ಸುಪ್ರಿಂ ಕೋರ್ಟ್‌ನ ಈ ಬಹು ನಿರೀಕ್ಷಿತ ತೀರ್ಪು, ಪರಿಶಿಷ್ಟ ಜಾತಿಗಳನ್ನು ಉಪ-ವರ್ಗೀಕರಿಸುವಲ್ಲಿ ರಾಜ್ಯ ಸರ್ಕಾರಗಳಿಗಿದ್ದ ಅಡೆತಡೆಗಳನ್ನು ತೊರೆದುಹಾಕಿದೆ. ಒಳ ಮೀಸಲಾತಿ ವಿಚಾರದಲ್ಲಿ ತಮ್ಮ ಅಧಿಕಾರ ಮಿತಿಗಳನ್ನು ದಾಟಲು ರಾಜ್ಯ ಸರ್ಕಾರಗಳು ನಡೆಸಿದ 20 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ತಂದುಕೊಟ್ಟಿದೆ.
ಅಸ್ತಿತ್ವದಲ್ಲಿರುವ ಸಾಮಾಜಿಕ ನ್ಯಾಯದ ನೀತಿಗಳನ್ನು ಮತ್ತಷ್ಟು ಉತ್ತಮಗೊಳಿಸಲು ಅಡಚಣೆಯಾಗಿದ್ದ ದೀರ್ಘಕಾಲದ ಕಾನೂನನ್ನು ಸುಪ್ರೀಂ ಕೋರ್ಟ್ ಅಂತಿಮವಾಗಿ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಪೀಠವು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾದ ಮೀಸಲಾತಿಯನ್ನು ಉಪ-ವರ್ಗೀಕರಣ (ಒಳ ಮೀಸಲಾತಿ) ಮಾಡಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದೆ. ಎಸ್‌ಸಿ/ಎಸ್‌ಟಿ ವರ್ಗದಲ್ಲಿ ದೃಢೀಕರಣದ ಪ್ರಯೋಜನ ಪಡೆಯಲು ‘creamy layer’ (ಕೆನೆಪದರ) ಅಳವಡಿಕೆಗೆ ಸೂಚನೆ ನೀಡಿದೆ. ಈ ತೀರ್ಪಿನ ನಿಖರವಾದ ಸೂತ್ರೀಕರಣ ಮತ್ತು ಅನುಷ್ಠಾನದಲ್ಲಿ, ವಿಶೇಷವಾಗಿ ‘creamy layer’ ಭಾಗದಲ್ಲಿ ಅನೇಕ ಸಮಸ್ಯೆಗಳಿದ್ದರೂ, ಮೀಸಲಾತಿ ಹಂಚಿಕೆಯಲ್ಲಿ ಭಾರತದ ನ್ಯಾಯಶಾಸ್ತ್ರದ ಸುದೀರ್ಘ ಇತಿಹಾಸದಲ್ಲಿ ಇದೊಂದು ಗಮನಾರ್ಹ ಹೆಜ್ಜೆಯಾಗಿದೆ. ಈ ತೀರ್ಪು ಸಾಮಾಜಿಕ ನ್ಯಾಯದ ನೀತಿಗಳು ಮತ್ತು ರಾಜಕೀಯದ ಮೇಲಿನ ಆಕ್ರಮಣವನ್ನು ಎದುರಿಸಲು ಹಾಗೂ ಸಾಮಾಜಿಕ ನ್ಯಾಯವನ್ನು ಸಕಾರಗೊಳಿಸಲು ಸಹಾಯ ಮಾಡುತ್ತದೆ.
ಪಂಜಾಬ್ ಸರ್ಕಾರ v/s ದೇವಿಂದರ್ ಸಿಂಗ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ನ ಈ ಬಹು ನಿರೀಕ್ಷಿತ ತೀರ್ಪು, ಪರಿಶಿಷ್ಟ ಜಾತಿಗಳನ್ನು ಉಪ-ವರ್ಗೀಕರಿಸುವಲ್ಲಿ ರಾಜ್ಯ ಸರ್ಕಾರಗಳಿಗಿದ್ದ ಅಡೆತಡೆಗಳನ್ನು ತೊರೆದುಹಾಕಿದೆ. ಒಳ ಮೀಸಲಾತಿ ವಿಚಾರದಲ್ಲಿ ತಮ್ಮ ಅಧಿಕಾರ ಮಿತಿಗಳನ್ನು ದಾಟಲು ರಾಜ್ಯ ಸರ್ಕಾರಗಳು ನಡೆಸಿದ 20 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ತಂದುಕೊಟ್ಟಿದೆ.
