- ಪ್ರತಿ ವರ್ಷ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತದೆ
- ಮೂರು ವರ್ಷಗಳ ಪ್ರಶಸ್ತಿಗಾಗಿ ಒಂಬತ್ತು ಜನಪದ ಸಾಧಕರನ್ನು ಆಯ್ಕೆ ಮಾಡಲಾಗಿದೆ
ಕನ್ನಡ ಸಾಹಿತ್ಯ ಪರಿಷತ್ತು 2020, 2021 ಹಾಗೂ 2022ನೇ ಸಾಲಿನ ‘ದಿ. ಶ್ರೀಮತಿ ತಾಯಮ್ಮ ಎಸ್.ಸಿ.ಮಲ್ಲಯ್ಯ ಜಾನಪದ ದತ್ತಿ’ ಪ್ರಶಸ್ತಿಗೆ ಒಂಬತ್ತು ಜನಪದ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.
“‘ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿಗೆ ದತ್ತಿ’ ದಾನಿಗಳ ಆಶಯದಂತೆ ಮಂಡ್ಯ ಜಿಲ್ಲೆಯ ಒಬ್ಬರು ಜನಪದ ಕಲಾವಿದರು ಸೇರಿದಂತೆ ರಾಜ್ಯದಲ್ಲಿ ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಒಟ್ಟು ಮೂರು ಜನರನ್ನು ಆಯ್ಕೆ ಮಾಡಲಾಗುತ್ತದೆ. ಅದರಂತೆ ಮೂರು ವರ್ಷಗಳ ಪ್ರಶಸ್ತಿಗಾಗಿ ಒಂಬತ್ತು ಜನಪದ ಸಾಧಕರನ್ನು ಆಯ್ಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
“‘ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ’ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಹಿರಿಯ ಸಮಾಜಸೇವಕರಾದ ಎಸ್.ಎಮ್ ಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ಪ್ರತಿ ವರ್ಷ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
2020ನೇ ಸಾಲಿನ ‘ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ’ ಮಂಡ್ಯದ ಲಾವಣಿಪದ ಕಲಾವಿದರಾದ ಆರ್.ಕೆ. ಸ್ವಾಮಿ, ಚನ್ನಪಟ್ಟಣದ ಡೊಳ್ಳುಕುಣಿತ ಕಲಾವಿದೆ ಲಕ್ಷ್ಮಿ ಶ್ರೀನಿವಾಸ್ ಹಾಗೂ ಶ್ರೀರಂಗಪಟ್ಟಣದ ನೀಲಗಾರರ ಪದ ಹಾಡುವ ಕಲಾವಿದ ಮಂಟೆ ಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
2021ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ಮಳವಳ್ಳಿಯ ತಮಟೆ ಕಲಾವಿದ ಕುಂತೂರು ಕುಮಾರ, ಕೆ.ಆರ್.ಪೇಟೆಯ ಜಾನಪದ ಹಾಡುಗಾರರಾದ ಶಾಂತಮ್ಮ ಪಿ.ಆರ್ ಹಾಗೂ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ತಮಟೆ ಕಲಾವಿದೆ ತಮಟೆ ನರಸಮ್ಮ ಇವರನ್ನು ಆಯ್ಕೆ ಮಾಡಲಾಗಿದೆ.
2022ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ಪಾಂಡವಪುರದ ಸೋಬಾನೆಪದ ಹಾಡುವ ಕಲಾವಿದೆ ಸೋಬಾನೆ ನಾಗಮ್ಮ, ಮಂಡ್ಯದ ಜಾನಪದ ಗೀತೆಗಳ ಗಾಯಕಿ ಮಂಜುಳ ಅಲದಳ್ಳಿ ಹಾಗೂ ಕೊಳ್ಳೇಗಾಲದ ಕಂಸಾಳೆ ಕಲಾವಿದ ಎಂ.ಕೈಲಾಸಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾನಪದ ಕಲಾವಿದರಿಗಾಗಿಯೇ ಮೀಸಲಾಗಿರುವ ‘ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ’ ಪ್ರಶಸ್ತಿಯನ್ನು ಜನಪದ ಕ್ಷೇತ್ರದ ನಾನಾ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗಾಗಿ ಮೀಸಲಿಡಲಾಗಿದ್ದು, ನಿರಂತರ ಸೇವೆ ಸಲ್ಲಿಸುತ್ತ ಉತ್ತಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ಕೊಡಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ಈ ಸುದ್ದಿ ಓದಿದ್ದೀರಾ? ಮತದಾರರ ದತ್ತಾಂಶ ಮಾರಾಟ: ಖಾಸಗಿ ಸಂಸ್ಥೆಯ ವೆಬ್ಸೈಟ್ ದೆಹಲಿ ವಿಳಾಸದಲ್ಲಿ ನೋಂದಣಿ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಂಡ್ಯ ಜಿಲ್ಲಾ ಅಧ್ಯಕ್ಷ ರವಿಕುಮಾರ ಚಾಮಲಾಪುರ, ಗುರುಚರಣ ಮಂಡ್ಯ, ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.