ಈ ದಿನ ಸಂಪಾದಕೀಯ | ಭರ್ಜಿಯ ಕೊನೆಗೆ ಪ್ರೀತಿಯ ಮುಳ್ಳು ಚುಚ್ಚಿದ ತಾಯಂದಿರು – ಆಲಿಸಲಿ ‘ಮಕ್ಕಳು’

Date:

Advertisements
ಸರೋಜ್‌ ದೇವಿ ಮತ್ತು ರಜಿ಼ಯಾ ಪರ್ವೀನ್‌- ಸೋದರತೆಯು ದೇಶಗಳೊಳಗೇ ದಿಕ್ಕೆಡುತ್ತಿರುವಾಗ ಗಡಿಯಾಚೆ ಈಚೆಗಿನವರು ಮನುಷ್ಯತ್ವದ ಮಾತುಗಳನ್ನು ಆಡುತ್ತಿದ್ದಾರೆ. ಅವರಿಬ್ಬರ ಮಕ್ಕಳೇನೋ ಸೋದರತೆಯ ಪಾಠ ಕಲಿತಿದ್ದಾರೆ. ಕಲಿಯಬೇಕಾದ್ದು ಈ ಮೂರೂ ದೇಶಗಳಲ್ಲಿ ಎದೆ ಬಡಿದುಕೊಂಡು ಅಬ್ಬರಿಸುವ ಮಕ್ಕಳಷ್ಟೇ.

ಬಹಳ ಅಪರೂಪವಾಗಿ ಇಂತಹ ಸಂಗತಿಗಳನ್ನು ಕಾಣುತ್ತೇವೆ. ಆದರೆ, ಈ ತಾಯಂದಿರು ಅದನ್ನು ಎಷ್ಟು ಸಹಜವಾಗಿ ಸಾಧಿಸಿದ್ದಾರೆಂದರೆ, ಅದು ಅಪರೂಪವೂ ಅಲ್ಲ; ಅಂತಹ ವಿಶೇಷವೂ ಅಲ್ಲ ಎಂಬಂತೆ. ಎಲ್ಲರಿಗೂ ನೀರಜ್‌ ಚೋಪ್ರಾ ಗೊತ್ತಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ನಮ್ಮ ಭಾರತಕ್ಕೆ ಚಿನ್ನ ತಂದಾತ. ಈಗ ಅರ್ಷದ್‌ ನದೀಮ್‌ ಸಹ ಗೊತ್ತಾಗಿದ್ದಾನೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಮ್ಮ ಸೋದರ ದೇಶ ಪಾಕಿಸ್ತಾನಕ್ಕೆ ಚಿನ್ನ ತಂದಿರುವವನು. ಆದರೆ, ಅವರಿಬ್ಬರಷ್ಟೇ ಎಲ್ಲರಿಗೂ ಗೊತ್ತಾಗಿಲ್ಲ. ಸರೋಜ್‌ ದೇವಿ ಮತ್ತು ರಜಿ಼ಯಾ ಪರ್ವೀನ್‌ ಸಹ ನಮ್ಮ ಹೃದಯ ಒದ್ದೆ ಮಾಡಿದ್ದಾರೆ.

