ಈ ದಿನ ವಿಶೇಷ | ಒಂಟಿತನ ಮತ್ತು ಏಕಾಂತ

Date:

Advertisements
ಎಂತಹ ಬಿಕ್ಕಟಿನ ಕಾಲದಲ್ಲೂ ನಾವು ಒಂಟಿತನವನ್ನು ಏಕಾಂತವಾಗಿ ಬದಲಾಯಿಸಿಕೊಳ್ಳಬಹುದೇ? ಉತ್ತರ ಸುಲಭವಲ್ಲ. ಹಾಗೆ ಮಾಡಲು ಅಸಾಧ್ಯವೆನ್ನುವಂತಹ ಧೈರ್ಯ, ಗಟ್ಟಿತನ ಬೇಕು ನಿಜ. ಆದ್ರೆ ಒಂಟಿತನ ಮತ್ತು ಏಕಾಂತವೆನ್ನುವುದು ತೀರಾ ವ್ಯಕ್ತಿನಿಷ್ಠ ವಿಷಯಗಳು. ಒಂಟಿತನ ನಿಮ್ಮನ್ನು ಕುಗ್ಗಿಸುತ್ತದೆ ಆದರೆ ಏಕಾಂತ ಬದುಕಿನ ಹೊಸ ಒಳಹುಗಳನ್ನು ನಿಮ್ಮ ಮುಂದೆ ತೆರೆದಿಡುತ್ತದೆ... 

ಆ ದಿನಗಳಲ್ಲಿ ಬುದ್ಧ ತನ್ನ ದೇಹವನ್ನು ಅತಿಯಾಗಿ ದಂಡಿಸುತ್ತಿದ್ದ. ಉದರದ ಮೇಲೆ ಬೆರಳಿಟ್ಟರೆ ಬೆನ್ನ ಮೂಳೆ ಸಿಗುವಷ್ಟು ಅವನ ದೇಹ ಕೃಶವಾಗಿತ್ತು. ದೇಹ ದಂಡನೆಯೇ ಮುಕ್ತಿಯ ಮಾರ್ಗವೆಂದು ನಂಬಿದ್ದ ಐವರು ಬುದ್ಧನ ಹಿಂಬಾಲಕರಾಗಿದ್ದರು. ಒಂದು ದಿನ ಬುದ್ಧನಿಗೆ ಜ್ಞಾನೋದಯವಾಗುತ್ತದೆ, ನಾವು ಕೂಡ ಅವನ ದಾರಿಯಲ್ಲೇ ನಡೆದು ನಿರ್ವಾಣ ಹೊಂದಬಹುದು ಎಂಬ ಮಹತ್ವಾಕಾಂಕ್ಷೆಯಲ್ಲಿದ್ದರು.

ಆದರೊಂದು ದಿನ ಇದ್ದಕಿದ್ದ ಹಾಗೆ ಬುದ್ಧ ದೇಹದಂಡನೆಯನ್ನು ಬಿಟ್ಟುಬಿಟ್ಟ. ಆರು ವರ್ಷಗಳ ಕಠಿಣ ಸಾಧನೆಯ ನಂತರ ಅದು ಸರಿಯಾದ ಮಾರ್ಗವಲ್ಲವೆಂಬ ಅರಿವು ಅವನಲ್ಲಿ ಮೂಡಿತ್ತು. ಬುದ್ಧ ಹತ್ತಿರದ ಹಳ್ಳಿಗೆ ಹೋಗಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡಿದ್ದ. ಬುದ್ಧನ ಹಿಂಬಾಲಕರಿಗೆ ಆಕಾಶವೇ ಕಳಚಿ ಬಿದ್ದ ಹಾಗಾಯ್ತು. ಅವರಿಗೆ ಅಲ್ಲಿಯವರೆಗೆ ಮಹದೈಶ್ವರ್ಯ ಕಂಡಿದ್ದ ಬುದ್ಧ ಬೂದಿಯಂತೆ ಭಾಸವಾಗತೊಡಗಿದ್ದ. ಅವರು ಬುದ್ಧನನ್ನು ಬಿಟ್ಟುಹೋದರು. ಬುದ್ಧ ಒಬ್ಬಂಟಿಯಾದ. ಕಾನನಗಳಲ್ಲಿ ಅಲೆದಾಡಿದ. ಆ ದಿನಗಳಲ್ಲಿ ಬುದ್ಧ ವಿಚಲಿತನಾಗದೆ ಅಂತರ್ಮುಖಿಯಾದ. ಒಂಟಿತನವನ್ನು ಏಕಾಂತವಾಗಿ ಬದಲಾಯಿಸಿಕೊಂಡ. ಅನಿರೀಕ್ಷಿತವಾಗಿ ಸಿಕ್ಕ ಏಕಾಂತದಲ್ಲಿ ಬುದ್ಧನಿಗೆ ವಿಶಿಷ್ಟ ಒಳನೋಟಗಳು ಕಾಣತೊಡಗಿದ್ದವು!

