ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲ್ಯಾಟ್‌ಫಾರಂ ಹೊಂದಿರುವ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಸಿದ್ದಾರೂಢಸ್ವಾಮಿ ರೈಲು ನಿಲ್ದಾಣಕ್ಕೆ ದಿನಂಪ್ರತಿ ಸಾವಿರಾರು ಪ್ರಯಾಣಿಕರು ಬರುತ್ತಾ ಹೋಗುತ್ತಿರುತ್ತಾರೆ. ಇತ್ತು ರೈಲ್ವೆ ನಿಲ್ದಾಣಕ್ಕೆ ಪ್ರವೇಶವಾದಾಗ್ಯೂ, ಅತ್ತ ರೈಲ್ವೆ ನಿಲ್ದಾಣದಿಂದ ಹೊರಬಂದಾಗ್ಯೂ, ‘ಏನಪ್ಪ ಇದು ಗಬ್ಬು ವಾಸನೆ ಎನ್ನುತ್ತಲೆ’ ರಸ್ತೆ ದಾಟುವ ರೂಢಿಯನ್ನು ಕಳೆದ ಒಂದು ತಿಂಗಳಿಂದ ಹೋಗಿ-ಬರುವ ಪ್ರಯಾಣಿಕರು ಬೆಳೆಸಿಕೊಂಡಿದ್ದಾರೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಪ್ರವೇಶವಾಗುವ ಮಹಾದ್ವಾರದಲ್ಲಿ ಅಂದರೆ ಮುಂಭಾಗದಲ್ಲಿ ಚರಂಡಿ ನೀರು ಸಾಗಿಸುವ ವ್ಯವಸ್ಥೆಗೆ ಒಳಚರಂಡಿ ಕಟ್ಟಲಾಗುತ್ತಿದೆ. ಕಾಮಗಾರಿ ಶುರುವಾಗಿ ಒಂದು ತಿಂಗಳು ಸಮೀಪವಾದರೂ ಇಂದಿಗೂ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ನಿಲ್ದಾಣದ ಹೊರಭಾಗದಲ್ಲಿ ವಿವಿಧ ಬಡಾವಣೆಗಳಿಂದ ಹರಿದುಬರುವ ಚರಂಡಿನೀರು ಪ್ರಯಾಣಿಕರು ನಡೆದಾಡುವ ರಸ್ತೆಗೆ ಅಡ್ಡವಾಗಿ ದೊಡ್ಡ ಗುಂಡಿಯಾಗಿ ತುಂಬಿಕೊಂಡಿದೆ.
ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ, ಚರಂಡಿ ನೀರಿನಿಂದ ತುಂಬಿ ತುಳುಕಾಡಿ ಗಬ್ಬುನಾತ ಹೊಡೆಯುತ್ತಿರುವ ನಿಲ್ದಾಣದ ಮುಂಭಾಗ, ರಸ್ತೆ ದಾಟಲೂ ಆಗದೆ, ದಾರಿಗುಂಟ ಹರಿಯುವ ಕಲುಷಿತ ನೀರಿನಿಂದ ಯಾವತ ಮುಕ್ತಿ ಸಿಗುತ್ತದೆ ಎಂದು ಸ್ಥಳೀಯರು ಕಾದು ನೋಡುತ್ತಿದ್ದಾರೆ. ಸಮಸ್ಯೆ ಅನುಭವಿಸುತ್ತಿರುವ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

“ದಿನವೂ ಈ ಹೊಲಸು ನೀರಿನಲ್ಲೇ ನಾವು ತಿರುಗಾಡಬೇಕು. ವಿಪರೀತ ಗಬ್ಬುನಾತ ಮತ್ತು ಸಂಜೆಯಾದರೆ ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತದೆ. ಮುಂದೆ ಒಳಚರಂಡಿ ಕಾಮಗಾರಿಯ ಕಾರಣ ದೊಡ್ಡ ಗಟಾರಿನಿಂದ ಹರಿದುಬರುವ ಕೊಳಚೆನೀರನ್ನು ನಿಲ್ದಾಣದ ಹೆಬ್ಬಾಗಿಲ ಮುಂಭಾಗದಲ್ಲೇ ಗುಂಡಿ ತೋಡಿ ಬಿಟ್ಟಿದ್ದಾರೆ. ಆ ಎಲ್ಲ ನೀರು ಅದೇ ಗುಂಡಿಯಲ್ಲಿ ನಿಲ್ಲತ್ತದೆ ಮತ್ತು ರಸ್ತೆ ತುಂಬೆಲ್ಲ ಹರಿಯುತ್ತದೆ. ಬಸ್ಸು, ಕರು, ವಾಹನಗಳು, ಮನುಷ್ಯರೂ ಅದರಲ್ಲೆ ಓಡಾಡಬೇಕು. ಪಾಲಿಕೆ ಅಧಿಕಾರಿ ಮತ್ತು ರಾಜಕೀಯ ವ್ಯಕ್ತಿಗಳು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲ್ಯಾಮೆಂಗ್ಟನ್ ಶಾಲೆ ಮಾರ್ಗದಲ್ಲಿ ನಡುರಸ್ತೆಯಲ್ಲಿರುವ ಸಂವಿಧಾನ ಸಮರ್ಪಣಾ ಸ್ಮಾರಕ ಸ್ಥಂಭದ ರಕ್ಷಣೆಗೆಂದು ಸುತ್ತಲು ಹಾಕಿಸಿದ್ದ ಕಬ್ಬಿಣದ ರಕ್ಷಣಾ ಕವಚದ ಒಂದು ಭಾಗವು ಕಿತ್ತು ಬಂದಿದ್ದು, ಸಂವಿಧಾನ ಸ್ಥಂಭಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ. ಇತಿಹಾಸದ ಗುರುತುಗಳನ್ನು ಕಾಪಾಡಿಕೊಂಡರೆ ಮಾತ್ರ ಮುಂದಿನ ಪೀಳಿಗೆಗೆ ಇತಿಹಾಸದ ಪರಿಚಯ ಮಾಡಿಕೊಡಬಹುದು. ಮತ್ತು ನಿರ್ಮಾಣವಾಗುತ್ತಿರುವ ಹಳೆ ಬಸ್ ನಿಲ್ದಾಣದ ಮುಂದೆ ಪ್ರಯಾಣಿಕರಿಗೆ ನಿಲ್ಲಲೂ ಜಾಗವಿಲ್ಲದೆ, ಮಳೆ ನೀರು ನಿಂತು ಅಸ್ತವ್ಯಸ್ತವಾಗಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮಹರಿಸಬೇಕಿದೆ.

ಪುನಃ ಐದನೆ ಬಾರಿಗೆ ಸಂಸದರಾಗಿ ಆಯ್ಕೆಯಾಗಿ, ಕೇಂದ್ರ ಸಚಿವರೂ ಆಗಿರುವ ಪ್ರಲ್ಹಾದ್ ಜೋಶಿಯವರು ಹುಬ್ಬಳ್ಳಿ ನಗರದವರೇ ಆದರೂ ಒಂದು ದಿನವೂ ಸಾರ್ವಜನಿಕ ಸಮಸ್ಯೆ ಆಲಿಸುವುದು ಕಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸಮಸ್ಯೆಗಳಿಂದ ಬಳಲುತ್ತಿರುವ ಪ್ರದೇಶಗಳಿಗೆ ಒಮ್ಮೆ ಕೂಡಾ ಭೇಟಿ ನೀಡಿಲ್ಲ ಎಂದು ಸ್ಥಳೀಯರೊಬ್ಬರು ಅಸಮಾಧನ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು ತಮ್ಮ ಅನುಕೂಲಕ್ಕಾಗಿ ಮಾತ್ರ ಬಡಬಡಿಸುತ್ತಾರೆಯೇ ಹೊರತು ಬಡವರ ಸಮಸ್ಯೆ, ಕಷ್ಟ ಅವರಿಗೆ ಬೇಕಿಲ್ಲ ಎಂದು ಜನಪ್ರತಿನಿಧಿಗಳು ಮತ್ತು ಪಾಲಿಕೆ ಸದಸ್ಯರ ವಿರುದ್ದ ಗುಡುಗಿದರು.
ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲ್ಯಾಟ್‌ಫಾರಂ ಹೊಂದಿದ ಹುಬ್ಬಳ್ಳಿ ನಮ್ಮ ಹೆಮ್ಮೆ ಎಂದು ಹೇಳಿಕೊಳ್ಳುವ ಸ್ಥಳೀಯರಿಗೆ ಹುಬ್ಬಳ್ಳಿ ನಗರ ಎಷ್ಟೊಂದು ಗಲೀಜು ಮತ್ತು ಧೂಳಿನಿಂದ ಕೂಡಿದ್ದು, ಎಲ್ಲೆಂದರಲ್ಲಿ ತಗ್ಗುಗಳನ್ನೇ ಕಾಣಬೇಕಿದೆ ಮತ್ತು ಇದೆಲ್ಲಿಯ ಸ್ಮಾರ್ಟ್ ಸಿಟಿ ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ. ಹುಬ್ಬಳ್ಳಿ ನಗರಕ್ಕೆ ಬರುವ ಪ್ರಯಾಣಿಕರು, ಪ್ರವಾಸಿಗರು ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯು ಬಹುತೇಕ ಸಮಸ್ಯೆಗಳ ಗೂಡಾಗಿದ್ದು, ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕ ಸಮಸ್ಯೆಗಳ ಬಗೆಹರಿಸಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