ಹರಿಯಾಣದ ಪಾಣಿಪತ್‌ ಜಿಲ್ಲೆಯ ಮಡ್ಲಾಡಾ ತಾಲೂಕಿನ ಖಾಂಡ್ರಾ ಹಳ್ಳಿಯ ಸರೋಜ್‌ ದೇವಿಯ ಮಗನೇ ನೀರಜ್‌ ಚೋಪ್ರಾ. ಪಾಕಿಸ್ತಾನದ ಪಂಜಾಬಿನ ಖಾನೆವಾಲ್‌ ಎಂಬ ಹಳ್ಳಿಯ ರಜಿ಼ಯಾ ಪರ್ವೀನ್‌ ಮಗ ಅರ್ಷದ್‌ ನದೀಮ್‌. ಈ ಇಬ್ಬರು ಗಂಡು ಮಕ್ಕಳು ಇದುವರೆಗೆ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದ ಹತ್ತೂ ಬಾರಿ ನೀರಜ್‌ ಚೋಪ್ರಾನೇ ಮುಂದೆ ಇದ್ದದ್ದು. ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರೀಡೆಯನ್ನೂ ಯುದ್ಧದಂತೆ ಬಿಂಬಿಸುವ ರಕ್ತಪಿಪಾಸುಗಳ ಅಬ್ಬರ ಈ ಈರ್ವರನ್ನೆಂದೂ ತಾಕಿಲ್ಲ. ನದೀಮ್‌ ಕುರಿತಾಗಿ ಟೀಕೆ ಬಂದಾಗೊಮ್ಮೆ ನೀರಜ್‌ ಆತನ ಬೆಂಬಲಕ್ಕೂ ನಿಂತಿದ್ದ. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮುಂಚೆ ಈ ಮಾರ್ಚ್‌ನಲ್ಲಿ ನದೀಮ್‌ನ ಒಂದು ಹೇಳಿಕೆ ಹೊರಬಂದಿತ್ತು. ತಾನು ಏಳೆಂಟು ವರ್ಷಗಳಿಂದ ಅದೇ ಹಳೆಯ ಜಾವೆಲಿನ್‌ ಬಳಸುತ್ತಿದ್ದೇನೆಂದೂ, ಹೊಸ ಪರಿಕರಗಳು ಇಲ್ಲದೇ ಇದ್ದರೆ ಗೆಲುವು ಕಷ್ಟವಾಗಬಹುದೆಂಬ ಹಳಹಳ ಹೊರಹಾಕಿದ್ದ. ಆಗ ಗಡಿಯ ಈ ಕಡೆಯ ನೀರಜ್‌ ಆತನ ಪರವಾಗಿ ಬಹಿರಂಗವಾಗಿ ಮಾತುಗಳನ್ನಾಡಿದ್ದುದು ವರದಿಯಾಗಿತ್ತು. ಅಂದ ಹಾಗೆ ನೀರಜನಿಗೆ ಈಗ 26 ವರ್ಷ. ನೋಡಲು ಬಹಳ ದೊಡ್ಡವನಾಗಿ ಕಾಣುವ ನದೀಮನಿಗೆ 27 ವರ್ಷಗಳು.

ತಾಯಂದಿರು ಮಕ್ಕಳ ಶ್ರೇಯಸ್ಸನ್ನು ಬಯಸುವವರೇ. ಆದರೆ, ಈ ತಾಯಂದಿರದ್ದು ಸ್ವಲ್ಪ ವಿಚಿತ್ರ. ಅವರು ಬಯಸಿದ್ದು ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಕೂಸುಗಳದ್ದಷ್ಟೇ ಅಲ್ಲ. ಅವರಲ್ಲಿ ತಮ್ಮ ಮಗನ ಎದುರಾಳಿಯ ಕ್ರೀಡಾಳುವಿನ ಕುರಿತು ಮಮತೆ ಮುಂಚಿನಿಂದಲೂ ಇದ್ದಿತ್ತು ಅಂತ ನಮಗೆ ಈಗಲೇ ಗೊತ್ತಾಗಿದ್ದು. ಆದರೆ, ಅವರಿಬ್ಬರೂ ಪರಸ್ಪರ ಸ್ನೇಹಿತರೆಂದು ಕುಟುಂಬಗಳಿಗೂ ಗೊತ್ತಿತ್ತು.

Advertisements

ತನ್ನ ಹೊಸ ಜಾವೆಲಿನ್‌ಅನ್ನು ನದೀಮ್‌ 92.97 ಮೀಟರ್‌ ದೂರಕ್ಕೆ ಫ್ರಾನ್ಸಿನ ಮೈದಾನದಲ್ಲಿ ಎಸೆದ ತಕ್ಷಣ ಆತನಿಗೆ ಚಿನ್ನ ಗಟ್ಟಿಯೆಂದು ಟಿವಿ ಮುಂದೆ ಕೂತಿದ್ದ ನೀರಜ್‌ ಮನೆಯವರಿಗೆ ಗೊತ್ತಾಯಿತು. ಕಳೆದ ಒಲಿಂಪಿಕ್ಸ್‌ನಿಂದ ಇಲ್ಲಿಯವರೆಗೆ ಪ್ರಪಂಚದ ಜಾವೆಲಿನ್‌ ಕ್ಷೇತ್ರದ ಚಾಂಪಿಯನ್‌ ಆಗಿದ್ದ ನೀರಜ್‌ ಚೋಪ್ರಾನಿಗೆ ಬೆಳ್ಳಿ ಸಿಕ್ಕಿತು.

