ಈ ದಿನ ವಿಶೇಷ | ದಮನಿತರ ಸಾಧನೆಗಳೇ ಮಾತನಾಡುವ ಕಾಲದಲ್ಲಿ

Date:

Advertisements
ಗ್ಯಾಬಿ ಥಾಮಸ್ ತನ್ನ ಮಿಂಚಿನ ಓಟದಿಂದ ಎಲ್ಲರನ್ನು ಹಿಂದಿಕ್ಕಿ ಪ್ಯಾರಿಸಿನ ಕ್ರೀಡಾಂಗಣದಲ್ಲಿ ಹೊಸ ಸಂಚಲನವನ್ನೇ ಮೂಡಿಸುವಾಗ ಗ್ಯಾಲರಿಯಲ್ಲಿದ್ದ ಜೆನ್ನಿಫರ್ ಭಾವುಕಳಾಗಿದ್ದಳು. ಕಪ್ಪುವರ್ಣಿಯರ ಕುರಿತಾದ ಬಿಳಿಯರ ತರತಮ, ಅವಮಾನ, ಅಮಾನವೀಯ ಕೊಲೆಗಳು ಮುಂದುವರೆದ ಕಾಲದಲ್ಲಿ ʼನಮ್ಮ ಸಾಧನೆಗಳಷ್ಟೇ ಮಾತನಾಡಬೇಕುʼ ಎಂಬ ಸಂಕಲ್ಪ ತೊಟ್ಟಿರುವಂತೆ ಕಾಣುತ್ತದೆ. ಜೆನ್ನಿಫರ್ ಮತ್ತು ಗ್ಯಾಬಿ ಇದಕ್ಕೆ ತಾಜಾ ಉದಾಹರಣೆ.

ಅವಳಿಗಾಗ ಒಂಬತ್ತು ಅಥವಾ ಹತ್ತು ವರ್ಷವಿದ್ದಿರಬಹುದು. ಆಕೆಯ ತಾಯಿ ಅವಳನ್ನು ಕೂರಿಸಿಕೊಂಡು ಅವಳ ಕಣ್ಣುಗಳನ್ನೇ ನೋಡುತ್ತಾ “ನಿನ್ನಲ್ಲಿ ಬೆಳಕಿದೆ. ಮುಂದಿನ ದಿನಗಳಲ್ಲಿ ನೀನು ಪ್ರಖರವಾಗಿ ಹೊಳೆಯುವೆ. ಹೊಳೆಯುವುದೇ ನಿನ್ನ ಜೀವನದ ಧ್ಯೇಯವಾಗಬೇಕು” ಎಂದ ತಾಯಿ ಅಲ್ಲಿಗೆ ಸುಮ್ಮನಾಗದೆ ಶಿಕ್ಷಣದ ಮಹತ್ವ, ಕನಸುಗಳನ್ನು ನನಸು ಮಾಡಿಕೊಳ್ಳುವ ಕಿಚ್ಚು ಮತ್ತು ಸಮುದಾಯಕ್ಕೆ ಏನನ್ನಾದರೂ ಮಾಡಬೇಕೆಂಬ ಪಣ ತೊಡಬೇಕೆಂದು ಮಗಳಿಗೆ ಮನಮುಟ್ಟುವಂತೆ ಹೇಳಿದ್ದಳು. ಆ ಮಾತುಗಳನ್ನ ಮಗಳೆಂದೂ ಮರೆಯಲಿಲ್ಲ.

ಅಮೆರಿಕಾ ದೇಶದ ಆಫ್ರೋಅಮೆರಿಕನ್ ಸಮುದಾಯಕ್ಕೆ ಸೇರಿದ ಆ ತಾಯಿಗೆ ಬದುಕು ಯಾತನಾಮಯವಾಗಿತ್ತು. ಆದರೆ ಎಲ್ಲವನ್ನು ಎದುರಿಸಿ ಗೆಲುವು ಸಾಧಿಸುವ ಛಲದವಳು ಅವಳಾಗಿದ್ದಳು. ಹತ್ತು ವರ್ಷದ ಮಗಳು, ಅವಳಿಜವಳಿ ಗಂಡು ಮಕ್ಕಳನ್ನು ಏಕಾಂಗಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ಅವಳ ಮೇಲಿತ್ತು. ಕುಟುಂಬದ ನೊಗ ಒಂಟಿಯಾಗಿ ಹೊತ್ತ ಅವಳು ಎಂದೂ ವಿಚಲಿತಳಾಗಲಿಲ್ಲ. ಹೋಟೆಲ್ಲುಗಳಲ್ಲಿ ಸೇವಕಿಯಾಗಿ ಕೆಲಸ ಮಾಡಿದಳು, ಶ್ರಮಪಟ್ಟು ಓದಿ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾದಳು!

