ಬರ ಬಂದ ಮರು ವರ್ಷವೇ ಭೀಕರ ಮಳೆ ಬರುವುದು, ಪ್ರವಾಹ ಇಳಿಯುತ್ತಿದ್ದಂತೆ ಬರ ಆವರಿಸುವುದು ಹೇಗೆ? ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಆದರೆ ಇದಕ್ಕೆ ಕಾರಣವನ್ನು ಹುಡುಕುವುದು ಕಷ್ಟವೇನಲ್ಲ. ನಾವೇ ಅದರ ಕಾರಣಕರ್ತರು. ಜನಪ್ರತಿನಿಧಿಗಳು, ಸರ್ಕಾರ, ಭೂಗಳ್ಳರೇ ನೈಜ ಅಪರಾಧಿಗಳು.
ಕಳೆದ ವರ್ಷ ವಾಡಿಕೆಯಷ್ಟು ಮಳೆ ಬಾರದೇ ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಭೀಕರ ಬರ ಎದುರಿಸಿದ್ದವು. ಈ ವರ್ಷ ಜೂನ್ಗೂ ಮೊದಲೇ ಮಳೆ ಚೆನ್ನಾಗಿ ಬರಲಾರಂಭಿಸಿ ಜುಲೈ ಅಂತ್ಯದ ವೇಳೆಗೆ ಕರ್ನಾಟಕ ಮತ್ತು ಕೇರಳದಲ್ಲಿ ಭೀಕರ ಭೂಕುಸಿತ ಸಂಭವಿಸಿ ನೂರಾರು ಮಂದಿ ಪ್ರಾಣ ಕಳೆದುಕೊಂಡರು. ಕೇರಳದ ವಯನಾಡಿನಲ್ಲಿ ಊರಿಗೆ ಊರೇ ಮಾಯವಾಯಿತು. ನಾನೂರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ಮನೆ, ತೋಟ, ಜಾನುವಾರು… ಕಳೆದು ಹೋದ ಸೊತ್ತಿಗೆ ಲೆಕ್ಕವಿಲ್ಲ.
ಕಳೆದ ವರ್ಷ ಆ ಪಾಟಿ ಬರಗಾಲ ಬಂದು ಈ ವರ್ಷ ಇಷ್ಟೊಂದು ಮಳೆ ಎರಡೇ ತಿಂಗಳಲ್ಲಿ ಸುರಿಯಲು ಕಾರಣವೇನು? ಮಳೆಗಾಲ ಎಂದರೆ ನಾಲ್ಕರಿಂದ ಆರು ತಿಂಗಳು ಇರುತ್ತದೆ. ಹದವಾಗಿ ಮಳೆ ಸುರಿದು ಕೆರೆ ಕೊಳ್ಳಗಳು ತುಂಬಿದರೆ ತೋಟ, ಭತ್ತದ ಗದ್ದೆ, ಹೂ-ಹಣ್ಣು ತರಕಾರಿ, ವಾಣಿಜ್ಯ ಬೆಳೆಗಳಿಗೂ ಅನುಕೂಲ. ಅಂರ್ತಜಲವೂ ಹೆಚ್ಚಿ ಬೇಸಗೆಯಲ್ಲಿ ಕುಡಿಯುವ ನೀರು, ಬೆಳೆಗಳಿಗೂ ಜಲಕ್ಷಾಮ ತಲೆದೋರದು. ಎರಡು ಮೂರು ದಶಕಗಳ ಹಿಂದಕ್ಕೆ ಹೋದರೆ ಮಳೆಗಾಲದ ವಿನ್ಯಾಸ ಹೀಗೇ ಇತ್ತು. ಎಷ್ಟೇ ಮಳೆ ಸುರಿದರೂ ದೊಡ್ಡ ಪ್ರಮಾಣದ ಭೂಕುಸಿತ ಹಳ್ಳಿಗೆ ಹಳ್ಳಿಯೇ ಕೊಚ್ಚಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆದರೆ, ದೊಡ್ಡ ದೊಡ್ಡ ರಸ್ತೆಗಳ ನಿರ್ಮಾಣ, ರೈಲ್ವೆ ಯೋಜನೆಗಳ ನೆಪದಲ್ಲಿ ಕಾಡಿನ ನಾಶಕ್ಕೆ ಎಣೆಯೇ ಇಲ್ಲವಾಯಿತು. ಅಭಿವೃದ್ಧಿಯ ಹೆಸರಿನಲ್ಲಿ ನದಿಪಾತ್ರ, ಬೆಟ್ಟ, ಗುಡ್ಡ ಯಾವುದನ್ನೂ ಬಿಡದೇ ಅಲ್ಲೊಂದು ಗುಡಿ ಕಟ್ಟಿ ಪ್ರವಾಸಿಗರನ್ನು ಸೆಳೆಯಲು ರಸ್ತೆ, ಕಟ್ಟಡಗಳ ನಿರ್ಮಾಣ ಮಾಡುತ್ತ ಹಣವಂತರ ಮೋಜಿಗಾಗಿ ರೆಸಾರ್ಟ್ಗಳನ್ನು ನಿರ್ಮಾಣ ಮಾಡುವುದು ಒಂದೆಡೆಯಾದರೆ, ರಾಜಕಾರಣಿಗಳು ಲೂಟಿಗೈದ ಹಣದಿಂದ ನೂರಾರು ಎಕರೆ ಜಮೀನು ಕೊಂಡು ಎಸ್ಟೇಟ್ ನಿರ್ಮಾಣ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮುಂತಾದ ನೈಸರ್ಗಿಕ ಸಂಪತ್ತು ಯಥೇಚ್ಛವಾಗಿರುವ ಜಿಲ್ಲೆಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ನಟರು ಭೂಕಬಳಿಕೆ ಮಾಡಿಕೊಂಡಿರುವುದು ಗುಟ್ಟಿನ ವಿಚಾರವೇನಲ್ಲ.

ಉಳ್ಳವರ ಭೂದಾಹಕ್ಕೆ ಬಡವರು ಬಲಿ
ಭೂಕುಸಿತದಿಂದ ಸಂತ್ರಸ್ತರಾಗುತ್ತಿರುವವರು ಯಾವುದೋ ಊರುಗಳಿಂದ ಕೂಲಿ ಕೆಲಸ ಹುಡುಕಿ ಬಂದ ಕಾಫಿ -ಟೀ ಎಸ್ಟೇಟ್ ಕಾರ್ಮಿಕರು, ಚೂರುಪಾರು ಭೂಮಿ ಹೊಂದಿದ ಸಾಮಾನ್ಯ ಜನ. ಪಿತ್ರಾರ್ಜಿತ ಆಸ್ತಿ ಎಂಬ ಕಾರಣಕ್ಕೆ ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಬೆಟ್ಟದ ತಪ್ಪಲಲ್ಲಿ, ಕಾಡಂಚಿನಲ್ಲಿ ಬದುಕುತ್ತಿರುವ ಸಣ್ಣ ಹಿಡುವಳಿದಾರರು ಇಂದು ಉಳ್ಳವರ ಭೂದಾಹದ ಬಲಿಯಾಗುತ್ತಿದ್ದಾರೆ. ದಶಕಗಳಿಂದ ಆಕಾಶ- ಭೂಮಿ ಒಂದಾಗುವಂತಹ ಮಳೆ ನೋಡಿಯೂ ಏನೂ ಆಗದೆ ಬದುಕಿದ್ದ ಜನರು ಈಗ ಮಳೆ ಶುರುವಾಗುತ್ತಿದ್ದಂತೆ ಆತಂಕದಿಂದ ದಿನ ಕಳೆಯುವಂತಾಗಿದೆ. ಉತ್ತರ ಕನ್ನಡದ ಶಿರೂರಿನಲ್ಲಿ ಗುಡ್ಡ ಅಗೆದು ರಸ್ತೆ ನಿರ್ಮಾಣ ಮಾಡಿದ ಎಂಟು ವರ್ಷಗಳ ನಂತರ ಇಡೀ ಗುಡ್ಡವೇ ಕುಸಿದು ಬಟಾಬಯಲಾಗಿದೆ. ಮನೆ, ಜೀವ ಎಲ್ಲವೂ ಗಂಗಾವಳಿ ನದಿಯ ಮಡಿಲು ಸೇರಿದೆ. ಇದು ಮಾನವ ನಿರ್ಮಿತ ದುರಂತ.