ಕಳೆದ ಒಲಿಂಪಿಕ್ಸ್‌ನಲ್ಲಿ ಮಾತ್ರವಲ್ಲದೇ, ಪ್ರಪಂಚದ ವಿವಿಧ ಚಾಂಪಿಯನ್‌ ಶಿಪ್‌ಗಳು, ಡೈಮಂಡ್‌ ಲೀಗ್‌, ಏಶ್ಯನ್‌ ಗೇಮ್ಸ್‌ ಮತ್ತು ಕಾಮನ್‌ ವೆಲ್ತ್‌ ಗೇಮ್ಸ್‌ಗಳಲ್ಲೂ ನೀರಜ್‌ಗೆ ಚಿನ್ನವೇ ಸಿಕ್ಕಿತು. ಈ ಸಾರಿ ಬೆಳ್ಳಿ. ಅದರ ಕುರಿತು ಆತನ ಚಿಕ್ಕಮ್ಮ ಕಮಲೇಶ್‌ ಹೇಳಿದ್ದೇನೆಂದರೆ, ಕಳೆದ ಟೋಕಿಯೋ ಒಲಿಂಪಿಕ್ಸ್‌ ನಂತರ ಬರೀ ಚಿನ್ನವೇ. ಬೆಳ್ಳಿ ಸಿಕ್ಕಿರಲಿಲ್ಲ. ಅದೂ ಬೇಕಿತ್ತು; ಈಗವನಿಗೆ ಅದೂ ಸಿಕ್ಕಿತು. ಈ ಕಮಲೇಶ್‌ ಸಹ ನದೀಮ್‌ ಅರ್ಷದ್‌ ಕುರಿತು ಆಡಿರುವ ಅಕ್ಕರೆಯ ಮಾತುಗಳು, ಸರೋಜಾ ದೇವಿ ಮತ್ತು ರಜಿ಼ಯಾ ಮಾತ್ರವೇ ‘ತಾಯಂದಿರಲ್ಲ’, ಇದು ನಮ್ಮೆಲ್ಲರ ಭಾವನೆ ಎಂದು ತೋರಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ʼಲಾಪತಾ ಲೇಡೀಸ್‌ʼ ಮತ್ತು ಕಾಣೆಯಾಗಿರುವ ಲಿಂಗಸೂಕ್ಷ್ಮತೆ

ತಾಯ್ತನವನ್ನು ವೈಭವೀಕರಿಸಿ ಅದು ಹೆಣ್ಣಿಗೆ ಮಾತ್ರ ಸೀಮಿತವೆಂಬಂತೆ ಬಿಂಬಿಸುವುದಿದೆ. ಅಲ್ಲ, ಇದು ಸಹಜೀವಿಗಳ ಕುರಿತು ಇರಲೇಬೇಕಾದ ಭಾವ. ತಾಯಿಗೆ ಆರೋಪಿಸಿ ಹೇಳುವುದು ವಾಡಿಕೆಯಷ್ಟೇ. ಎಲ್ಲರಿಗೂ ನೆನಪಿರಬೇಕಾದ ಇನ್ನೊಂದು ಸಂಗತಿಯೆಂದರೆ, ಭಾರತ ವಿಭಜನೆಯ ಕರಾಳತೆಯ ನೆನಪುಗಳು ಜೀವಂತವಾಗಿರುವುದು ಎರಡೂ ಕಡೆಯ ಪಂಜಾಬುಗಳು ಮತ್ತು ಹರಿಯಾಣದಂತಹ ಈ ಪ್ರದೇಶಗಳಲ್ಲೆ ಹೊರತು ದೂರದ ದಕ್ಷಿಣದಲ್ಲಲ್ಲ. ಮತ್ತು ಆ ಕರಾಳತೆಯು ಕೇವಲ ರಾಜಕೀಯ ವಿಭಜನೆಯೇ ಹೊರತು, ಮಾಗಿದ ಹೃದಯಗಳು ಅವನ್ನು ಪಕ್ಕಕ್ಕಿಟ್ಟಿವೆ. ರಜಿ಼ಯಾ ಪರ್ವೀನ್‌, ‘ಅವರಿಬ್ಬರೂ ಸ್ನೇಹಿತರಷ್ಟೇ ಅಲ್ಲ, ಸೋದರರೂ ಕೂಡಾ’ ಎಂದಿದ್ದಾರೆ.

