ಚನ್ನಪಟ್ಟಣದ ಉಪಚುನಾವಣೆ ಎಂಬುದು ಎಚ್‌ಡಿಕೆ ಮತ್ತು ಡಿಕೆ ಕುಟುಂಬಗಳ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಾಮ್ರಾಜ್ಯ ಮತ್ತು ಆಸ್ತಿ ವಿಸ್ತರಣೆಗೆ ಗೆಲ್ಲಬೇಕಾಗಿದೆ. ಅಧಿಕಾರದಾಸೆ ಮತ್ತು ಕುಟುಂಬಪ್ರೇಮವೂ ತಳುಕು ಹಾಕಿಕೊಂಡಿದೆ. ಇವರಿಬ್ಬರ ಅನುಕೂಲಕ್ಕೆ ತಕ್ಕಂತೆ ಬಳಕೆಯಾಗುತ್ತಿರುವುದು ಸಿ.ಪಿ. ಯೋಗೇಶ್ವರ್. ದುರಂತವೆಂದರೆ ಚನ್ನಪಟ್ಟಣ ಜನತೆಗೆ ಬೇಕಾಗಿರುವ ಜನಪ್ರತಿನಿಧಿ ಯಾರು, ಅವರ ಆಶೋತ್ತರಗಳೇನು ಎಂಬುದನ್ನು ಈ ಎರಡು ಕುಟುಂಬಗಳು ಕೇಳುತ್ತಿಲ್ಲ.
‘ಚನ್ನಪಟ್ಟಣ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ’ ಎಂದಿದ್ದಾರೆ ಡಿಸಿಎಂ ಡಿ.ಕೆ.ಶಿವಕುಮಾರ್. ಅಷ್ಟೇ ಅಲ್ಲ, ಅದೇ ಕ್ಷೇತ್ರದ ಅಭ್ಯರ್ಥಿಯಾಗಲು ತುದಿಗಾಲ ಮೇಲೆ ನಿಂತಿರುವ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರನ್ನು ಪಕ್ಕದಲ್ಲಿಯೂ ಕೂರಿಸಿಕೊಂಡಿದ್ದಾರೆ.
ಈ ನಡೆ ರಾಜ್ಯ ರಾಜಕೀಯ ವಲಯದಲ್ಲಿ ಹಲವು ತರಂಗಗಳನ್ನು ಎಬ್ಬಿಸಿದೆ. ಅದರಲ್ಲೂ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಗಳಲ್ಲಿ ತಳಮಳ ಉಂಟು ಮಾಡಿದೆ. ರಾಜಕೀಯ ನಾಯಕರ ನಡುವೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎಂಬ ಹೇಳಿಕೆಯ ಹಿಂದೆ, ಹತ್ತಾರು ರಾಜಕೀಯ ಲೆಕ್ಕಾಚಾರಗಳಿವೆ. ಅದರಲ್ಲಿ ಪ್ರಮುಖವಾಗಿ ಬಿಜೆಪಿ-ಜೆಡಿಎಸ್ ಪಕ್ಷಗಳ ಮುಂದಿನ ನಡೆ ಏನು, ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗುತ್ತದೆಯೇ, ಅಭ್ಯರ್ಥಿ ಯಾರು, ಬಿಜೆಪಿಯ ಅಧಿಕೃತ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ನಿಲುವೇನು ಎಂಬೆಲ್ಲ ಪ್ರಶ್ನೆಗಳಿವೆ, ಉತ್ತರ ಬಯಸುವ ಉಮೇದಿದೆ.
ಹಾಗೆಯೇ, 2023ರ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗ ಕಾಂಗ್ರೆಸ್ ಹಿಡಿತದಲ್ಲಿತ್ತು. ಆದರೆ ಅದು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಕೈ ವಶವಾಯಿತು. ಇದಕ್ಕಿಂತಲೂ ಮುಖ್ಯವಾಗಿ ಸಹೋದರ ಡಿ.ಕೆ. ಸುರೇಶ್ ಸೋತು, ರಾಜಕೀಯ ವನವಾಸಕ್ಕೆ ಹೋಗುವಂತಾಯಿತು. ಸರಿ ಸುಮಾರು ನಲವತ್ತು ವರ್ಷಗಳ ಕಾಲ, ಅಧಿಕಾರದ ಬಲದಿಂದ ಬೆಂಗಳೂರು ಗ್ರಾಮಾಂತರವನ್ನು ಹಿಡಿತದಲ್ಲಿಟ್ಟುಕೊಂಡು ಆಧುನಿಕ ಸಾಮ್ರಾಟರಂತೆ ಮೆರೆಯುತ್ತಿದ್ದ ಕ್ಷೇತ್ರ ಈಗ ದೇವೇಗೌಡರ ಕುಟುಂಬದ ಪಾಲಾಗಿದೆ. ಇದಕ್ಕೆಲ್ಲ ಉತ್ತರ- ಚನ್ನಪಟ್ಟಣ ಉಪಚುನಾವಣೆ ಗೆಲುವೊಂದೇ ಎನ್ನುವುದು ಡಿ.ಕೆ ಶಿವಕುಮಾರ್ ಯೋಚನೆ. ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಹಿಡಿತವನ್ನು ಮರು ಸ್ಥಾಪಿಸಿಕೊಳ್ಳಬೇಕೆಂಬ ಇರಾದೆಯೂ ಇದೆ.
