ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಜಲದುರ್ಗ ಕೋಟೆಯು ಐತಿಹಾಸಿಕವಾಗಿ ಪ್ರಸಿದ್ಧವಾದ ಸ್ಥಳವಾಗಿದೆ. ಇಲ್ಲಿ ಹತ್ತಾರು ರಾಜಮನೆತನಗಳು ಆಳಿರುವ ಇತಿಹಾಸವಿದೆ. ಇಂತಹ ಐತಿಹಾಸಿಕ ಕೋಟೆ ನೆಲಸಮವಾಗುತ್ತಿರುವ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರು ತಾಲೂಕು ಕೇಂದ್ರ ಸ್ಥಾನದಿಂದ 20 ಕಿ.ಮೀ. ಅಂತರದಲ್ಲಿರುವ ಕೃಷ್ಣಾ ನದಿ ದಡದಲ್ಲಿರುವ ಜಲದುರ್ಗ ಕೋಟೆ ಪರಿಸರ ಪ್ರಿಯರನ್ನು, ಇತಿಹಾಸಕಾರರನ್ನು, ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಯಾವುದೇ ಸೌಕರ್ಯ ಇಲ್ಲ. ಇದರಿಂದಾಗಿ ಜನರು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.
ಸುತ್ತ ಮುತ್ತ ನದಿಗಳು ಹರಿಯುವುದರಿಂದ ಕೋಟೆಯ ಶಿಥಿಲ ಕಟ್ಟಡಗಳಿಗೆ ಕಾಯಕಲ್ಪ ನೀಡಿ, ಕೋಟೆ ಆವರಣದಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ, ಉದ್ಯಾನ ಇತರೆ ಸೌಲಭ್ಯ ಒದಗಿಸಿದರೆ ಇದೊಂದು ಬಾಬಾ ಬುಡನ್ ಗಿರಿ ತರ ವಿಶಾಲವಾದ ಸುಂದರ ಸ್ಥಳವಾಗಬಹುದು ಎನ್ನುತ್ತಾರೆ ಪ್ರವಾಸಿಗರು.

ಜಲದುರ್ಗ ಕೋಟೆಯನ್ನು ದೇವಗಿರಿಯ ಯಾದವರು 12ನೇ ಶತಮಾನದಲ್ಲಿ ಕೋಟೆಯನ್ನು ಆರಂಭಿಸಿದ್ದರು ಎನ್ನಲಾಗಿದೆ. ತದ ನಂತರ ವಿಜಯನಗರ ಅರಸರು ಹಾಗೂ ಬಹಮನಿ ಅರಸರು ಆಳ್ವಿಕೆ ನಡೆಸಿದ್ದರು. ಇವರ ಅವನತಿಯ ನಂತರ
ಆದಿಲ್‌ಶಾಹಿಗಳ ಆಡಳಿತದಲ್ಲಿ ಕೋಟೆಯನ್ನು ಪೂರ್ಣಗೊಳಿಸಲಾಗಿತ್ತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.
ಜಲದುರ್ಗ ಕೋಟೆ ವೀಕ್ಷಿಸಲು ಬಂದ ರಮೇಶ್ ಪ್ರವಾಸಿಗ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಪ್ರವಾಸಿಗರಿಗೆ ಇಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೋಟೆ ಪಕ್ಕವೇ ನದಿ ಹರಿಯುತ್ತಿದ್ದರೂ ಕೋಟೆಗೆ ಆಗಮಿಸುವ ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಹೀಗಾಗಿ ಪ್ರವಾಸಿಗರು ನೀರಿನ ಬಾಟಲಿ ಹಿಡಿದುಕೊಂಡೇ ಕೋಟೆ ನೋಡಲು ಬರಬೇಕಾದ ಅನಿವಾರ್ಯತೆ ಇದೆ. ಕೋಟೆಯ ಮೇಲೆ ಅಪಾಯ ಮಟ್ಟ ಇರುವುದರಿಂದ ಕೆಲವೆಡೆ ತಡೆಗೋಡೆ ನಿರ್ಮಿಸಬೇಕಾಗಿದೆ” ಎಂದು ತಿಳಿಸಿದರು.

