ಸಿದ್ದರಾಮಯ್ಯ ಬೆನ್ನಿಗೆ ನಾವಿದ್ದೇವೆ, ಸಿಎಂ ಸ್ಥಾನದಲ್ಲೇ ಅವರು ಮುಂದುವರಿಯುತ್ತಾರೆ: ಡಿ ಕೆ ಶಿವಕುಮಾರ್‌

Date:

Advertisements

ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಇಡೀ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತದೆ, ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವ ಬಗ್ಗೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಂಪುಟ ಸಹೋದ್ಯೋಗಿಗಳ ಜತೆ ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಗಳು, ಅವರು ಮುಖ್ಯಮಂತ್ರಿಗಳಾಗಿಯೇ ಮುಂದುವರಿಯುತ್ತಾರೆ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ನಾವು ಒಟ್ಟಾಗಿ ರಾಜ್ಯದ ಜನರ ಸೇವೆ ಮುಂದುವರಿಸುತ್ತೇವೆ. ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಇಡೀ ಇಂಡಿಯಾ ಒಕ್ಕೂಟ ನಮ್ಮ ಮುಖ್ಯಮಂತ್ರಿಗಳ ಬೆನ್ನಿಗೆ ನಿಲ್ಲಲಿದೆ” ಎಂದರು.

Advertisements

“ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಪ್ರಕರಣ ಸೃಷ್ಟಿಸಲಾಗಿದೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮುಂದುವರಿಸುತ್ತೇವೆ. ಇದರ ಜತೆಗೆ ರಾಜಕೀಯವಾಗಿಯೂ ಜನರ ಮಧ್ಯೆ ಹೋರಾಟ ಮಾಡಲಾಗುವುದು” ಎಂದು ತಿಳಿಸಿದರು.

“ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿಯಾಗಿ ಪರಿವರ್ತನೆ ಮಾಡಿಕೊಳ್ಳಲು ನಡೆಯುತ್ತಿರುವ ಹುನ್ನಾರದ ವಿರುದ್ಧ ಹೋರಾಟ ಮಾಡುತ್ತೇವೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆ ಮಾಡಬೇಕಿದೆ. ಮುಖ್ಯಮಂತ್ರಿಗಳ ವಿರುದ್ಧ ಕಾನೂನು ಬಾಹಿರವಾಗಿ ವಿಚಾರಣೆಗೆ ಅನುಮತಿ ನೀಡಲಾಗಿದೆ. ನಾವು ಕಾನೂನು ಗೌರವಿಸುತ್ತೇವೆ. ದೇಶದ ಕಾನೂನು ನಮಗೆ ರಕ್ಷಣೆ ನೀಡಲಿದೆ” ಎಂಬ ವಿಶ್ವಾಸವಿದೆ.

“ಹಿಂದುಳಿದ ವರ್ಗದ ನಾಯಕ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಬೆಳೆಯುತ್ತಿರುವುದನ್ನು ಸಹಿಸಲಾಗದೇ ಕೇಂದ್ರ ಬಿಜೆಪಿ ಸರ್ಕಾರ ದೊಡ್ಡ ಪಿತೂರಿ ನಡೆಸಿದೆ. ಇದನ್ನು ಧಿಕ್ಕರಿಸಿ ನಾವು ಹೋರಾಟ ಮಾಡುತ್ತೇವೆ. ರಾಜ್ಯಪಾಲರ ಕಚೇರಿ ಬಿಜೆಪಿ ಪಕ್ಷದ ಕೈಗೊಂಬೆಯಾಗಬಾರದು” ಎಂದರು.

ಪ್ರಾಥಮಿಕ ತನಿಖೆ ಇಲ್ಲದೇ ವಿಚಾರಣೆಗೆ ಅನುಮತಿ

“ನಮ್ಮ ರಾಜಕೀಯ ಅನುಭವದಲ್ಲಿ ಯಾವುದಾದರೂ ತನಿಖೆಗೆ ಅನುಮತಿ ನೀಡಬೇಕಾದರೆ, ಯಾವುದಾದರೂ ತನಿಖಾ ಸಂಸ್ಥೆಯಿಂದ ಪ್ರಾಥಮಿಕ ತನಿಖೆ ನಡೆಸಿ ಆ ತನಿಖೆಯ ವರದಿಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರುವವರ ವಿಚಾರಣೆ ಅಗತ್ಯವಿದೆ ಎಂದು ಮನವರಿಕೆ ಮಾಡಿದ್ದರೆ ಆಗ ವಿಚಾರಣೆ ನಡೆಸಲು ಅನುಮತಿ ನೀಡಬಹುದು. ಆದರೆ ಇಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಪಾಲನೆ ಆಗಿಲ್ಲ. ಈ ಹಿಂದೆಯೂ ಬೇಕಾದಷ್ಟು ಘಟನೆಗಳಿವೆ” ಎಂದು ವಿಶ್ಲೇಷಿಸಿದರು.

