫ್ ಮಂಡಳಿಗೆ ಅಧಿಕಾರ ನೀಡಿದ್ದ 1995ರ ಕಾಯ್ದೆ ಸೆಕ್ಷನ್ 40ರನ್ನು ರದ್ದುಗೊಳಿಸಲಾಗಿದೆ. ಆ ಮೂಲಕ, ಆಸ್ತಿ ಮೇಲಿನ ವಕ್ಫ್ ಮಂಡಳಿಯ ಸಂಪೂರ್ಣ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ.
ಜೊತೆಗೆ, 1995ರ ಕಾಯ್ದೆಯ 3ನೇ ಸೆಕ್ಷನ್‌ಗೆ ಮೂರು ಉಪ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಅದರಲ್ಲಿ 3ಬಿ ಸೆಕ್ಷನ್, ”1995 ವಕ್ಫ್ ಕಾಯ್ದೆಯು ಜಾರಿಗೆ ಬರುವುದಕ್ಕೂ ಮೊದಲು ಅಥವಾ ನಂತರ ವಕ್ಫ್ ಆಸ್ತಿ ಎಂದು ಗುರುತಿಸಲಾದ ಅಥವಾ ಘೋಷಿಸಲಾದ ಯಾವುದೇ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಒಂದು ವೇಳೆ, ವಕ್ಫ್ ಆಸ್ತಿ ಎಂದು ಗುರುತಿಸಲಾಗಿದ್ದ ಆಸ್ತಿಯು ಸರ್ಕಾರಕ್ಕೆ ಸೇರಿದ್ದೇ ಎಂಬ ಪ್ರಶ್ನೆ ಬಂದರೆ, ಜಿಲ್ಲಾಧಿಕಾರಿ ಸರ್ವೇ ನಡೆಸಿ, ನಿರ್ಧಾರ ಕೈಗೊಳ್ಳಬಹುದು” ಎಂದು ಹೇಳಲಾಗಿದೆ. ಆ ಮೂಲಕ, ಮುಸ್ಲಿಂ ಸಮುದಾಯದ ಬಹುತೇಕ ಆಸ್ತಿಯನ್ನು ಕಸಿದುಕೊಳ್ಳುವ ಹುನ್ನಾರ ಮಸೂದೆಯದ್ದಾಗಿದೆ.
ಅಂದಹಾಗೆ, ಹಲವಾರು ದೇವಾಲಯಗಳು ಸರ್ಕಾರಿ ಜಾಗದಲ್ಲಿಯೇ ಇವೆ. ಕಾಲಾನಂತರದಲ್ಲಿ ಆ ಭೂಮಿಯನ್ನು ದೇವಾಲಯದ ಹೆಸರಿಗೆ ನೀಡಲಾಗಿದೆ. ಅದೇ ರೀತಿ, ಮಸೀದಿ ಅಥವಾ ವಕ್ಫ್‌ಗೆ ಸಂಬಂಧಿಸಿದ ಕೆಲ ಭೂಮಿಯೂ ಸರ್ಕಾರಿ ಜಮೀನಾಗಿದ್ದು, ನಂತರದಲ್ಲಿ ಅದು ವಕ್ಫ್ ಹೆಸರಿಗೆ ಹಸ್ತಾಂತರವಾಗಿರುತ್ತದೆ. ಇದೀಗ, ಅಂತಹ ಎಲ್ಲ ಭೂಮಿಯನ್ನೂ ಕಸಿದುಕೊಳ್ಳುವ ಕುತಂತ್ರ ಮಸೂದೆ ಹಿಂದಿದೆ.