ಮಗಳಿಗೆ ಸ್ಪೂರ್ತಿಗಾಗಿ ತಾಯಿಯನ್ನು ಮೀರಿ ಮತ್ಯಾರನ್ನೋ ನೋಡುವ ಅವಶ್ಯಕತೆಯೇ ಇರಲಿಲ್ಲ. ತಾಯಿ ನಡೆದ ಹಾದಿಯಲ್ಲೇ ನಡೆದಳು. ಜಗಕೆ ಬೆಳಕಾಗುವ ಕ್ಷಮತೆ ನಿನ್ನಲ್ಲಿದೆ ಎಂಬ ತಾಯಿಯ ಮಾತುಗಳನ್ನು ಸಾಕಾರಗೊಳಿಸಲು ಮುಂದಾದಳು. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನ್ಯೂರೋಬಯಾಲಜಿ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಪದವಿ ಪಡೆದಳು. ಪದವಿ ಓದುವ ದಿನಗಳಲ್ಲೇ ಸಮಾಜಶಾಸ್ತ್ರ ಅಧ್ಯಯನ ಮಾಡುವ ಗೀಳು ಅವಳಿಗೆ ಹತ್ತಿತ್ತು. ಸಮಾಜದ ಶೋಷಿತ ವರ್ಗಕ್ಕೆ ಸರಿಯಾದ ಸಮಯಕ್ಕೆ ಆರೋಗ್ಯ ವ್ಯವಸ್ಥೆ ಏಕೆ ಸಿಗುತ್ತಿಲ್ಲವೆಂಬ ಬಗ್ಗೆ ಆಕೆ ಗಾಢವಾಗಿ ಯೋಚಿಸತೊಡಗಿದ್ದಳು. ಮುಂದುವರೆದು ಆರೋಗ್ಯ ವ್ಯವಸ್ಥೆ (ಪಬ್ಲಿಕ್ ಹೆಲ್ತ್) ಮತ್ತು ಸೋಂಕು ರೋಗ ಶಾಸ್ತ್ರದ ಕುರಿತಾದ ಸ್ನಾತಕೋತ್ತರ ಪದವಿಯನ್ನು ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಪಡೆದಳು.

Advertisements
ಅಕ್ಕಾ ತಾಯಿ
ಗ್ಯಾಬಿ ಥಾಮಸ್ ಮತ್ತು ಆಕೆಯ ತಾಯಿ ಜೆನ್ನಿಫರ್ ರಾಂಡಲ್

ಅಮೆರಿಕಾದ ಕಪ್ಪು ವರ್ಣಿಯರಿಗೆ ಈ ಮಟ್ಟದ ಓದು, ವ್ಯಾಸಂಗ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗುವುದು ದೊಡ್ಡ ಸಾಧನೆಯಾಗಿತ್ತು ನಿಜ ಆದರೆ ಮಗಳ ಬೆಳಕು ಇನ್ನಷ್ಟು ಪ್ರಖರವಾಗಿ ಹೊಳೆಯುವುದರಲ್ಲಿತ್ತು. ಮಗಳು ಪದವಿ ಮಾಡುವ ದಿನಗಳವು. ಕಾಲೇಜಿನ ಕೆಲ ಪಡ್ಡೆ ಹುಡುಗರು “ಕೋಳಿ ಕಾಲಿನವಳು” ಎಂದು ಹೀಯಾಳಿಸತೊಡಗಿದ್ದರು. ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಬಾಡಿ ಶೇಮಿಂಗ್ ಎಂತಹ ಪರಿಣಾಮ ಬೀರಬಲ್ಲದೆಂದು ಹೇಳಬೇಕಿಲ್ಲ. ಒಂದು ದಿನ ಟಿವಿ ನೋಡುವಾಗ ಅಮೆರಿಕಾದ ಶ್ರೇಷ್ಠ ಓಟಗಾರ್ತಿ ಅಲಿಸನ್ ಫೆಲಿಕ್ಸ್ ಮಗಳ ಕಣ್ಣಿಗೆ ಬಿದ್ದರು “ನಾನಿಂದು ವಿಶ್ವದ ಶ್ರೇಷ್ಠ ಓಟಗಾರ್ತಿಯಾಗಿರಬಹುದು ಆದರೆ ನನ್ನನ್ನು ಒಂದುಕಾಲದಲ್ಲಿ ಹುಡುಗರು ಕೋಳಿ ಕಾಲಿನವಳು ಎಂದು ಹೀಯಾಳಿಸುತ್ತಿದ್ದರು” ಎಂಬ ಮಾತುಗಳು ಟಿವಿ ನೋಡುತ್ತಿದ್ದವಳ ಎದೆ ನಾಟಿದ್ದವು!