ಅಂದಹಾಗೆ, ಸಂವಿಧಾನದ 341ನೇ ವಿಧಿಯ ವ್ಯಾಖ್ಯಾನವು ವಿವಾದದ ಅಂಶವಾಗಿತ್ತು. ಈ ವಿಧಿಯು ದೇಶದಾದ್ಯಂತ ಪರಿಶಿಷ್ಟ ಜಾತಿಗಳೆಂದು ಪರಿಗಣಿಸಬೇಕಾದ ಜಾತಿಗಳ ಪಟ್ಟಿಯನ್ನು ನಿರ್ಧರಿಸಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡಿತ್ತು. ಅಲ್ಲದೆ, 2004ರಲ್ಲಿ, ಇ.ವಿ ಚಿನ್ನಯ್ಯ v/s ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐದು ಸದಸ್ಯರ ಪೀಠವು ನೀಡಿದ್ದ ಆದೇಶವು ಉಪ-ಕೋಟಾಗಳನ್ನು (ಒಳಮೀಸಲಾತಿ) ನೀಡುವ ಉದ್ದೇಶಕ್ಕಾಗಿ ಜಾತಿ ಉಪ-ವರ್ಗೀಕರಣ ಮಾಡುವ ಸರ್ಕಾರಗಳ ಯಾವುದೇ ಪ್ರಯತ್ನವು ಕಾನೂನುಬಾಹಿರವೆಂದು ಹೇಳಿತ್ತು. ಅಲ್ಲದೆ, 341ನೇ ವಿಧಿಯ ಅಡಿಯಲ್ಲಿ ಎಲ್ಲ ಪರಿಶಿಷ್ಟ ಜಾತಿಗಳು ಉಪ-ವರ್ಗೀಕರಣ ಮಾಡಲು ಸಾಧ್ಯವಾಗದ ಏಕರೂಪದ ವರ್ಗವೆಂದು ಹೇಳಿತ್ತು.
ಇ.ವಿ ಚಿನ್ನಯ್ಯ ಪ್ರಕರಣದಲ್ಲಿನ ಆ ತೀರ್ಪು ಸಾಮಾಜಿಕ ವಾಸ್ತವದಿಂದ ದೂರ ಉಳಿದಿತ್ತು. ಅಲ್ಲದೆ, ಸಾಮಾಜಿಕ ನೆಲೆಯಲ್ಲಿ ಮೂಲಭೂತ ಸಂಪರ್ಕವಿಲ್ಲದೆ ಬಳಲುತ್ತಿತ್ತು. ಎಸ್‌ಸಿ/ಎಸ್‌ಟಿಯಂತಹ ವರ್ಗಗಳು ವಿವಿಧ ರೀತಿಯ ಸಾಂಪ್ರದಾಯಿಕ ಉದ್ಯೋಗಗಳ ಆಧಾರದ ಮೇಲೆ ವಿಭಿನ್ನ ಸಾಮಾಜಿಕ ಸ್ಥಾನಮಾನವನ್ನು ಹೊಂದಿರುವ ಸಮುದಾಯಗಳ ಅತ್ಯಂತ ದೊಡ್ಡ ಬುಟ್ಟಿಗಳಾಗಿವೆ. ಆದ್ದರಿಂದ, ಆ ತೀರ್ಪು ವಿಭಿನ್ನ ಸಮುದಾಯಗಳ ವಿವಿಧ ಹಂತದ ಅನನುಕೂಲತೆಯನ್ನು ಒಪ್ಪಿಕೊಳ್ಳುವಲ್ಲಿ ವಿಫಲವಾಗಿತ್ತು. ಹಾಗೆ ನೋಡಿದರೆ, ಐತಿಹಾಸಿಕವಾಗಿ ಎಸ್‌ಸಿ/ಎಸ್‌ಟಿ ಸಮುದಾಯದೊಳಗೆ ಅತ್ಯಂತ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ಆಧುನಿಕ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ವಂಚಿತವಾಗಿದ್ದವು. ಆದ್ದರಿಂದ ದೃಢೀಕರಣ ನೀತಿಗಳ ಲಾಭವನ್ನು ಪಡೆಯುವಲ್ಲಿಯೂ ಹಿಂದೆ ಉಳಿದಿದ್ದವು. ಇದನ್ನು, ಬಿಹಾರದ ಇತ್ತೀಚಿನ ಜಾತಿ ಸಮೀಕ್ಷೆಯು ಬಹಿರಂಗ ಪಡಿಸಿದೆ.