ಬುದ್ಧನ ಬಳಿಯಿದ್ದ ಅನುಯಾಯಿಗಳ ಹಾಗೆ ನಮ್ಮ ಸುತ್ತ ಬಂಧು-ಮಿತ್ರರಿರಬೇಕೆಂದು ನಾವು ಬಯಸುತ್ತೇವೆ. ಅವರಿದ್ದಾಗ ನಮಗೆ ಸಹಜವಾಗಿಯೇ ಖುಷಿಯಾಗುತ್ತದೆ. ಅವರ ಪ್ರತಿಕ್ರಿಯೆ, ಪ್ರಶಂಸೆಗಳನ್ನು ಸದಾ ನಿರೀಕ್ಷಿಸುತ್ತಿರುತ್ತೇವೆ. ನಮ್ಮ ನಿರೀಕ್ಷೆಯಂತೆ ಅವರಿರಬೇಕೆಂದು ಬಯಸುತ್ತೇವೆ. ಅವರ ಅನಿಸಿಕೆಗೆ ಹಾತೊರೆಯುತ್ತೇವೆ. ಅವರು ಕೂಡ ನಮ್ಮಿಂದ ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿರುತ್ತಾರೆ. ಅಪೇಕ್ಷೆಗಳು ಹುಸಿಯಾದಾಗ, (ಸೋಶಿಯಲ್ ಮೀಡಿಯಾದ ಲೈಕ್ಸ್ ಕಾಮೆಂಟ್ಸ್ ಕೂಡ ನಮ್ಮ ನಿರೀಕ್ಷೆಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಿ) ವ್ಯಕ್ತಿಗಳ ಅನುಪಸ್ಥಿತಿಯಲ್ಲಿ ಒಂಟಿತನ ಕಾಡುತ್ತದೆ. ”ನನ್ನನ್ನು ಕೇಳುವವರಿಲ್ಲ” ಎಂಬ ಅನಾಥಭಾವ ಮೂಡುತ್ತದೆ. ಮಾನಿಸಿಕ ಖಿನ್ನತೆಗೆ ಒಳಗಾಗುತ್ತೇವೆ.

Advertisements

ಹೀಗೆ ನಮ್ಮ ಆನಂದದ ಕೀಲಿಗಳನ್ನು ಪರರ ಕೈಗೆ ಒಪ್ಪಿಸಿಬಿಟ್ಟಿರುವುದು ಈ ಕಾಲದ ಅತಿ ದೊಡ್ಡ ರೋಗಗಳಲ್ಲಿ ಒಂದು ಅನಿಸುತ್ತೆ. ಬದುಕುವ ವೇಗ ಬಿರುಸಾದಂತೆ, ನಗರಗಳು ಬೆಳೆದಂತೆ, ಆಧುನಿಕ ತಂತ್ರಜ್ಞಾನ ಆಗಸ ಮುಟ್ಟಿದಂತೆ ಒಂಟಿತನ ಸಾಂಕ್ರಾಮಿಕ ರೋಗವಾಗಿ ಎಲ್ಲೆಡೆ ಹರಡುತ್ತಿದೆ. ಒಂಟಿತನ ಧೂಮಪಾನದಷ್ಟೇ ಮಾರಕವೆಂದು ಅನೇಕ ಸಂಶೋಧನೆಗಳು ಸಾಬೀತು ಪಡಿಸಿವೆ.

