ರಾಮನಗರ ಜಿಲ್ಲೆಯ ಹೊಸದುರ್ಗ ಸರ್ಕಾರಿ ಸಮುದಾಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸ್ವಾತಂತ್ರ್ಯ ದಿನೋತ್ಸವದ ಅರಿವು ಮೂಡಿಸಿದ ವಿದ್ಯಾರ್ಥಿಗಳು ಉತ್ಸಾಹದಿಂದ ಘೋಷಣೆಗಳೊಡನೆ ಹೆಜ್ಜೆ ಹಾಕಿದರು.
ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಧ್ವಜಾರೋಹಣ ನಡೆಸಿದ ನಂತರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಮಾತನಾಡಿ, “ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ, ತ್ಯಾಗಗಳನ್ನು ಸ್ಮರಿಸಿ ನಾವು ಜೀವಿಸಿದಾಗಲೇ ಬದುಕು ಅರ್ಥಪೂರ್ಣವಾಗುತ್ತದೆ. ಸ್ವಾತಂತ್ರ್ಯವನ್ನು ನಾವು ಗೌರವದಿಂದ ಅನುಭವಿಸಬೇಕಿದೆ” ಎಂದರು.
ಕೆಆರ್‌ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ ಮಾತನಾಡಿ, “ನಾವು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿದ್ದೇವೆ. ರಕ್ತದಾಯಕ ಚರಿತ್ರೆಯು ನಮ್ಮ ಇಂದಿನ ನೆಮ್ಮದಿಯ ಬದುಕಿಗೆ ಕಾರಣವಾಗಿದೆ. ಆದರೆ ಇಂದು ವಿದ್ಯಾರ್ಥಿಗಳು ಮೊಬೈಲ್ ಎಂಬ ಬ್ರಿಟಿಷ್ ದಾಸ್ಯದಿಂದ ಪುಸ್ತಕ ಎಂಬ ಭಾರತೀಯತೆಯ ಸ್ವಾತಂತ್ರ್ಯದತ್ತ ಮರಳಬೇಕಿದೆ. ಅತಿಯಾದ ಮೊಬೈಲ್ ಬಳಕೆಗಳ ಮೂಲಕ ಕೆಲಸಕ್ಕೆ ಬಾರದ ರೀಲ್ಸ್‌ಗಳ ದಾಸರಾಗದೆ ಓದುವ ಗೀಳು ಬೇಳೆಸಿಕೊಳ್ಳಿ. ಹಳ್ಳಿ ಹಳ್ಳಿಗಳಲ್ಲಿ ಮದ್ಯ ವ್ಯಸನಿಗಳಿದ್ದರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಾರೆ. ಮುಂದೆ ಪ್ರತಿ ಹಳ್ಳಿಯ ಪ್ರತಿ ಅಂಗಡಿಗಳಲ್ಲಿ ಪುಸ್ತಕ ಮಾರುವಂತಹ ದಿನ ಉದ್ಭವವಾದರೆ ಭಾರತದ ಸ್ವಾತಂತ್ರ್ಯ ಪ್ರಕಾಶಿಸಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೃಷಿ ಭೂಮಿಯಲ್ಲಿ ಇಂಗಾಲದ ಸಂಗ್ರಹಣೆ-ರೈತರಿಗೆ ಮನ್ನಣೆ: ಆ.18ರಂದು ವಿಚಾರ ಸಂಕಿರಣ
ಸಮಾರಂಭದಲ್ಲಿ ಕ್ರೀಡೆಯಲ್ಲಿ ಗೆದ್ದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಮಕ್ಕಳಿಂದ ಪ್ರದರ್ಶಿತಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಾಕರ್ಷಣೀಯವಾಗಿತ್ತು.
ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಘು, ಎಂಎಸ್‌ಐಎಲ್ ಮಾಜಿ ನಿರ್ದೇಶಕ ಚಲುವರಾಜು, ಗ್ರಾಮದ ಹಿರಿಯ ಮುಖಂಡರಾದ ಮಲ್ಲೇಶ್, ಪುಟ್ಟೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ, ಮುಖ್ಯ ಶಿಕ್ಷಕ ಉಮಾ ಶಂಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಚಂದ್ರು, ನಾಗರಾಜು ಹಾಜರಿದ್ದರು.