ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ನಡೆಸಿದ ‘ಮೈಸೂರು ಚಲೋ’ ಪಾದಯಾತ್ರೆ ತೆರೆ ಕಂಡಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಪಾದಯಾತ್ರೆ ಸಮಾರೋಪ ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಒಕ್ಕೊರಲಿನಿಂದ ಸಿಎಂ ಸಿದ್ದರಾಮಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದರು.
“ಕಾಂಗ್ರೆಸ್ ಸರ್ಕಾರ ಕಿತ್ತು ಎಸೆಯುವುದು ನಮ್ಮ ಗುರಿ. ನಮ್ಮ ಹೋರಾಟಕ್ಕೆ ಈ ಪಾದಯಾತ್ರೆ ಮುನ್ನುಡಿ” ಎಂದು ಬಿಜೆಪಿ-ಜೆಡಿಎಸ್ ನಾಯಕರು ಕರೆ ನೀಡಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, “ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್‌ಡಿಎ ಮೈತ್ರಿಕೂಟ ಕೈಗೊಂಡ ಮೈಸೂರು ಚಲೋ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಸತತ ಎಂಟು ದಿನಗಳ ಕಾಲ ನಡೆದ ಪಾದಯಾತ್ರೆಯುದ್ದಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿರುವ ಜನಾಕ್ರೋಶ ಎದ್ದು ಕಾಣುತ್ತಿದೆ” ಎಂದರು.
“ಮೈಸೂರು ಚಲೋ ಪಾದಯಾತ್ರೆ ಇಂದಿಗೆ ಮುಕ್ತಾಯವಾಗಿರಬಹುದು. ಆದರೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣದ ತನಿಖೆಯನ್ನ ಸಿಬಿಐಗೆ ಒಪ್ಪಿಸಿ ದಲಿತರ ಹಣವನ್ನ, ಜನ ಸಾಮಾನ್ಯರಿಗೆ ಸಿಗಬೇಕಾದ ನಿವೇಶನಗಳನ್ನ ಲಪಟಾಯಿಸಿದವರಿಗೆ ಶಿಕ್ಷೆ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಹೇಳಿದರು.
“ಈ ಎಲ್ಲ ಹಗರಣಗಳ ಕೇಂದ್ರ ಬಿಂದು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ನೈತಿಕತೆ ಹೊತ್ತು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಮುಂದಿನ ಹಂತದ ಹೋರಾಟದ ರೂಪುರೇಷೆ ಈಗಾಗಲೇ ಸಿದ್ಧಗೊಳ್ಳುತ್ತಿದ್ದು ಶೀಘ್ರದಲ್ಲೇ ಪ್ರಕಟಿಸುತ್ತೇವೆ” ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, “ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಜನತೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಈ ಪಾದಯಾತ್ರೆ ಹಮಿಕೊಂಡಿದ್ದೆವು. ಅದು ಯಶಸ್ವಿಯಾಗಿದೆ. ಸಮಾವೇಶ ನಡೆಸುವ ಮೂಲಕ ನಾಡಿನ ಜನತೆಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಅವರು ನಡೆಸುತ್ತಿರುವ ದುರಾಡಳಿತ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ” ಎಂದು ಹೇಳಿದರು.
ಸಿದ್ದರಾಮಯ್ಯ ಚಡ್ಡಿಯೆಲ್ಲ ಕಪ್ಪು: ಎಚ್‌ಡಿಕೆ
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, “ನನ್ನ ಬದುಕಿನಲ್ಲಿ ಕಪ್ಪು ಚುಕ್ಕೆ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯನವರು ಚಡ್ಡಿಯೆಲ್ಲ ಕಪ್ಪು ಮಾಡಿಕೊಂಡಿದ್ದಾರೆ. ಕಾನೂನು ಬಾಹಿರವಾಗಿ ಸೈಟ್ ಪಡೆದ ಬಗ್ಗೆ ಪ್ರಶ್ನೆ ಮಾಡಿದ್ದೇವೆ. ಅರಿಶಿಣ ಕುಂಕುಮ ರೀತಿ ಭೂಮಿ ದಾನ ಮಾಡಿದ್ದು ತಪ್ಪಾ ಎಂದಿದ್ದಾರೆ. ಆದರೆ, ಕಾನೂನು ಬದ್ಧವಾಗಿ ಭೂಮಿ ಕೊಟ್ಟಿದ್ದರೆ ಪ್ರಶ್ನೆ ಮಾಡುತ್ತಿರಲಿಲ್ಲ” ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಟ್ಟಿರುವುದು ಸರ್ಕಾರದ ಭೂಮಿ. ಸಿಎಂ ಮೂಗಿನ ನೇರವಾಗಿ ಕಾನೂನು ಬಾಹಿರ ಚಟುವಟಿಕೆ ನಡೆದಿದೆ. ಈಗಲೂ ನಾನು 14 ಸೈಟ್ ವಾಪಸ್ ಕೊಡಲು ಸಿದ್ಧ ಎಂದಿದ್ದಾರಂತೆ. ಸೈಟ್ ವಾಪಸ್ ಕೊಟ್ಟರೆ ಕಾನೂನುಬಾಹಿರ ಚಟುವಟಿಕೆ ಮುಚ್ಚಲು ಸಾಧ್ಯವಾ” ಎಂದು ಪ್ರಶ್ನಿಸಿದರು.
“ನಿಮ್ಮಲ್ಲಿ ಒಂದು ಕಪ್ಪುಚುಕ್ಕಿ ಇಲ್ಲ; ಸಿದ್ದರಾಮಯ್ಯನವರೇ, ನಿಮ್ಮಲ್ಲಿ ಎಲ್ಲೆಡೆ ಕಪ್ಪುಚುಕ್ಕಿ ಕಾಣುತ್ತಿದೆ. ಕಾಂಗ್ರೆಸ್‌ನದು ಧನಾಂದೋಲನ; ಅದನ್ನು ಸಮರ್ಥಿಸಲು ನಿನ್ನೆ ಇಲ್ಲಿ ಸಮಾವೇಶ ನಡೆದಿದೆ. ಸಿಎಂ, ಡಿಸಿಎಂ ಒಳಗಡೆ ಹೋರಾಟ ಮಾಡುತ್ತಾರೆ; ಹೊರಗಡೆ ಬಂಡೆಯಂತಿದ್ದೇವೆ ಎನ್ನುತ್ತಾರೆ. ಹಗರಣಗಳಲ್ಲಿ ಮುಖ್ಯಮಂತ್ರಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ಸಿದ್ದರಾಮಯ್ಯ ರಾಜ್ಯ ಕಂಡ ಭ್ರಷ್ಟ ಸಿಎಂ
“ದಲಿತರು, ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಅನುದಾನವನ್ನು ದುರ್ಬಳಕೆ ಮಾಡುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಕಂಡ ಭ್ರಷ್ಟ ಮುಖ್ಯಮಂತ್ರಿ” ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದರು.
“ಸಿದ್ದರಾಮಯ್ಯ 40 ವರ್ಷ ರಾಜಕಾರಣ ಮಾಡಿದ್ದಾರೆ. ಆದರೆ ಕನಿಷ್ಠ ಮೈಸೂರು ಜನರಿಗೆ ಒಂದು ನಿವೇಶನ ಕೊಡುವ ಯೋಜನೆ ರೂಪಿಸಲಿಲ್ಲ. ಬದಲಾಗಿ, ಜನಸಾಮಾನ್ಯರಿಗೆ ಸೇರಬೇಕಾದ ನಿವೇಶನಗಳನ್ನೇ ಕಸಿದಿದ್ದಾರೆ” ಎಂದು ದೂರಿದರು.
ಸಮಾಜವಾದಿ ಅಲ್ಲ ಮಜಾವಾದಿ
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, “14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಬಜೆಟ್ ಗೆ ಒಂದು ಸೈಟು ಎಂಬಂತೆ 14 ಸೈಟು ತೆಗೆದುಕೊಂಡಿದ್ದಾರೆ. ಇದೇನಾ ಸಮಾಜವಾದ” ಎಂದು ಖಾರವಾಗಿ ಪ್ರಶ್ನಿಸಿದರು.
“ಸಿದ್ದರಾಮಯ್ಯ ತಮ್ಮ 2013ರ ಚುನಾವಣಾ ಅಫಿಡವಿಟ್ ನಲ್ಲಿ ಏಕೆ ಈ ಜಮೀನಿನ ಉಲ್ಲೇಖ ಮಾಡಲಿಲ್ಲ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾವಾದಿ” ಎಂದು ಲೇವಡಿ ಮಾಡಿದರು.