ಈಗ ಇರುವ ಪ್ರಶ್ನೆ ಬರ ಬಂದ ಮರು ವರ್ಷವೇ ಭೀಕರ ಮಳೆ ಬರುವುದು, ಪ್ರವಾಹ ಇಳಿಯುತ್ತಿದ್ದಂತೆ ಬರ ಆವರಿಸುವುದು ಹೇಗೆ? ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಆದರೆ ಇದಕ್ಕೆ ಕಾರಣವನ್ನು ಹುಡುಕುವುದು ಕಷ್ಟವೇನಲ್ಲ. ಕಾರಣ ನಮ್ಮ ಮುಂದೆಯೇ ಇದೇ. ನಾವೇ ಅದರ ಕಾರಣಕರ್ತರು. ಜನಪ್ರತಿನಿಧಿಗಳು, ಸರ್ಕಾರ, ಭೂಗಳ್ಳರೇ ನೈಜ ಅಪರಾಧಿಗಳು. ಪ್ರಕೃತಿಯನ್ನು ದೂರಿ ಪ್ರಯೋಜನವಿಲ್ಲ. ಯಾವ ಹೋಮ ಹವನ ಪೂಜೆಯಿಂದ ಈ ಅವಾಂತರವನ್ನು ತಡೆಯಲು ಸಾಧ್ಯವಿಲ್ಲ. ಕಾಡು ಬೆಳೆಸುವುದು ಮತ್ತು ಕಾಡಿನ ನಾಶ ಮಾಡುವಂತಹ ಯೋಜನೆಗಳನ್ನು ಕೈಬಿಡುವುದರಿಂದ ಇನ್ನಷ್ಟು ಭೀಕರ ದುರಂತಗಳಾಗದಂತೆ ತಡೆಯಬಹುದು. ಭೂಮಿಗೆ ಬಿದ್ದ ನೀರನ್ನು ಸಮುದ್ರ ಸೇರಲು ಬಿಡದೇ ಭೂಮಿಯಲ್ಲೇ ಸಂರಕ್ಷಿಸುವುದರಿಂದ ಬರಗಾಲವನ್ನು ತಪ್ಪಿಸಬಹುದು. ಇಷ್ಟು ಮಾಡುವುದು ಪ್ರತಿಯೊಬ್ಬನ ಜವಾಬ್ದಾರಿ. ತಜ್ಞರೂ ಇದನ್ನೇ ಹೇಳುತ್ತಾ ಬಂದಿದ್ದಾರೆ.

ಬರಕ್ಕೂ, ಭೂ ಕುಸಿತಕ್ಕೂ ಒಂದೇ ಕಾರಣ: ಟಿ ವಿ ರಾಮಚಂದ್ರ
ಬರ ಮತ್ತು ಮಳೆ ಜೊತೆ ಜೊತೆಗೆ ಬರಲು ಇರುವ ಕಾರಣಗಳ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಪರಿಸರ ವಿಜ್ಞಾನಿ ಟಿ ವಿ ರಾಮಚಂದ್ರ ಅವರು, ಇದು ಮಾನವ ನಿರ್ಮಿತ ದುರಂತ ಎಂದರು.
“ಗ್ಲೋಬಲ್ ವಾರ್ಮಿಂಗ್ ನಿಂದಾಗಿ ಉಂಟಾದ ಹವಾಮಾನ ವೈಪರೀತ್ಯದಿಂದ ಬರ ಮತ್ತು ಹೆಚ್ಚು ಮಳೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ವಾತಾವರಣದಲ್ಲಿ ಜಾಸ್ತಿಯಾಗಿರುವ ಹಸಿರು ಉಷ್ಣವರ್ಧಕ ಅನಿಲ. ವಾಹನಗಳಿಗೆ, ವಿದ್ಯುತ್ ಉತ್ಪಾದನೆಗೆ ಬಳಸುವ ಇಂಧನ (Fossil fuel)ದಿಂದ 28-30% ಉಷ್ಣಾಂಶ ವರ್ಧನೆಯಾಗುತ್ತಿದೆ. ಎರಡನೆಯದು ಕಾಡಿನ ನಾಶ. ಹಸಿರು ಹೊದಿಕೆ ಕಡಿಮೆಯಾಗಿ ಇಂಗಾಲದ ಡೈ ಆಕ್ಸೈಡ್ ಹೀರುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಮಣ್ಣಿನಲ್ಲಿರುವ ಕಾರ್ಬನ್ ಬಿಡುಗಡೆಯಾಗುತ್ತಿದೆ. ಕರ್ನಾಟಕದ ಅಧ್ಯಯನದ ಪ್ರಕಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಆರು ದಶಕದಲ್ಲಿ 45%ನಷ್ಟು ಸ್ಥಳೀಯ ಪ್ರಬೇಧದ ಕಾಡು ಕಳೆದುಕೊಂಡಿದ್ದೇವೆ. ರಾಜ್ಯದಲ್ಲಿಈ ಪ್ರಮಾಣ 18-20% ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 1973ರಲ್ಲಿ 68% ಇದ್ದ ನಿತ್ಯ ಹರಿದ್ವರ್ಣ ಕಾಡು ಈಗ 29% ಗೆ ಇಳಿದಿದೆ. ಎಲ್ಲೆಲ್ಲಿ ಕಾಡು ಕಳೆದುಕೊಂಡಿದ್ದೇವೋ ಅಲ್ಲೆಲ್ಲ ತೊಂದರೆಯಾಗುತ್ತಿದೆ.

