‘ಸಾಚಾರ್ ಸಮಿತಿ’ಯ ಶಿಫಾರಸುಗಳನ್ನು ‘ವಕ್ಫ್ ಮಸೂದೆ’ ಒಳಗೊಂಡಿಲ್ಲ- ರೆಹಮಾನ್ ಖಾನ್

Date:

ವಿವಾದಿತ ವಕ್ಫ್ ಮಸೂದೆಯ ಪರಾಮರ್ಶೆಗಾಗಿ ಜಂಟಿ ಸಂಸದೀಯ ಮಂಡಳಿಗೆ ಮೋದಿ ಸರ್ಕಾರ ಹಸ್ತಾಂತರಿಸಿದೆ. ಮಸೂದೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮಸೂದೆಯ ನೀತಿಗಳು ಮುಸ್ಲಿಂ ಸಮುದಾಯದ ಭೂಮಿ, ಸ್ವತ್ತುಗಳು ಮತ್ತು ಸಂವಿಧಾನದ 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ‘ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ’ವನ್ನು ಕಸಿದುಕೊಳ್ಳುತ್ತದೆ ಎಂದು ವಿಪಕ್ಷಗಳು ಆರೋಪಿಸಿವೆ.

ಮಸೂದೆಯು ಚರ್ಚೆಗೆ ಗ್ರಾಸವಾಗಿರುವ ಈ ಸಮಯದಲ್ಲಿ ಹಲವಾರು ತಜ್ಞರು ಈ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯಸಭೆಯ ಮಾಜಿ ಉಪ ಅಧ್ಯಕ್ಷ ಮತ್ತು ವಕ್ಫ್ ಮಂಡಳಿಗಳ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಮಾಜಿ ಅಧ್ಯಕ್ಷ ಕೆ ರೆಹಮಾನ್ ಖಾನ್ ಕೂಡ ಮಸೂದೆ ಬಗ್ಗೆ ಮಾತನಾಡಿದ್ದಾರೆ. ರೆಹಮಾನ್ ಖಾನ್ ಅವರು ಈ ಹಿಂದೆ, 1999 ಮತ್ತು 2008ರಲ್ಲಿ ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಎರಡು ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾಗಿ ಅವರು ಅಧ್ಯಯನ ನಡೆಸಿ, ವರದಿಗಳನ್ನು ಸಲ್ಲಿಸಿದ್ದವರು. ಅವರು ‘ಸಾಚಾರ್ ಸಮಿತಿ’ಯ ಶಿಫಾರಸುಗಳನ್ನು ವಕ್ಫ್‌ ಮಸೂದೆಯಲ್ಲಿ ಅಳವಡಿಸಿಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.

”ಮಸೂದೆಯನ್ನು ಜೆಪಿಸಿಗೆ ವರ್ಗಾಯಿಸಿರುವ ಸರ್ಕಾರದ ನಿರ್ಧಾರವು ಸ್ವಾಗತಾರ್ಹ ಕ್ರಮ. ಜೆಪಿಸಿ ಪರಾಮರ್ಶೆ ವೇಳೆ ಎಲ್ಲ ಸದಸ್ಯರು, ತಜ್ಞರು ಹಾಗೂ ಮಸೂದೆಯಿಂದ ಬಾಧಿತರಾಗುವ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು. ಹೊಸ ಮಸೂದೆಗೂ ಈಗಿನ ಸಚಿವಾಲಯಕ್ಕೂ ಯಾವುದೇ ಸಂಬಂಧವಿಲ್ಲವೆಂದು ನಾನು ಭಾವಿಸುತ್ತೇನೆ. ಯಾಕೆಂದರೆ, ಪ್ರಸ್ತುತ ಸಚಿವಾಲಯವು ಎರಡು ತಿಂಗಳ ಹಿಂದೆಯಷ್ಟೇ ರಚನೆಯಾಗಿದೆ. ಆದರೆ, ಮಸೂದೆ ಬಗ್ಗೆ ಕಳೆದ 10 ವರ್ಷಗಳಲ್ಲಿ ಬಹು-ಆಯಾಮಗಳ ಮೂಲಕ ಸಮಾಲೋಚನೆ ನಡೆಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ” ಎಂದು ಅವರು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