ಹಾಗೆ ನೋಡಿದರೆ, ಬಾಬ್ರಿ ಮಸೀದಿಯನ್ನು ಉರುಳಿಸಿ, ಆ ಭೂಮಿ ರಾಮಮಂದಿರದ್ದು ಎಂದು ಬಲವಂತವಾಗಿ ಕಸಿದುಕೊಳ್ಳಲಾಯಿತು. ಧಾರ್ಮಿಕ ಭಾವನೆಯನ್ನು ಮುಂದಿಟ್ಟು ಆ ಜಾಗದಲ್ಲಿ ರಾಮಮಂದಿರ ಕಟ್ಟಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಇದೀಗ, ವಾರಣಾಸಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹಿ ಈದ್ಗಾ ಮಸೀದಿಗಳನ್ನೂ ವಿವಾದಕ್ಕೆ ಎಳೆದು, ಕಸಿದುಕೊಳ್ಳುವ ಯತ್ನವನ್ನು ಹಿಂದುತ್ವವಾದಿಗಳು ಮಾಡುತ್ತಿದ್ದಾರೆ. ಇದೀಗ, ಹೊಸ ಮಸೂದೆಯಲ್ಲಿ ಪ್ರಸ್ತಾಪಿಸಲಾದ ಸೆಕ್ಷನ್ 3ಬಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಧಾರ್ಮಿಕ ಆಸ್ತಿಯನ್ನು ಕಾನೂನಾತ್ಮಕವಾಗಿ ಕಸಿದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಜಿಲ್ಲಾಧಿಕಾರಿ ನಿರ್ಧಾರದ ವಿರುದ್ಧ ಕೋರ್ಟ್ ಮೊರೆಹೋಗಲು ಅವಕಾಶ ಇರುತ್ತದೆಯಾದರೂ, ಅದು ಆಸ್ತಿಯನ್ನು ವಿವಾದಗೊಳಿಸಿ, ಅತಂತ್ರವಾಗಿಸುತ್ತದೆ.
ಮಾತ್ರವಲ್ಲದೆ, ವಕ್ಫ್ ಆಸ್ತಿಯನ್ನು ಕೇಂದ್ರ ಸರ್ಕಾರ ತನಚ್ಛೆಯಂತೆ ಲೆಕ್ಕಪರಿಶೋಧನೆ ಮಾಡಬಹುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಅದರೊಂದಿಗೆ, ಭಾರತದ ಕಂಟ್ರೋಲರ್ ಮತ್ತು ಆಡಿಟರ್-ಜನರಲ್ ಮೂಲಕ ಲೆಕ್ಕಪರಿಶೋಧಕರನ್ನು ನೇಮಿಸಿ, ವಕ್ಫ್ ಮಂಡಳಿಯ ಆದಾಯದ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ಮುಂದಾಗಿದೆ.
ಈ ವರದಿ ಓದಿದ್ದೀರಾ?: ಜಾತಿ ಉಪ-ವರ್ಗೀಕರಣದ ಕುರಿತ ಸುಪ್ರೀಂ ತೀರ್ಪು – ಸಾಮಾಜಿಕ ವ್ಯವಸ್ಥೆಯಲ್ಲಿ ಹೆಗ್ಗುರುತು
ಇನ್ನು, ವಕ್ಫ್ ಮಂಡಳಿಯಲ್ಲಿ ಈವರೆಗೆ ಮುಸ್ಲಿಮರು ಮಾತ್ರವೇ ಇರುತ್ತಿದ್ದರು. ಇದೀಗ, ವಕ್ಫ್ ಮಂಡಳಿಯಲ್ಲಿ ಮತ್ತೊಂದು ಕೋಮಿನವರನ್ನು ತಂದು ಕೂರಿಸಲಾಗುತ್ತಿದೆ. 1995ರ ಕಾಯ್ದೆಯ 9ನೇ ಸೆಕ್ಷನ್‌ಗೆ ಉಪ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ರಾಜ್ಯ ವಕ್ಫ್ ಮಂಡಳಿಗಳಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಲೇ, ಗಮನಾರ್ಹವಾಗಿ, ಇಬ್ಬರು ಮುಸ್ಲಿಮೇತರರನ್ನು ಮಂಡಳಿಗೆ ತುರುಕಲು ಬಿಜೆಪಿ ಸರ್ಕಾರ ಹವಣಿಸುತ್ತಿದೆ.
ತಲೆಮಾರುಗಳ ಬಳಕೆಯಿಂದಾಗಿ ವಕ್ಫ್ ಆಸ್ತಿಯೆಂದು ಘೋಷಿಸಲ್ಪಟ್ಟಿರುವ ಆಸ್ತಿಯನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. 1995ರ ಕಾಯ್ದೆಯಲ್ಲಿ ಮುಸ್ಲಿಮರು ನಿರಂತರವಾಗಿ ಬಳಸುತ್ತಿದ್ದ ಸಾರ್ವಜನಿಕ ಭೂಮಿ ಅಥವಾ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಘೋಷಿಸಲು, ಪರಿಗಣಿಸಲು ಅವಕಾಶ ನೀಡಿತ್ತು. ಈಗ ಆ ಅವಕಾಶವನ್ನೂ ಸರ್ಕಾರ ಕಿತ್ತುಕೊಳ್ಳುತ್ತಿದೆ.
