ಕ್ರೀಡಾಪಟುಗಳ ಪ್ರಬುದ್ಧ ಚಿಂತನೆ, ಮಾನವೀಯತೆ ಎಲ್ಲರದಾಗಲಿ…

Date:

ದೇಶದ ಸಂವಿಧಾನ ಪ್ರೇಮಿಗಳು ಯಾವಾಗಲೂ Idea of India ಕುರಿತು ಹೇಳುತ್ತಿರುತ್ತಾರೆ. ನಮ್ಮ ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಕ್ರೀಡಾಪಟು ಗಳಾದ ವಿನೇಶ್ ಫೋಗಟ್, ಅಭಿನವ್ ಬಿಂದ್ರಾ, ನೀರಜ್ ಚೋಪ್ರಾ, ಸಾಕ್ಷಿ ಮಲ್ಲಿಕ್, ಬಜರಂಗ್ ಪುನಿಯಾ ಇವರೆಲ್ಲಾ ಆ idea of Indiaದ ನಿಜವಾದ ವಾರಸುದಾರರಾಗಿ ಕಂಗೊಳಿಸುತ್ತಿದ್ದಾರೆ.

ಕಳೆದ ಒಂದು ದಶಕದಲ್ಲಿ ಒಲಿಂಪಿಕ್ ಆಟೋಟಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗಳಿಸಿದ ಈ ಆಟಗಾರರು, ಆಟಗಾರ್ತಿಯರನ್ನು ಒಮ್ಮೆ ಹಾಗೇ ಕಣ್ಣೆದುರು ತಂದುಕೊಳ್ಳಿ. ಅವರ ಪ್ರಬುದ್ದ ಚಿಂತನೆ, ಮಾನವೀಯ ನಡವಳಿಕೆಗಳು ನಿಜವಾಗಿ ಈ ನಮ್ಮ ನಲ್ಮೆಯ ದೇಶಕ್ಕೆ ಭವಿಷ್ಯವಿದೆ ಎನ್ನುವುದನ್ನು ಹೇಳುತ್ತವೆ. ಅತ್ಯಂತ ದ್ವೇಷಕಾರುವ ಆಡಳಿತ ಮತ್ತು ದಬ್ಬಾಳಿಕೆಯ ಮನಸ್ಥಿತಿ ಇರುವ ಕಾಲದಲ್ಲೇ ಈ ಯುವಕ ಯುವತಿಯರು ಅಪಾರ ದೇಶಪ್ರೇಮದ ಜೊತೆಗೇ ಸ್ವಾಬಿಮಾನವನ್ನೂ, ಕೋಮು ಸಾಮರಸ್ಯದ ಬದುಕನ್ನೂ, ಸಹಬಾಳ್ವೆಯ ಜರೂರನ್ನೂ ಹೇಳುತ್ತಿದ್ದಾರೆ. ಇಡೀ ಜಗತ್ತಿಗೆ ಕೇಳುವಂತೆ, ಕಾಣುವಂತೆ ಗಟ್ಟಿಯಾಗಿ ಹೇಳುತ್ತಿದ್ದಾರೆ.

ದ್ವೇಷ ಕಾರುವ, ದಮನ ನಡೆಸುವ ವಿಕಾರಿಗಳು ಎಷ್ಟೇ ದೊಡ್ಡವರಾಗಿರಲಿ, ಇಡೀ ಸರ್ಕಾರಿ ಅಂಗಗಳೇ ಬರಲಿ, ಟ್ರೋಲ್ ಸೇನೆಗಳೇ ತಮ್ಮನ್ನು ಹಣಿಯಲು ಯತ್ನಿಸಲಿ ‘ಅದ್ಯಾವುದೂ ನಮಗೆ ಲೆಕ್ಕಕ್ಕಿಲ್ಲ, ಮಾನವೀಯತೆ ಮತ್ತು ಬದ್ದತೆಯನ್ನು ಒಂದಿಂಚೂ ಅಲುಗಾಡಿಸಲು ಸಾದ್ಯವಿಲ್ಲ’ ಎಂಬ ಸಂದೇಶ ನೀಡುತ್ತಿದ್ದಾರೆ.

