ಅಷ್ಟ ತೀರ್ಥದಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಬಾಲಕರು ನದಿ ಪಾಲಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ನಡೆದಿದೆ.
ಪ್ರಕಾಶ (15), ಸೋನು (16) ಎಂಬ ಬಾಲಕರು ಕೊನೆಯುಸಿರೆಳೆದಿದ್ದಾರೆ.
ಸೋನು ಎಂಬ ಬಾಲಕ ನದಿಯಲ್ಲಿ ಇಳಿದು ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಪ್ರಕಾಶ ಆತನನ್ನು ರಕ್ಷಿಸಲು ನೀರಿಗೆ ಧುಮುಕಿದ್ದ. ಈ ವೇಳೆ ಇಬ್ಬರು ನದಿಯಲ್ಲಿ ಮುಳುಗಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಎಸ್ಡಿಆರ್ಎಫ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.