ಭಾರತೀ ಶಿಕ್ಷಣ ಸಂಸ್ಥೆ ಮಂಡ್ಯ ಜಿಲ್ಲೆ, ಸಂಪೂರ್ಣ ಸಾವಯವ ಕೃಷಿಕರ ಸಂಘ, ಮಳವಳ್ಳಿ ಮತ್ತು ಗಾಂಧಿಜೀ ಸಹಜ ಬೇಸಾಯ ಆಶ್ರಮ ತುಮಕೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಕೃಷಿ ಭೂಮಿಯಲ್ಲಿ ಇಂಗಾಲದ ಸಂಗ್ರಹಣೆ-ರೈತರಿಗೆ ಮನ್ನಣೆ ಎಂಬ ವಿಷಯದಲ್ಲಿ ವಿಚಾರ ಸಂಕಿರಣವನ್ನು ಆ.18ರಂದು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30ರವರೆಗೆ ಮಂಡ್ಯದ ಮದ್ದೂರು ತಾಲೂಕಿನಲ್ಲಿರುವ ಭಾರತಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಈ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ.
ಹವಾಮಾನ ಬದಲಾವಣೆಗೆ ನೂರಾರು ಕಾರಣಗಳಿದ್ದರೂ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಇವುಗಳಲ್ಲಿ ಪ್ರಮುಖವಾದದ್ದು. ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯ ಪರಿಣಾಮ ಭೂಮಿಯ ತಾಪಮಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸಿ ಪ್ರಕೃತಿಯಲ್ಲಿ ಅಸಮತೋಲನವನ್ನು ಉಂಟು ಮಾಡುತ್ತಿದೆ. ಮನುಷ್ಯನು ತನ್ನ ಅಗತ್ಯ ಮತ್ತು ದುರಾಸೆಯಿಂದ ಪರಿಸರಕ್ಕೆ ಮಾತ್ರವಲ್ಲದೆ ತನಗೂ ಹಾನಿ ಮಾಡುವ ಅನೇಕ ಚಟುವಟಿಕೆಗಳನ್ನು ಮಾಡಿದ್ದಾನೆ. ಮಾನವ ಚಟುವಟಿಕೆಯಿಂದಾಗಿ ಅನೇಕ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ನಾಶವಾಗುತ್ತಿವೆ.
ಹವಾಮಾನ ಬದಲಾವಣೆಗಳು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಸಾಗರದ ಮಟ್ಟ ಏರುತ್ತಿದೆ. ನದಿಗಳು ಹಿಂಗುತ್ತಿವೆ. ಹಿಮನದಿಗಳು ಕರಗುತ್ತಿವೆ. ಗಾಳಿಯಲ್ಲಿ ಇಂಗಾಲದ ಡೈಆಕ್ಸೈಡ್ ಹೆಚ್ಚುತ್ತಿದೆ. ಅರಣ್ಯ ಮತ್ತು ವನ್ಯಜೀವಿಗಳು ಕ್ಷೀಣಿಸುತ್ತಿವೆ, ನೀರಿನಲ್ಲಿ ಜೀವಿಸುವ ಜೀವಿಗಳು ತೊಂದರೆಗೊಳಗಾಗುತ್ತಿವೆ. ಇದಲ್ಲದೆ, ಈ ಬದಲಾವಣೆಯು ಮುಂದುವರಿದರೆ ಅನೇಕ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳು ನಾಶವಾಗುತ್ತವೆ ಹಾಗೂ ಪರಿಸರಕ್ಕೆ ಭಾರೀ ನಷ್ಟವಾಗಲಿದೆ.
ಕೃಷಿ, ಆಹಾರ, ಆರೋಗ್ಯದ ವ್ಯವಸ್ಥೆಯನ್ನು ಪರಿಸರದ ಅವಿಭಾಜ್ಯ ಅಂಗವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಿದೆ ಮತ್ತು ಪರಿಸರಕ್ಕೆ ಪೂರಕವಾಗಿ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವುದು, ಕೃಷಿಯನ್ನು ತಂತ್ರಜ್ಞಾನಕ್ಕಿಂತ ಪರಿಸರ ವಿಜ್ಞಾನವೆಂದು ಒತ್ತಿ ಹೇಳುವ ಅನಿವಾರ್ಯತೆ ಎದುರಾಗಿದೆ.ನಗರ ಪ್ರದೇಶಗಳ ವಿಸ್ತರಣೆ, ಕ್ಷೀಣಿಸುತ್ತಿರುವ ಕೃಷಿ ಭೂಮಿ, ಹೆದ್ದಾರಿ ಅಭಿವೃದ್ಧಿಗಾಗಿ ಫಲವತ್ತಾದ ಕೃಷಿ ಮತ್ತು ಹುಲ್ಲುಗಾವಲು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಬೃಹತ್ ಪ್ರಮಾಣದ ನೀರಾವರಿ ಯೋಜನೆಗಳಿಗೆ ಅರಣ್ಯ ನಾಶ, ಪರಿಸರ ಮಾಲಿನ್ಯ ಇವುಗಳು ಭವಿಷ್ಯದ ಆಹಾರ ಉತ್ಪಾದನೆಗೆ ಅಪಾಯವನ್ನು ಉಂಟುಮಾಡುತ್ತದೆ.
ಕೃಷಿ ಭೂಮಿಯಲ್ಲಿ ಇಂಗಾಲದ ಸಂಗ್ರಹಣೆ ಮತ್ತು ರೈತರಿಗೆ ಸಿಗಬೇಕಾದ ಮನ್ನಣೆ ವಿಚಾರವಾಗಿ ನಡೆಯುವ ಸಭೆಯಲ್ಲಿ ಭಾಗವಹಿಸಲು ರೈತರು, ಮಹಿಳೆಯರು, ಕಾರ್ಮಿಕರು, ಉದ್ಯಮಿಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು,
ಸಂಘ-ಸಂಸ್ಥೆಗಳು, ಸರ್ಕಾರಿ/ಖಾಸಗಿ ಉದ್ಯೋಗಿಗಳು, ಮಾಧ್ಯಮ ಪ್ರತಿನಿಧಿಗಳು. ಹೀಗೆ ಎಲ್ಲಾ ವರ್ಗದ ಜನರನ್ನು ಆಹ್ವಾನಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಹೆಸರನ್ನು ಮೊದಲೇ ನೋಂದಾಯಿಸಿಕೊಳ್ಳಲು ಮಳವಳ್ಳಿ ಮಹೇಶ್ ಕುಮಾರ್ ಅವರ ಮೊಬೈಲ್: 944827344 ಸಂಖ್ಯೆಯನ್ನು ಸಂಪರ್ಕಿಸಲು ಸಂಘಟಕರು ಮನವಿ ಮಾಡಿದ್ದಾರೆ.