“ರಾಜ್ಯದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪ್ರಕರಣವನ್ನೇ ಉದಾಹರಣೆ ತೆಗೆದುಕೊಳ್ಳುವುದಾದರೆ, ಲೋಕಾಯುಕ್ತದಲ್ಲಿ ತನಿಖೆ ನಡೆದು ಈ ಸಂಸ್ಥೆ 23-11-2023ರಂದು ಕುಮಾರಸ್ವಾಮಿ ಅವರ ವಿಚಾರಣೆಗೆ ಅನುಮತಿ ನೀಡಿ ಎಂದು ರಾಜ್ಯಪಾಲರಿಗೆ ಮನವಿ ಮಾಡುತ್ತಾರೆ. 13-05-2024ರಂದು ಜನಾರ್ಧನ ರೆಡ್ಡಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಿ ಎಂದು ಕಳುಹಿಸಿಕೊಟ್ಟಿದ್ದಾರೆ. 09-12-2021ರಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. 9-12-2020ರಂದು ಮಾಜಿ ಸಚಿವ ಮುರುಗೇಶ ನಿರಾಣಿ ಅವರ ನಿರಾಣಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ವರದಿ ಇದ್ದು, ಅದರ ಆಧಾರದ ಮೇಲೆ ವಿಚಾರಣೆಗೆ ಅನುಮತಿ ಕೇಳಲಾಗಿದೆ” ಎಂದು ವಿವರಿಸಿದರು.

“ಈ ಮನವಿಗಳನ್ನೇ ರಾಜ್ಯಪಾಲರು ಇನ್ನು ತೀರ್ಮಾನ ಮಾಡಿಲ್ಲ. ಆದರೆ ಈ ಪ್ರಕರಣದಲ್ಲಿ ರಾಜ್ಯಪಾಲರು ದೂರು ಬಂದ 24 ತಾಸಿನಲ್ಲೇ ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿ ವಿವರಣೆ ಕೇಳುತ್ತಾರೆ. ನಮ್ಮ ಮನವಿಯನ್ನು ತಿರಸ್ಕರಿಸಿ ಈಗ ವಿಚಾರಣೆಗೆ ಅನುಮತಿ ನೀಡಿರುವ ಬಗ್ಗೆ ಆದೇಶ ನೀಡಿರುವ ಬಗ್ಗೆ ಪತ್ರ ಕಳುಹಿಸಿದ್ದಾರೆ. ಇದು ಕೇವಲ ಸಿದ್ದರಾಮಯ್ಯ ಅವರ ವಿರುದ್ಧದ ಷಡ್ಯಂತ್ರವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 136+2 ಶಾಸಕರ ಬಲದೊಂದಿಗೆ ಅಧಿಕಾರಕ್ಕೆ ಬಂದಿರುವ ಸರ್ಕಾರದ ವಿರುದ್ಧ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಜನರು ಕೊಟ್ಟಿರುವ ಆಶೀರ್ವಾದದ ವಿರುದ್ಧ ನಡೆದಿರುವ ಷಡ್ಯಂತ್ರ” ಎಂದು ವಾಗ್ದಾಳಿ ನಡೆಸಿದರು.

“ಈ ಷಡ್ಯಂತ್ರದಲ್ಲಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಕುಮಾರಸ್ವಾಮಿ ಅವರು ಮುಂದಿನ 8-10 ತಿಂಗಳಲ್ಲಿ ಈ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಪೂರಕವಾಗಿ ಈ ಷಡ್ಯಂತ್ರ ನಡೆಯುತ್ತಿದೆ” ಎಂದರು.

ನಿಮ್ಮ ಈ ತೀರ್ಮಾನ, ಸಚಿವ ಸಂಪುಟ ಸಭೆಯ ತೀರ್ಮಾನವೋ ಅಥವಾ ಪಕ್ಷದ ಹೈಕಮಾಂಡ್ ನಾಯಕರ ಒತ್ತಡವೋ ಎಂಬ ಮಾಧ್ಯಮದ ಪ್ರಶ್ನೆಗೆ, “ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪ್ರಶ್ನೆ ಇಲ್ಲ. ನಾನಾಗಲಿ, ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಾಗಲಿ ಈ ಹೋರಾಟವನ್ನು ಎದುರಿಸಲು ಸಮರ್ಥವಾಗಿದ್ದೇವೆ. ನಾವೆಲ್ಲರೂ ಒಟ್ಟಾಗಿದ್ದೇವೆ, ಒಗ್ಗಟ್ಟಾಗಿ ಇರುತ್ತೇವೆ” ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X