ರಾಜಕೀಯ ಲೆಕ್ಕಾಚಾರಗಳನ್ನೂ ಮೀರಿ, ನೊಣವಿನಕೆರೆ ಅಜ್ಜಯ್ಯನ ಆದೇಶವೂ ಇದೆ ಎಂಬುದು ಡಿ.ಕೆ. ಶಿವಕುಮಾರ್ ಆಪ್ತ ವಲಯದಿಂದ ಕೇಳಿಬರುತ್ತಿದೆ. ಚನ್ನಪಟ್ಟಣ ತಾಲೂಕಿನ ಕೆಂಗಲ್, ಹನುಮಂತಯ್ಯನವರ ಊರು. ಅವರು ಮುಖ್ಯಮಂತ್ರಿಯಾಗಿದ್ದು ಇಲ್ಲಿಯ ಹನುಮಂತನ ಕೃಪೆಯಿಂದ ಎನ್ನುವ ನಂಬಿಕೆಯೂ ಇದೆ. ಪಕ್ಕದ ರಾಮನಗರದಿಂದ ದೇವೇಗೌಡರು ಮತ್ತು ಕುಮಾರಸ್ವಾಮಿಗಳು ಗೆದ್ದು ಮುಖ್ಯಮಂತ್ರಿಗಳಾಗಿದ್ದಾರೆ. ಹಾಗಾಗಿ ಡಿ.ಕೆ. ಶಿವಕುಮಾರ್ ಕೂಡ ಇದೇ ರಾಜಮೂಲೆಯಿಂದ ಗೆದ್ದು, ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ.
ಆದರೆ, ಅದು ಅಷ್ಟು ಸುಲಭವೇ? ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಇದಕ್ಕೆ ಪ್ರತಿಯಾಗಿ ಹೂಡಿರುವ ಆಟವೇನು? ಮೈತ್ರಿ ಪಕ್ಷವಾದ ಬಿಜೆಪಿಯ ಪಾತ್ರವೇನು?
ರಾಜ್ಯದಲ್ಲಿ ತೆರವಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳಾದ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣಗಳಿಗೆ ಚುನಾವಣಾ ಆಯೋಗ ಅಧಿಕೃತವಾಗಿ ಉಪಚುನಾವಣೆ ದಿನಾಂಕ ಘೋಷಿಸಿಲ್ಲ. ಹಾಗೆಯೇ ಸಂಡೂರು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆದರೆ ಚನ್ನಪಟ್ಟಣದ ಕತೆ ಹಾಗಲ್ಲ.
ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿಯವರು, ಲೋಕಸಭಾ ಚುನಾವಣೆ ಎದುರಾದಾಗ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾದರು. ಭಾರಿ ಅಂತರದಿಂದ ಗೆದ್ದು ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರಿಂದ ತೆರವಾದ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ, ಚನ್ನಪಟ್ಟಣ ಕ್ಷೇತ್ರ ತಮ್ಮ ತೆಕ್ಕೆಯಲ್ಲಿಯೇ ಇರಬೇಕೆಂಬ ಇರಾದೆ ಕುಮಾರಸ್ವಾಮಿಯವರದು.
ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವಾಗ, ಆ ಮೈತ್ರಿಯ ಫಲದಿಂದಾಗಿ ಮಂಡ್ಯ ಲೋಕಸಭಾ ಸ್ಥಾನ ಗೆದ್ದಿರುವಾಗ, ಸಹಜವಾಗಿಯೇ ಚನ್ನಪಟ್ಟಣ ಕ್ಷೇತ್ರಕ್ಕೂ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿತ್ತು. ಆ ಕಾರಣದಿಂದಾಗಿ, ಚನ್ನಪಟ್ಟಣ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ, ಸ್ಥಳೀಯರೇ ಆಗಿದ್ದ ಸಿ.ಪಿ. ಯೋಗೇಶ್ವರ್, ನಾನು ಆಕಾಂಕ್ಷಿ ಎಂದಿದ್ದರು. ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದರು.
ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವುದನ್ನು ತೋರಿಸಿದ ಕ್ಷೇತ್ರಗಳಲ್ಲಿ ಚನ್ನಪಟ್ಟಣವೂ ಒಂದು. ಆರಂಭದಲ್ಲಿ ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಈ ಕ್ಷೇತ್ರದ ರಾಜಕೀಯ ಸ್ವರೂಪ ಬದಲಿಸಿದವರು ಸಿ.ಪಿ. ಯೋಗೇಶ್ವರ್. ‘ಸೈನಿಕ’ ಸಿನೆಮಾ ನಿರ್ಮಿಸಿ ನಟನಾಗಿ ಹೆಸರು ಮಾಡಿದ್ದ ಯೋಗೇಶ್ವರ್ 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. ಆ ನಂತರ ಕಾಂಗ್ರೆಸ್ ಸೇರಿ 2004 ಮತ್ತು 2008ರಲ್ಲಿ ಜಯಗಳಿಸಿದ್ದರು. ಒಂದರ್ಥದಲ್ಲಿ ಇದು ವ್ಯಕ್ತಿಗತ ಹ್ಯಾಟ್ರಿಕ್ ಸಾಧನೆ.
ರಾಜಕೀಯ ಪಲ್ಲಟದ ಕಾರಣ ಶಾಸಕರಾಗಿದ್ದ ಯೋಗೇಶ್ವರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕ್ಷೇತ್ರ ಉಪಚುನಾವಣೆ ಕಾಣುವಂತಾಯ್ತು. 2009ರ ಉಪಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಸಿ. ಅಶ್ವತ್ಥ್, ಯೋಗೇಶ್ವರ್‌ಗೆ ಸೋಲುಣಿಸಿದ್ದರು. ಬಳಿಕ ನಡೆದ 2011 ಹಾಗೂ 2013ರ ಚುನಾವಣೆಗಳಲ್ಲಿ ಕ್ರಮವಾಗಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ವಿಜಯ ಪತಾಕೆ ಹಾರಿಸಿದ ಯೋಗೇಶ್ವರ್ ಪಕ್ಷಕ್ಕಿಂತಲೂ ವ್ಯಕ್ತಿಯೇ ಪ್ರಮುಖ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.
ಆದರೆ, 2018 ಮತ್ತು 2023ರಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿಯವರೇ ಅಭ್ಯರ್ಥಿಯಾದಾಗ, ಒಕ್ಕಲಿಗ ಸಮುದಾಯದೊಳಗೆ ಮತವಿಭಜನೆಯಾಗಿ, ಯೋಗೇಶ್ವರ್ ಸೋತಿದ್ದರು. 2024ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಾಗ, ಸ್ಥಳೀಯ ಮಟ್ಟದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದರೂ, ಸೋಲಿನ ಕಹಿ ಮರೆತು ಮೈತ್ರಿಯನ್ನು ಯೋಗೇಶ್ವರ್ ಒಪ್ಪಿಕೊಂಡಿದ್ದರು. ಅಲ್ಲದೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೌಡರ ಅಳಿಯ ಡಾ.ಮಂಜುನಾಥ್‌ರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಚನ್ನಪಟ್ಟಣದ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಬೇಕೆಂಬ ಆಕಾಂಕ್ಷೆ ಹೊಂದಿದ್ದರು. ಹಕ್ಕು ಮಂಡಿಸಿದ್ದರು.