ಮಗಳು ತನ್ನ ರೋಲ್ ಮಾಡೆಲ್ ಆಲಿಸನ್ ಫೆಲಿಕ್ಸ್ ಅವರ ಅನುಕರಣೆ ಮಾಡುತ್ತಾ ಓಡುತ್ತಾಳೆ, ದಿನಕ್ಕಾರುಗಂಟೆ ಕಠಿಣ ಅಭ್ಯಾಸದಲ್ಲಿ ತೊಡಗುತ್ತಾಳೆ. ನ್ಯೂರೋಬಯಾಲಜಿ ಪದವಿಯಿಂದ ಗಳಿಸಿದ್ದ ಅಪಾರ ಜ್ಞಾನದಿಂದ ಒಬ್ಬ ಕ್ರೀಡಾಪಟುವಿಗೆ ಆಹಾರ, ಧ್ಯಾನ, ವಿಶ್ರಾಂತಿ, ನಿದ್ದೆ, ಮನಸ್ಥಿತಿ, ನಂಬಿಕೆ, ಆತ್ಮಾಭಿಮಾನ ಎಷ್ಟು ಮುಖ್ಯವೆಂದು ಅರಿಯುತ್ತಾಳೆ. ಸಂಜೆಯೊತ್ತು ಆಸ್ಟಿನ್ ನಗರದ ಆಸ್ಪತ್ರೆಯೊಂದರಲ್ಲಿ ಸ್ವಯಂಸೇವಕಿಯಾಗಿ ಕಾರ್ಯ ನಿರತಳಾಗುತ್ತಾಳೆ. (ಆರೋಗ್ಯ ವಿಮೆಯಿಲ್ಲದ ಬಡಪಾಯಿಗಳಿಗೆ, ಹೆಚ್ಚಾಗಿ ದಮನಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯದು) ಶಿಕ್ಷಣ, ಹೋರಾಟ ಮತ್ತು ಸಮುದಾಯಕ್ಕಾಗಿ ಅವಿರತ ಕೆಲಸಗಳ ನಡುವೆ ಕ್ರೀಡೆಯಲ್ಲಿ ಆಕೆ ಅಪೂರ್ವವಾದುದ್ದನ್ನೇ ಸಾಧಿಸುತ್ತಾಳೆ! ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು ಬೆಳ್ಳಿಯ ಪದಕ, ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೂರೂ ಚಿನ್ನದ ಪದಕ!

ಈ ಅಪರೂಪದ ತಾಯಿ ಮಗಳ ಜೋಡಿ- ಜೆನ್ನಿಫರ್ ರಾಂಡಲ್ ಮತ್ತು ಗ್ಯಾಬಿ ಥಾಮಸ್ ಅವರದ್ದು. ಗ್ಯಾಬಿ ಥಾಮಸ್ ತನ್ನ ಮಿಂಚಿನ ಓಟದಿಂದ ಎಲ್ಲರನ್ನು ಹಿಂದಿಕ್ಕಿ ಪ್ಯಾರಿಸಿನ ಕ್ರೀಡಾಂಗಣದಲ್ಲಿ ಹೊಸ ಸಂಚಲನವನ್ನೇ ಮೂಡಿಸುವಾಗ ಗ್ಯಾಲರಿಯಲ್ಲಿದ್ದ ಜೆನ್ನಿಫರ್ ಭಾವುಕಳಾಗಿದ್ದಳು. ಎಂಬತ್ತು ಸಾವಿರ ಪ್ರೇಕ್ಷಕರ ನಡುವೆ ಜೆನಿಫರ್ ಎದ್ದುಕಾಣುವಂತೆ ಹೈ ರೆಸಲ್ಯೂಶನ್ ಕ್ಯಾಮೆರಾಗಳು ಮಾಡಿದ್ದವು.