ಬಿಹಾರ ಜಾತಿ ಗಣತಿಯ ಅಂಕಿಅಂಶಗಳು ಎಸ್‌ಸಿ ವರ್ಗದ ವಿವಿಧ ಜಾತಿಗಳ ನಡುವೆ ಶೈಕ್ಷಣಿಕವಾಗಿ ಸಂಪೂರ್ಣ ಅಸಮಾನತೆಯನ್ನು ತೋರಿಸಿದೆ. ಪ್ರತಿ 10,000 ವ್ಯಕ್ತಿಗಳಲ್ಲಿ 124 ಧೋಬಿಗಳು ಉನ್ನತ ಶಿಕ್ಷಣ ಪದವಿಗಳನ್ನು (PG ಅಥವಾ ವೃತ್ತಿಪರ) ಹೊಂದಿದ್ದಾರೆ. ಆದರೆ, ದುಸಾದ್ ಮತ್ತು ಅತ್ಯಂತ ಹಿಂದುಳಿದ ಮುಸಾಹರ್ ಸಮುದಾಯದಲ್ಲಿ ಪ್ರತಿ 10,000 ಜನರಲ್ಲಿ ಕ್ರಮವಾಗಿ ಕೇವಲ 45 ಮತ್ತು ಒಬ್ಬರು ಮಾತ್ರವೇ ಉನ್ನತ ಶಿಕ್ಷಣ ಪಡೆದಿದ್ದಾರೆ. ತಮಿಳುನಾಡಿನಲ್ಲಿ, ರಾಜ್ಯದ ಎಸ್‌ಸಿ ಜನಸಂಖ್ಯೆಯಲ್ಲಿ ಅರುಂತಥಿಯಾರ್ ಸಮುದಾಯದ ಜನರು ಶೇ.16ರಷ್ಟಿದ್ದಾರೆ. ಆದಾಗ್ಯೂ, ಸರ್ಕಾರಿ ನೌಕರರಲ್ಲಿ ಅವರ ಪಾಲು ಕೇವಲ ಶೇ.0.5 ರಷ್ಟಿದೆ. ಇಂತಹ ಅಸಮಾನತೆಗೆ ಸಾಮಾನ್ಯವಾದ ಪರಿಹಾರವೆಂದರೆ ವರ್ಗವನ್ನು ಎರಡು ಅಥವಾ ಹೆಚ್ಚಿನ ಉಪ-ವರ್ಗಗಳಾಗಿ ವಿಂಗಡಿಸುವುದು ಮತ್ತು ಜನಸಂಖ್ಯೆಯಲ್ಲಿ ಅವರ ಪಾಲಿಗೆ ಅನುಗುಣವಾಗಿ ಪ್ರತಿ ಉಪ-ವರ್ಗಗಳಿಗೆ ಪ್ರತ್ಯೇಕ ಕೋಟಾಗಳನ್ನು ನಿಗದಿಪಡಿಸುವುದು. ಆ ನಿಟ್ಟಿನಲ್ಲಿ ಪಂಜಾಬ್, ಹರಿಯಾಣ, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯ ಸರ್ಕಾರಗಳು ಪ್ರಯತ್ನಿಸಿವೆ. ಆದರೆ, ಆ ಪ್ರಯತ್ನಗಳು ನ್ಯಾಯಾಂಗದ ಅಸಮ್ಮತಿಯ ಕಾರಣದಿಂದಾಗಿ ವಿಫಲವಾಗಿವೆ.