ಇದನ್ನು ಓದಿದ್ದೀರಾ?: ‘ಹರ್ ಘರ್ ನೌಕ್ರಿ’ | ಭಾರತದ ಭವಿಷ್ಯಕ್ಕೆ ಖರ್ಗೆ ಕೊಟ್ಟ ಹೊಸ ಘೋಷ

ಮತ್ತೊಂದೆಡೆ ನಮಗೆ ವ್ಯಕ್ತಿಗಳಿಂದ ಹೇಗೆ ನಿರೀಕ್ಷೆಗಳಿರುತ್ತವೋ ಹಾಗೆ ಬದುಕಿನಿಂದಲೂ ಸಾಕಷ್ಟು ನಿರೀಕ್ಷೆಗಳಿರುತ್ತವೆ. ನಾವಂದುಕೊಂಡಂತೆ ಬದುಕಿರಬೇಕು ಎಂಬ ಆಕಾಂಕ್ಷೆಗಳಿರುತ್ತವೆ. ಆದರೆ ವಾಸ್ತವ ಏನೆಂದರೆ, ಲೈಫ್ ಈಸ್ ಅನ್ ಫೇರ್ ಅನ್ನಿಸುವಷ್ಟು ಕರಾಳ ದಿನಗಳು ಬದುಕಿನಲ್ಲಿ ಯಾವುದೇ ಸೂಚನೆಯಿಲ್ಲದೆ ಬಂದಬ್ಬರಿಸುತ್ತವೆ.

ಇತ್ತೀಚಿಗೆ When Breath becomes Air ಎಂಬ ಕೃತಿಯನ್ನು ಬಿಡದೆ ಎರಡು ಬಾರಿ ಓದಿದೆ. ಮತ್ತೊಂದು ಬಾರಿ ಓದುವ ಇರಾದೆ ನನ್ನದು. ಪಾಲ್ ಕಲಾನಿಥಿ ಬರೆದ ನೆನಹು (memoir) ಅದು. ಪಾಲ್ Stanford ವಿಶ್ವವಿದ್ಯಾಲಯದಲ್ಲಿ ಬಿಎ ಮತ್ತು ಎಂಎ ಮಾಡಿದ ವಿದ್ಯಾರ್ಥಿ. ಅವನಿಗೆ ಸಾಹಿತ್ಯವೆಂದರೆ ಪಂಚಪ್ರಾಣ. ಉತ್ಕಟವಾಗಿ ಬದುಕಬೇಕೆಂಬ ಆಸೆಯಿಂದ ಸಾಹಿತ್ಯಾಸಕ್ತನೊಬ್ಬ ನ್ಯುರೋ ಸರ್ಜನ್ ಆಗಬಯಸುತ್ತಾನೆ. ಹಗಲಿರುಳು ಓದಿ ಪ್ರತಿಷ್ಠಿತ Yale ವಿಶ್ವವಿದ್ಯಾಲಯದಲ್ಲಿ MD ಮಾಡಲು ಅರ್ಹತೆ ಗಿಟ್ಟಿಸುತ್ತಾನೆ. ನ್ಯುರೋ ಸರ್ಜನ್ ಆದಮೇಲೆ ಪ್ರತಿದಿನ ಸಾವು ಬದುಕಿನ ನಡುವೆ ಹೋರಾಟ ಮಾಡುವ ತನ್ನ ಪೇಷಂಟ್‌ಗಳಿಗೆ ಕಟುವಾದ ನಿಜ ಹೇಳುವುದು, ಆಶಾವಾದ ನೀಡುವುದು ಒಂದು ದೊಡ್ಡ ನೈತಿಕ ತೊಳಲಾಟವಾಗತ್ತದೆ.