ಒಲಿಂಪಿಕ್ ಸ್ಪರ್ದೆಗೆ ತುಸು ಮೊದಲು ವಿನೇಶ್ ಫೋಗಟ್ ಬರೆಯುತ್ತಾರೆ: “ನಾನು ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗಾಗಿ ಹೋರಾಡುತ್ತಿದ್ದೇನೆ. ನನ್ನ ಸ್ವಾರ್ಥಕ್ಕಾಗಿ ಅಲ್ಲ, ನನ್ನ ವೃತ್ತಿ ಬದುಕು ಮುಗಿದಿದೆ. ಇದು ನನ್ನ ಕೊನೆಯ ಒಲಿಂಪಿಕ್. ಈ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುವ ಕಿರಿಯ ಹುರಿಯಾಳುಗಳು ಸುರಕ್ಷಿತವಾಗಿ ಆಡಬಲ್ಲರು ಎಂಬುದನ್ನು ಖಾತ್ರಿಪಡಿಸಲು ಅವರಿಗಾಗಿ ಹೋರಾಡುತ್ತೇನೆ. ಈ ಕಾರಣದಿಂದಲೇ ನಾನು ಜಂತರ್ ಮಂತರಿನಲ್ಲೂ ಹೋರಾಡಿದೆ. ಅದಕ್ಕಾಗೇ ಇಲ್ಲಿಗೂ ಬಂದಿದ್ದೇನೆ.” ವಿನೇಶ್ ಫೋಗಟ್ ಅವರ ಮಾತುಗಳಲ್ಲಿ ಸಣ್ಣ ಗೊಂದಲವೂ ಇಲ್ಲ. ಅಸ್ಪಷ್ಟತೆಯೂ ಇಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿನೇಶ್, ಸಾಕ್ಷಿ ಮಲ್ಲಿಕ್, ಬಜರಂಗ್ ಪುನಿಯಾ ಇವರೆಲ್ಲಾ ಇದೇ ಮಟ್ಟದ ಕ್ಲಾರಿಟಿಯನ್ನು ತೋರಿಸಿದ ಮುಂದಾಳುಗಳು.

