“ಬೆಂಗಳೂರು ಸ್ಥಾಪಕ, ನಮ್ಮೆಲ್ಲರ ನಾಡ ದೊರೆ ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಮುಂದಿನ ಭವಿಷ್ಯದ ಯುವ ಪೀಳಿಗೆಗೆ ಹೆಚ್ಚು ತಿಳಿಸುವಂತಾಗಬೇಕು” ಎಂದು ಬಿಳಗುಂಬ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನವೀನ್ಗೌಡ ಬಿಳಗುಂಬ ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಅಭಿಮಾನಿಗಳು ಬಳಗ ಮತ್ತು ಹಿರಿಯ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡಿದ್ದ 515ನೇ ನಾಡ ಪ್ರಭು ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಸರ ಪ್ರೇಮಿ ಬಿ.ಟಿ.ರಾಜೇಂದ್ರ, “ಕೆಂಪೇಗೌಡರ ಕುರಿತು ಪ್ರತಿ ಶಾಲಾ ಹಂತದಲ್ಲೂ ತಿಳಿಸಬೇಕಿದೆ. ಮಕ್ಕಳಿಗೆ ಅವರು ಕಟ್ಟಿದ ಕೆರೆಗಳು, ಕೋಟೆಗಳು ಮತ್ತು ಪೇಟೆಗಳ ಬಗ್ಗೆ ಅರಿವು ಮೂಡಿಸಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಿ.ಟಿ.ದಿನೇಶ್ ಬಿಳಗುಂಬ ಮಾತನಾಡಿ, “ನಾಡಪ್ರಭು ಕೆಂಪೇಗೌಡರ ಸೇವೆ ಅನನ್ಯ. ಅವರು ನಿರ್ಮಿಸಿದ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಅವರು ಪ್ರತಿ ವರ್ಗದವರಿಗೂ ಪೇಟೆಗಳನ್ನು ಸ್ಥಾಪಿಸಿದ್ದಾರೆ. ಅವರು ನಿರ್ಮಿಸಿದ ಕೆರೆಗಳು ಕೆಲವು ಕಣ್ಮರೆಯಾಗಿವೆ. ಅವಕ್ಕೆ ಮರುಜೀವ ನೀಡಿದರೆ ಉತ್ತಮವಾಗಿರುತ್ತದೆ” ಎಂದು ತಿಳಿಸಿದರು.

ಅತಿಥಿಗಳಾಗಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹೇಶ್ ಮಾತನಾಡಿ, “ಕೆಂಪೇಗೌಡರು ಎಲ್ಲರೂ ರಾಜರಾದರೆ ಅವರು ನಾಡದೊರೆ, ಧರ್ಮ ರತ್ನಾಕರ ಎಂದೆನಿಸಿಕೊಂಡರು. ಅವರಂತೆ ನಾವು ಮಾದರಿಯಾಗಬೇಕು. ಊರಿನ ಶಾಲೆಗೆ ಬೇಕಾದ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ” ಎಂದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೆಂಚೀಗೌಡ, ಪಶು ವೈದ್ಯ ಮಲ್ಲೇಶ್, ಮುಖ್ಯ ಶಿಕ್ಷಕಿ ಲತಾ, ಬಿ.ಟಿ.ರಾಮಯ್ಯ, ಮಹದೇವಣ್ಣ, ರಾಜಣ್ಣ, ಕನ್ನಡ ಪಾಕಶಾಲೆ ಅನಿಲ್ ಮತ್ತು ತಂಡ , ತಿಮ್ಮಣ್ಣ, ಭಾಗ್ಯಮ್ಮ.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಎಲ್ಲಾ ಮಕ್ಕಳಿಗೂ ಹಿರಿಯ ವಿದ್ಯಾರ್ಥಿಗಳು ಹಾಗೂ ದಾನಿಗಳಿಂದ ಸಂಗ್ರಹಿಸಿದ ಧ್ವನಿವರ್ಧಕ, ಟೈ, ಬೆಲ್ಟ್, ಐ.ಡಿ.ಕಾರ್ಡ್, ಶೂ, ಸಾಕ್ಸ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಕೆಂಪೇಗೌಡರ ಕುರಿತು ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನವೀನ್ಗೌಡ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹೇಶ್ರನ್ನು ಕೆಂಪೇಗೌಡರ ಅಭಿಮಾನಿಗಳು ಬಳಗ ಬಿಳಗುಂಬ ಹಾಗೂ ಶಾಲಾ ವತಿಯಿಂದ ಗೌರವಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಯೋಗಾನಂದ ಅಧ್ಯಕ್ಷತೆ ವಹಿಸಿದ್ದರು. ನೇಗಿಲಯೋಗಿ ಟ್ರಸ್ಟಿನ ಕಾರ್ಯದರ್ಶಿ ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಉಮೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