ತಲೆ ಬುರುಡೆಯನ್ನು ಗರಗಸದಲ್ಲಿ ಕತ್ತರಿಸಿ ಮೆದುಳನ್ನು ತನ್ನ ಮಾಂತ್ರಿಕ ಸ್ಪರ್ಶದಿಂದ ಸರಿಪಡಿಸುವ ಕೆಲಸದಲ್ಲಿ ಅವನು ಕೆಲವು ಬಾರಿ ಯಶಸ್ವಿಯಾದರು ಹಲವು ಬಾರಿ ಗುಣಪಡಿಸಲಾಗದ ಪರಿಸ್ಥಿತಿಗೆ ರೋಗಿಗಳು ತಲುಪಿರುತ್ತಾರೆ. ದಿನವೊಂದಕ್ಕೆ ಇಪ್ಪತ್ತು ಗಂಟೆ ಸರ್ಜರಿ ಮಾಡಿಯು ಅವರನ್ನು ಉಳಿಸಿಕೊಳ್ಳಲಾಗದ ಹತಾಶೆ ಅವನದಾಗುತ್ತದೆ. ಅಪಘಾತಕ್ಕೆ ತುತ್ತಾದ ಯುವಕನ ಮೆದುಳು ಮೂಗಿನಿಂದ ಹೊರ ಬರುತ್ತಿದ್ದರು ಆತ ಬದುಕುಳಿಯುತ್ತಾನೆ ಎಂಬ ಭರವಸೆಯಲ್ಲಿ ಆತನನ್ನು ಹೊತ್ತು ತಂದ ಪೋಷಕರಿಗೆ ಏನು ಹೇಳಲಾಗದೆ ಕಕ್ಕಾಬಿಕ್ಕಿಯಾಗುತ್ತಾನೆ. ಪ್ರತಿ ನಿತ್ಯ ರೋಗಿಗಳ ಸಂಬಂಧಿಗಳಿಗೆ ಕಹಿ ಸುದ್ದಿಯನ್ನು, ವಿಷಾದವನ್ನು ಮುಟ್ಟಿಸುವುದು ಹೇಗೆ, ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವುದು ಹೇಗೆ ಎಂಬ ಇಕ್ಕಟ್ಟಿಗೆ ಅವ ಬೀಳುತ್ತಾನೆ.

ಮೂವತ್ತೇಳು ವಯಸ್ಸಿನ ಪಾಲ್ ಕನಸುಗಳೆಲ್ಲಾ ಈಡೇರುವ ದಿನಗಳು ಹತ್ತಿರವಾದಂತೆ ಹಠಾತ್ತನೆ ಆಕಾಶವೇ ಕಳಚಿ ಬೀಳುತ್ತದೆ. ಅಮೆರಿಕದಲ್ಲೇ ಅತ್ಯುತ್ತಮ ನರತಜ್ಞನಾಗುವ ಹಂತದಲ್ಲಿದ್ದಾಗ ಅವನ ದೇಹದಲ್ಲೇ ಮಹಾ ರೋಗವೊಂದು ಮನೆಮಾಡಿ ಕೂತಿದೆ ಎಂಬ ವಿಷಯ ಅವನಿಗೆ ತಿಳಿಯುತ್ತದೆ. ಕೆಲವೇ ಗಂಟೆಗಳಲ್ಲಿ ಪ್ರಸಿದ್ಧ ವೈದ್ಯನೊಬ್ಬ ಒಮ್ಮೆಲೇ ರೋಗಿಯಾಗುತ್ತಾನೆ! ಕೆಲವೇ ತಿಂಗಳುಗಳ ಕಾಲ ಬದುಕಬಹುದೆಂಬ ಕಹಿ ಸುದ್ದಿಯನ್ನು ವೈದ್ಯರು ಅವನಿಗೆ ತಿಳಿಸಲು ಹಿಂಜರಿಯುತ್ತಾರೆ. ಮೊದಮೊದಲು ಬದುಕಿನ unfairness ನನ್ನು ಒಪ್ಪಲಾಗದ ಪಾಲ್‌ನಲ್ಲಿ ಖಿನ್ನತೆ ಆವರಿಸುತ್ತದೆ.