”10 ವರ್ಷಗಳಲ್ಲಿ ಅವರು ಸಮಾಲೋಚನೆಗಳನ್ನು ನಡೆಸಿದ್ದರೂ, ಪ್ರಮುಖ ಮುಸ್ಲಿಂ ಸಂಘ-ಸಂಸ್ಥೆಗಳನ್ನು ಸರ್ಕಾರ ಸಂಪರ್ಕಿಸಿಲ್ಲ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಮುಸ್ಲಿಂ ಸಮುದಾಯಕ್ಕೆ ಪ್ರಮುಖವಾದ ಸಂಸ್ಥೆಯಾಗಿದೆ. ನಾನು ಜೆಪಿಸಿಯ ನೇತೃತ್ವ ವಹಿಸಿದ್ದಾಗ, ನಾವು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ವಿವಿಧ ಎನ್‌ಜಿಒಗಳೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸಿದ್ದೇವೆ. ಅದಕ್ಕಾಗಿ, ಏಳು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತ್ತು. 2013ರಲ್ಲಿ, ನಾನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವನಾಗಿದ್ದಾಗ, ನಾವು ಸಾಚಾರ್ ಸಮಿತಿ ಮತ್ತು ಜೆಪಿಸಿ ವರದಿಗಳ ಆಧಾರದ ಮೇಲೆ ವಕ್ಫ್ ಕಾಯಿದೆ 1995ಗೆ ಪ್ರಮುಖ ತಿದ್ದುಪಡಿಗಳನ್ನು ತಂದಿದ್ದೆವು. ಆದರೆ, ಪ್ರಸ್ತುತ ಮಸೂದೆಯು ಸಾಚಾರ್ ಸಮಿತಿ ಶಿಫಾರಸುಗಳನ್ನು ಕೈಬಿಟ್ಟಿದೆ” ಎಂದು ಹೇಳಿದ್ದಾರೆ.

”ಸರ್ಕಾರವು ತಿದ್ದುಪಡಿ ಮಸೂದೆಯನ್ನು ತರುತ್ತಿರುವುದು ಸುಧಾರಣೆಯಲ್ಲ, ವಿರೂಪ. ಸರ್ಕಾರವು 1995ರಲ್ಲಿ ರಚಿಸಲಾಗಿದ್ದ ಕಾಯಿದೆಗೆ ಮರಳುತ್ತಿದೆ. 2013ಕ್ಕೂ ಮುಂಚೆ, ವಕ್ಫ್‌ ಆಸ್ತಿಗಳನ್ನು ಅನೇಕ ಪ್ರಭಾವಿ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಸರ್ಕಾರಗಳು ಅತಿಕ್ರಮಿಸಿಕೊಂಡಿದ್ದವು. ಅವುಗಳನ್ನು ಮರಳಿ ಪಡೆಯಲು ವಕ್ಫ್‌ ಬೋರ್ಡ್‌ ಹರಸಾಹಸಪಡುತ್ತಿತ್ತು. 2013ರಲ್ಲಿ ವಕ್ಫ್ ಬೋರ್ಡ್‌ಗಳಿಗೆ ವಕ್ಫ್‌ ಆಸ್ತಿ ನಿರ್ವಹಣೆಗಾಗಿ ಹೆಚ್ಚಿನ ಅಧಿಕಾರ ನೀಡಲಾಗಿತ್ತು. ಆಸ್ತಿಗಳ ರಕ್ಷಣೆಗಾಗಿ ಪ್ರಮುಖ ನಿಬಂಧನೆಗಳನ್ನು ತಂದಿದ್ದೆವು. ಆದರೆ, ಹೊಸ ಮಸೂದೆಯು ಆ ಎಲ್ಲ ನಿಬಂಧನೆಗಳನ್ನು ತೆಗೆದುಹಾಕಿದೆ. ವಕ್ಫ್‌ ಬೋರ್ಡ್‌ ಅಧಿಕಾರವನ್ನು ಕಿತ್ತುಕೊಂಡಿದೆ ಮತ್ತು ನ್ಯಾಯಮಂಡಳಿಯನ್ನು ದುರ್ಬಲಗೊಳಿಸಿದೆ” ಎಂದು ಅವರು ಹೇಳಿದ್ದಾರೆ.