ಪ್ರವಾಸಿಗರನ್ನು ಸೆಳೆಯಲು ಸುಂದರ ಉದ್ಯಾನ ನಿರ್ಮಿಸಬೇಕಿದೆ. ಇದಲ್ಲದೆ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಬೇಕಿದೆ. ಕೋಟೆಗೆ ಆಗಮಿಸುವ ಪ್ರವಾಸಿಗರಿಗೆ ತಾಲೂಕು ಕೇಂದ್ರದಿಂದ ಸಾರಿಗೆ ಸೌಲಭ್ಯ ಕಲ್ಪಿಸಬೇಕಿದೆ. ಇದಲ್ಲದೆ, ಕೋಟೆ ಒಳಗೆ ಹಾಗೂ ಹೊರಗೆ ವಿದ್ಯುತ್ ದೀಪಗಳನ್ನು ಅಳವಡಿಸಿ ಕೋಟೆ ಸೌಂದರ್ಯ ಹೆಚ್ಚಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಹೇಳಿದರು.
ಐತಿಹಾಸಿಕ ಕೋಟೆ ನೋಡಿ ಅಧ್ಯಯನ ಮಾಡುವುದಕ್ಕೆ ಸಂಶೋಧಕರು ಬರುತ್ತಾರೆ. ಕೋಟೆಯು ನೆಲಸಮವಾಗುತ್ತಿರುವ ದೃಶ್ಯ ಕಂಡು ಬೇಜಾರಾಗಿ ಹೊರಡುತ್ತಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸರ್ಕಾರ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿರುವ ಕೋಟೆಗಳನ್ನು ಅಭಿವೃದ್ಧಿಪಡಿಸಲು ತೋರಿದ ಆಸಕ್ತಿಯನ್ನು ಜಲದುರ್ಗ ಕೋಟೆಗೆ ತೋರುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ಹೆಸರು ಹೇಳಲು ಇಚ್ಛಿಸದ ಸ್ಥಳೀಯರೋರ್ವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಕೋಟೆಗೆ ನಿಧಿಗಳ್ಳರ ಹಾವಳಿ ಹೆಚ್ಚಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಸರಕಾರ ಇಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು. ರಾತ್ರಿ ವೇಳೆ ಪೊಲೀಸರು ಗಸ್ತು ನಡೆಸಬೇಕು” ಎಂದು ಆಗ್ರಹಿಸಿದರು.

ಜಲದುರ್ಗ ಕೋಟೆಯ ಅಭಿವೃದ್ಧಿಗಾಗಿ 2019 – 20 ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 1 ಕೋಟಿ ರೂ. ಬಿಡುಗಡೆಯಾಗಿದೆ. ಹೈಟೆಕ್ ಶೌಚಾಲಯ , ಪ್ರವಾಸಿಗರಿಗೆ ಉದ್ಯಾನವನ , ನೀರು ಸರಬರಾಜು ಮತ್ತು ನೈರ್ಮಲ್ಯದ ಕಾಮಗಾರಿ ನಿರ್ಮಾಣ ಅಡಿಯಲ್ಲಿ ಕಟ್ಟಡ ಕಟ್ಟಿದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಪಾಳುಬಿದ್ದಂತಾಗಿದೆ.
ಐತಿಹಾಸಿಕ ಹಿನ್ನೆಲೆಯುಳ್ಳ ಜಲದುರ್ಗ ಕೋಟೆಯ ಕೆಲವೆಡೆ ಗೋಡೆಗಳು ಶಿಥಿಲಗೊಂಡು ಕುಸಿದಿವೆ. ಅದನ್ನು ಅಭಿವೃದ್ಧಿ ಪಡಿಸಿ ಪುನರುಜ್ಜೀವನಗೊಳಿಸಲು ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಬೇಕಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್