ನಂತರದ ದಿನಗಳಲ್ಲಿ ರೋಗ ಪಾಲ್‌ನನ್ನು ಒಳಗಿನಿಂದಲೇ ತಿನ್ನಲು ಶುರುಮಾಡುತ್ತದೆ. ಚಿಕಿತ್ಸೆ ಆತನನ್ನು ಒಳಗಿನಿಂದಲೇ ಸುಡುತ್ತದೆ. ಪಾಲ್ ಅಂತರ್ಮುಖಿಯಾಗುತ್ತಾನೆ. ಅಚ್ಚರಿಯೆಂಬಂತೆ ಮುರಿದು ಬೀಳುವ ಹಂತದಲ್ಲಿದ್ದ ಆತನ ವೈವಾಹಿಕ ಜೀವನದಲ್ಲಿ ಪ್ರೀತಿ ಚಿಗುರೊಡೆಯುತ್ತದೆ. ತಿಳಿಯ ಸರೋವರದ ಪ್ರಶಾಂತತೆಯಿಂದ ತನ್ನೆಲ್ಲ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸುತ್ತಾ ಸಾಗುತ್ತಾನೆ. ಪಾಲ್ ರೋಗವನ್ನು ನೋಡುವ ರೀತಿ, ಪ್ರಪಂಚವನ್ನು, ಪರರನ್ನು ಅರ್ಥಮಾಡಿಕೊಳ್ಳುವ ಪರಿ, ಸಾವನ್ನು ಎದುರುಗೊಳ್ಳುವ ವಿಧಾನ, ಉತ್ಕೃಷ್ಟ ಆಲೋಚನೆಗಳು ಮತ್ತು ಡೆಲಿಬರೇಷನ್‌ಗಳು ಆತನ ಏಕಾಂತದಿಂದಲೇ ಹುಟ್ಟಿದ್ದು ಅನ್ನೋದು ನನ್ನ ಅನಿಸಿಕೆ… ಸತ್ಯ ಶೋಧನಾ ನಿರತ, ಕಾನನದಲ್ಲಿ ಅಲೆದಾಡುವ ಬುದ್ಧ ಮತ್ತು ಸಾವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪಾಲ್ ಕಲಾನಿಥಿ ಒಂದೇ ಅನಿಸಿಬಿಡುತ್ತಾರೆ.

ಮೂವತ್ತೇಳು ಸಾಯುವ ವಯಸ್ಸಲ್ಲ. (ಬುದ್ಧನಿಗೆ ಇಪ್ಪತೊಂಬತ್ತೇನೆ ವಯಸ್ಸು ಅರಮನೆ ತೊರೆದು ಸತ್ಯ ಹುಡುಕುವ ವಯಸ್ಸೂ ಅಲ್ಲ.) ಶ್ರಮದ ಫಲ ಅನುಭವಿಸುವ ಬದುಕಿನ ಘಟ್ಟವದು. ಮಾರಕ ರೋಗ ಬದುಕಿನಲ್ಲಿ ತಂದೊಡ್ಡಿದ ಅನಿರೀಕ್ಷಿತ ತಿರುವನ್ನು ಪಾಲ್ ಸಂಯಮ, ರಾಜ ಠೀವಿಯಿಂದ ಮುಖಾಮುಖಿಯಾದ. ಜಗತ್ತಿನ ಯಾವ ಫಿಲಾಸಫಿಗೂ ನಿಲುಕದ, ಶ್ರೇಷ್ಠ ಆತ್ಮಚರಿತ್ರೆಯಲ್ಲೂ ಕಾಣಿಸದ ವಿಷಯವನ್ನು ಬರೆದ. ಏಕಾಂತದ ತಾಕತ್ತು ಅದು.