ಕೆ ರೆಹಮಾನ್ ಖಾನ್
ಕೆ ರೆಹಮಾನ್ ಖಾನ್

”ವಕ್ಫ್‌ ಮಂಡಳಿಗೆ ಮುಸ್ಲಿಮೇತರರನ್ನು ಸದಸ್ಯರನ್ನಾಗಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದು, ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಿರುಕು ಮೂಡಿಸುವ ಉದ್ದೇಶಪೂರ್ವಕ ಕ್ರಮ. ಆಡಳಿತ ಮಂಡಳಿಯಲ್ಲಿ ಮುಸ್ಲಿಮರು ಇರುವ ಒಂದೇ ಒಂದು ಹಿಂದು ದೇವಾಲಯ ಅಥವಾ ಹಿಂದು ಮಂಡಳಿಯನ್ನು ತೋರಿಸಿ ನೋಡೋಣ. ಗುರುದ್ವಾರ ಪರ್ಬಂಧಕ್ ಮಂಡಳಿಯನ್ನೇ ನೋಡಿ. ಅದನ್ನೂ ಕೂಡ ಸಂಸತ್ತಿನ ಕಾಯಿದೆಯ ಮೂಲಕ ರಚನೆ ಮಾಡಲಾಗಿದೆ. ಆ ಮಂಡಳಿಯಲ್ಲಿ ಯಾವುದೇ ಇತರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆಯೇ” ಎಂದು ಪ್ರಶ್ನಿಸಿದ್ದಾರೆ.

”ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುವಾಗ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ‘ಹೊಸ ಮಸೂದೆಯು ಸಾಚಾರ್ ಸಮಿತಿ ಮತ್ತು ನಮ್ಮ ನೇತೃತ್ವದಲ್ಲಿ ಸಲ್ಲಿಸಲಾಗಿದ್ದ ವರದಿಯ ಶಿಫಾರಸುಗಳನ್ನು ಒಳಗೊಂಡಿದೆ’ ಎಂದು ಹೇಳಿಕೊಂಡಿದ್ದಾರೆ. ಆದರೆ, ಆ ಎರಡೂ ವರದಿಗಳ ಒಂದೇ ಒಂದು ಶಿಫಾರಸನ್ನು ಅಳವಡಿಸಲಾಗಿಲ್ಲ. ಉದಾಹರಣೆಗೆ, ವಕ್ಫ್ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ‘ವಕ್ಫ್ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಬೇಕು ಎಂದು ಸಾಚಾರ್ ಸಮಿತಿ ಮತ್ತು ಜೆಪಿಸಿ ಒತ್ತಿ ಹೇಳಿದ್ದವು. ಇದು ಜೆಪಿಸಿಯ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ. ಯುಪಿಎ ಸರ್ಕಾರ 2014 ಜನವರಿಯಲ್ಲಿ 500 ಕೋಟಿ ರೂ. ಬಂಡವಾಳದೊಂದಿಗೆ ನಿಗಮವನ್ನು ಸ್ಥಾಪಿಸಿತು. ಆ ನಿಗಮಕ್ಕೆ ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ. ಈಗ ನಿಗಮವು ಮುಚ್ಚುವ ಹಂತದಲ್ಲಿದೆ” ಎಂದು ವಿವರಿಸಿದ್ದಾರೆ.

ಈ ವರದಿ ಓದಿದ್ದೀರಾ?: ವಕ್ಫ್ (ತಿದ್ದುಪಡಿ) ಮಸೂದೆ-2024 | ಮುಸ್ಲಿಮರ ಅವಕಾಶ ಕಸಿದುಕೊಳ್ಳುತ್ತಿದೆಯೇ ಮೋದಿ ಸರ್ಕಾರ?