ಈ ವರದಿ ಓದಿದ್ದೀರಾ?: ಕ್ರೀಡಾಪಟುಗಳ ಪ್ರಬುದ್ಧ ಚಿಂತನೆ, ಮಾನವೀಯತೆ ಎಲ್ಲರದಾಗಲಿ…

ಇಪ್ಪತೇಳು ವಯಸ್ಸಿನ ಗ್ಯಾಬಿ ಥಾಮಸ್ ಸಾಧನೆ ಮತ್ತಷ್ಟು ದಮನಿತರಿಗೆ, ಕಪ್ಪುವರ್ಣದವರಿಗೆ ಸ್ಪೂರ್ತಿಯಾಗಬಲ್ಲದು! ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಜೆನ್ನಿಫರ್ ಮತ್ತಷ್ಟು ಕಣ್ಣುಗಳಲ್ಲಿ ಕಾಂತಿಯುತ ಕನಸುಗಳನ್ನ ಬಿತ್ತಬಹುದು! ಥಾಮಸ್ ಆರೋಗ್ಯ ವ್ಯವಸ್ಥೆಯಲ್ಲಿ ಎಂಥೆಂತಹ ಸುಧಾರಣೆಗಳನ್ನು ತರಬಹುದು! ಒಮ್ಮೆ ಯೋಚಿಸಿದರೆ ಮನ ಪುಳಕಿತಗೊಳ್ಳುತ್ತದೆ…

ಕ್ಯಾರೊಲ್ ದ್ವೇಕ್ ತಮ್ಮ ಪುಸ್ತಕ ಮಿಂಡ್ಸೆಟ್ (ಮನಸ್ಥಿತಿ) ಎರಡು ಮನಸ್ಥಿತಿಗಳ ಕುರಿತು ವಿವರಿಸುತ್ತಾಳೆ. ಸ್ಥಿರ ಮನಸ್ಥಿತಿ (ಎಂದೂ ಬದಲಾಗದ ಮನಸ್ಥಿತಿ) ಮತ್ತು ಬೆಳವಣಿಗೆಯ ಮನಸ್ಥಿತಿ (ಹೊಸ ಸಾಧ್ಯತೆಗಳಿಗೆ ಒಡ್ಡಿಕೊಳ್ಳುವ ಮನಸ್ಥಿತಿ.) ಸ್ಥಿರ ಮನಸ್ಥಿತಿ ಪದೇ ಪದೇ ಮಿತಿಗಳ ಬಗ್ಗೆ ಯೋಚಿಸುತ್ತದೆ. ʼಈ ಕೆಲಸ ನನ್ನಿಂದಾಗದುʼ ಎಂದು ಕನ್ವಿನ್ಸ್ ಮಾಡಿಕೊಳ್ಳುತ್ತದೆ, ಸದಾ ವ್ಯವಸ್ಥೆಯನ್ನು ದೂರುತ್ತದೆ. ಬೆಳವಣಿಗೆಯ ಮನಸ್ಥಿತಿ ಸದಾ ಸಾಧ್ಯತೆಗಳ ಬಗ್ಗೆ ಯೋಚಿಸುತ್ತದೆ. ಪ್ರತಿ ಸೋಲು, ಅವಮಾನವನ್ನು ಕಲಿಕೆಗೆ ಬಳಸಿಕೊಳ್ಳುತ್ತದೆ. ಯಾರನ್ನು ದೂರದೆ, ಸಾಧನೆಗಳೇ ಮಾತನಾಡುವ ಹಾಗೆ ಮಾಡುವ ಚೇತೋಹಾರಿ ಮನಸ್ಥಿತಿ ಅದಾಗುತ್ತದೆ. ಜೆನ್ನಿಫರ್ ಮತ್ತು ಗ್ಯಾಬಿ ನಿಸ್ಸಂದೇಹವಾಗಿ ಬೆಳವಣಿಗೆಯ ಮನಸ್ಥಿತಿಯವರು. (ಪೋಷಕರು ತಮ್ಮ ಮಕ್ಕಳಲ್ಲಿ ಗ್ರೋಥ್ ಮಿಂಡ್ಸೆಟನ್ನು ಬೆಳೆಸಬೇಕೇ ಹೊರತು ವಿಕ್ಟಿಮ್ ಹುಡ್ ನರೇಟಿವ್‌ಗಳಿಂದ ಫಿಕ್ಸೆಡ್ ಮಿಂಡ್ಸೆಟ್‌ಗೆ ದಾರಿ ಮಾಡಿಕೊಡಬಾರದು. ವಿಕ್ಟಿಮ್ ಹುಡ್‌ನ ಅರಿವು ಅವಶ್ಯಕ ಆದರೆ ಅದನ್ನು ಮೀರುವ ಮಿಂಡ್ಸೆಟ್ ಕುರಿತು ಹೇಳಿಕೊಡುವುದು ಕೂಡ ಅತ್ಯವಶ್ಯಕ.)