ಅಂತಿಮವಾಗಿ, 2014ರಲ್ಲಿ ಸಿಜೆಐ ಆರ್.ಎಂ ಲೋಧಾ ಅವರ ಅವಲೋಕನಗಳು ಮತ್ತು 2020ರಲ್ಲಿ ಐವರು ಸದಸ್ಯರ ಸಾಂವಿಧಾನಿಕ ಪೀಠದ ತೀರ್ಪಿನ ನಂತರ, ಪ್ರಕರಣವನ್ನು ಅಂತಿಮ ವಿಚಾರಣೆಗಾಗಿ ಏಳು ಸದಸ್ಯರ ವಿಸ್ತೃತ ಪೀಠಕ್ಕೆ ಉಲ್ಲೇಖಿಸಲಾಗಿತ್ತು. ಈಗ ಸಿಜೆಐ ಡಿ.ವೈ ಚಂದ್ರಚೂಡ್ ಅವರೇ ಸ್ವತಃ ರಚಿಸಿರುವ ತೀರ್ಪು, ರೂಪಕ್ಕಿಂತ ವಸ್ತುನಿಷ್ಠತೆಗೆ ಹೆಚ್ಚು ಆದ್ಯತೆ ನೀಡಿದೆ. ಅತ್ಯಂತ ವೈವಿಧ್ಯಮಯವಾದ ಪರಿಶಿಷ್ಟ ಜಾತಿಗಳೊಳಗೆ ವಿತರಣಾ ನ್ಯಾಯದ ಅಳವಡಿಕೆಯನ್ನು ಪ್ರಶಂಸಿಸುತ್ತದೆ. ಹೆಚ್ಚು ಪ್ರಯೋಜನಕಾರಿ ನೀತಿಗಳಿಗೆ ಅರ್ಹವಾದ ಗುಂಪುಗಳನ್ನು ಗುರುತಿಸಲು ಪರಿಶಿಷ್ಟ ಜಾತಿಗಳನ್ನು ಉಪ-ವರ್ಗೀಕರಿಸಲು ರಾಜ್ಯ ಸರ್ಕಾರಗಳು ಸಮರ್ಥವಾಗಿವೆ ಎಂದು ಅಭಿಪ್ರಾಯಪಟ್ಟಿದೆ. ಕಾನೂನಿನ ಸಮಾನ ರಕ್ಷಣೆ ಎಂದರೆ, ‘ಭಿಕ್ಷುಕ ಮತ್ತು ರಾಜ’ ಇಬ್ಬರನ್ನೂ ಬೀದಿಗಳಲ್ಲಿ ಭಿಕ್ಷೆ ಬೇಡುವುದನ್ನು ನಿಷೇಧಿಸುವ ನಿಯಮವಲ್ಲ ಎಂದು ಅದು ದೃಢವಾಗಿ ಹೇಳಿದೆ.
ಇ.ವಿ ಚಿನ್ನಯ್ಯ ಪ್ರಕರಣದ ತೀರ್ಪನ್ನು ರದ್ದುಪಡಿಸುವ ಮೂಲಕ, ಅದರ ನಿಯಮಗಳಿಗಿದ್ದ ಔಪಚಾರಿಕ ಕಾನೂನುಬದ್ಧತೆಯನ್ನು ತೊಡೆದುಹಾಕುವ ಮೂಲಕ, ನ್ಯಾಯಾಲಯವು ಪರಿಶಿಷ್ಟ ಜಾತಿಗಳೊಳಗಿನ ಅತ್ಯಂತ ಹಿಂದುಳಿದ ವರ್ಗಗಳ ಬಗ್ಗೆ ಸೂಕ್ಷ್ಮತೆಯನ್ನು ಪ್ರದರ್ಶಿಸಿದೆ. ಜೊತೆಗೆ, ತಳ ಸಮುದಾಯಗಳ ಐತಿಹಾಸಿಕ ಕುಂದುಕೊರತೆಗಳನ್ನು ಪರಿಹರಿಸುವ ಕ್ರಮಗಳನ್ನು ಪಟ್ಟಿ ಮಾಡಿದೆ. ಅದೇ ಸಮಯದಲ್ಲಿ, ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರ ವ್ಯತಿರಿಕ್ತ ಹೇಳಿಕೆಗಳ ಹೊರತಾಗಿಯೂ, ತೀರ್ಪು 1992ರ ಇಂದ್ರ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಪ್ರಸ್ಥಾಪಿತವಾದ ಸಾಮಾಜಿಕ ನ್ಯಾಯ ಮತ್ತು ಕಾನೂನು ಒಮ್ಮತವನ್ನು ಬಲಪಡಿಸುತ್ತದೆ. ಇದು ಹೆಚ್ಚು ಪರಿಣಾಮಕಾರಿಯಾದ, ನ್ಯಾಯೋಚಿತವಾದ ಆಡಳಿತಕ್ಕಾಗಿನ ಹೋರಾಟವನ್ನು ಉತ್ಕೃಷ್ಟಗೊಳಿಸುತ್ತದೆ.