ಇದನ್ನು ಓದಿದ್ದೀರಾ?: ‘ಹರ್ ಘರ್ ನೌಕ್ರಿ’ | ಭಾರತದ ಭವಿಷ್ಯಕ್ಕೆ ಖರ್ಗೆ ಕೊಟ್ಟ ಹೊಸ ಘೋಷ
ಕುಮಾರಸ್ವಾಮಿಯವರು ಮಾತ್ರ, ಹೋದಲ್ಲಿ ಬಂದಲ್ಲಿ ಯೋಗೇಶ್ವರ್ ಅವರನ್ನು ಪಕ್ಕದಲ್ಲಿ ಇಟ್ಟುಕೊಂಡು ಓಡಾಡಿದರೇ ಹೊರತು, ತಮ್ಮ ಖಚಿತ ಅಭಿಪ್ರಾಯವನ್ನು ಹೊರಹಾಕಲಿಲ್ಲ. ಬದಲಿಗೆ, ವಿರೋಧಿಗಳನ್ನು ಹಣಿಯಲು ಯೋಗೇಶ್ವರ್ ಅವರನ್ನು ಅಸ್ತ್ರವನ್ನಾಗಿ ಬಳಸಿಕೊಂಡರು. ಹಾಗೆಯೇ ಕಾರ್ಯಕರ್ತರಿಂದ ಮಗನ ಹೆಸರನ್ನು ತೇಲಿಬಿಟ್ಟರು. ಸಾ.ರಾ. ಮಹೇಶ್‌ರಿಂದ ನಿಖಿಲ್ ಅಭ್ಯರ್ಥಿಯಲ್ಲ ಎಂದು ಹೇಳಿಸಿದರು. ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಹೇಳುವ ಪ್ರಕಾರ, 2029ರವರೆಗೆ ನಿಖಿಲ್‌ಗೆ ಗುರುಬಲವಿಲ್ಲವಂತೆ. ಹಾಗಾಗಿ ನಿಲ್ಲಿಸಿ ಸೋಲಿಸುವ ಬದಲು, ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸುವ ಇರಾದೆ ಇದೆಯಂತೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ, ತನ್ನ ದೃಢ ನಿರ್ಧಾರ ತಳೆಯುವ ಬದಲು, ತಮ್ಮ ಅಭ್ಯರ್ಥಿ ಯೋಗೇಶ್ವರ್ ಪರ ನಿಲ್ಲುವ ಬದಲು, ಕುಮಾರಸ್ವಾಮಿಯವರದೇ ಅಂತಿಮ ತೀರ್ಮಾನ ಎನ್ನುತ್ತಿದೆ. ಬಿಜೆಪಿ ಹೈಕಮಾಂಡ್ ಕೂಡ ಕುಮಾರಸ್ವಾಮಿಯವರ ಪರವಾಗಿದೆ. ಇದರಿಂದ ಬೇಸತ್ತ ಯೋಗೇಶ್ವರ್ ಬೆಂಕಿಯಿಂದ ಬಾಣಲೆಗೆ ಎಂಬಂತೆ, ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ ದಿನ ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಕ ನಿಂತು, ಮೈತ್ರಿ ಕೂಟಕ್ಕೆ ಸಂದೇಶ ರವಾನಿಸಿದ್ದಾರೆ. ಇದು ಕುಮಾರಸ್ವಾಮಿಯವರ ಜಂಘಾಬಲವನ್ನು ಕುಗ್ಗಿಸಿದೆ. ಡಿಕೆ ಗೆಲುವಿಗೆ ಯೋಗೇಶ್ವರ್ ಅಸ್ತ್ರವಾಗಿ ಬಳಕೆಯಾಗಬಹುದಾಗಿದೆ.

ಒಟ್ಟಿನಲ್ಲಿ ಚನ್ನಪಟ್ಟಣದ ಉಪಚುನಾವಣೆ ಎಚ್‌ಡಿಕೆ ಮತ್ತು ಡಿಕೆ ಕುಟುಂಬಗಳ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆಸ್ತಿ ಮತ್ತು ಸಾಮ್ರಾಜ್ಯ ವಿಸ್ತರಣೆಗೆ ಗೆಲುವು ಅನಿವಾರ್ಯವಾಗಿದೆ. ಬಹುಸಂಖ್ಯಾತ ಸಮುದಾಯದವರೆಂಬ ಜಾತಿ ಧಿಮಾಕಿದೆ. ಅಧಿಕಾರದಾಸೆ ಮತ್ತು ಕುಟುಂಬಪ್ರೇಮವೂ ತಳುಕು ಹಾಕಿಕೊಂಡಿದೆ. ಇವರಿಬ್ಬರ ಅನುಕೂಲಕ್ಕೆ, ಐಲಾಟಕ್ಕೆ ಸಿ.ಪಿ. ಯೋಗೇಶ್ವರ್ ಬಳಕೆಯಾಗುತ್ತಿರುವುದೂ ಇದೆ. ದುರಂತವೆಂದರೆ ಚನ್ನಪಟ್ಟಣ ಜನತೆಗೆ ಬೇಕಾಗಿರುವ ಜನಪ್ರತಿನಿಧಿ ಯಾರು, ಅವರ ಆಶೋತ್ತರಗಳೇನು ಎಂಬುದನ್ನು ಈ ಎರಡು ಬಲಿಷ್ಠ ಕುಟುಂಬಗಳು ಕೇಳುತ್ತಿಲ್ಲ.

ಲೇಖಕ, ಪತ್ರಕರ್ತ