ಭಾರತೀಯ ಹವಾಮಾನ ಇಲಾಖೆ ವರದಿಯಂತೆ ತುಮಕೂರು ಜಿಲ್ಲೆಯಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಇರುವುದರಿಂದ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಸಂಜೆ ನೀಡಿದ ತುರ್ತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ ಅವರು, ಮಳೆಯಿಂದ ಯಾವುದೇ ಜನ-ಜಾನುವಾರುಗಳಿಗೆ ಜೀವ ಹಾನಿಯಾಗದಂತೆ ನದಿ/ಹಳ್ಳ ಕೆರೆ ದಡಗಳಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ/ಕರುಗಳನ್ನು ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನದಿ/ ಹಳ್ಳ/ ಕೆರೆ ದಡಗಳಲ್ಲಿ ಅಪಾಯವಿರುವ ಸೇತುವೆಗಳಲ್ಲಿ ಫೋಟೋ/ ಸೆಲ್ಫಿಗಳನ್ನು ತೆಗೆಯದಂತೆ ಯುವಕ/ ಯುವತಿಯರಿಗೆ ಮತ್ತು ಸಾರ್ವಜನಿಕರಿಗೆ ತಿಳಿ ಹೇಳಬೇಕು. ಭಾರಿ ಮಳೆ/ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರಬೇಕು ಹಾಗೂ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಬೇಕು ಎಂದು ಗ್ರಾಮ ಆಡಳಿತ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿದು ಸಾವು-ನೋವುಗಳು ಸಂಭವಿಸುವುದರಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ರಾಜ್ಯ/ ಜಿಲ್ಲಾಡಳಿತ/ ತಾಲ್ಲೂಕು ಆಡಳಿತದಿಂದ ನೀಡುವ ಹವಾಮಾನದ ಮುನ್ನೆಚ್ಚರಿಕೆಯನ್ನು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳು ನೀಡುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ಕೈಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ ಸಂಖ್ಯೆ: 7304975519, 0816-2213404, 155304ನ್ನು ಸಂಪರ್ಕಿಸಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.