ಹಿಂದೆ ಒಲಿಂಪಿಕ್‌ನಲ್ಲಿ ಶೂಟಿಂಗ್‌ನಲ್ಲಿ ಚಿನ್ನ ಗಳಿಸಿದ್ದ ಅಭಿನವ್ ಬಿಂದ್ರಾ ನೆನ್ನೆ ವಿನೇಶ್ ಫೋಗಟ್ ಕಂಡು, ಹೂವಿನ ಬೊಕೆ ನೀಡಿ ಸಮಾಧಾನ ಹೇಳಿ ನಂತರ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದ ಸಾಲುಗಳು ನಿಜಕ್ಕೂ ಕಣ್ಣಾಲಿಗಳನ್ನು ತೋಯಿಸಿದವು. ಆತ, “ಡಿಯರ್ ವಿನೇಶ್, ಆಟ ಅನ್ನೋದು ಮನುಷ್ಯನ ಒಂದು ಮನಶಕ್ತಿಯ ಸೆಲೆಬ್ರೇಷನ್ (celebration of will) ಅಂತಾರೆ. ನನ್ನ ವೃತ್ತಿ ಬದುಕಿನಲ್ಲಿ ಇವತ್ತಿನ ರೀತಿಯಲ್ಲಿ ಮತ್ತೊಂದು ದಿನವನ್ನು ಕಂಡಿಲ್ಲ. ನಿನ್ನೀ ಸೋಲೊಪ್ಪದ ಹೋರಾಟವನ್ನು ದೇಶಕ್ಕೆ ದೇಶವೇ ಸಂಭ್ರಮಿಸುತ್ತಿರುವುದನ್ನು ಕಂಡೆ. ನೀನೊಬ್ಬ ಹೋರಾಟಗಾರ್ತಿ. ಕುಸ್ತಿ ಅಖಾಡದ ಒಳಗೂ ಮತ್ತು ಹೊರಗೂ ಸಹ. ಎಂತಹುದೇ ನಷ್ಟ ಅನುಭವಿಸಬೇಕಾಗಿ ಬಂದರೂ ನಮ್ಮೊಳಗಿನ ಹೋರಾಟವನ್ನು ಎಂದಿಗೂ ಕಳೆದುಕೊಳ್ಳದಿರುವುದು ಅಂದರೆ ಏನು ಅನ್ನೋದನ್ನ ನಾವು ನಿನ್ನಿಂದ ಕಲಿಯುತ್ತಿದ್ದೇವೆ. ಒಬ್ಬ ಕದನಕಲಿಯ ನಿಜವಾದ ಸ್ಪೂರ್ತಿಯೇ ನೀನಾಗಿದ್ದೀಯ. ಎಲ್ಲಾ ಗೆಲುವುಗಳು ಒಂದೇ ತರ ಕಾಣುವುದಿಲ್ಲ. ಕೆಲವು ಗೆಲುವುಗಳು ಬರೀ ನೆನಪುಗಳಾಗಿ ಕೊನೆಗೊಳ್ಳುತ್ತವೆ. ಆದರೆ ಯಾವ ಗೆಲುವುಗಳು ನಮ್ಮ ಮಕ್ಕಳಿಗೆ ಹೇಳುವ ಕತೆಗಳಾಗಿ ತಮ್ಮ ದಾರಿ ಕಂಡುಕೊಳ್ಳುತ್ತವೋ ಅವು ನಿಜವಾದ ಗೆಲುವುಗಳು. ಈ ರೀತಿಯಲ್ಲಿ ಈ ದೇಶದ ಪ್ರತಿಯೊಂದು ಮಗುವೂ ನೀನೆಂತಹ ಚಾಂಪಿಯನ್ ಎಂಬುದನ್ನು ತಿಳಿದುಕೊಳ್ಳುತ್ತದೆ. ನೀನು ತೋರಿದ ಎದೆಗಾರಿಕೆಯನ್ನು ಪ್ರತಿ ಮಗುವೂ ತೋರಬಯಸುತ್ತದೆ. ಇದಕ್ಕಾಗಿ ನಿನಗೆ ನನ್ನಿ”.

ಅಬ್ಬಾ, ಎಂತಹ ಮಾತುಗಳು!?

ಇದನ್ನು ಓದಿದ್ದೀರಾ?: ಪ್ಯಾರಿಸ್‌ ಒಲಿಂಪಿಕ್ಸ್‌ | ವಿನೇಶ್‌ ಫೋಗಟ್‌ ಅನರ್ಹತೆ ಪ್ರಕರಣ ಎತ್ತುವ ಪ್ರಶ್ನೆಗಳು

ಒಲಿಂಪಿಕ್ ಚಿನ್ನ ಗೆದ್ದ ಒಬ್ಬ ಹುರಿಯಾಳು ಮತ್ತೊಬ್ಬ ಚಿನ್ನದಂತ ಕುಸ್ತಿಪಟುವಿಗೆ ನೀಡಬಹುದಾದ ಅತ್ಯಂತ ಬೆಲೆಬಾಳುವ ಉಡುಗೊರೆಯಂತೆ ಈ ಮಾತುಗಳಿವೆ. ಈ ಮಾತುಗಳ ಮೂಲಕ ಅಭಿನವ್ ಬಿಂದ್ರಾ ಕೂಡ ಎತ್ತರದ ವ್ಯಕ್ತಿಯಾಗಿ ಕಾಣಿಸತೊಡಗಿದ್ದಾರೆ.