ವಕ್ಫ್‌ ಮಂಡಳಿ ನಿವರ್ಹಿಸುತ್ತಿರುವ ಆಸ್ತಿಯು ವಕ್ಫ್ ಆಸ್ತಿಯೇ ಅಥವಾ ಸರ್ಕಾರಿ ಭೂಮಿಯೇ ಎಂದು ನಿರ್ಧರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿರುವ ಬಗ್ಗೆ ಮಾತನಾಡಿದ ರೆಹಮಾನ್‌ ಖಾನ್, ”ಈ ಹಿಂದೆ 1995ರ ಕಾಯ್ದೆಯಡಿ ವಕ್ಫ್ ಆಸ್ತಿಗಳ ಸರ್ವೆ ಕಾರ್ಯವನ್ನು ಸರ್ವೇ ಆಯುಕ್ತರು ನಿರ್ವಹಿಸುತ್ತಿದ್ದರು. ಈಗ ಪಾರದರ್ಶಕತೆಯನ್ನು ತರಲು ಜಿಲ್ಲಾಧಿಕಾರಿಗಳು ಅಥವಾ ಸಮಾನ ಶ್ರೇಣಿಯ ಅಧಿಕಾರಿಗಳಿಗೆ ವಹಿಸಲಾಗಿದೆ. ಈ ಮೂಲಕ ಜಿಲ್ಲಾಧಿಕಾರಿಗಳಿಗೆ ಎಲ್ಲ ಅಧಿಕಾರ ನೀಡುತ್ತಿದ್ದಾರೆ” ಎಂದಿದ್ದಾರೆ.

ಹೊಸ ಮಸೂದೆಯು ಮಹಿಳೆಯರಿಗೆ, ಬೋಹ್ರಾ ಮತ್ತು ಅಗಾಖಾನಿ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಮಾತನಾಡಿದ ಅವರು, ”ಇದು ಸರ್ಕಾರದ ದುರಾಡಳಿತದ ನಡೆ. ಬೋಹ್ರಾ ಮತ್ತು ಅಗಾಖಾನಿ ಸಮುದಾಯಗಳ ಜನರು ಬೆರಳೆಣಿಕೆಯಷ್ಟು ಮಾತ್ರವೇ ಇದ್ದಾರೆ. ಅವರು ಶಿಯಾ ಪಂಥದ ಭಾಗವಾಗಿದ್ದಾರೆ. ಅವರಿಗೆ ಪ್ರಾತಿನಿಧ್ಯ ನೀಡುತ್ತೇವೆಂದು ಹೇಳುವ ಮೂಲಕ ಮುಸ್ಲಿಂ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದೆ. ಸರ್ಕಾರಕ್ಕೆ ಸಮುದಾಯದ ಬಗ್ಗೆ ಪ್ರಾಮಾಣಿಕತೆ ಅಥವಾ ಕಾಳಜಿ ಇಲ್ಲ” ಎಂದು ಆರೋಪಿಸಿದ್ದಾರೆ.

ಕೃಪೆ: ಟಿಎನ್‌ಐಇ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೈವಿಕ ತಂತ್ರಜ್ಞಾನ ನೀತಿ 2024-2029 ಅನಾವರಣ; 1,000ಕ್ಕೂ ಹೆಚ್ಚು ನವೋದ್ಯಮ ಸ್ಥಾಪನೆಯ ಗುರಿ

ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ...

ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಗಾಳಿ ಕಲುಷಿತ : ಎಚ್ಚರಿಕೆ ನೀಡಿದ ಗ್ರೀನ್ ಪೀಸ್ ವರದಿ

ಕರ್ನಾಟಕ ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಹಾಗು ಮೈಸೂರಿನ...

ಅಬಕಾರಿ ನೀತಿ ಪ್ರಕರಣ | ಕೇಜ್ರಿವಾಲ್ ‘ಕ್ರಿಮಿನಲ್ ಪಿತೂರಿ’ಯಲ್ಲಿ ಭಾಗಿ: ಸಿಬಿಐ

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ), ತನ್ನ...

ಹರಿಯಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ಗೆ ಸೇರಿದ ದಿನವೇ ವಿನೇಶ್ ಫೋಗಟ್‌ಗೆ ಟಿಕೆಟ್

ಹರಿಯಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಶುಕ್ರವಾರ ರಾತ್ರಿ ತನ್ನ...