ಸಾಮಾಜಿಕ ನ್ಯಾಯಕ್ಕಾಗಿ ಕಾನೂನಾತ್ಮಕವಾದ ಯಾವುದೇ ವರ್ಗೀಕರಣಗಳು ಸಮಂಜಸ ಮತ್ತು ತರ್ಕಬದ್ಧವಾಗಿರಬೇಕು. ಇದು ಸಾಮಾಜಿಕ ನ್ಯಾಯಕ್ಕಾಗಿ ದಾಖಲೆ ಆಧಾರಿತ ನೀತಿಗಳ ದೀರ್ಘಾವಧಿಯ ಅಗತ್ಯವನ್ನು ದೃಢೀಕರಿಸುತ್ತದೆ. ತನ್ನ ತೀರ್ಪಿನಲ್ಲಿ ಇಡಬ್ಲ್ಯೂಎಸ್ ಕೋಟಾವನ್ನು ಬಹುತೇಕ ಕೈಬಿಟ್ಟಿರುವ ನ್ಯಾಯಾಲಯವು ಅಂಕಿ-ಅಂಶದೊಂದಿಗೆ ನೀತಿಗಳ ಅನುಷ್ಠಾನದ ಬಗ್ಗೆ ಮಾತನಾಡಿರುವುದು ರಾಷ್ಟ್ರವ್ಯಾಪಿ ಜಾತಿ ಜನಗಣತಿಯ ಅಗತ್ಯವನ್ನು ಬಲಪಡಿಸುತ್ತದೆ.
ಈ ವರದಿ ಓದಿದ್ದೀರಾ?: ಹೋರಾಟಗಾಥೆ | ಮರೆಯಲಾದೀತೇ ಒಳಮೀಸಲಾತಿಯ ನೋವಿನ ಚರಿತೆ?
ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ‘ಎಸ್‌ಸಿ/ಎಸ್‌ಟಿ ವರ್ಗದೊಳಗೂ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ವರ್ಗಗಳಿವೆ. ಆ ವರ್ಗಗಳಿಗೆ ಪ್ರಾತಿನಿಧ್ಯ ಮತ್ತು ಅವಕಾಶಗಳು ಹೆಚ್ಚಾಗಿ ದೊರೆಯುತ್ತಿಲ್ಲ. ಅಸಮಾನತೆಯು ನೆಲದ ವಾಸ್ತವವಾಗಿದೆ’ ಎಂದು ಹೇಳಿದರು. ಎಸ್‌ಸಿ ಸಮುದಾಯಕ್ಕೆ ಸೇರಿದವರಾಗಿದ್ದರೂ, ಅಧಿಕಾರಶಾಹಿ ಮತ್ತು ಸಾಮಾನ್ಯ ಕಾರ್ಮಿಕರ ಮಕ್ಕಳನ್ನು ಸಮಾನರೆಂದು ಪರಿಗಣಿಸುವುದು ಸಂವಿಧಾನದ ಆದೇಶವನ್ನು ಸೋಲಿಸುತ್ತದೆ ಎಂದು ಅವರು ಹೇಳಿದ್ದಾರೆ. ಅದಾಗ್ಯೂ, ಎಸ್‌ಸಿ ಜಾತಿ ಉಪ-ವರ್ಗೀಕರಣದೊಳಗೆ ‘ಕ್ರೀಮಿ ಲೇಯರ್’ಅನ್ನು ಅಳವಡಿಸಬೇಕು ಎಂದಿದ್ದಾರೆ.
