ರಾಜ್ಯದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ಸಮಿತಿಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಕಛೇರಿ ಉದ್ವಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಿತಿ ಸದಸ್ಯರು ಎಸಿ ಕಛೇರಿಯಲ್ಲಿ ಕಾಲ ಕಳೆಯಲು ಅಧಿಕಾರ ಕೊಟ್ಟಿಲ್ಲ. ತಾಂತ್ರಿಕ ದೋಷಗಳಿಂದಾಗಿ ಕೆಲ ಗ್ರಾಮೀಣ ಭಾಗದ ಜನರು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅವರನ್ನು ಗ್ರಾಮ ಮಟ್ಟದಲ್ಲಿ ಗುರುತಿಸಿ ಅವರಿಗೆ ಆಗಿರುವ ತೊಂದರೆಗಳನ್ನು ಸರಿಪಡಿಸಿ ಯೋಜನೆಗಳ ಫಲಾನುಭವಿಗಳನ್ನಾಗಿಸಬೇಕು ಎಂದರು.
ರಾಜ್ಯದಲ್ಲಿ ಹಸಿದವರಿಗೆ ಗ್ಯಾರಂಟಿ ಯೋಜನೆಗಳ ಬೆಲೆ ಗೊತ್ತಾಗುತ್ತದೆ. ವಿರೋಧ ಪಕ್ಷದವರಿಗೆ ಏನು ಗೊತ್ತಿದೆ. ರಾಜ್ಯದಲ್ಲಿ ವಿರೋಧ ಪಕ್ಷವು ಬರೀ ಜಾತಿ ಜನಾಂಗಗಳ ನಡುವೆ ಗಲಾಟೆ ಮಾಡಿ ರಾಜಕಾರಣ ಮಾಡಲು ಹೊರಟಿದ್ದಾರೆ. ಆಡಳಿತ ಪಕ್ಷದವರಿಂದ ಜನತೆಗೆ ಯಾವುದೇ ಯೋಜನೆಗಳಿಲ್ಲ, ಅನುದಾನ ಕೊಡಲು ಹಣ ಇಲ್ಲವೆಂದು ಸರಕಾರದ ವಿರುದ್ಧ ಅಪಪ್ರಚಾರ ಮಾಡಲು ಹೊರಟಿದ್ದಾರೆ. ಬಡವರಿಗೆ ಜನಪರ ಯೋಜನೆಗಳನ್ನು ಕೊಡಲು ಅವರಿಗೆ ಯೋಗ್ಯತೆ ಇಲ್ಲ. ಬರಿ ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡತ್ತಾರೆ ಎಂದು ಆರೋಪಿಸಿದರು.
ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ 56 ಸಾವಿರ ಕೋಟಿ ಹಣ ಮೀಸಲಿಡುತ್ತಿದೆ. ಸರಕಾರವು ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಾ ಸರ್ಕಾರದ ಎಲ್ಲಾ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ದೊರೆಯುವಂತೆ ಮಾಡಿದ್ದಾರೆ. ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿಯಿಲ್ಲ. ಸಮಾಜಮುಖಿಯಾಗಿ ಬಡವರಿಗೆ ನೆರವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿದ್ಧರಿದ್ದಾರೆ ಎಂದರು.
ಅಧಿಕಾರ ಸ್ವೀಕರಿಸಿದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್ ಮಾತನಾಡಿ, ಸರಕಾರವು ಜನಪರ ಯೋಜನೆಗಳ ಅನುಷ್ಠಾನ ಮಾಡಲು ಸಮಿತಿಯನ್ನು ನೇಮಿಸಿದ್ದು ಕೂಡಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆ ಕರೆದು ಅಂಕಿಅಂಶಗಳನ್ನು ಸಂಗ್ರಹಿಸಿ ಪ್ರತಿಯೊಬ್ಬರನ್ನೂ ಯೋಜನೆಯ ಫಲಾನುಭವಿಗಳಾಗಿ ಮಾಡಲು ಕ್ರಮವಹಿಸಲಾಗುವುದು ಎಂದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಸಹಕಾರ ಸಂಘದಿಂದ ಪತ್ರಕರ್ತರಿಗೆ ಸಾಲ ಸೌಲಭ್ಯ ಶ್ಲಾಘನೀಯ: ಬಿ ವಿ ಗೋಪಿನಾಥ್
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಅಪರ ಜಿಲ್ಲಾಧಿಕಾರಿ ಮಂಗಳ, ತಹಶಿಲ್ದಾರ್ ಎಂ.ನಯನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಮುಖಂಡರಾದ ಕೆ.ವಿ ಗೌತಮ್, ನಾಗನಾಳ ಸೋಮಣ್ಣ, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಷಂಷೀರ್, ಮಹಮ್ಮದ್ ಹನೀಫ್, ಗದ್ದೆಕಣ್ಣೂರು ದಯಾನಂದ್, ಮುರಳಿಗೌಡ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.