ಕೆಲವೊಂದು ಪ್ರದೇಶಗಳು ಪರಿಸರಸೂಕ್ಷ್ಮ ಪ್ರದೇಶಗಳು. ಅಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಭೂಕುಸಿತವಾಗುತ್ತದೆ. ಯಾವ ಪ್ರದೇಶದಲ್ಲಿ ಹಸಿರು ಕವಚ ಚೆನ್ನಾಗಿದೆಯೋ ಅಲ್ಲಿ ಇಂಗಾಲವನ್ನು ಹೀರೋ ಸಾಮರ್ಥ್ಯ ಹೆಚ್ಚುಇರುತ್ತದೆ. ಮಳೆ ನೀರನ್ನು ಹಿಡಿದಿಡುವ ಸಾಮರ್ಥ್ಯ ಇರುತ್ತದೆ. ಬೇರು ಮಣ್ಣನ್ನು ಹಿಡಿದಿಡುತ್ತವೆ. ಆಗ ಭೂ ಕುಸಿತ ಆಗಲ್ಲ. ಮರ ಕಡಿದು ಕಾಫಿ-ಟೀ ಪ್ಲಾಂಟೇಷನ್ ಮಾಡಿದಾಗ ಅಲ್ಲೆಲ್ಲ ಭೂಮಿ ಶಿಥಿಲವಾಗುತ್ತದೆ. ಇದರಿಂದಾಗಿ ಭೂ ಕುಸಿತವಾಗೋದು ಸಹಜ.
ಬರ ಮತ್ತು ಮಳೆ ಒಟ್ಟೊಟ್ಟಿಗೆ ಬರಲು ನಮ್ಮ ಮೂರ್ಖತನವೇ ಕಾರಣ. ಹಿಂದೆ ದಶಕದಲ್ಲಿ ಒಮ್ಮೆ ಭೂ ಕುಸಿತ, ಪ್ರವಾಹ ಆಗುತ್ತಿತ್ತು. ಈಗ ಪ್ರತಿ ವರ್ಷವೂ ಆಗುತ್ತಿದೆ. ನಾವು ಮಳೆ ಮತ್ತು ಬರವನ್ನು ಹೇಗೆ ನಿರ್ವಹಣೆ ಮಾಡುತ್ತಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ. ಪರ್ಯಾಯ ಮಾರ್ಗಗಳು ಇದ್ದಾಗಲೂ ನಾವು ಲೂಟಿ ಮಾಡುವುದಕ್ಕೋಸ್ಕರ ಕಾಡು ನಾಶ ಮಾಡುತ್ತಿದ್ದೇವೆ. ಈಗ ಬೆಂಗಳೂರಿನಲ್ಲಿ ಬೀಳುವ ಮಳೆಯಿಂದ 15 ಟಿಎಂಸಿ ನೀರು ಸಂಗ್ರಹಿಸುವ ಸಾಧ್ಯತೆ ಇದೆ. ಬೆಂಗಳೂರು ನಗರಕ್ಕೆ ಬೇಕಿರುವುದು 18 ಟಿಎಂಸಿ ನೀರು. 18 ಟಿಎಂಸಿ ನೀರು ಬಳಸಿದರೆ, ಅಷ್ಟೇ ಟಿಎಂಸಿ ತ್ಯಾಜ್ಯ ನೀರು ಸಿಗುತ್ತದೆ. ಅದನ್ನು ಶುದ್ಧೀಕರಿಸಿದರೆ 18 ಟಿಎಂಸಿ ನೀರು ಸಿಗುತ್ತದೆ. ಮಳೆ ಕೊಯ್ಲು ಮಾಡಲು ಕೆರೆಗಳನ್ನು ಪುನಶ್ಚೇತನ ಮಾಡಿದ್ರೆ ಸಾಕು. ಮಳೆ ನೀರು ಸಂಗ್ರಹವಾಗುತ್ತದೆ. ಅಂತರ್ಜಲ ವೃದ್ಧಿಯಾಗುತ್ತದೆ.