ಇನ್ನು ಈ ನೀರಜ್ ಚೋಪ್ರಾ… ನೆನ್ನೆ ನಡುರಾತ್ರಿಯಲ್ಲೂ ಅವನ ಜಾವೆಲಿನ್ ಎಸೆತವನ್ನು ಇಡೀ ದೇಶ ಕಣ್ಣಲ್ಲಿ ಕಣ್ಣಿಟ್ಟು ನೋಡಿತ್ತು. ಅವನಿಗಿಂತ ಒಂದು ಹೆಜ್ಜೆ ಮುಂದಿರುವಾತ ಪಾಕಿಸ್ತಾನಿ ಮುಸ್ಲಿಂ! ಈ ಎರಡು ದೇಶಗಳಲ್ಲಿ ಯಾವ ಮಟ್ಟಿಗಿನ ಮತಾಂಧತೆ ಇದೆ ಎನ್ನುವುದು ಚೆನ್ನಾಗಿಯೇ ಗೊತ್ತು ನೀರಜ್‌ಗೆ. ಆದರೆ ಆಟ ಮುಗಿಯುತ್ತಿದ್ದಂತೆ ಅದೇ ಪಾಕಿಸ್ತಾನದ ಎಸೆತಗಾರ ನದೀಮ್‌ನನ್ನು ಹತ್ತಿರಕ್ಕೆ ಕರೆದು, ತನ್ನ ಕೈಲಿದ್ದ ಭಾರತದ ಭಾವುಟವನ್ನೇ ಇಬ್ಬರೂ ಹೊದ್ದು ಮೀಡಿಯಾಗಳಿಗೆ ಪೋಸು ಕೊಟ್ಟ ರೀತಿ ಇತ್ತಲ್ಲಾ… ನಿಜಕ್ಕೂ ಕಣ್ಣಿಗೆ ಹಬ್ಬ ನೀಡಿದ ದೃಶ್ಯ ಅದು. ”ದ್ವೇಷ, ಹಗೆತನಗಳನ್ನೆಲ್ಲಾ ನೀವು ಇಟ್ಟುಕೊಳ್ಳಿ, ನಾವು ಅಂದರೆ ಎರಡೂ ದೇಶದ ಜನರು ಅಣ್ತಮ್ಮಂದ್ರು, ಅಕ್ತಂಗೀರು ಅನ್ನೋದನ್ನ ಈ ಮೂಲಕ ಗಟ್ಟಿಯಾಗಿ ಹೇಳ್ತಿದೀವಿ” ಎಂದು ಹೇಳಿದಂತಿತ್ತು.

ಇದರ ಬೆನ್ನಿಗೇ ನೀರಜ್ ಚೋಪ್ರಾನ ತಾಯಿ ಸರೋಜಾ ಚೋಪ್ರಾ ‘ನನ್ನ ಮಗ ಬೆಳ್ಳಿ ಪದಕ ಗೆದ್ದಿದ್ದಕ್ಕೆ ಖುಷಿಯಾಗಿದೆ. ಅವನು, ನದೀಮ್ ಕೂಡಾ ನನ್ನ ಮಗನೇ. ಯಾಕೆಂದರೆ ಈ ಹಂತಕ್ಕೆ ಬರಲು ಅವರು ಬಹಳ ಕಷ್ಟಪಟ್ಟಿರುತ್ತಾರೆ’ ಎಂದು ಹೇಳಿ ತಾಯ್ತನದ ಘನತೆಯನ್ನು ಹೆಚ್ಚಿಸಿದರು. ಒಬ್ಬ ರಾಜಕಾರಣಿಯಾದವನಿಗೆ ಇಬ್ಬರು ಕ್ರೀಡಾಪಟುಗಳಲ್ಲಿ ಧರ್ಮ ಕಾಣಿಸಬಹುದು, ಅವರಲ್ಲೊಬ್ಬ ಹಿಂದೂ, ಮತ್ತೊಬ್ಬ ಮುಸಲ್ಮಾನ, ಒಬ್ಬ ಭಾರತೀಯ ಮತ್ತೊಬ್ಬ ಪಾಕಿಸ್ತಾನಿ ಎಂದು ತೋರಬಹುದು. ಆದರೆ ಒಬ್ಬ ತಾಯಿಗೆ ಅವರು ಬರೀ ಮಕ್ಕಳಷ್ಟೇ. ಇಂತಹ ಮಹಾನ್ ತಾಯಿ ಮಾತ್ರ ಒಬ್ಬ ಗಟ್ಟಿ ಗುಂಡಿಗೆಯ, ಪ್ರಬುದ್ಧ ಮನಸ್ಸಿನ ನೀರಜ್ ಚೋಪ್ರಾ ಇನ್ನೂ ಎತ್ತರೆತ್ತರಕ್ಕೆ ಬೆಳೆಯುವಂತೆ ಮಾಡಬಲ್ಲಳು.