ಪಾಲ್ 1

ಪಾಲ್ ಕಾಲವಾದ ನಂತರ ಪುಸ್ತಕ ಪ್ರಕಟವಾಯಿತು. ಮಡದಿ ಲೂಸಿ ಕಲಾನಿಥಿ ಪುಸ್ತಕವನ್ನು ಪ್ರಕಟಿಸಿದರು. ಪುಸ್ತಕದ ಕೊನೆಯ ಪುಟದಲ್ಲಿ ಲೂಸಿ ದಾಖಲಿಸಿರುವ ಪಾಲ್ ಕಲಾನಿಥಿಯ ಅಂತಿಮ ಕ್ಷಣಗಳು… ಉಫ್… ನೀವು ಓದಿಯೇ ಅನುಭವಿಸಬೇಕು. ಒಬ್ಬ ಲೇಖಕ ಹತ್ತಾರು ಶ್ರೇಷ್ಠ ಕೃತಿಗಳನ್ನು ಬರೆದ ನಂತರವೂ ಸಿಗದ ಮನ್ನಣೆ ಪಾಲ್ ಕಲಾನಿಥಿಗೆ ಪುಸ್ತಕಕ್ಕೆ ಸಿಕ್ಕಿದೆ.

ಎಂತಹ ಬಿಕ್ಕಟಿನ ಕಾಲದಲ್ಲೂ ನಾವು ಒಂಟಿತನವನ್ನು ಏಕಾಂತವಾಗಿ ಬದಲಾಯಿಸಿಕೊಳ್ಳಬಹುದೇ? ಬದುಕಿನಲ್ಲಿ ಅನಿರೀಕ್ಷಿತವಾಗಿ ಪ್ರೀತಿಪಾತ್ರರು ತೊರೆದಾಗ, ಜೀವನ ಅನಿರೀಕ್ಷಿತ ತಿರುವು ಪಡೆದಾಗ ಆ ದಿನಗಳನ್ನು ಬುದ್ಧನಂತೆ, ಪಾಲ್ ಕಲಾನಿಥಿಯಂತೆ ಅಂತರ್ಮುಖಿಯಾಗುವುದಕ್ಕೆ, ಇಂಟೆನ್ಸ್ ಮತ್ತು genuine ಆಗಿ ಬದುಕಲಿಕ್ಕೆ, ಆತ್ಮವಿಮರ್ಶೆಗೆ, ಅಂತರಾಳದ ಯಾನಕ್ಕೆ ಬಳಸಿಕೊಳ್ಳಬಹುದೇ? ಉತ್ತರ ಸುಲಭವಲ್ಲ. ಹಾಗೆ ಮಾಡಲು ಅಸಾಧ್ಯವೆನ್ನುವಂತಹ ಧೈರ್ಯ, ಗಟ್ಟಿತನ ಬೇಕು ನಿಜ. ಆದ್ರೆ ಒಂಟಿತನ ಮತ್ತು ಏಕಾಂತವೆನ್ನುವುದು ತೀರಾ ವ್ಯಕ್ತಿನಿಷ್ಠ ವಿಷಯಗಳು. ಒಂಟಿತನ ನಿಮ್ಮನ್ನು ಕುಗ್ಗಿಸುತ್ತದೆ ಆದರೆ ಏಕಾಂತ ಬದುಕಿನ ಹೊಸ ಒಳಹುಗಳನ್ನು ನಿಮ್ಮ ಮುಂದೆ ತೆರೆದಿಡುತ್ತದೆ ಎಂದಷ್ಟೇ ಹೇಳಬಲ್ಲೆ…

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X