ನ್ಯಾಯಾಲಯದ ತೀರ್ಪಿನಂತೆ ಪರಿಶಿಷ್ಟ ಜಾತಿಯೊಳಗೆ ‘ಕ್ರೀಮಿ ಲೇಯರ್’ಯನ್ನು ವಿಸ್ತರಿಸಬಹುದೇ? ಇಲ್ಲಿಯವರೆಗೆ, ಮೀಸಲು ವರ್ಗದೊಳಗೆ ಸವಲತ್ತು ಪಡೆದ ವಿಭಾಗಗಳನ್ನು (ಇಂದ್ರ ಸಾಹ್ನಿ ತೀರ್ಪಿನ ಭಾಷೆಯಲ್ಲಿ ‘ಕ್ರೀಮಿ ಲೇಯರ್’) ಹೊರಗಿಡುವ ನೀತಿಯು OBCಗೆ ಅನ್ವಯವಾಗುತ್ತಿದೆ. ಆದರೆ, SC ಅಥವಾ ST ವರ್ಗಕ್ಕೆ ಅನ್ವಯಿಸುವುದಿಲ್ಲ. ಈ ಸಮಸ್ಯೆಯನ್ನು ಸಾಂವಿಧಾನಿಕ ಪೀಠವು ಸರಿಯಾಗಿ ಉಲ್ಲೇಖಿಸಿಲ್ಲ. ಆದರೂ, ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ಸ್ಪಷ್ಟಪಡಿಸಿದಂತೆ, ‘ಕ್ರೀಮಿ ಲೇಯರ್’ಅನ್ನು ಗುರುತಿಸುವ ಮಾನದಂಡಗಳು OBCಗಳ ಸಂದರ್ಭದಲ್ಲಿ ಬಳಸುವ ಮಾನದಂಡಕ್ಕಿಂತ ಭಿನ್ನವಾಗಿರಬೇಕು.
ಈ ರೀತಿಯ ಮಹತ್ವದ ತೀರ್ಪು ಕಾನೂನು ಮತ್ತು ರಾಜಕೀಯ ವಲಯಗಳಲ್ಲಿ ವಿವಾದಕ್ಕೆ ಒಳಗಾಗಬಹುದು. ಇದು ದೃಢೀಕರಣ-ಕ್ರಿಯೆಯ ಆಡಳಿತಾತ್ಮಕ ದುರ್ಬಲಗೊಳಿಸುವಿಕೆಗೆ ಕಾರಣವಾಗಬಹುದು. ಈ ವಿವಾದವು ರಾಜಕೀಯವಾಗಿ, ದಲಿತರನ್ನು ವಿಭಜಿಸುವ ಪ್ರಸ್ತುತ ಆಡಳಿತದ ಕ್ರಮಗಳಿಗೆ ಸಹಾಯ ಮಾಡಬಹುದು. ಸ್ಪಷ್ಟವಾಗಿ ಹೇಳುವುದಾದರೆ, ಈ ಕಾನೂನು ಮತ್ತು ರಾಜಕೀಯ ವಿವಾದಗಳು ಅತ್ಯಂತ ಹಿಂದುಳಿದ ದಲಿತ ಸಮುದಾಯಗಳ ನಡುವೆ ರಾಜಕೀಯ ಅಸಮಾಧಾನದ ಜೊತೆಗೆ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ತಾರತಮ್ಯದ ನೆಲದ ವಾಸ್ತವತೆಯನ್ನು ನಿರ್ಲಕ್ಷಿಸುತ್ತವೆ. ಸಾಮಾಜಿಕ ನ್ಯಾಯದ ರಾಜಕಾರಣ ಮತ್ತು ನೀತಿಗಳಿಗೆ ಬದ್ದರಾಗಿರುವವರು ಅಂತಹ ಸಮಸ್ಯೆಗಳನ್ನು ಕಾರ್ಪೆಟ್ ಅಡಿಗೆ ತಳ್ಳಬಾರದು. ಬದಲಾಗಿ, ಅವರು ಈ ತೀರ್ಪನ್ನು ಸ್ವಾಗತಿಸಬೇಕು. ಅತ್ಯಂತ ಹಿಂದುಳಿದ ಸಮುದಾಯಗಳನ್ನು ಎಚ್ಚರಿಕೆಯಿಂದ ಸಾಕ್ಷ್ಯಾಧಾರಿತವಾಗಿ ಗುರುತಿಸಬೇಕು. ಜೊತೆಗೆ, ಉಪ ವರ್ಗೀಕರಣ ಹಾಗೂ ಕ್ರೀಮಿಲೇಯರ್‌ಗಳು SC/ST ಕೋಟಾದ ಸೀಟುಗಳನ್ನು ಮೀಸಲು ರಹಿತ ವರ್ಗಗಳಿಗೆ ತಿರುಗಿಸುವ ಮಾರ್ಗವಾಗದಂತೆ ನೋಡಿಕೊಳ್ಳಲು ನಿಬಂಧನೆಗಳನ್ನು ಜಾರಿಗೊಳಿಸಬೇಕು.
– ಯೋಗೇಂದ್ರ ಯಾದವ್ ಮತ್ತು ಪ್ರಣವ್ ಧವನ್
ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