ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹದ ಆತಂಕ ಎದುರಾಗಿದೆ. ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜಿಲ್ಲೆಯ ಕಮೆದ, ನಂದಪ್ರಯಾಗ ಮತ್ತು ಚಿಂಕಾದಲ್ಲಿ ಗುಡ್ಡು ಕುಸಿದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ತುಂಬಿಕೊಂಡಿದೆ. ಭೂಕುಸಿತವೂ ಉಂಟಾಗಿದೆ.
ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯು ಹಲವಾರು ಸ್ಥಳಗಳನ್ನು ಸಂಪರ್ಕಸುವ ಪ್ರಮುಖ ರಸ್ತೆಯಾಗಿದೆ. ಯಾತ್ರಾರ್ಥಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಹೆಚ್ಚಾಗಿ ಬಳಸುವ ಈ ರಸ್ತೆಯನ್ನು ಬಂದ್ ಮಾಡಿರುವುದರಿಂದ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಬದರಿನಾಥಕ್ಕೆ ತೆರಳುತ್ತಿದ್ದ ಭಕ್ತರು ಮತ್ತು ಪ್ರವಾಸಿಗರು ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಗುಡ್ಡಗಳ ಅವಶೇಷಗಳನ್ನು ತೆರವುಗೊಳಿಸಿ, ಮುಂದಿನ ಪ್ರಯಾಣ ಆರಂಭಿಸಲು ಕಾಯುತ್ತಿದ್ದಾರೆ.
ಸ್ಥಳೀಯ ಅಧಿಕಾರಿಗಳು ಅವಶೇಷಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಸ್ತೆಗೆ ಬಿದ್ದಿರುವ ಕಲ್ಲು, ಮಣ್ಣು ತೆರವುಗೊಳಿಸಲು ಬುಲ್ಡೋಜರ್ ಹಾಗೂ ಇತರೆ ಭಾರೀ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿಯು ಸಾಧ್ಯವಾದಷ್ಟು ಬೇಗ ರಸ್ತೆಯನ್ನು ಸಂಚಾರಕ್ಕೆ ಒದಗಿಸುವುದಾಗಿ ಭರವಸೆ ನೀಡಿದೆ.
ಈ ಪ್ರದೇಶದಲ್ಲಿ ಹವಾಮಾನ ವೈಪರೀತ್ಯವಾಗಿದ್ದು, ಹೆಚ್ಚಿನ ಭೂಕುಸಿತಗಳು ಸಂಭವಿಸುವ ಆತಂಕವಿದೆ. ಅಧಿಕಾರಿಗಳು ಹವಾಮಾನ ಪರಿಸ್ಥಿತಿಗಳನ್ನು ಗಮನಿಸುತ್ತಿದ್ದಾರೆ. ಯಾವುದೇ ಅಪಾಯಗಳನ್ನು ಎದುರಿಸಲು ಸಿದ್ದತೆ ನಡೆಸುತ್ತಿದ್ದಾರೆ.
ಹೆದ್ದಾರಿಯನ್ನು ತೆರವುಗೊಳಿಸುವುದರ ಜೊತೆಗೆ, ಸ್ಥಳೀಯ ಅಧಿಕಾರಿಗಳು ರಸ್ತೆಯಲ್ಲಿ ಸಿಲುಕಿರುವವರಿಗೆ ಆಸರೆ ನೀಡುವ ಬಗ್ಗೆಯೂ ಗಮನಹರಿಸುತ್ತಿದ್ದಾರೆ. ರಸ್ತೆ ಮಧ್ಯೆ ನಿಂತಿರುವ ಪ್ರಯಾಣಿಕರಿಗೆ ಹತ್ತಿರದ ಪಟ್ಟಣಗಳಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗುತ್ತಿದೆ. ಅಗತ್ಯವಿರುವವರಿಗೆ ಆಹಾರ, ನೀರು ಮತ್ತು ವೈದ್ಯಕೀಯ ನೆರವನ್ನೂ ಕೊಡಲಾಗುತ್ತಿದೆ.