ಇದಕ್ಕೊಂದು ಉದಾಹರಣೆ ಎಂದರೆ, ನಾವು ಸಾರಕ್ಕಿ ಕೆರೆಯ ಪುನಶ್ಚೇತನ ಮಾಡಿದ ಮೊದಲ ವರ್ಷವೇ ಮುನ್ನೂರು ಅಡಿ ನೀರು ವೃದ್ಧಿಯಾಗಿತ್ತು. ಈಗ ಮೂರು ವರ್ಷ ಆದ ಮೇಲೆ ಕೆರೆಯಲ್ಲಿ ನೀರಿದೆ. ಅಂತರ್ಜಲ ಮಟ್ಟ 500 ಅಡಿಗಿಂತ ಕಡಿಮೆ ಇದೆ. ನಗರದ ಬೇರೆ ಪ್ರದೇಶಕ್ಕಿಂತ ಈ ಪ್ರದೇಶದಲ್ಲಿ ಉಷ್ಣಾಂಶ 2 ಡಿಗ್ರಿ ಕಡಿಮೆ ಇರುತ್ತದೆ. ಕಾಡು, ಕೆರೆಗಳಿದ್ದಾಗ ನಮ್ಮ ಹವಾಮಾನವನ್ನು ಮಾಡರೇಟ್ ಮಾಡುವ ಸಾಮರ್ಥ್ಯ ಇರುತ್ತದೆ.
ನಮ್ಮ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಕಳೆದ ಎರಡು ದಶಕದಲ್ಲಿ 5% ಹಸಿರು ಹೊದಿಕೆ ಕಳೆದುಕೊಂಡಿದ್ದೇವೆ. ಕಾಡುಗಳು ಛಿದ್ರವಾಗಿದೆ. ಹಸಿರು ಹೊದಿಕೆ ಕಳೆದುಕೊಂಡಿದ್ದರ ಪರಿಣಾಮ ಮಳೆ ನೀರು ಸಮುದ್ರ ಸೇರುತ್ತಿದೆ. ಬರದ ಪರಿಸ್ಥಿತಿ ಉಂಟಾಗಿದೆ. 2019ರಲ್ಲಿ ಕೇರಳದಲ್ಲಿ ಪ್ರವಾಹ ಬಂತು, ಅದಾಗಿ ಎರಡೇ ತಿಂಗಳಲ್ಲಿ ಬರಗಾಲ ಬಂತು. ಯಾಕೆಂದರೆ ಸುರಿದ ಮಳೆ ನೀರನ್ನು ಭೂಮಿಯಲ್ಲಿ ಹಿಡಿದಿಡುವ ವ್ಯವಸ್ಥೆ ಇಲ್ಲದೇ ಅದು ಸಮುದ್ರ ಸೇರಿತ್ತು. ಹೀಗಾಗಿ ಈಗ ಪ್ರವಾಹ ಬಂದರೂ ಬೇಸಿಗೆಯಲ್ಲಿ ಬರ ಇರಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ನಾವು ಮಳೆ ನೀರನ್ನು ಸಂಗ್ರಹಿಸುವ ಬಗ್ಗೆ ಯೋಚಿಸುತ್ತಿಲ್ಲ”.
ಇದು ದಶಕಗಳಿಂದ ಪಶ್ಚಿಮಘಟ್ಟದ ಜೀವವೈವಿಧ್ಯ ಕುರಿತು ಅಧ್ಯಯನ ಮಾಡುತ್ತ, ಪರಿಸರಕ್ಕೆ ಹಾನಿಯಾಗುವ ಯೋಜನೆಗಳ ವಿರುದ್ಧ ಹೋರಾಟ ನಡೆಸುತ್ತ ಬಂದಿರುವ ಪರಿಸರ ವಿಜ್ಞಾನಿ ಡಾ ಟಿ ವಿ ರಾಮಚಂದ್ರ ಅವರ ಮಾತುಗಳು. ಸರ್ಕಾರ ಮತ್ತೆ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಹೊರಟಿದೆ. ಅದು ಇನ್ನಷ್ಟು ಮರಗಳ ನಾಶಕ್ಕೆ ಕಾರಣವಾಗಲಿದೆ. ಪರಿಸರವನ್ನು ಹಾಳುಗೆಡವಿ ಮಾಡುವ ಯಾವುದೇ ಅಭಿವೃದ್ಧಿಯಿಂದ ಮತ್ತೆ ದುರಂತಗಳನ್ನು ಕಾಣಬೇಕಾಗುತ್ತದೆ. ಆದಷ್ಟು ಪರ್ಯಾಯ ಮಾರ್ಗಗಳ ಕಡೆ ಗಮನ ಹರಿಸಬೇಕಿದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.