ಸೋದರತೆಯು ದೇಶಗಳೊಳಗೇ ದಿಕ್ಕೆಡುತ್ತಿರುವಾಗ ಗಡಿಯಾಚೆ ಈಚೆಗಿನ ಮನುಷ್ಯರು ಆಡುತ್ತಿರುವ ಮಾತುಗಳಿವು. ಪಾಕಿಸ್ತಾನದಂತೆ ಬಾಂಗ್ಲಾದೇಶವೂ ಆಗಿಬಿಡುತ್ತದೇನೋ ಎಂಬ ಆತಂಕ ಈಚೆಗಿನ ಬೆಳವಣಿಗೆಗಳ ನಡುವೆ ಮೂಡಿದೆ. ಅಲ್ಲಿ ಆಡಳಿತ ಬದಲಾದಂತೆ ಅಲ್ಲಲ್ಲಿ ಹಿಂದೂಗಳ ಮೇಲೆ ದಾಳಿಯಾದ ವರ್ತಮಾನಗಳು ಬಂದಿವೆ. ಆದರೆ, ಅದೇ ಬಾಂಗ್ಲಾದೇಶದಲ್ಲೂ ಹಿಂದೂಗಳ ಪರ ನಿಂತು ಸೌಹಾರ್ದತೆಯ ಮಾತುಗಳನ್ನು ಆಡುತ್ತಿರುವವರೇ ಅಧಿಕ. ಸರೋಜ್‌, ಕಮಲೇಶ್‌, ರಜಿ಼ಯಾರಂತೆ.

ನದೀಮ್‌ ಅಷ್ಟೇನೂ ಸ್ಥಿತಿವಂತಿಕೆಯ ಕುಟುಂಬದಿಂದ ಬಂದವನಲ್ಲ. ಆಧುನಿಕ ತರಬೇತಿ, ಪರಿಕರಗಳು ಆತನಿಗೆ ಇರಲಿಲ್ಲ ಎಂಬುದನ್ನೂ ಗಮನಿಸಬೇಕು. ಪಾಕಿಸ್ತಾನದಲ್ಲೂ ಶ್ರೀಮಂತಿಕೆ ಇರುವುದು ಕ್ರಿಕೆಟಿಗರಿಗೇ. ಭಾರತದಲ್ಲೂ ಅಷ್ಟೇ. ಇದೇ ಕ್ರಿಕೆಟ್‌ ಅತಿ ರಾಷ್ಟ್ರೀಯತೆಯ ದುರಭಿಮಾನವನ್ನು ಬಿತ್ತಲೂ ಬಳಕೆಯಾಗುತ್ತಿದೆ. ಅಂತಹ ಅತಿರೇಕಗಳಿಲ್ಲದ ಜಾವೆಲಿನ್‌ ಕ್ರೀಡೆಯಲ್ಲಿ ಆತನ ಈ ಸಾರಿಯ ಎಸೆತ ಒಲಿಂಪಿಕ್‌ ಇತಿಹಾಸದಲ್ಲೇ ಅತ್ಯಂತ ಉದ್ದದ್ದು. ಪ್ರಪಂಚದಲ್ಲಿ ದಾಖಲಾಗಿರುವುದರಲ್ಲಿ ಆರನೇ ಉದ್ದ. ನೀರಜ್‌ನ ಹಲವು ಬಂಗಾರಗಳು, ಈ ಸಾರಿಯ ಬೆಳ್ಳಿಯನ್ನು ಸಂಭ್ರಮಿಸುವಂತೆಯೇ ನದೀಮ್‌ನ ಚಿನ್ನವನ್ನೂ ಸಂಭ್ರಮಿಸೋಣ.

ಇಲ್ಲಿ ತಾಯಂದಿರು ನಿಮಿತ್ತ ಮಾತ್ರ. ಅವರಿಬ್ಬರ ಮಕ್ಕಳೇನೋ ಸೋದರತೆಯ ಪಾಠ ಕಲಿತಿದ್ದಾರೆ. ಕಲಿಯಬೇಕಾದ್ದು ಈ ಮೂರೂ ದೇಶಗಳಲ್ಲಿ ಎದೆ ಬಡಿದುಕೊಂಡು ಅಬ್ಬರಿಸುವ ಮಕ್ಕಳಷ್ಟೇ. ಅವರೂ ಮಕ್ಕಳೇ ಅಲ್ಲವೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X