ಮಾತ್ರವಲ್ಲದೆ, ಮುಸ್ಲಿಂ ಅಲ್ಲದವರು, ವಕ್ಫ್‌ಗೆ ದಾನವಾಗಿ ನೀಡಿದ ಆಸ್ತಿಯನ್ನು ವಕ್ಫ್ ಕಾಯ್ದೆಯಡಿ ಉಲ್ಲೇಖಿಸುತ್ತಿದ್ದ ಸೆಕ್ಷನ್ 104ನ್ನೂ ತೆಗೆದು ಹಾಕಲಾಗುತ್ತಿದೆ. ಇದರಿಂದ, ಮುಸ್ಲಿಮೇತರರು ವಕ್ಫ್‌ಗೆ ದಾನವಾಗಿ ನೀಡಿದ ಆಸ್ತಿ, ವಕ್ಫ್‌ಗೆ ಸೇರುವುದಿಲ್ಲವೆಂದೂ, ಅದನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಸಂಚನ್ನು ಕೇಂದ್ರ ಸರ್ಕಾರ ಹೆಣೆದಿದೆ.
ವಕ್ಫ್ ಮಂಡಳಿಯಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಭತ್ಯೆಗಳ ಮೇಲೂ ಕಣ್ಣಿಟ್ಟಿರುವ ಸರ್ಕಾರ, ಸೆಕ್ಷನ್ 72ಕ್ಕೆ ತಿದ್ದುಪಡಿ ಸೂಚಿಸಿದೆ. ವಕ್ಫ್‌ನ ವಾರ್ಷಿಕ ಆದಾಯದಲ್ಲಿ ಶೇ.7ರಷ್ಟನ್ನು ಮಂಡಳಿಯಲ್ಲಿ ಸೇವೆ ಸಲ್ಲಿಸಿದವರಿಗೆ ಭತ್ಯೆಯಾಗಿ ನೀಡಲಾಗುತ್ತಿತ್ತು. ಇದೀಗ, ಆ ಭತ್ಯೆಯನ್ನು ಶೇ.5ಕ್ಕೆ ಇಳಿಸಿದೆ. ಮಾತ್ರವಲ್ಲದೆ, ವಕ್ಫ್ ಮಂಡಳಿಯ ಸದಸ್ಯರು ಸಭೆಗೆ ಹಾಜರಾದಾಗ ನೀಡಲಾಗುತ್ತಿದ್ದ ಪ್ರಯಾಣ, ಊಟದ ಭತ್ಯೆಯನ್ನೂ ಕಸಿದುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ.
ಒಟ್ಟಿನಲ್ಲಿ, ಮುಸ್ಲಿಂ ಸಮುದಾಯದ ಆಸ್ತಿಯನ್ನು ಅವರಿಂದ ಕಸಿದುಕೊಳ್ಳುವುದು, ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಆರ್ಥಿಕ ನೆರವಿನ ಆಧಾರವಾಗಿದ್ದ ವಕ್ಫ್ ಆಸ್ತಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ವಕ್ಫ್ ಆಸ್ತಿಯ ಆದಾಯದಿಂದ ವಕ್ಫ್ ಮಂಡಳಿಗಳು ನಡೆಸುತ್ತಿದ್ದ ಸಾಮಾಜಿಕ ಕಾರ್ಯಗಳಿಗೆ ಕೊಕ್ಕೆ ಹಾಕುವುದು ಕೇಂದ್ರದ ಹುನ್ನಾರವಾಗಿದೆ. ಮೋದಿ ಸರ್ಕಾರ ಮಂಡಿಸಿರುವ ಈ ಮಸೂದೆ ಅಂಗೀಕಾರವಾದರೆ, ಮುಸ್ಲಿಮರ ಧಾರ್ಮಿಕ ಆಚರಣೆಗಳು ಮಾತ್ರವಲ್ಲದೆ, ಸಾಮಾಜಿಕ ಚಟುವಟಿಕೆಗಳೂ ಕುಂಠಿತವೂ, ಕಡಿತವೂ ಆಗಲಿವೆ. ಈ ಮಸೂದೆ ಅಂಗೀಕಾರವಾಗದಂತೆ ಹೋರಾಟ ನಡೆಸಬೇಕಿರುವ ಅನಿವಾರ್ಯತೆ ದೇಶದ ಮುಂದಿದೆ.
ವಕ್ಫ್ ಕಾಯಿದೆ 1995ರಲ್ಲಿ ಜಾರಿಗೆ ಬಂದದ್ದಲ್ಲ. ಈ ಮೊದಲೇ ಇದ್ದ ಬೋರ್ಡಿಗೆ ತಿದ್ದಪಡಿ ಮಾಡಿದ್ದು ಅಷ್ಟೇ.