ಅಮೆರಿಕಾದ ಕಪ್ಪು ವರ್ಣಿಯರು – ಶಿಕ್ಷಣ ಪಡೆ, ಸಂಘಟಿಸುವ ಮತ್ತು ಹೋರಾಟದ ಹಾದಿಯಲ್ಲಿ ನಡೆ ಎಂಬ ಸೂತ್ರವನ್ನು ತಮ್ಮ ಬದುಕಿಗೆ ಅಳವಡಿಸಿಕೊಂಡು ಹಲವು ದಶಕಗಳೇ ಕಳೆದಿವೆ. ಮೊದಲಿಗೆ ಆಫ್ರಿಕಾದ ತಮ್ಮ ಸಂಸ್ಕೃತಿ, ನೆಲ ಮತ್ತು ಬೇರುಗಳನ್ನು ಹುಡುಕಿಕೊಂಡ ಕಪ್ಪು ವರ್ಣಿಯರು ನಂತರ ಸಂಘಟನೆ, ಹೋರಾಟಗಳಲ್ಲಿ ತೊಡಗಿಕೊಂಡರು. ಇಷ್ಟಾದರೂ ಕಪ್ಪುವರ್ಣಿಯರ ಕುರಿತಾದ ಬಿಳಿಯರ ತರತಮ, ಅವಮಾನ, ಅಮಾನವೀಯ ಕೊಲೆಗಳು ಮುಂದುವರೆದ ಕಾಲದಲ್ಲಿ ʼನಮ್ಮ ಸಾಧನೆಗಳಷ್ಟೇ ಮಾತನಾಡಬೇಕುʼ ಎಂಬ ಸಂಕಲ್ಪ ತೊಟ್ಟಿರುವಂತೆ ಕಾಣುತ್ತದೆ. ಜೆನ್ನಿಫರ್ ಮತ್ತು ಗ್ಯಾಬಿ ಇದಕ್ಕೆ ತಾಜಾ ಉದಾಹರಣೆ.

ನಿಮ್ಮ ಕಹಿ ಮತ್ತು ತಿರುಚಿದ ಅಸತ್ಯಗಳಿಂದ
ನಮ್ಮನ್ನು ಇತಿಹಾಸದ ಪುಟಗಳಲ್ಲಿ ತೆಗಳಿ ಬರೆಯಿರಿ
ನಮ್ಮನ್ನು ನಿಮ್ಮ ಮಣ್ಣಿನಲ್ಲಿ ತುಳಿಯಿರಿ
ಆದರೂ ಧೂಳಿನಂತೆ ನಾವು ಮೇಲೇಳುವೆವು…

ನಿಮ್ಮ ಪದಗಳಿಂದ ನಮ್ಮನ್ನು ಚುಚ್ಚಿರಿ
ನಿಮ್ಮ ಕಣ್ಣಿಂದ ನಮ್ಮನ್ನು ಇರಿಯಿರಿ
ನಿಮ್ಮ ದ್ವೇಷದಿಂದ ನಮ್ಮನ್ನು ಕೊಲ್ಲಿರಿ
ಆದರೂ ಗಾಳಿಯಂತೆ ನಾವು ಮೇಲೇಳುವೆವು…

“ಸ್ಟಿಲ್ ಐ ರೈಸ್- ಮೇಲೇಳುವೆವು” ಮಾಯಾ ಆಂಜೆಲೋ ಬರೆದ ದಿಟ್ಟ ಕ್ರಾಂತಿ ಕವಿತೆ. ಈ ಕವಿತೆಯನ್ನು ಮನಮುಟ್ಟುವಂತೆ, ಯುವಕರಿಗೆ ಪ್ರೇರಣೆಯಾಗುವಂತೆ ಸೆರೆನಾ ವಿಲ್ಲಿಯಮ್ಸ್ ಓದಿದ್ದು ಕೇಳಿದ್ದೆ. ಈಗ ಇದೇ ಕವಿತೆಯನ್ನು ಗ್ಯಾಬಿ ಮತ್ತೊಮ್ಮೆ ದಮನಿತರಿಗಾಗಿ ಓದಲಿ ಎಂಬುದು ನನ್ನಾಸೆ, ಓದದಿದ್ದರೂ ಅವಳ ಸಾಧನೆ, ಸಾಮಾಜಿಕ ಕಾಳಜಿಯೇ ಬಹುದೊಡ್ಡ ಸ್ಟೇಟ್ಮೆಂಟ್ ಆಗಿದೆ ಎಂಬುದಂತೂ ದಿಟ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಬುಲಾ ಚೌಧರಿ ಪದ್ಮಶ್ರೀ ಪದಕ ಕಳವು: ‘ಎಲ್ಲವನ್ನೂ ಕಳೆದುಕೊಂಡೆ’ ಎಂದ ಈಜುಪಟು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ...

RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್...

Download Eedina App Android / iOS

X