ನಾವು ಅಂದರೆ ಈ ದೇಶದ ಸಂವಿಧಾನ ಪ್ರೇಮಿಗಳು ಯಾವಾಗಲೂ Idea of India ಕುರಿತು ಹೇಳುತ್ತಿರುತ್ತೇವೆ. ನಮ್ಮ ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಈ ವಿನೇಶ್ ಫೋಗಟ್, ಅಭಿನವ್ ಬಿಂದ್ರಾ, ನೀರಜ್ ಚೋಪ್ರಾ, ಸಾಕ್ಷಿ ಮಲ್ಲಿಕ್, ಬಜರಂಗ್ ಪುನಿಯಾ ಇವರೆಲ್ಲಾ ಆ idea of Indiaದ ನಿಜವಾದ ವಾರಸುದಾರರಾಗಿ ಕಂಗೊಳಿಸುತ್ತಿದ್ದಾರೆ.

ಇವರೆಲ್ಲರಿಗೂ ಎದೆಯಾಳದ ನನ್ನಿ.

ಹರ್ಷಕುಮಾರ್ ಕುಗ್ವೆ
ಹರ್ಷಕುಮಾರ್ ಕುಗ್ವೆ
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಹರ್ಷಕುಮಾರ್ ಕುಗ್ವೆ
ಹರ್ಷಕುಮಾರ್ ಕುಗ್ವೆ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಡಿವೈನ್‌ ರೇಪ್‌ʼ | ಇದು ದೇವರು, ಅಧ್ಯಾತ್ಮ, ಯೋಗದ ಹೆಸರಲ್ಲಿ ನಡೆಯುತ್ತಿರುವ ಕ್ರೌರ್ಯ

ರಾಘವೇಶ್ವರ, ನಿತ್ಯಾನಂದ, ಮತ್ತೀಗ ಯೋಗಗುರು ಪ್ರದೀಪ್‌ ಉಲ್ಲಾಳ್‌ ನಂತಹ ಅತ್ಯಾಚಾರಿ, ಅನ್ಯಾಯಕಾರಿಗಳಿಗೆ...

ಪ್ಯಾರಾಲಿಂಪಿಕ್ಸ್ | ಹೈಜಂಪ್; ಭಾರತಕ್ಕೆ ಬೆಳ್ಳಿ ಗೆದ್ದುಕೊಟ್ಟ ನಿಶಾದ್ ಕುಮಾರ್

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸೆಪ್ಟೆಂಬರ್ 2ರಂದು ನಡೆದ ಪುರುಷರ ಹೈಜಂಪ್ - T47...

ಭಾರತ ಅಂಡರ್ 19 ತಂಡಕ್ಕೆ ರಾಹುಲ್ ಪುತ್ರ ಸಮಿತ್ ದ್ರಾವಿಡ್ ಆಯ್ಕೆ

ಆಸ್ಟ್ರೇಲಿಯಾ ತಂಡದ ವಿರುದ್ಧದ ಸರಣಿಗಾಗಿ ಭಾರತ ಅಂಡರ್ 19 ತಂಡವನ್ನು ಪ್ರಕಟಿಸಿದ್ದು...

ನೆನಪು | ಅಗಲಿದ ಕೆ.ಎಚ್. ಶ್ರೀನಿವಾಸ್‌ ಅರಸು ಕುರಿತು ಮಾತನಾಡಿದ್ದು ಇವತ್ತಿಗೂ ಪ್ರಸ್ತುತ

ಸಾಹಿತ್ಯ, ಸಂಗೀತ, ಕಾನೂನು, ಕೃಷಿ, ರಾಜಕಾರಣ... ಹೀಗೆ ಎಲ್ಲವನ್ನೂ ಬಲ್ಲ, ಎಲ್ಲ...